ವಿರಾಜಪೇಟೆ: ‘ಮುಂದಿನ ತಿಂಗಳು ನಡೆಯಲಿರುವ ಗೌರಿ-ಗಣೇಶೋತ್ಸವದ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಎಲ್ಲರೂ ಒಗ್ಗಟ್ಟಿನಿಂದ ಹಬ್ಬವನ್ನು ಆಚರಿಸಬೇಕು’ ಎಂದು ಡಿವೈಎಸ್ಪಿ ಮೋಹನ್ ಕುಮಾರ್ ಸಲಹೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯ ಸಮುಚ್ಚಯದಲ್ಲಿ ವಿವಿಧ ಉತ್ಸವ ಸಮಿತಿಗಳ ಪದಾಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಮಿತಿ ಸದಸ್ಯರು ಮೊದಲು ಸ್ಥಳದ ಅನುಮತಿ, ಸೆಸ್ಕ್, ಅಗ್ನಿಶಾಮಕ ಇಲಾಖೆ ಹಾಗೂ ಸ್ಥಳೀಯ ಪಂಚಾಯಿತಿಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ರಾತ್ರಿ 10 ಗಂಟೆವರೆಗೆ ಧ್ವನಿವರ್ಧಕಗಳ ಬಳಕೆಗೆ ಅವಕಾಶವಿದೆ. ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವ ಸ್ಥಳದಲ್ಲಿ ಸಮಿತಿ ಸದಸ್ಯರು ರಾತ್ರಿ ಸಮಯ ಇರಬೇಕು. ಈ ಸ್ಥಳದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದರೆ ಅನುಕೂಲ. ವೇದಿಕೆ ಕಾರ್ಯಕ್ರಮಗಳನ್ನು ನಡೆಸುವ ಸಮಿತಿಗಳು ಮುಂಚಿತವಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳಬೇಕು. ಉತ್ಸವದ ಸಂದರ್ಭ ನ್ಯಾಯಾಲಯದ ಆದೇಶದಂತೆ ಶಬ್ದಮಾಲಿನ್ಯ ಕಾಯ್ದೆಯನ್ನು ಪಾಲಿಸಬೇಕಾಗಿದೆ. ಉತ್ಸವಕ್ಕೆ ಆಚರಣೆಗೆ ಇಲಾಖೆಯು ಸಹಕಾರ ನೀಡಲಿದೆ’ ಎಂದರು.
ಸಿ.ಪಿ.ಐ ಶಿವರುದ್ರ ಮಾತನಾಡಿ, ‘ಗೌರಿ-ಗಣೇಶ ಮೂರ್ತಿಗಳ ಶೋಭಾಯಾತ್ರೆಯ ಸಂದರ್ಭ ಮೆರವಣಿಗೆಯಲ್ಲಿ ಡಿ.ಜೆ ಬಳಸುವಂತಿಲ್ಲ. ಮೆರವಣಿಗೆಯ ಸಂದರ್ಭ ಕೆಲ ಅಲಂಕೃತ ಮಂಟಪಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಂತು ಇತರ ಮಂಟಪಗಳು ಮುಂದೆ ಸಾಗಲು ಸಮಸ್ಯೆ ಉಂಟಾಗದಂತೆ ಆಯಾ ಸಮಿತಿಯವರು ಎಚ್ಚರ ವಹಿಸಬೇಕು. ಮೆರವಣಿಗೆಗೆ ಅನುಕೂಲವಾಗುವಂತೆ ಪಟ್ಟಣದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸುತ್ತಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಕೋರಿದರು.
ವಿವಿಧ ಉತ್ಸವ ಸಮಿತಿಗಳು ಪದಾಧಿಕಾರಿಗಳಾದ ಪಿ.ರಚನ್ ಮೇದಪ್ಪ, ಎಂ.ಎ.ಕಾವೇರಪ್ಪ, ಎನ್.ರಾಜಪ್ಪ, ಸಾಯಿನಾಥ್, ಸತೀಶ್ ಪೂಜಾರಿ ಮತ್ತಿತರರು ಸಭೆಯಲ್ಲಿ ಮಾತನಾಡಿದರು. ನಗರ ಠಾಣೆಯ ಎಸ್.ಐ ಎಚ್.ಎಸ್.ಪ್ರಮೋದ್, ಗ್ರಾಮಂತರ ಠಾಣೆಯ ಎಸ್.ಐ ಮಂಜುನಾಥ್ ಇದ್ದರು.
ಪಟ್ಟಣ ಹಾಗೂ ಸುತ್ತಮುತ್ತಲಿನ ವಿವಿಧ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.