ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: 29,584 ವಿದ್ಯಾರ್ಥಿಗಳಿಗೆ ‘ರಾಗಿ ಮಾಲ್ಟ್’

1 ರಿಂದ 10ನೇ ತರಗತಿಯ 474 ಶಾಲೆಯ ಮಕ್ಕಳಿಗೆ ಯೋಜನೆಯ ಲಾಭ
Published 23 ಫೆಬ್ರುವರಿ 2024, 5:50 IST
Last Updated 23 ಫೆಬ್ರುವರಿ 2024, 5:50 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 474 ಶಾಲೆಯ 29,584 ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಬಿಸಿ ಹಾಲಿನೊಂದಿಗೆ ಬೆರೆಸಿ ಕುಡಿಯಲು ‘ರಾಗಿ ಮಾಲ್ಟ್’ ಸಿಗಲಿದೆ.

1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಶಿಕ್ಷಣ ಇಲಾಖೆ ಅಧಿಕಾರಿ ಸೌಮ್ಯ ಪೊನ್ನಪ್ಪ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಶಶಿಕಲಾ ಅವರು ಗುರುವಾರ ಚಾಲನೆ ನೀಡಿದರು.

ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ‘ರಾಗಿ ಮಾಲ್ಟ್’ ವಿತರಿಸಿ ಮಾತನಾಡಿದ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಶಶಿಕಲಾ, ‘ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಒಟ್ಟು 474 ಶಾಲೆಯ 29,584 ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ವಿತರಿಸಲಾಗುತ್ತದೆ. ಬೆಳಿಗ್ಗೆ ಕೆನೆಭರಿತ ಸಕ್ಕರೆ ಹಾಕಿದ ಹಾಲು, ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ಹಾಗೂ ಸಕ್ಕರೆ ಮಿಶ್ರಿತ ಹಾಲಿಗೆ ರಾಗಿ ಹೆಲ್ತ್ ಮಿಕ್ಸ್ ಒಳಗೊಂಡ ಮಾಲ್ಟ್‌ ಅನ್ನು ವಿತರಿಸಲಾಗುತ್ತದೆ. ಜೊತೆಗೆ, ಮಧ್ಯಾಹ್ನದ ಬಿಸಿಊಟ ನೀಡಲಾಗುತ್ತದೆ’ ಎಂದು ಹೇಳಿದರು.

ಶಾಲಾ ಮಕ್ಕಳಿಗೆ ಅಪೌಷ್ಟಿಕತೆ ನಿವಾರಿಸಲು, ರಕ್ತಹೀನತೆ ತಡೆಗಟ್ಟಲು ಉತ್ತಮ ಆರೋಗ್ಯಕರ ಬೆಳವಣಿಗೆಯೊಂದಿಗೆ ಶಾಲೆಯ ನಿರಂತರ ಕಲಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ರಾಗಿ ಮಾಲ್ಟ್‌ ಅನ್ನು ವಿತರಿಸಲು ಮುಂದಾಗಿದೆ ಎಂದು ಹೇಳಿದರು.

‘ಸಿರಿಧಾನ್ಯಗಳ ಆಹಾರದ ಬಳಕೆಯ ಉಪಯುಕ್ತತೆ ಮತ್ತು ಸಿರಿಧಾನ್ಯಗಳಲ್ಲಿ ದೊರೆಯುವ ಬಹು ಪೌಷ್ಟಿಕಾಂಶಗಳ ಕುರಿತು ಬೆಳಿಗ್ಗೆಯ ಪ್ರಾರ್ಥನಾ ಸಂದರ್ಭದಲ್ಲಿ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಕ್ಷೀರಭಾಗ್ಯ ಯೋಜನೆಯಡಿ ಬಿಸಿ ಹಾಲು ತಯಾರಿಸಿ ವಿತರಿಸುವ ಸಂದರ್ಭದಲ್ಲಿ ರಾಗಿ ಮಾಲ್ಟ್‌ನ್ನೂ ವಿತರಿಸಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಅನ್ನಪೂರ್ಣ ಸಂಸ್ಥೆಯವರು ಬಹುಪೌಷ್ಟಿಕಾಂಶವುಳ್ಳ, ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಮಿಶ್ರಣವನ್ನು ಉಚಿತವಾಗಿ ನೀಡಲು ಮುಂದೆ ಬಂದಿದ್ದಾರೆ’ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಮಾತನಾಡಿ, ‘ಹಿಂದೆ ಮನೆಗಳಲ್ಲಿ ಸಿರಿಧಾನ್ಯಗಳನ್ನು ಹೆಚ್ಚು ಬಳಸಲಾಗುತ್ತಿತ್ತು, ಹುರುಳಿ, ಅವರೆ, ತೊಗರಿ, ಅವಸಂದೆ ಇಂತಹ ಕಾಳುಗಳ ಆಹಾರವನ್ನು ಉಪಯೋಗಿಸುತ್ತಿದ್ದರು. ಇತ್ತೀಚೆಗೆ ಬಳಕೆ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ರಾಗಿ ಮಾಲ್ಟ್‌ ಅನ್ನು ವಿತರಿಸಲಾಗುತ್ತಿದೆ’ ಎಂದರು.

ಶಿಕ್ಷಣ ಇಲಾಖೆ ಅಧಿಕಾರಿ ಸೌಮ್ಯ ಪೊನ್ನಪ್ಪ ಮಾತನಾಡಿ, ‘ಸರ್ಕಾರ ಬಿಸಿಯೂಟ, ಬಿಸಿಹಾಲು, ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆ ನಿಟ್ಟಿನಲ್ಲಿ ಇವುಗಳನ್ನು ಸರಿಯಾಗಿ ಬಳಸಿಕೊಂಡು ಓದಿನ ಕಡೆಗೆ ಗಮನಹರಿಸಬೇಕು’ ಎಂದು ಹೇಳಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಕೆ.ಸುಶೀಲಾ ಮಾತನಾಡಿ, ‘ಪೂರ್ವ ಪ್ರಾಥಮಿಕ (ಎಲ್‍ಕೆಜಿ) ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಆರಂಭವಾಗಿದೆ. ಹಾಗೆಯೇ, ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭವಾಗಿದ್ದು, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ನಗರದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳ ಅವರು ಮಾಹಿತಿ ನೀಡಿ, ‘ಶಾಲೆಯ 7 ನೇ ತರಗತಿ ವಿದ್ಯಾರ್ಥಿಗಳಾದ ಪ್ರೀತಮ್ ಹಾಕಿಯಲ್ಲಿ, ಕಾವ್ಯಾ ಫುಟ್‌ಬಾಲ್‌ನಲ್ಲಿ, ಮೇಘನ್ ಅಥ್ಲೆಟಿಕ್‌ನಲ್ಲಿ, ಗವಿನ್, ಬಾಲಾಜಿ, ಪೂರ್ವಿತಾ ಅವರು ಗ್ವಾಲಿಯಾರ್, ರಾಂಚಿ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಗೆ ತೆರಳಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ. ಕರಾಟೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು’ ಎಂದು ಇದೇ ಸಂದರ್ಭದಲ್ಲಿ ಕೋರಿದರು.

ನಗರದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಗುರುರಾಜ್ ಮಾತನಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್, ಎಸ್‍ಡಿಎಂಸಿ ಉಪಾಧ್ಯಕ್ಷರಾದ ರೇಷ್ಮಾ ತೇಜ, ಜಗದೀಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT