ವಿರಾಜಪೇಟೆ: ಕೊಡಗು ಜಿಲ್ಲೆಯಲ್ಲಿ ದಸರೆ ಹೇಗೋ ಹಾಗೆ ಗೌರಿ-ಗಣೇಶ ಉತ್ಸವ ಆಚರಣೆ ವಿಜೃಂಭಣೆಯಿಂದ ನಡೆಯುತ್ತದೆ. ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲೇ ವಿರಾಜಪೇಟೆಯ ಗೌರಿ– ಗಣೇಶೋತ್ಸವ ಪ್ರಸಿದ್ಧ ಪಡೆದಿದೆ.
ವಿರಾಜಪೇಟೆ ಪಟ್ಟಣ ಗಣೇಶೋತ್ಸವ ಆಚರಣೆಯಲ್ಲಿ ರಾಜ್ಯದಲ್ಲಿಯೇ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಪಟ್ಟಣದಲ್ಲಿ ಗಣೇಶೋತ್ಸವವು ಇಂದು ಕೇವಲ ಒಂದು ವರ್ಗ ಅಥವಾ ಸಮುದಾಯದ ಹಬ್ಬವಾಗದೆ, ಊರ ಹಬ್ಬವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಗಣೇಶ ಚತುರ್ಥಿಯ ದಿನವಾದ ಸೆ.7ರಂದು ಸುಮಾರು 25ಕ್ಕೂ ಹೆಚ್ಚು ಗಣೇಶೋತ್ಸವ ಸಮಿತಿಗಳಿಂದ ಪಟ್ಟಣದ ವಿವಿಧ ಭಾಗಗಳಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ಅದರಲ್ಲೂ ಈ ಬಾರಿ ಪ್ರಮುಖ 22 ಗಣೇಶೋತ್ಸವ ಸಮಿತಿಗಳ ವತಿಯಿಂದ ಮುಂದಿನ 11 ದಿನಗಳ ಕಾಲ ಅಂದರೆ, ಸೆ. 17ರವರೆಗೆ ಶ್ರದ್ಧಾ-ಭಕ್ತಿಯಿಂದ ಅದ್ದೂರಿಯಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ಈಗಾಗಲೆ ವಿವಿಧ ಸಮಿತಿಗಳು ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸುತ್ತಮುತ್ತಲಿನ ಸ್ಥಳಗಳಲ್ಲಿ ವಿದ್ಯುತ್ ದೀಪಗಳು ಸೇರಿದಂತೆ ಬಾವುಟ ಬಂಟಿಂಗ್ಸ್‌ಗಳಿಂದ ಅಲಂಕರಿಸಿರುವುದರಿಂದ ಉತ್ಸವದ ದಿನಗಳಲ್ಲಿ ಪಟ್ಟಣ ಮದುವಣಗಿತ್ತಿಯಂತೆ ಕಾಣಲಿದೆ.
ಉತ್ಸವದ ಮೊದಲ ದಿನವನ್ನು ಹೊರತುಪಡಿಸಿ ಉಳಿದ ದಿನಗಳಂದು ಹೆಚ್ಚಿನ ಸಮಿತಿಗಳು ಪ್ರತಿ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿವೆ. ವಿಶೇಷವಾಗಿ ಬಸವಶ್ವರ ದೇವಾಲಯದ ಉತ್ಸವ ಸಮಿತಿ, ಕಾವೇರಿ ಗಣೇಶೋತ್ಸವ ಸಮಿತಿಗಳ ವೇದಿಕೆಗಳಲ್ಲಿ ಪ್ರತಿರಾತ್ರಿಯು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭದ್ರಾವತಿಯಿಂದ ಕೇರಳದವರೆಗಿನ ವಿವಿಧ ಕಲಾ ತಂಡಗಳು ಈ ವೇದಿಕೆಯಲ್ಲಿ ಪ್ರದರ್ಶನ ನೀಡಲಿರುವುದು ವಿಶೇಷ.
ಮತ್ತೂ ವಿಶೇಷ ಎಂದರೆ, ಗೌರಿ, ಗಣೇಶೋತ್ಸವವು ಜಾತಿ-ಮತ-ವರ್ಗ ಬೇಧವಿಲ್ಲದೆ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ವೇದಿಕೆಯೂ ಆಗಿದೆ. ಉತ್ಸವದ 11 ದಿನಗಳ ಕಾಲ ಮಧ್ಯಾಹ್ನ-ರಾತ್ರಿ ವಿವಿಧ ಸಮಿತಿಗಳು ಅನ್ನದಾನವನ್ನು ಆಯೋಜಿಸಿವೆ.
ವಿಶೇಷವಾಗಿ ಅಪ್ಪಯ್ಯಸ್ವಾಮಿ ರಸ್ತೆ ಬಾಲಾಂಜನೇಯ ಗಣೇಶೋತ್ಸವ ಸಮಿತಿಯು ಪ್ರತಿ ರಾತ್ರಿ ಅನ್ನದಾನವನ್ನು ನಡೆಸಲಿದೆ. ಉತ್ಸವದ ಕೊನೆಯ ದಿನವಾದ ಸೆ. 17ರಂದು ರಾತ್ರಿಯಿಂದ ಮರುದಿನ ಬೆಳಿಗ್ಗೆವರೆಗೆ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯುವ ಆಕರ್ಷಕ ಶೋಭಾಯಾತ್ರೆಯೇ ಉತ್ಸವದ ಜೀವಾಳ. ಬೇರೆಬೇರೆ ಊರುಗಳಿಂದ ಬಂದ ಸಾವಿರಾರು ಜನ ಉತ್ಸವಕ್ಕೆ ಸಾಕ್ಷಿಯಾಗುತ್ತಾರೆ. ಪಟ್ಟಣದ 22 ಗಣೇಶೋತ್ಸವ ಸಮಿತಿಗಳು ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಗಣಪನ ಮೂರ್ತಿಯನ್ನಿರಿಸಿ ಮೆರವಣಿಗೆಯಲ್ಲಿ ಹಿರಿತನದ ಆಧಾರದಲ್ಲಿ ಸಾಲಾಗಿ ಭಾಗವಹಿಸಲಿವೆ.
ಪ್ರತಿ ಸಮಿತಿಗಳ ಮೂರ್ತಿಗಳ ಮುಂಭಾಗ ವಾದ್ಯಗೋಷ್ಠಿಗಳು, ಡೊಳ್ಳು ಕುಣಿತ, ಕಲ್ಲಡ್ಕ ಗೊಂಬೆಗಳು, ನವಿಲಿನ ದೈತ್ಯಕಾರದ ಪ್ರತಿಕೃತಿ ಸೇರಿದಂತೆ ವಿವಿಧ ರೀತಿಯ ಕಲಾವಿದರ ದಂಡನ್ನೆ ಕಾಣಬಹುದು. ಇದರೊಂದಿಗೆ ಕುಣಿದು ಸಂಭ್ರಮಿಸುವ ಜನಸಮೂಹವನ್ನು ಶೋಭಾಯಾತ್ರೆಯಲ್ಲಿ ಕಾಣಬಹುದು. ಮರುದಿನ ಬೆಳಿಗ್ಗೆ ಪಟ್ಟಣದ ಗೌರಿಕೆರೆಯಲ್ಲಿ ಮೂರ್ತಿಗಳನ್ನು ಭಕ್ತಿಯಿಂದ ವಿಸರ್ಜಿಸುವ ಮೂಲಕ ಹಬ್ಬಕ್ಕೆ ವಿದಾಯ ಹೇಳಲಾಗುತ್ತದೆ.
ಇಲ್ಲಿನ ವಿಶೇಷತೆಯೆಂದರೆ, ಪಟ್ಟಣದ ಗಣಪತಿ ದೇವಾಲಯದಲ್ಲಿ ಗಣೇಶನ ಮೂರ್ತಿಯ ಪ್ರತಿಷ್ಠಾಪನೆ ನಡೆದ ನಂತರ ಉಳಿದ ಸಮಿತಿಗಳಲ್ಲಿ ಗಣೇಶನ ಪ್ರತಿಷ್ಠಾಪನೆ ನಡೆಯುತ್ತದೆ. ಕೊನೆಯ ದಿನ ಗಣಪತಿ ದೇವಾಲಯದಲ್ಲಿನ ಮೂರ್ತಿಯನ್ನು ದೇವಾಲಯದಿಂದ ಹೊರ ತಂದು ಶೋಭಾಯಾತ್ರೆ ನಡೆಸುವ ವಾಹನದಲ್ಲಿರಿಸಿದ ಗಡಿಯಾರ ಕಂಬದ ಬಳಿ ಪಟಾಕಿಯನ್ನು ಸಿಡಿಸಿದ ಬಳಿಕವೇ ಉಳಿದ ಸಮಿತಿಗಳು ತಾವು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಹೊರತಂದು ಶೋಭಾಯಾತ್ರೆಯ ರಥದಲ್ಲಿ ಕುಳ್ಳಿರಿಸುತ್ತವೆ. ಇದು ಅಘೋಷಿತ ನಿಯಮವಾಗಿದೆ.
ಹಿಂದೆ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಮಂಟಪಗಳಿಗೆ ಸ್ಪರ್ಧೆಯನ್ನು ಏರ್ಪಡಿಸಿ ಗೆದ್ದ ಮಂಟಪಗಳ ಸಮಿತಿಗಳಿಗೆ ಬಹುಮಾನವನ್ನು ನೀಡಲಾಗುತ್ತಿತ್ತು. ಈಚೆಗೆ ಕೆಲವು ವರ್ಷದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿಲ್ಲ. ಇಂದಿನಿಂದ ಆರಂಭಗೊಳ್ಳಲಿರುವ ಗೌರಿ ಗಣೇಶೋತ್ಸವದಿಂದ ಈ ಬಾರಿಯೂ ಪಟ್ಟಣ ಕಳೆಗಟ್ಟುವುದು ನಿಶ್ಚಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.