ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು: ಫುಟ್‌ಪಾತ್‌ ನುಂಗಿದ ಮಳಿಗೆ

ಜೀವ ಭಯದಲ್ಲಿ ನಿತ್ಯ ಸಂಚರಿಸುತ್ತಿರುವ ವಿದ್ಯಾರ್ಥಿಗಳು, ಪಾದಚಾರಿಗಳು
Last Updated 19 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಪಟ್ಟಣ ಗೋಣಿಕೊಪ್ಪಲು. ನೂರಾರು ಹಳ್ಳಿಗಳ ವ್ಯಾಪಾರ ವಹಿವಾಟಿನ ಹೆಬ್ಬಾಗಿಲು. ಈ ಭಾಗದ ಜನರು ಹೋಟೆಲ್‌ಗಳ ತಿಂಡಿ-ತಿನಿಸುಗಳಿಂದ ಹಿಡಿದು ಬಟ್ಟೆ, ಗೃಹಬಳಕೆಯ ವಸ್ತುಗಳು, ಕಟ್ಟಡ ನಿರ್ಮಾಣದ ಪರಿಕರಗಳಿಗೂ ಗೋಣಿಕೊಪ್ಪಲನ್ನೇ ಆಶ್ರಯಿಸಬೇಕಾಗಿದೆ. ಇಲ್ಲಿ ಪ್ರತಿ ಭಾನುವಾರ ಸಂತೆ ನಡೆಯುತ್ತಿದೆ. ಕೂಲಿ ಕಾರ್ಮಿಕರು ಸಂತೆಗಾಗಿಯೇ ರಜೆ ಮಾಡಿ, ತಮಗೆ ಬೇಕಾದ ದವಸ ಧಾನ್ಯ, ಬಟ್ಟೆ– ಬರೆಗಳನ್ನು ಕೊಂಡೊಯ್ಯುತ್ತಾರೆ. ಇತರ ದಿನಗಳಲ್ಲಿ ನಿತ್ಯ ತೆರೆದಿರುವ ಸಾವಿರಾರು ಅಂಗಡಿಗಳೂ ಇವೆ.

ಇಷ್ಟೇ ಅಲ್ಲದೇ ಗೋಣಿಕೊಪ್ಪಲು ಪಟ್ಟಣ ಪ್ರಮುಖ ವಿದ್ಯಾಕೇಂದ್ರವೂ ಕೂಡ. ಇಲ್ಲಿ ಪೂರ್ವ ಪ್ರಾಥಮಿಕದಿಂದ ಹಿಡಿದು ಸ್ನಾತಕೋತ್ತರ ಕೇಂದ್ರದವರೆಗೆ ಹತ್ತಾರು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿವೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ನೀಡುವ ಲಯನ್ಸ್, ಸೇಂಟ್ ಥಾಮಸ್, ಕಾಪ್ಸ್, ಕಾಲ್ಸ್, ಗೋಣಿಕೊಪ್ಪಲು ಪ್ರೌಢಶಾಲೆಯಂಥ ಹೆಸರುವಾಸಿಯಾದ ವಿದ್ಯಾಸಂಸ್ಥೆಗಳಿದ್ದರೆ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಗಳ ಅಧ್ಯಯನದ ವಿದ್ಯಾನಿಕೇತನ, ಕಾವೇರಿ ಕಾಲೇಜು, ಕೂರ್ಗ್ ಪಿಯು ಕಾಲೇಜಿನಂಥ ಅತ್ಯುತ್ತಮ ವಿದ್ಯಾಸಂಸ್ಥೆಗಳಿವೆ.

ಉತ್ತಮ ಶಿಕ್ಷಣ ಅರಸಿ ಬಿರುನಾಣಿ, ಕುಟ್ಟ, ಶ್ರೀಮಂಗಲ, ಬಾಳೆಲೆ, ತಿತಿಮತಿ, ಸಿದ್ದಾಪುರ, ಪಾಲಿಬೆಟ್ಟ ಪೊನ್ನಂಪೇಟೆಗಳಿಂದ ಸಾವಿರಾರು ವಿದ್ಯಾರ್ಥಿಗಳು ನಿತ್ಯ ನಗರಕ್ಕೆ ಬಂದು ಹೋಗುತ್ತಾರೆ. ಈ ವಿದ್ಯಾರ್ಥಿಗಳನ್ನು ಪಟ್ಟಣಕ್ಕೆ ಕರೆ ತರುವುದಕ್ಕೆ ಬೆಳಿಗ್ಗೆ ಮತ್ತು ಸಂಜೆ ಹತ್ತಾರು ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಸಂಚರಿಸುತ್ತವೆ.

ಗ್ರಾಮೀಣ ಭಾಗದಿಂದ ನಿತ್ಯವೂ ಶಾಲಾ – ಕಾಲೇಜಿಗೆ ಆಗಮಿಸುವ ಸಾವಿರಾರು ವಿದ್ಯಾರ್ಥಿಗಳು ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಸುತ್ತಮುತ್ತಲಿನ ಶಾಲಾ –ಕಾಲೇಜುಗಳಿಗೆ ನಡೆದುಕೊಂಡೇ ಹೋಗಬೇಕಾಗಿದೆ.

ರಸ್ತೆ ಬದಿಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಈ ವಿದ್ಯಾರ್ಥಿಗಳು ಸಾಲುಗಟ್ಟಿ ಹೋಗುತ್ತಿರುತ್ತಾರೆ. ಆದರೆ, ಈ ವಿದ್ಯಾರ್ಥಿಗಳು ನಡೆದಾಡುವುದು ವಾಹನಗಳು ಸಂಚರಿಸುವ ಮುಖ್ಯ ರಸ್ತೆಯಲ್ಲೇ. ಏಕೆಂದರೆ ಇಲ್ಲಿ ಪ್ರತ್ಯೇಕವಾದ ಫುಟ್‌ಪಾತ್ ಇಲ್ಲ. ಇರುವ ಫುಟ್‌ಪಾತ್ ಅನ್ನು ಅಂಗಡಿ ಮುಂಗಟ್ಟಿನವರು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳು ಅನ್ಯ ಮಾರ್ಗವಿಲ್ಲದೆ ಜೀವವನ್ನು ಕೈಯಲ್ಲಿ ಹಿಡಿದು ವಾಹನಗಳು ಎಡೆಬಡದೆ ಓಡಾಡುವ ಕಿಷ್ಕೆಂಧೆಯಂತಹ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದೆ.

ಪಟ್ಟಣದ ವ್ಯಾಪ್ತಿಗೆ ಒಳಪಡುವ ಹರೀಶ್ವಂದ್ರಪುರದಿಂದ ಕಾವೇರಿ ಕಾಲೇಜಿನವರೆಗೆ ಸುಮಾರು 2.5 ಕಿಮೀ ಉದ್ದಕ್ಕೂ ರಸ್ತೆಯಲ್ಲಿ ವಾಹನಗಳು ಎಡೆಬಿಡದೆ ಸಂಚರಿಸುತ್ತಿರುತ್ತವೆ. ಫುಟ್‌ಪಾತ್ ಇಲ್ಲದೇ ಇರುವುದರಿಂದ ಶಾಲಾ – ಕಾಲೇಜಿನ ವಿದ್ಯಾರ್ಥಿಗಳು ಇವುಗಳ ನಡುವೆ ರಸ್ತೆ ಬದಿಯಲ್ಲಿ ನುಸುಳಿಕೊಂಡೇ ಓಡಾಡಬೇಕಾಗಿದೆ.

ವಿದ್ಯಾರ್ಥಿಗಳು ಬ್ಯಾಗ್ ನೇತು ಹಾಕಿಕೊಂಡು ಸಂಚರಿಸುವಾಗ ವಾಹನಗಳ ಭರದ ಓಡಾಟಕ್ಕೆ ಮೈ ಜುಮ್ಮೆನ್ನುತ್ತದೆ. ಇರುವ ಫುಟ್‌ಪಾತ ಅನ್ನು ಅಂಗಡಿ ಮಾಲೀಕರು ಒತ್ತವರಿ ಮಾಡಿಕೊಂಡಿದ್ದಾರೆ. ಮತ್ತೆ ಕೆಲವು ಕಡೆ ಚರಂಡಿಗಳು ತೆರೆದುಕೊಂಡೇ ಇವೆ. ವಾಹನಗಳಿಗೆ ದಾರಿ ಕೊಡುವುದಕ್ಕಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಎಡ ಬಲಕ್ಕೆ ತಿರುಗಿದರೆ ಸಾಕು ವಾಹನಕ್ಕೆ ಡಿಕ್ಕಿ ಹೊಡೆಯಲೇಬೇಕು. ಇಲ್ಲವೇ ಚರಂಡಿಗೆ ಬೀಳಬೇಕು.

ಎರಡು ವರ್ಷಗಳ ಹಿಂದೆ ₹ 5 ಕೋಟ ವೆಚ್ಚದಲ್ಲಿ 2 ಕಿ.ಮೀ. ಉದ್ದದ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಫುಟ್‌ಪಾತ್ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿತ್ತು. ಇದರಿಂದ ಪಾದಚಾರಿಗಳು ಹಾಗೂ ಸಾರ್ವಜನಿಕರು ಸಂತಸಗೊಂಡಿದ್ದರು. ಆದರೆ, ದಿನ ಕಳೆದಂತೆ ಈ ಯೋಜನೆ ಎರಡು ವರ್ಷದಿಂದ ನೆನೆಗುದಿಗೆ ಬಿದ್ದಿತು. ಅನುಷ್ಠಾನಗೊಳ್ಳಲೇ ಇಲ್ಲ.

ಇದರಿಂದ ಅಪಘಾತಗಳು ನಿರಂತರವಾಗಿ ನಡೆಯುತ್ತಿವೆ. ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿರುವವರನ್ನು ಕೂಡಲೇ ತೆರವುಗೊಳಿಸಬೇಕು. ಸಾವಿರಾರು ಜನರು ಓಡಾಡುವ ಫುಟ್‌ಪಾತ್‌ ಅನ್ನು ಕೂಡಲೆ ದುರಸ್ತಿಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT