ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಸಂತ್ರಸ್ತರಿಗೆ ಸಿಗದ ನಿವೇಶನ

ಸಿದ್ದಾಪುರ: ಆಮೆಗತಿಯಲ್ಲಿ ಕಾಮಗಾರಿ l ಮರ ತೆರವು ಕಾರ್ಯ ವಿಳಂಬ
Last Updated 9 ನವೆಂಬರ್ 2020, 7:48 IST
ಅಕ್ಷರ ಗಾತ್ರ

ಸಿದ್ದಾಪುರ: ಪ್ರವಾಹ ಸಂತ್ರಸ್ತರಿಗೆ ನಿವೇಶನ ಕಲ್ಪಿಸಲು ಅಭ್ಯತ್ ಮಂಗಲ ಗ್ರಾಮದಲ್ಲಿ ಜಾಗ ಗುರುತಿಸಲಾಗಿದೆ. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.

2019-20ನೇ ಸಾಲಿನಲ್ಲಿ ಸಿದ್ದಾಪುರ, ನೆಲ್ಯಹುದಿಕೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾವೇರಿ ನದಿ ಉಕ್ಕಿಹರಿದು ಪ್ರವಾಹ ಉಂಟಾಗಿತ್ತು. ನೆಲ್ಯಹುದಿಕೇರಿ ಭಾಗದಲ್ಲಿ ನೂರಕ್ಕೂ ಅಧಿಕ ಮನೆಗಳು ಕುಸಿದು ನೂರಾರು ಮಂದಿ ಸಂತ್ರಸ್ತರಾಗಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಎರಡು ಮಳೆಗಾಲ ಕಳೆದರೂ ಇವರಿಗೆ ಇನ್ನೂ ಸೂರು ದೊರೆತಿಲ್ಲ.

ಹಲವು ತಿಂಗಳುಗಳ ಕಾಲ ನೆಲ್ಯಹುದಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡದಲ್ಲಿ ಸ್ಥಾಪಿಸಲಾಗಿದ್ದ ಪರಿಹಾರ ಕೇಂದ್ರದಲ್ಲೇ ಸಂತ್ರಸ್ತರು ಇದ್ದರು. ಶಾಶ್ವತ ಸೂರು ಒದಗಿಸುವವರೆಗೂ ಪರಿಹಾರ ಕೇಂದ್ರ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಬಳಿಕ ಜಿಲ್ಲಾಡಳಿತ ಅಭ್ಯತ್ ಮಂಗಲ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಸುಮಾರು 8 ಎಕರೆ ಜಾಗವನ್ನು ಗುರುತಿಸಿ ಅಲ್ಲಾಗಿದ್ದ ಒತ್ತುವರಿಯನ್ನು ತೆರವುಗೊಳಿಸಿತ್ತು. ಸಂತ್ರಸ್ತರಿಗೆ ನಿವೇಶನ ಒದಗಿಸುವ ಬಗ್ಗೆ ಭರವಸೆಯನ್ನೂ ನೀಡಿತ್ತು. ಆದರೆ, ವರ್ಷ ಕಳೆದರೂ ಸಂತ್ರಸ್ತರಿಗೆ ಈವರೆಗೂ ಶಾಶ್ವತ ನಿವೇಶನ ದೊರೆತಿಲ್ಲ.

ರಸ್ತೆಯ ಸಮಸ್ಯೆ: ಒತ್ತುವರಿ ತೆರವುಗೊಳಿಸಿ ಸಂತ್ರಸ್ತರಿಗೆ ನಿವೇಶನ ನೀಡಲು ಉದ್ದೇಶಿಸಿದ ಜಾಗಕ್ಕೆ ಖಾಸಗಿ ಸಂಸ್ಥೆಯ ತೋಟದ ಮೂಲಕ ತೆರಳಬೇಕಾಗಿತ್ತು. ಈ ಸಂದರ್ಭ ಖಾಸಗಿ ಸಂಸ್ಥೆಯವರು ರಸ್ತೆ ಬಿಟ್ಟುಕೊಡುವ ಬಗ್ಗೆ ತಕರಾರು ಎತ್ತಿದ್ದರು ಎನ್ನಲಾಗಿದೆ. ಬಳಿಕ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಚರ್ಚಿಸಿದ ಬಳಿಕ ಸಂಸ್ಥೆಯು ರಸ್ತೆಯನ್ನು ನೀಡುವುದಾಗಿ ತಿಳಿಸಿತ್ತು.

ವಿಳಂಬವಾದ ಮರ ತೆರವು ಕಾರ್ಯ: ಸಂತ್ರಸ್ತರಿಗೆ ನಿಗದಿಪಡಿಸಲಾಗಿರುವ ಅಭ್ಯತ್ ಮಂಗಲ ಗ್ರಾಮದ ಜಾಗದಲ್ಲಿ ವಿವಿಧ ಜಾತಿಯ ಮರಗಳಿವೆ. ನಿವೇಶನ ವ್ಯಾಪ್ತಿಯ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ವತಿಯಿಂದ ಮರ ಎಣಿಕೆ ಪ್ರಕ್ರಿಯೆ ನಡೆಸಿ, ಬಳಿಕ ಕಡಿಯಬೇಕಾದ ಮರಗಳ ವಿವರವನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ಅನುಮತಿ ಸಿಕ್ಕಿದ್ದು ವಿಳಂಬವಾಗಿ. ಇದೀಗ ಅನುಮತಿ ದೊರೆತಿದ್ದರೂ ಟೆಂಡರ್ ನಡೆಸದೇ ಮರಗಳ ತೆರವು ಅಸಾಧ್ಯವಾಗಿದೆ. ಇದರಿಂದ ನಿವೇಶನ ಹಂಚಿಕೆ ಕಾಮಗಾರಿ ಕೈಗೊಳ್ಳಲು ಈ ಪ್ರಕ್ರಿಯೆಯೂ ಮುಗಿಯಬೇಕಿದೆ.

ಗುಡಿಸಲಿನಲ್ಲಿ ಸಂತ್ರಸ್ತರು: ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಪ್ರವಾಹದ ಬಳಿಕ ನದಿ ದಡದಲ್ಲೇ ಗುಡಿಸಲು ನಿರ್ಮಿಸಿ ಜೀವನ ಸಾಗಿಸುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲೂ ಕೂಡ ನದಿ ನೀರು ಏರಿಕೆಯಾಗಿ, ಮತ್ತೊಮ್ಮೆ ಪ್ರವಾಹದಲ್ಲಿ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವು ಸಂತ್ರಸ್ತರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಶಾಶ್ವತ ನಿವೇಶನದ ಕನಸಿನಲ್ಲೇ ಸಂತ್ರಸ್ತರು ದಿನದೂಡಬೇಕಿದೆ.

ಇನ್ನೂ ದೊರಕದ ಬಾಡಿಗೆ ಹಣ: ಮನೆ ಕಳೆದುಕೊಂಡ ಸಂತ್ರಸ್ತರಿಗೆ ತಿಂಗಳಿಗೆ ₹ 5 ಸಾವಿರ ನೀಡುವುದಾಗಿ ಸರ್ಕಾರ
ಘೋಷಿಸಿತ್ತು. ಈ ಪೈಕಿ ಕೆಲವು ಸಂತ್ರಸ್ತರಿಗೆ ಬಾಡಿಗೆ ಹಣ ಕೂಡ ಬಂದಿಲ್ಲ ಎಂದು ಸಂತ್ರಸ್ತರು ಅಳಲನ್ನು ತೋಡಿಕೊಂಡಿದ್ದಾರೆ. ಕೆಲವು ಸಂತ್ರಸ್ತರಿಗೆ 5 ತಿಂಗಳ ಬಾಡಿಗೆ ಮಾತ್ರ ದೊರೆತಿದೆ. ಉಳಿದ 5 ತಿಂಗಳ ಬಾಡಿಗೆ ಬಂದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ನೆರವಿಗೆ ಧಾವಿಸಬೇಕು ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT