ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ |ಮಿಶ್ರ ಬೆಳೆಯಲ್ಲಿ ಯಶ ಕಂಡ ಪ್ರಗತಿಪರ ರೈತ

ಕಾಫಿ, ಏಲಕ್ಕಿ, ಅಡಿಕೆ, ಹತ್ತಾರು ಬಗೆಯ ಹಣ್ಣುಗಳ ಬೆಳೆಯೊಂದಿಗೆ ಹೈನುಗಾರಿಕೆ ಮಾಡುವ ಕೃಷಿಕ ದಂಪತಿ
Last Updated 13 ಜನವರಿ 2023, 7:43 IST
ಅಕ್ಷರ ಗಾತ್ರ

ಶನಿವಾರಸಂತೆ: ಮಿಶ್ರ ಬೆಳೆಯಿಂದ ಜೀವನ ನಿರ್ವಹಣೆ ಮಾಡಬಹುದು ಎಂಬುದಕ್ಕೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಜಗೇರಿ ಗ್ರಾಮದ ನಿವೃತ್ತ ಸೈನಿಕ ಹಾಗೂ ರೈತ ಕೆ.ಟಿ.ಹರೀಶ್ ಉದಾಹರಣೆ.

‘ರೈತರು ಒಂದೇ ಬೆಳೆಯಿಂದ ಉತ್ತಮ ಆದಾಯ ನಿರೀಕ್ಷೆ ಮಾಡುವಂತಿಲ್ಲ. ಮಿಶ್ರ ಬೆಳೆ ಲಾಭದಾಯಕವಾಗಿದ್ದು, ಜೀವನ ಸರಿದೂಗಿಸಬಹುದು’ ಎಂದು ಪ್ರಗತಿಪರ ರೈತರಾಗಿರುವ ಅವರು ಆತ್ಮವಿಶ್ವಾಸದಿಂದ ಹೇಳುತ್ತಾರೆ.

12 ವರ್ಷ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ 1992ರಲ್ಲಿ ಸ್ವಗ್ರಾಮಕ್ಕೆ ಹಿಂದಿರುಗಿದ ಬಳಿಕ ಕೃಷಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸಮಗ್ರ ಕೃಷಿಯಲ್ಲಿ 30 ವರ್ಷಗಳ ಪರಿಶ್ರಮದಿಂದ ಅವರು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.

ಕೂಜಗೇರಿಯ ರೈತ ಕೆ.ಟಿ.ತಮ್ಮೇಗೌಡ- ಹೊನ್ನಮ್ಮ ದಂಪತಿಯ ಪುತ್ರ ಹರೀಶ್ ಚಿಕ್ಕಂದಿನಿಂದಲೂ ಕೃಷಿಯಲ್ಲಿ ಆಸಕ್ತಿ ಹೊಂದಿದ್ದು ಶಾಲೆಯ ಬಿಡುವಿನ ಸಮಯದಲ್ಲಿ ತಂದೆ- ತಾಯಿಯ ಜತೆ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಪದವಿ ಪಡೆದು ಸೇನೆ ಸೇರಿ ಹಿಂದಿರುಗಿದ ಬಳಿಕ ಕೃಷಿ ಜೀವನ ಕೈಬೀಸಿ ಕರೆಯಿತು. ತಮ್ಮ ಪಾಲಿಗೆ ಬಂದ 9 ಎಕರೆ ತೋಟದಲ್ಲಿ ಬಾಳ ಸಂಗಾತಿಯಾಗಿ ಬಂದ ಪತ್ನಿ ಮನು ಅವರ ಸಹಕಾರದಲ್ಲಿ ಮಿಶ್ರ ಬೇಸಾಯ ಆರಂಭಿಸಿದರು.

ತೋಟದಲ್ಲಿ ಕಾಫಿ, ಏಲಕ್ಕಿ, ಅಡಿಕೆ, ನಾಗಪುರ ಕಿತ್ತಳೆ, ಬಾಳೆ, ಬಟರ್ ಫ್ರೂಟ್, ಸಪೋಟ, ಹಿಮಾಚಲ ಪ್ರದೇಶದ ಸೇಬು ಬೆಳೆಯುತ್ತಿದ್ದಾರೆ. ಜತೆಗೆ, 1 ಎಕರೆ ತೋಟದಲ್ಲಿ ತಾಳೆಹಣ್ಣು ಬೆಳೆಯುತ್ತಿದ್ದಾರೆ. ಪ್ರಸ್ತುತ ಹಸಿರು ಮೆಣಸಿನಕಾಯಿ ಹಾಗೂ ಬೀನ್ಸ್ ವ್ಯವಸಾಯದಲ್ಲೂ ತೊಡಗಿಸಿಕೊಂಡಿದ್ದಾರೆ. ಹೈನುಗಾರಿಕೆ ಹಾಗೂ ನಾಟಿಕೋಳಿ ಸಾಕಣಿಕೆಯಲ್ಲೂ ಸೈ ಎನಿಸಿದ್ದಾರೆ.

ಕೃಷಿಯಿಂದಲೇ ಬದುಕು ಕಟ್ಟಿಕೊಂಡಿರುವ ಹರೀಶ್- ಮನು ದಂಪತಿ ಕಾಡಾನೆಗಳ ದಾಂದಲೆಯಿಂದ ಬೆಳೆ ಹಾನಿಯಾಗಿ ಬೇಸತ್ತಿದ್ದಾರೆ. ಹಣ್ಣು ತಿನ್ನುವ ಮಂಗಗಳ ಕಾಟ, ರಾಗಿ ಮತ್ತು ತರಕಾರಿ ತಿನ್ನುವ ನವಿಲುಗಳು, ವನ್ಯಜೀವಿಗಳ ಉಪಟಳದ ಜತೆ ಕಾರ್ಮಿಕರ ಕೊರತೆ ನಡುವೆಯೂ ದುಡಿಮೆಯ ಕೃಷಿ ಜೀವನ ನಿರಂತರವಾಗಿ ಸಾಗಿದೆ.

ಈಚೆಗೆ ಸುರಿದ ಅಕಾಲಿಕ ಮಳೆಗೆ ತೋಟದಲ್ಲಿ ಕಾಫಿ ಹಣ್ಣು ನೆಲಕಚ್ಚಿದೆ. ಉಳಿದಿರುವ ಫಸಲಿನಲ್ಲಿ ಹಣ್ಣನ್ನು ಮಾತ್ರ ಕೊಯ್ಲು ಮಾಡಬೇಕಿದೆ. ಕಾರ್ಮಿಕರ ಕೊರತೆಯಿಂದ ದಂಪತಿಗಳಿಬ್ಬರೇ ಹಣ್ಣು ಕೊಯ್ಯುತ್ತಿದ್ದಾರೆ. ಕೆಲವು ಗಿಡಗಳಲ್ಲಿ ಅಕಾಲಿಕವಾಗಿ ಹೂ ಅರಳಿದ್ದು ಆತಂಕ ಮೂಡಿಸಿದೆ. ಗದ್ದೆಯಲ್ಲಿ ಶೇ 80 ಭಾಗ ಭತ್ತ ನಷ್ಟವಾಗಿದೆ. ಗದ್ದೆಯೊಳಗೆ ನೀರು ನಿಂತಿದೆ. ಮಿಷನ್‌ನಿಂದ ಕಟಾವು ಮಾಡಿದರೇ ಭತ್ತದ ಕಾಳು ಹಾರಿ ಹೋಗುತ್ತಿದೆ. ಸರ್ಕಾರ ಕೊಡುವ ಪರಿಹಾರ ‘ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ ಎಂದು ಹರೀಶ್ ಬೇಸರ ವ್ಯಕ್ತಪಡಿಸಿದರು.

ಭತ್ತದ ಬೇಸಾಯದಲ್ಲಿ ಅತ್ಯಧಿಕ ಇಳುವರಿ ಪಡೆದು ಜಿಲ್ಲಾ ಹಾಗೂ ತಾಲ್ಲೂಕಿನ ಪ್ರಗತಿಪರ ಕೃಷಿಕ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಪಡೆದಿದ್ದಾರೆ. 2020 ಮತ್ತು 2021ನೇ ಸಾಲಿನಲ್ಲಿ ಸಮಗ್ರ ಕೃಷಿಗಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಗಳಿಸಿದ್ದಾರೆ.

‘ಭೂಮಿತಾಯಿಯನ್ನು ನಂಬಿದರೆ ಕೈ ಬಿಡುವುದಿಲ್ಲ’ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸುವ ಮನು ಹರೀಶ್, ‘ಕೃಷಿಯಿಂದ ಬರುವ ಆದಾಯದಿಂದಲೇ ಜೀವನ ನಿರ್ವಹಣೆ ಹಾಗೂ ಮಕ್ಕಳಾದ ವೈಭವ್, ಸ್ಫಟಿಕಾ ಅವರ ವಿದ್ಯಾಭ್ಯಾಸ ನಡೆಯುತ್ತಿದೆ. ಉಳಿತಾಯ ಇಲ್ಲವಾದರೂ ಕೃಷಿ ದುಡಿಮೆಯಿಂದ ಮಾನಸಿಕ ನೆಮ್ಮದಿ, ಉತ್ತಮ ಆರೋಗ್ಯ, ಸಂತೃಪ್ತಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT