ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮರೆಯಾದ ‘ಕಾಡಿನೊಳಗೊಂದು ಜೀವ’

‘ವೈಲ್ಡ್‌ಲೈಫ್ ಫಸ್ಟ್’ ಸಂಘಟನೆಯ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ ಇನ್ನಿಲ್ಲ
Published 27 ಫೆಬ್ರುವರಿ 2024, 0:24 IST
Last Updated 27 ಫೆಬ್ರುವರಿ 2024, 0:24 IST
ಅಕ್ಷರ ಗಾತ್ರ

ಮಡಿಕೇರಿ: ಅರಣ್ಯ ರಕ್ಷಣೆಗಾಗಿ ಮಿಡಿಯುತ್ತಿದ್ದ ‘ಕಾಡಿನೊಳಗೊಂದು ಜೀವ’ ಕೆ.ಎಂ.ಚಿಣ್ಣಪ್ಪ ಇನ್ನಿಲ್ಲ. ಕಾಡಿನ ಸಂರಕ್ಷಣೆಯೊಂದನ್ನೇ ಬದುಕಿನ ಗುರಿಯನ್ನಾಗಿಸಿಕೊಂಡಿದ್ದ, ಅರಣ್ಯ ರಕ್ಷಣೆಗಾಗಿ ಹೋರಾಡಿದ ಯೋಧ ಚಿರನಿದ್ರೆಗೆ ಸರಿದಿದ್ದಾರೆ.

ಕೋಟ್ರಂಗಡ ಮೇದಪ್ಪ ಚಿಣ್ಣಪ್ಪ, ಇತರೆ ಅಧಿಕಾರಿಗಳಂತೆ ಕೆಲಸ ಮಾಡಿದವರಲ್ಲ. ಅವರು ಕಾಡಿನ ರಕ್ಷಣೆಗಾಗಿ ಯುದ್ಧದಂತೆ ಹೋರಾಡಿದವರು. ತಮ್ಮ ಮನೆಗೆ ಬೆಂಕಿ ಬಿದ್ದರೂ ಬೆಚ್ಚದೇ, ಅಳುಕದೇ ಅಲ್ಲಿಯೇ ನಿಂತು ಕಾಡನ್ನು ಜತನದಿಂದ ರಕ್ಷಿಸಿದವರು.

ಟಿಂಬರ್ ಮಾಫಿಯಾ ವಿರುದ್ಧ ಹಾಗೂ ಅರಣ್ಯ ರಕ್ಷಣೆಗಾಗಿ ಕೈಗೊಂಡ ಶಿಸ್ತಿನ ಕ್ರಮಗಳಿಂದ ಅವರು ಸಾಕಷ್ಟು ವಿರೋಧಿಗಳನ್ನು ಎದುರಿಸಬೇಕಾಯಿತು.  1992ರಲ್ಲಿ ಗೊಟ್ಟೂರು ಕಾಡಿನಲ್ಲಿ ಚಿಪ್ಪ ಎನ್ನುವವರ ಸಾವಿನ ಪ್ರಕರಣ ಹಿಂಸಾತ್ಮಕ ತಿರುವು ಪಡೆಯಿತು. ಅಂಥ ಸಮಯಕ್ಕಾಗಿ ಹೊಂಚು ಹಾಕಿದ್ದ ಕಿಡಿಗೇಡಿಗಳು ಅವರ ಮನೆಗೆ ಮಾತ್ರವಲ್ಲದೇ, ಕಾಡಿಗೂ ಬೆಂಕಿ ಹಚ್ಚಿದ್ದರು. ಈ ಅಗ್ನಿಕಾಂಡ ಅವರನ್ನು ಸಾಕಷ್ಟು ಜರ್ಝರಿತರನ್ನಾಗಿಸಿತು. ಮರುವರ್ಷವೇ, 1993ರಲ್ಲಿ ಅವರು ಸ್ವಯಂನಿವೃತ್ತಿ ಪಡೆದು ನಾಗರಹೊಳೆ ವನ್ಯಜೀವಿ ಸಂರಕ್ಷಣಾ ಯೋಜನೆಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು.

‘ವೈಲ್ಡ್‌ಲೈಫ್‌ ಫಸ್ಟ್’ ಸ್ಥಾಪನೆ

1995ರಲ್ಲಿ ಎಚ್.ಎನ್.ಎ.ಪ್ರಸಾದ್, ಸನತ್‌ಕುಮಾರ್, ಕೃಷ್ಣಪ್ರಸಾದ್, ಸಮ್ಮು ಪೂವಯ್ಯ, ಪ್ರವೀಣ್ ಭಾರ್ಗವ್ ಅವರೊಂದಿಗೆ ‘ವೈಲ್ಡ್ ಲೈಫ್ ಫಸ್ಟ್’ ಸಂಘಟನೆಯನ್ನು ಸ್ಥಾಪಿಸಿ, ಯುವಜನರಿಗೆ ಅರಣ್ಯದ ಮಹತ್ವವನ್ನು ತಿಳಿಸುತ್ತಲೇ ಇದ್ದರು. ಅರಣ್ಯ ಇಲಾಖೆಯ ಹೊಸ ಅಧಿಕಾರಿಗಳಿಗೂ ಪಾಠ ಹೇಳಿದ್ದರು.

ಕುದುರೆಮುಖ ಗಣಿಗಾರಿಕೆಯ ವಿರುದ್ಧ ಸಂಘಟನೆಯು ನಡೆಸಿದ ಕಾನೂನಾತ್ಮಕ ಹೋರಾಟಗಳು ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಮಹತ್ವದ ಹೆಜ್ಜೆಯಾಗಿತ್ತು. ಅವರ ಬಗ್ಗೆ ಲೇಖಕ ಶಿವರಾಮಕಾರಂತರು ತಮ್ಮ ‘ಅಳಿದುಳಿದ ನೆನಪುಗಳು’ ಪುಸ್ತಕದಲ್ಲಿ ಪ್ರಸ್ತಾಪಿಸಿರುವುದು, ಪರಿಸರ ಸಂರಕ್ಷಣೆಯ ವಿಷಯದಲ್ಲಿ ಅವರ ಬದ್ಧತೆಯ ಕಡೆಗೆ ಗಮನ ಸೆಳೆಯುತ್ತದೆ.

ಹುಲಿ ಸಂಖ್ಯೆ ಹೆಚ್ಚಳ

ಅಳಿವಿನಂಚಿನಲ್ಲಿದ್ದ ಹುಲಿ ಸಂತತಿಯನ್ನು ಉಳಿಸುವುದರತ್ತಲೂ ಅವರು ತೊಡಗಿಸಿಕೊಂಡಿದ್ದರ ಫಲವಾಗಿಯೇ ಇಂದು ನಾಗರಹೊಳೆಯಲ್ಲಿ ಹೆಚ್ಚು ಹುಲಿಗಳಿವೆ. ಮೊದಲಿಗೆ ಅವರು ಬೇಟೆ ವಿರುದ್ಧ ಕೈಗೊಂಡ ಕಠಿಣ ಕ್ರಮಗಳು ಸಹಜವಾಗಿಯೇ ಬೇಟೆಗಾರರಿಗೆ ಆಹುತಿಯಾಗಲಿದ್ದ ಹುಲಿಗಳ ಜೊತೆಗೆ, ಅವುಗಳಿಗೆ ಆಹಾರವಾಗಬೇಕಿದ್ದ ಇತರೆ ಪ್ರಾಣಿಗಳನ್ನೂ ರಕ್ಷಿಸಿದವು. ನಾಗರಹೊಳೆ ಇಂದು ಹುಲಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದ್ದರೆ, ದೇಶದಲ್ಲಿ 3ನೇ ಸ್ಥಾನದಲ್ಲಿದೆ.

ಕಾಡನ್ನು ಉಳಿಸುವುದು ಹೇಗೆಂದು ಇದುವರೆಗೂ ಒಂದೂವರೆ ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅರಣ್ಯ ಇಲಾಖೆಯ ಸಾವಿರಾರು ಸಿಬ್ಬಂದಿಗೆ ತರಬೇತಿ ನೀಡಿರುವುದು ಚಿಣ್ಣಪ್ಪ ಅವರ ಹೆಗ್ಗಳಿಕೆ.

ಕೆ.ಎಂ.ಚಿಣ್ಣಪ್ಪ
ಕೆ.ಎಂ.ಚಿಣ್ಣಪ್ಪ

ನಿಧನವಾರ್ತೆ ಮಡಿಕೇರಿ: ‘ವೈಲ್ಡ್‌ಲೈಫ್ ಫಸ್ಟ್’ ಸಂಘಟನೆಯ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ (84) ಅವರು ಇಲ್ಲಿನ ಪೊನ್ನಂಪೇಟೆ ತಾಲ್ಲೂಕಿನ ಕುಮಟೂರು ಗ್ರಾಮದ ಸ್ವಗೃಹದಲ್ಲಿ ಸೋಮವಾರ ಅನಾರೋಗ್ಯದಿಂದ ನಿಧನರಾದರು. ಅವರಿಗೆ ಪುತ್ರ ಹಾಗೂ ಪತ್ನಿ ಇದ್ದಾರೆ. ಅಂತ್ಯಕ್ರಿಯೆ ಫೆ. 27ರಂದು ಬೆಳಿಗ್ಗೆ ಸ್ವಗ್ರಾಮದಲ್ಲಿ ನಡೆಯಲಿದೆ. ಕೋಟ್ರಂಗಡ ಮೇದಪ್ಪ ಚಿಣ್ಣಪ್ಪ ಅವರು ಕೋಟ್ರಂಗಡ ಮೇದಪ್ಪ ಮತ್ತು ನೀಲವ್ವ ಅವರ ಪುತ್ರನಾಗಿ 1941ರಲ್ಲಿ ಕೊಡಗಿನ ಕುಮಟೂರಿನಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸ ಕುಮಟೂರು ಮತ್ತು ಕಾಕೂರಿನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಶ್ರೀಮಂಗಲದಲ್ಲಿ ನಡೆಯಿತು. 1967ರಲ್ಲಿ ಫಾರೆಸ್ಟರ್ ಆಗಿ ಅರಣ್ಯ ಇಲಾಖೆಗೆ ಸೇರಿದರು. 1970ರಲ್ಲಿ ನಾಗರಹೊಳೆ ವನ್ಯಜೀವಿ ವಿಭಾಗ ಸೇರಿ 1975ರಲ್ಲಿ ರೇಂಜರ್ ಆಗಿ ಸುಂಕದಕಟ್ಟೆಯಲ್ಲಿ ನೇಮಕಗೊಂಡರು. ನಂತರ ಅರಣ್ಯ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು 1993ರಲ್ಲಿ ಸ್ವಯಂನಿವೃತ್ತಿ ಪಡೆದರು. ‘ವೈಲ್ಡ್ ಲೈಫ್ ಫಸ್ಟ್’ ಸಂಘಟನೆಯನ್ನು ಸ್ಥಾಪಿಸಿ ಕುದುರೆಮುಖದ ಗಣಿಗಾರಿಕೆ ವಿರುದ್ಧ ಹಾಗೂ ಅರಣ್ಯ ರಕ್ಷಣೆಗಾಗಿ ಹಲವು ಕಾನೂನಿನಾತ್ಮಕ ಹೋರಾಟಗಳನ್ನು ಕೈಗೊಂಡರು. ಸದ್ಯ ವಿದ್ಯಾರ್ಥಿಗಳಿಗೆ ಅರಣ್ಯದ ಮಹತ್ವ ತಿಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಅವರಿಗೆ 1985ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ. 1996ರಲ್ಲಿ ಟೈಗರ್ ಲಿಂಕ್ ಬಾಗ್‌ ಸೇವಕ್ ಪ್ರಶಸ್ತಿ 1998ರಲ್ಲಿ ನ್ಯೂಯಾರ್ಕ್ ಜುಆಲಾಜಿಕಲ್ ಸೊಸೈಟಿ ಪ್ರಶಸ್ತಿ 2000ರಲ್ಲಿ ಎಸ್ಸೋ ಹುಲಿ ಸಂರಕ್ಷಣಾ ಪ್ರಶಸ್ತಿ 2004ರಲ್ಲಿ ಸ್ಯಾಂಕ್ಚುಯರಿ ಮ್ಯಾಗಜೈನ್ ಎಬಿಎನ್ ಅಮ್ರೊ ಪ್ರಶಸ್ತಿ ಹಾಗೂ 2009ರಲ್ಲಿ ಸಿಎನ್‌ಎನ್‌–ಐಬಿಎನ್ ರಿಯಲ್ ಹಿರೋಸ್‌ನಂಥ ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT