ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಪ್ರವಾಸೋದ್ಯಮದ ಮೇಲೂ ಕರಿನೆರಳು

ಮಳೆ ಕೊರತೆಯಿಂದ ಸೊರಗಿದ ಜಲಪಾತಗಳು, ಪ್ರವಾಸಿಗರ ಸಂಖ್ಯೆ ಶೇ 50 ಇಳಿಮುಖ
Published 9 ಸೆಪ್ಟೆಂಬರ್ 2023, 6:43 IST
Last Updated 9 ಸೆಪ್ಟೆಂಬರ್ 2023, 6:43 IST
ಅಕ್ಷರ ಗಾತ್ರ

ನಾಪೋಕ್ಲು: ಮಳೆ ಕೊರತೆಯು ಕೊಡಗು ಜಿಲ್ಲೆಯ ರೈತರು ಮತ್ತು ಬೆಳೆಗಾರರ ಮೇಲಷ್ಟೇ ಪರಿಣಾಮ ಬೀರಿಲ್ಲ. ಜಿಲ್ಲೆಯ ಪ್ರವಾಸೋದ್ಯಮದ ಮೇಲೂ ಕರಿನೆರಳು ಚಾಚಿದೆ. ಸ್ವಾತಂತ್ರ್ಯ ದಿನಾಚರಣೆ ವೇಳೆ ಬಂದ ಸರಣಿ ರಜೆಗಳನ್ನು ಬಿಟ್ಟರೆ ಉಳಿದ ದಿನಗಳಲ್ಲಿ ಪ್ರವಾಸಿಗರು ಜಿಲ್ಲೆಗೆ ಭೇಟಿ ಕೊಡುವ ಪ್ರಮಾಣ ತೀರಾ ಕುಗ್ಗಿದ್ದು, ಹೋಟೆಲ್ ಉದ್ಯಮಿಗಳ ಪಾಲಿಗೆ ನಷ್ಟ ತರಿಸಿದೆ.

ಸಾಮಾನ್ಯವಾಗಿ ಬೇಸಿಗೆಯಂತೆಯೇ ಮಳೆಗಾಲದಲ್ಲೂ ಪ‍್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿಗೆ ಬರುತ್ತಿದ್ದರು. ಇಲ್ಲಿ ಧುಮ್ಮಿಕ್ಕುವ ಜಲಪಾತಗಳು, ಭೋರ್ಗರೆಯುತ್ತ ಹರಿಯುವ ನದಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. ಜಲಸಾಹಸ ಕ್ರೀಡೆಗಳನ್ನು ಮನದಣಿಯೇ ಆಡುತ್ತಿದ್ದರು. ಆದರೆ, ಮಳೆ ಇಲ್ಲದೇ ಜಲಪಾತಗಳೆಲ್ಲ ಸೊರಗಿರುವುದರಿಂದ ಮಳೆಗಾಲದ ಪ್ರವಾಸೋದ್ಯಮ ತೀರಾ ಕಳೆಗುಂದಿದೆ.

ಇಲ್ಲಿನ ದುಬಾರೆ ಹಾಗೂ ಬರಪೊಳೆಯಲ್ಲಿ ಮಾತ್ರವೇ ರ‍್ಯಾಫ್ಟಿಂಗ್ ಸೌಕರ್ಯವಿದೆ. ಇಲ್ಲೂ ನದಿಯಲ್ಲಿ ನೀರು ಬಿರುಸಿನಿಂದ ಹರಿಯದೇ ಇರುವುರಿಂದ ರ‍್ಯಾಫ್ಟಿಂಗ್‌ ಮಾಡಲು ಬಂದ ಪ್ರವಾಸಿಗರು ಒಲವು ತೋರುತ್ತಿಲ್ಲ.

ಕೊಡಗಿನ ಮಳೆಯ ಬಿರುಸನ್ನು ನೋಡಲೆಂದೇ ಬರುತ್ತಿದ್ದ ಪ್ರಕೃತಿ ಪ್ರಿಯರೂ ಈಗ ಬರುತ್ತಿಲ್ಲ. ಮುಂಬರುವ ದಸರೆಯ ರಜೆಯಲ್ಲಿ ಪ್ರವಾಸಿಗರು ಬರುತ್ತಾರೆಯೇ ಇಲ್ಲವೇ ಎಂಬುದೇ ಈಗ ಹೋಟೆಲ್ ಉದ್ಯಮಿಗಳಿಗೆ ಯಕ್ಷಪ್ರಶ್ನೆ ಎನಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಡಗು ಜಿಲ್ಲಾ ಹೋಟೆಲ್ ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ‘ಮಳೆ ಇಲ್ಲದೇ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿನತ್ತ ಬರುತ್ತಿಲ್ಲ. ಇಲ್ಲಿನ ಜಲಪಾತಗಳೆಲ್ಲವೂ ಖಾಲಿಯಾಗಿರುವುದರಿಂದ ಮಳೆಗಾಲದ ಪ್ರವಾಸೋದ್ಯಮಕ್ಕೆ ಗ್ರಹಣ ಹಿಡಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸರಿಸುಮಾರು ಶೇ 50ಕ್ಕೂ ಅಧಿಕ ಪ್ರವಾಸಿಗರು ಕೊಡಗಿನಿಂದ ಮಳೆಗಾಲದಲ್ಲಿ ದೂರು ಉಳಿದಿದ್ದಾರೆ’ ಎಂದರು.

ಸೊರಗಿರುವ ಜಲಪಾತಗಳು

ಬೃಹತ್ ಬಂಡೆಗಲ್ಲು. ಅದರ ಮೇಲೆ ಸಣ್ಣದಾಗಿ ಹರಿವ ಜಲಧಾರೆ. ಇದು ಸಮೀಪದ ನೆಲಜಿ ಗ್ರಾಮದ ಪಾರೆಕಟ್ಟು ಜಲಪಾತದ ನೋಟ. ಕೇವಲ ಈ ಒಂದು ಜಲಪಾತ ಮಾತ್ರವಲ್ಲ, ಬಹುತೇಕ ಎಲ್ಲ ಜಲಪಾತಗಳ ಸ್ಥಿತಿಯೂ ಹೀಗೆ ಇದೆ. ಇದರಿಂದ ಸೆಪ್ಟೆಂಬರ್ ಮೊದಲ ವಾರದಲ್ಲಿ ಜಲಪಾತ ನೋಡಿದ ಸ್ಥಳೀಯರಿಗೆ ಮಾರ್ಚ್ ತಿಂಗಳ ಅನುಭವವಾಗುತ್ತಿದೆ.

ಪ್ರತಿವರ್ಷ ಫೆಬ್ರುವರಿ-ಮಾರ್ಚ್ ತಿಂಗಳ ಅಂತ್ಯಕ್ಕೆ ಕಂಡು ಬರುತ್ತಿದ್ದ ಜಲಪಾತದ ನೋಟ ಇದೀಗ ಮಳೆಗಾಲದಲ್ಲೇ ಕಾಣಸಿಗುತ್ತಿದೆ. ಪ್ರತಿವರ್ಷ ಬೆಳ್ನೊರೆ ಹೊತ್ತು ಭೋರ್ಗರೆಯುತ್ತಿದ್ದ ಜಲಪಾತವೀಗ ಮಳೆಯ ಕೊರತೆಯಿಂದ ಸೊರಗಿದೆ. ಜಲಪಾತದಿಂದ ಕಣಿವೆಗಳಲ್ಲಿ ಜಲಧಾರೆಯಾಗಿ ಹರಿದು ಭತ್ತದ ಗದ್ದೆಗಳನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುತ್ತಿದ್ದ ಜಲಮೂಲ ಬತ್ತಿದ್ದು ಕೃಷಿಕರು ಚಿಂತೆಗೀಡಾಗಿದ್ದಾರೆ.

ನೆಲಜಿಯ ಪಾರೆಕಟ್ಟು ಜಲಪಾತ ಮಾತ್ರವಲ್ಲ. ಸನಿಹದ ಪೇರೂರು ಗ್ರಾಮದ ಬೆಟ್ಟಗಳಲ್ಲಿ ಮಳೆಗಾಲದಲ್ಲಿ ಸಾಲು ಸಾಲು ಜಲಧಾರೆಗಳು ಕಾಣಸಿಗುತ್ತಿದ್ದವು. ಬೆಟ್ಟಗಳಿಂದ ಹರಿದು ಬರುವ ಜಲಧಾರೆ ಅಲ್ಲಲ್ಲಿ ಬಂಡೆಗಳ ಮೇಲೆ ಬೆಳ್ನೊರೆಯಾಗಿ ಧುಮುಕುವ ದೃಶ್ಯ ಕಣ್ಮನ ಸೆಳೆಯುತ್ತಿದ್ದವು. ಪ್ರತಿವರ್ಷ ಧಾರಾಕಾರ ಮಳೆ ಸುರಿದು ಬಿಡುವು ಕೊಟ್ಟ ದಿನಗಳಲ್ಲಿ ಜಲಪಾತಗಳ, ಝರಿ, ತೊರೆಗಳನ್ನು ವೀಕ್ಷಿಸಿ ಸಂಭ್ರಮಿಸುತ್ತಿದ್ದವರು. ಇದೀಗ ಬತ್ತಿದ ಜಲಧಾರೆಗಳ ಮುಂದೆ ನಿಂತು ಬರೀ ಬಂಡೆಗಲ್ಲುಗಳನ್ನು ನೋಡಬೇಕಿದೆ. ಸದ್ಯ, ಅಲ್ಪ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ಬಿರು ಬಿಸಿಲು ಕೆಲವೇ ದಿನಗಳಲ್ಲಿ ನೀರಿನ ಸೆಲೆಯನ್ನು ಬರಡು ಮಾಡಲಿದೆ.

ಸಮೀಪದ ಕಕ್ಕಬ್ಬೆಯ ಮೇದುರ ಜಲಪಾತ, ಚೆಯ್ಯಂಡಾಣೆ ಬಳಿಯ ಚೇಲಾವರ ಜಲಪಾತ, ನೆಲಜಿ ಗ್ರಾಮದ ಪಾರೆಕಟ್ಟು ಜಲಪಾತ, ಪೇರೂರು ಗ್ರಾಮದ ದೇವರಗುಂಡಿ ಜಲಪಾತ, ತಡಿಯಂಡಮೋಳ್ ಬೆಟ್ಟ ಶ್ರೇಣಿಯ ನೀಲಕಂಡಿಜಲಪಾತ, ಯವಕಪಾಡಿ ಗ್ರಾಮದ ಚಿಂಗಾರ ಜಲಪಾತಗಳು ಮಳೆಗಾಲದಲ್ಲಿ ಮಳೆಗಾಲದ ನಂತರದ ದಿನಗಳಲ್ಲಿ ವೀಕ್ಷಣೆಗೆ ಪ್ರಮುಖವಾದ ಜಲಪಾತಗಳು.

ಇವುಗಳಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ಹಲವು ಅನಾಮಧೇಯ ಜಲಪಾತಗಳು ಇದೀಗ ಮೈದುಂಬಿ ಧುಮುಕಬೇಕಿದ್ದ ಸಮಯ. ಬೆಟ್ಟಶ್ರೇಣಿಗಳಲ್ಲಿ, ಗುಡ್ಡಗಳಲ್ಲಿ, ಇಳಿಜಾರು ಸ್ಥಳಗಳಲ್ಲಿ ಹರಿದು ತೋಡು, ನದಿಗಳನ್ನು ಸೇರಬೇಕಿದ್ದ ಸಮಯ. ಬಿರುಸಿನ ಮಳೆಗೆ ಮೈದುಂಬಿ ಜಲಧಾರೆಯಾಗಿ ಭೋರ್ಗರೆಯುವ ಚೇಲಾವರ ಜಲಪಾತ ಕೊಡಗಿನ ಪ್ರವಾಸಿ ನಕ್ಷೆಯಲ್ಲಿ ವಿಶೇಷ ಸ್ಥಾನ ಪಡೆದಿತ್ತು. ಮಳೆಗಾಲದ ದಿನಗಳಲ್ಲಿ ಈ ಜಲಪಾತದ ಚೆಲುವು ಮನಮೋಹಕ. ಈ ವರ್ಷ ಆ ಮೋಹಕತೆಯೇ ಇಲ್ಲವಾಗಿದೆ.

ಕೊಡಗು ಜಿಲ್ಲೆಯ ನರಿಯಂದಡ ಗ್ರಾಮಪಂಚಾಯತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿರುವ ಎರಡು ರಮಣೀಯ ಜಲಪಾತಗಳು ತಮ್ಮ ಚೆಲುವಿನಿಂದ ಪ್ರವಾಸಿಗರ ಮನಸೆಳೆದಿದ್ದವು. ಕೊಡಗಿನಲ್ಲಿ ಅತೀ ಎತ್ತರವಾದ ತಡಿಯಂಡಮೋಳ್ ಶಿಖರ, ಬ್ರಹ್ಮಗಿರಿ ಬೆಟ್ಟಸಾಲುಗಳು ಮುಗಿಲನ್ನು ಚುಂಬಿಸುತ್ತಾ ನಿಂತಿವೆ. ಈ ಬೆಟ್ಟಸಾಲುಗಳ ಕಣಿವೆಗಳಿಂದ ಹಲವು ನದಿಗಳು ಉಗಮಿಸಿ ಹರಿದು ಬರುತ್ತವೆ.

ಬ್ರಹ್ಮಗಿರಿ ಬೆಟ್ಟದ ಬುಡದಿಂದ ಕಾವೇರಿ ನದಿ ಉಗಮಿಸಿದರೆ ತಡಿಯಂಡಮೋಳ್ ಶಿಖರದ ಸರಹದ್ದಿನಲ್ಲಿರುವ ಇಗ್ಗುತಪ್ಪ ಬೆಟ್ಟದಿಂದ ಬಲಿಯಟ್ರ ನದಿ ಮತ್ತು ಚೋಮಕುಂದು ಬೆಟ್ಟದಿಂದ ಸೋಮನನದಿಗಳು ಹರಿದುಬರುತ್ತವೆ. ಈ ಎರಡು ನದಿಗಳು ಚೆಯ್ಯಂಡಾಣೆ ಬಳಿಯ ಚೇಲಾವರ ಗ್ರಾಮದಲ್ಲಿ ಜಲಪಾತಗಳಾಗಿ ಧುಮುಕುತ್ತವೆ. ಹಾಗೆಯೇ ಹರಿದು ಅನತಿ ದೂರದಲ್ಲಿ ಸಂಗಮವಾಗಿ ಬಲಮುರಿ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತವೆ. ಬೆಟ್ಟಗಳಿಂದ ಹರಿದು ಬರುವ ಜಲಧಾರೆ ಅಲ್ಲಲ್ಲಿ ಬಂಡೆಗಳ ಮೇಲೆ ಬೆಳ್ನೊರೆಯಾಗಿ ಧುಮುಕುವ ದೃಶ್ಯ ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದವು. ಧಾರಾಕಾರ ಮಳೆ ಸುರಿದು ಬಿಡುವು ಕೊಟ್ಟ ದಿನಗಳು ಜಲಪಾತಗಳ, ಝರಿ, ತೊರೆಗಳ ವೀಕ್ಷಣೆಗೆ ಸಕಾಲವಾಗಿದ್ದು ಪ್ರವಾಸಿಗರು ಆ ಸೌಂದರ್ಯವನ್ನು ಮನದುಂಬಿಕೊಳ್ಳುತ್ತಿದ್ದರು. ಸಣ್ಣ ಜಲಪಾತಗಳು ಈಗಲೇ ಮರೆಯಾಗಿದ್ದರೆ ಚೇಲಾವರದಂತಹ ಜಲಪಾತಗಳೂ ಈಗಲೇ ಸೊರಗಿವೆ. ಮುಂದಿನ ದಿನಗಳಲ್ಲಿ ಕೇವಲ ಬಂಡೆಗಲ್ಲುಗಳನ್ನು ವೀಕ್ಷಿಸಿ ಹಿಂತಿರುಗುವ ಸನ್ನಿವೇಶ ಎದುರಾಗಲಿದೆ.

ನಾಪೋಕ್ಲು ಸಮೀಪದ ಚೇಲಾವರ ಜಲಪಾತದಲ್ಲಿ ನೀರಿನ ಹರಿವು ತಗ್ಗಿದೆ
ನಾಪೋಕ್ಲು ಸಮೀಪದ ಚೇಲಾವರ ಜಲಪಾತದಲ್ಲಿ ನೀರಿನ ಹರಿವು ತಗ್ಗಿದೆ
ಭಾಗಮಂಡಲ-ಕರಿಕೆ ಹಾದಿಯಲ್ಲಿ ಕಾಣಸಿಗುವ ಜಲಪಾತ
ಭಾಗಮಂಡಲ-ಕರಿಕೆ ಹಾದಿಯಲ್ಲಿ ಕಾಣಸಿಗುವ ಜಲಪಾತ

ಜಲಪಾತಗಳಲ್ಲಿ ಕಾಣಿಸುತ್ತಿವೆ ಬಂಡೆಗಲ್ಲುಗಳು ಮಳೆ ಇಲ್ಲದೇ ಜನಜೀವನ ಹೈರಾಣ ಜೀವ ಕಳೆದುಕೊಂಡ ಮಳೆಗಾಲದ ಪ್ರವಾಸೋದ್ಯಮ

ಪೇರೂರು ನೆಲಜಿ ಬಲ್ಲಮಾವಟಿ ಗ್ರಾಮಗಳ ಮಂದಿಗೆ ನಿತ್ಯ ಬಳಕೆಗೆ ನೈಸರ್ಗಿಕ ನೀರು ಲಭಿಸುತ್ತಿದೆ. ಈ ವರ್ಷ ಎದುರಾಗಿರುವ ಮಳೆಯ ಕೊರತೆಯಿಂದ ನೀರಿಗಾಗಿ ಪರದಾಡುವ ಸನ್ನಿವೇಶ ಎದುರಾಲಿದೆ
ಮಿಟ್ಟು ಪೂಣಚ್ಚ ಗ್ರಾಮಸ್ಥ ಪೇರೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT