ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು: ಹಲವು ಸಮಸ್ಯೆಗಳ ಸುಳಿಯಲ್ಲಿ ಜಿಲ್ಲೆಯ ವೈದ್ಯರು

ವೈದ್ಯರಿಗಿಂತ ಖಾಲಿ ಹುದ್ದೆಗಳೇ ಅಧಿಕ, ಹೊರ ಜಿಲ್ಲೆಗಳಿಂದಲೂ ಬರುತ್ತಿರುವ ರೋಗಿಗಳು
Published 1 ಜುಲೈ 2024, 5:54 IST
Last Updated 1 ಜುಲೈ 2024, 5:54 IST
ಅಕ್ಷರ ಗಾತ್ರ

ಮಡಿಕೇರಿ: ರೋಗಿಗಳ ತೊಂದರೆ ನಿವಾರಿಸುವ ವೈದ್ಯರೇ ಕೊಡಗು ಜಿಲ್ಲೆಯಲ್ಲಿ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ಪರದಾಡುತ್ತಿದ್ದಾರೆ. ನಿರ್ದಿಷ್ಟವಾಗಿ ಕೊಡಗು ಜಿಲ್ಲೆಯಲ್ಲೇ ಇರುವ ಸಮಸ್ಯೆಗಳಿಂದಾಗಿ ಇಂದಿಗೂ ವೈದ್ಯರ ಪಾಲಿಗೆ ಕೊಡಗು ಆಕರ್ಷಣೆಯ ಜಿಲ್ಲೆಯಾಗಿ ಕಂಡಿಲ್ಲ. ಹೀಗಾಗಿ, ವೈದ್ಯರ ಕೊರತೆ ಸಾಕಷ್ಟಿದ್ದು, ಅದರ ಪರಿಣಾಮ ರೋಗಿಗಳ ಮೇಲುಂಟಾಗುತ್ತಿದೆ.

ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇರಬೇಕಿರುವ 25 ತಜ್ಞ ವೈದ್ಯರಿಗೆ ಕೇವಲ 9 ಮಂದಿಯಷ್ಟೇ ಇದ್ದಾರೆ. ಜಿಲ್ಲಾಸ್ಪತ್ರೆಯಲ್ಲಿರಬೇಕಾದ 24 ತಜ್ಞ ವೈದ್ಯರಿಗೆ ಕೇವಲ 6 ಮಂದಿಯಷ್ಟೇ ಇದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ ಕುಮಾರ್ ಹೇಳುತ್ತಾರೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವೈದ್ಯರ ನೇಮಕಾತಿಗಾಗಿ 18 ಬಾರಿ ಸಂದರ್ಶನಗಳನ್ನು ನಡೆಸಿದ್ದರೂ ಭರ್ತಿಯಾಗಿದ್ದು ಕೇವಲ ಶೇ 36ರಷ್ಟು ಮಾತ್ರ. ಮಂಜೂರಾಗಿರುವ ವೈದ್ಯರ ಶಾಶ್ವತ ಹುದ್ದೆಗಳಲ್ಲಿ ಶೇ 60ರಷ್ಟು ಮಂದಿ ಮಾತ್ರವೇ ಇದ್ದಾರೆ. ಪ್ರಮುಖ ವಿಭಾಗಗಳಲ್ಲಿ ಒಂದಾಗಿರುವ ಮೆಡಿಸಿನ್ ವಿಭಾಗದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಕಡೆಯಿಂದ ಕೇವಲ ಒಬ್ಬ ಪ್ರಾಧ್ಯಾಪಕರು ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಕಡೆಯಿಂದ 4 ವೈದ್ಯರಷ್ಟೇ ಇದ್ದು, ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಮೂಲಗಳು ಹೇಳುತ್ತವೆ.

ಕಡ್ಡಾಯ ಗ್ರಾಮೀಣ ಸೇವೆಯ ಅಡಿಯಲ್ಲಿ ಸಿನಿಯರ್ ರೆಸಿಡೆಂಟ್‌ಗಳು ಮತ್ತು ಜೂನಿಯರ್ ರೆಸಿಡೆಂಟ್‌ಗಳನ್ನು ನಿಯೋಜಿಸಿದಾಗಲೂ ಹೆಚ್ಚಿನವರು ಕೌನ್ಸಿಲಿಂಗ್ ಸಮಯದಲ್ಲಿ ಕೊಡಗನ್ನು ಆಯ್ಕೆ ಮಾಡಿಕೊಳ್ಳುವುದೇ ಇಲ್ಲ. ಕೊಡಗನ್ನು ಬಿಟ್ಟು ಇತರೆ ಸ್ಥಳಗಳಿಗೆ ಆದ್ಯತೆ ನೀಡುತ್ತಾರೆ. ಜನರಲ್ ಮೆಡಿಸಿನ್ ಮತ್ತು ಅರವಳಿಕೆ ವಿಭಾಗಗಳಲ್ಲಿ ಸೀನಿಯರ್ ರೆಸಿಡೆಂಟ್‌ಗಳ ನೇಮಕಾತಿಗಾಗಿ ಅರ್ಜಿ ಕರೆದಾಗಲೂ ಯಾರೊಬ್ಬರೂ ಅರ್ಜಿ ಹಾಕಲಿಲ್ಲ. ಇವೆಲ್ಲವೂ ಕೊಡಗು ವೈದ್ಯರ ಪಾಲಿಗೆ ಸ್ವರ್ಗದಂತೆ ಕಂಡಿಲ್ಲ. ಬದಲಾಗಿ, ಶಿಕ್ಷೆಯಂತೆ ಕಂಡಿದೆ ಎಂಬುದು ಸಾಬೀತಾಗುತ್ತದೆ.

ಈಗ ಇರುವ ಸಿನೀಯರ್ ರೆಸಿಡೆಂಟ್‌ಗಳು ಮತ್ತು ಜೂನಿಯರ್ ರೆಸಿಡೆಂಟ್‌ಗಳಿಗೆ ವಸತಿ ಗೃಹಗಳ ಕೊರತೆ ಸಾಕಷ್ಟಿದೆ. ಕಿರಿಯ ಗೃಹ ವೈದ್ಯರಿಗೆ ಹಾಸ್ಟೆಲ್ ಸೌಲಭ್ಯವೂ ಇಲ್ಲದಂತಾಗಿದೆ.

ಸಾಮಾನ್ಯವಾಗಿ ಎಲ್ಲ ಜಿಲ್ಲೆಯಲ್ಲೂ ಆಸ್ಪ‍ತ್ರೆ, ವೈದ್ಯಕೀಯ ಕಾಲೇಜು ಮತ್ತು ವಸತಿ ಗೃಹ ಒಂದೇ ಕಡೆ ಇರುತ್ತದೆ. ಇಲ್ಲವೇ ಸ್ವಲ್ಪ ದೂರದಲ್ಲಿರುತ್ತದೆ. ಆದರೆ, ಕೊಡಗಿನಲ್ಲಿ ವಸತಿ ಗೃಹ ದೂರದಲ್ಲಿದೆ. ಆಸ್ಪತ್ರೆಯೇ ಬೇರೆ ಕಡೆ ಇದೆ. ದೂರದಲ್ಲಿರುವ ವಸತಿಗೃಹದಲ್ಲೂ ಎಲ್ಲ ವೈದ್ಯರಿಗೆ ಸಾಕಾಗುವಷ್ಟು ಇಲ್ಲ. ಈ ಎಲ್ಲ ಕಾರಣದಿಂದ ವೈದ್ಯರು ಇಲ್ಲಿ ಕೆಲಸ ಮಾಡಲು ಆಸಕ್ತಿ ತೋರುತ್ತಿಲ್ಲ.

ಇಲ್ಲಿರುವ ಹೆಚ್ಚಿನವರು ವೈದ್ಯ ದಂಪತಿಗಳೇ ಆಗಿದ್ದಾರೆ. ಹಾಗಾಗಿ, ಒಂದಿಷ್ಟು ಮಂದಿ ಇಲ್ಲಿ ಉಳಿದಿದ್ದಾರೆ. ಇಲ್ಲದೇ ಇದ್ದರೆ, ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದರು ಎಂದು ಹೆಸರು ಹೇಳಲು ಬಯಸದ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವೈದ್ಯರಿಗೆ ಬೇಕಿದೆ ವಿಶೇಷ ವೇತನ ಪ್ಯಾಕೇಜ್ ವಸತಿಗೃಹದ ವ್ಯವಸ್ಥೆಯೂ ಬೇಕಿದೆ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಮೂಲಸೌಕರ್ಯದ ಅಗತ್ಯ ಇದೆ
ಮೈಸೂರಿಗೆ ಹೋಲಿಸಿದರೆ ಮಡಿಕೇರಿಯಲ್ಲಿ ಚಿಕಿತ್ಸೆ ಪಡೆಯುವುದು ಸುಲಭ. ವೈದ್ಯರು ಅಲೆದಾಡಿಸುವುದಿಲ್ಲ. ಬೇಗನೇ ಚಿಕಿತ್ಸೆ ನೀಡಿ ಉಚಿತವಾಗಿ ಔಷಧವನ್ನೂ ನೀಡುತ್ತಾರೆ.
ಪುಟ್ಟಸ್ವಾಮಿ ಪಿರಿಯಾಪಟ್ಟಣದ ನಿವಾಸಿ.
ವಿಶೇಷ ಪ್ಯಾಕೇಜ್‌ಗೆ ಮನವಿ
ಈಚೆಗಷ್ಟೇ ಜಿಲ್ಲೆಗೆ ಬಂದಿದ್ದ ಆರೋಗ್ಯ ಖಾತೆ ಸಚಿವ ದಿನೇಶ್‌ ಗುಂಡೂರಾವ್ ಅವರ ಬಳಿಯಲ್ಲಿ ಬಹಿರಂಗವಾಗಿಯೇ ಶಾಸಕ ಡಾ.ಮಂತರ್‌ಗೌಡ ಅವರು ಗುಡ್ಡಗಾಡು ಪ್ರದೇಶವಾಗಿರುವ ಕೊಡಗನ್ನು ವಿಶೇಷ ಆದ್ಯತೆಯನ್ನಾಗಿ ಪರಿಗಣಿಸಿ ಇಲ್ಲಿ ಕೆಲಸ ಮಾಡುವ ವೈದ್ಯರಿಗೆ ವಿಶೇಷ ವೇತನ ಪ್ಯಾಕೇಜ್ ನೀಡಬೇಕು ಎಂದು ಮನವಿ ಮಾಡಿದರು. ಆಗ ಮಾತ್ರ ಇಲ್ಲಿ ವೈದ್ಯರು ಕೆಲಸ ಮಾಡಲು ಇಚ್ಛಿಸುತ್ತಾರೆ ಎಂದು ಹೇಳಿದರು.
ಬೇರೆ ಜಿಲ್ಲೆಗೆ ಹೋಲಿಸಿದರೆ ಉತ್ತಮ ಸೇವೆ
ಟೀಕೆಗಳು ಏನೇ ಇದ್ದರೂ ಕೊಡಗಿನಲ್ಲಿ ಬೇರೆ ಜಿಲ್ಲೆಗೆ ಹೋಲಿಸಿದರೆ ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬಹಳಷ್ಟು ಮಂದಿ ರೋಗಿಗಳು ಹೇಳುತ್ತಾರೆ. ಲಂಚಗುಳಿತನ ಸತಾಯಿಸುವುದು ನಿರ್ಲಕ್ಷ್ಯ ಇಲ್ಲಿ ಕಡಿಮೆ ಇದೆ. ಹೆಚ್ಚಿನ ವೈದ್ಯರು ಲಂಚ ಕೇಳುವುದಿಲ್ಲ ಸತಾಯಿಸುವುದಿಲ್ಲ ಉಚಿತ ಔಷಧಿಗಳನ್ನು ನೀಡುತ್ತಾರೆ ಹೆಚ್ಚಿನ ನಿಗಾ ವಹಿಸುತ್ತಾರೆ ಎಂಬ ಅಭಿಪ್ರಾಯ ಹೊರ ಜಿಲ್ಲೆಗಳಲ್ಲಿದೆ. ಇದರಿಂದಾಗಿ ಪಕ್ಕದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮಾತ್ರವಲ್ಲ ಹುಣಸೂರಿನಿಂದಲೂ ನಿತ್ಯವೂ ಇಲ್ಲಿಗೆ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ.  ಇದು ಕೊಡಗು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ಹೆಗ್ಗಳಿಕೆ ಎನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT