ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಹಾನಿ; ಬಾಕಿ ಪರಿಹಾರ ವಿತರಣೆಗೆ ಸೂಚನೆ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರಿಂದ ಸಭೆ
Last Updated 9 ಸೆಪ್ಟೆಂಬರ್ 2022, 16:26 IST
ಅಕ್ಷರ ಗಾತ್ರ

ಮಡಿಕೇರಿ: ಅತಿವೃಷ್ಟಿಯಿಂದ ಆಗಿರುವ ಮನೆ ಹಾನಿಗೆ ಪರಿಹಾರ ವಿತರಿಸುವುದು ಬಾಕಿ ಇದ್ದಲ್ಲಿ, ಕೂಡಲೇ ಪರಿಹಾರ ಪಾವತಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ನಿರ್ದೇಶನ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಳೆ ಹಾನಿ ಪರಿಹಾರ ಹಾಗೂ ಜಿಲ್ಲೆಯ ಪ್ರಗತಿಗೆ ಸಂಬಂಧಿಸಿದಂತೆ ಶುಕ್ರವಾರ ಸಭೆ ನಡೆಸಿ ಮಾತನಾಡಿದರು.

ಬೆಳೆ ಹಾನಿಗೂ ಪರಿಹಾರ ವಿತರಿಸಬೇಕು. ಇದರಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.

ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಳೆ ಕಡಿಮೆಯಾಗುವ ಸಾಧ್ಯತೆ ಇದ್ದು, ಲೋಕೋಪಯೋಗಿ, ಪಂಚಾಯತ್ ರಾಜ್, ಪಿಎಂಜಿಎಸ್‍ವೈ ಹೀಗೆ ವಿವಿಧ ಇಲಾಖಾ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ‘ಬೆಳೆ ಪರಿಹಾರ ನೀಡುವ ನಿಟ್ಟಿನಲ್ಲಿ ತಂಡ ರಚಿಸಲಾಗಿದ್ದು, ಹೆಚ್ಚಿನ ಹಾನಿಯಾಗಿರುವ ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಂಡು ಪರಿಹಾರ ವಿತರಿಸಲಾಗುವುದು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಜಿಲ್ಲಾಡಳಿತದಿಂದ ಕೈಗೊಂಡಿದ್ದ ಮುಂಜಾಗ್ರತಾ ಕ್ರಮಗಳು, ದೂರು ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಮನೆ ನಿರ್ಮಿಸಿಕೊಳ್ಳಲು ಮುಂದಾದ 73 ಮಂದಿ: ಪುನರ್ವಸತಿ ಫಲಾನುಭವಿಗಳ ಪೈಕಿ ಸ್ವಂತ ಜಾಗ ಇದ್ದಲ್ಲಿ ಮನೆ ನಿರ್ಮಿಸಿಕೊಳ್ಳಲು ಅನುದಾನ ಬಿಡುಗಡೆ ಮಾಡಲಾಗಿದೆ. ಅಂಥವರಿಗೆ ಹಂತ ಹಂತವಾಗಿ ಕಾಮಗಾರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ಸ್ವಂತ ಜಾಗದಲ್ಲಿ 73 ಜನರು ಮನೆ ನಿರ್ಮಿಸಿಕೊಳ್ಳಲು ಮುಂದೆ ಬಂದಿದ್ದಾರೆ ಎಂದು ಅವರು ಹೇಳಿದರು.

ಬಾಕಿ ಉಳಿದಿರುವ 76 ಮನೆಗಳ ಹಸ್ತಾಂತರ: ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಮಾತನಾಡಿ, ‘2018ರಲ್ಲಿ ಸುರಿದ ಮಳೆಗೆ ಮನೆ ಕಳೆದುಕೊಂಡವರಿಗೆ ಕರ್ಣಂಗೇರಿಯಲ್ಲಿ 35, ಮದೆನಾಡು ಬಳಿ 80, ಗಾಳಿಬೀಡು ಬಳಿ 140, ಬಿಳಿಗೇರಿ ಬಳಿ 22, ಜಂಬೂರು ಬಳಿ 383 ಮನೆ ಹಸ್ತಾಂತರ ಮಾಡಲಾಗಿದೆ. ಉಳಿದಂತೆ, ಕೆ.ನಿಡುಗಣೆ ಬಳಿ 76 ಮನೆಗಳ ಹಸ್ತಾಂತರಕ್ಕೆ ಬಾಕಿ ಇದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಪ್ರತಿ ಮನೆಗೂ ನಲ್ಲಿ ನೀರು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿ ಸಂಬಂಧ ಮಾಹಿತಿ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT