ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಜ್ಜೆಕೋಲಿನ ವಿಶಿಷ್ಟ ‘ಗೆಜ್ಜೆ ತಂಡ್’ ಕಲಾವಿದ

ಪ್ರೇಕ್ಷಕರ ಮನಸೂರೆಗೊಳ್ಳುವ ಕೊಡವ ಸಾಂಸ್ಕೃತಿಕ ನೃತ್ಯ
Published 10 ಜನವರಿ 2024, 8:33 IST
Last Updated 10 ಜನವರಿ 2024, 8:33 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕೊಡವ ಸಂಸ್ಕೃತಿಯನ್ನು ದೇಶದ ಉದ್ದಗಲಕ್ಕೂ ಪಸರಿಸುತ್ತಿರುವ ಪ್ರಮುಖ ಕೊಡವ ಕಲಾವಿದರಲ್ಲಿ ಬೆಕ್ಕೆಸೊಡ್ಲೂರಿನ ಮಚ್ಚಮಾಡ ವಿನೋದ್ ನಂಜಪ್ಪ ಒಬ್ಬರು. ಇವರ ‘ಗೆಜ್ಜೆತಂಡ್’ ಕುಣಿತ ಕೊಡವ ಸಾಂಸ್ಕೃತಿಕ ಇತಿಹಾಸವನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಡುತ್ತದೆ.

ಕೊಡವ ಸಾಂಪ್ರದಾಯಿಕ ಉಡುಪು ಗಳನ್ನು ಧರಿಸಿ ಪುರುಷ ಮತ್ತು ಮಹಿಳೆಯರೊಂದಿಗೆ ಅರ್ಧಗಂಟೆ ವೇದಿಕೆಯಲ್ಲಿ ವಿಜೃಂಭಿಸುವ ವಿನೋದ್ ನಂಜಪ್ಪ ಅವರ ಕುಣಿತಕ್ಕೆ ಮನಸೋಲದವರೇ ಇಲ್ಲ. ಕೊಡವ ಚಲನಚಿತ್ರ ನಿರ್ದೇಶಕ ಎ.ಟಿ.ರಘು ರಚಿಸಿರುವ ‘ಕೊಡವಾಡ ನಲ್ಲಾಮೆಕ್ ಒರು ಗೆಜ್ಜೆತಂಡ್, ಪೊಮ್ಮಾಲೆ ಕೊಡಗಲು ಕೇಳಿಪಟ್ಟ ಅಜ್ಜಪಂಡ ತಂಡ್’ ಹಾಡಿನ ಮೂಲಕ ನಂಜಪ್ಪ ಇಡೀ ಕೊಡವ ಸಂಸ್ಕೃತಿಯನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತಾರೆ.

ಈ ಹಾಡಿನ ನೃತ್ಯದಲ್ಲಿ ಪ್ರಮುಖವಾಗಿ ಬರುವಂತಹದ್ದು ಗೆಜ್ಜೆ ತಂಡ್ (ದೇವರ ಕೋಲು). ಇದನ್ನು ಕೈಯಲ್ಲಿ ಹಿಡಿದು ಭಕ್ತಿಪೂರ್ವಕವಾಗಿ ನರ್ತಿಸುವ ನಂಜಪ್ಪ, ಅದರ ಮಹಿಮೆಯನ್ನು ಕುಣಿತದ ಮೂಲಕ ಸುಂದರವಾಗಿ ಅಭಿವ್ಯಕ್ತಿಸುತ್ತಾರೆ. ತಲೆಗೆ ಮಂಡೆತುಣಿ (ತಲೆವಸ್ತ್ರ) ಕಟ್ಟಿ, ಮೈಗೆ ಕೊಡವರ ಬಿಳಿ ಬಣ್ಣದ ಕುಪ್ಯಚೆಲೆ ಧರಿಸಿ ಕೈಯಲ್ಲಿ ಗೆಜ್ಜೆತಂಡ್ ದೇವರ ಕೋಲು ಹಿಡಿದು ಕುಣಿಯುತ್ತಿದ್ದರೆ ಅವರೊಟ್ಟಿಗೆ ಸಭಿಕರು ಒಂದು ಸಾರಿ ಹೆಜ್ಜೆ ಹಾಕೋಣ ಎನ್ನಿಸುತ್ತದೆ.

ಈ ನೃತ್ಯದಲ್ಲಿ 52ರ ಹರೆಯದ ವಿನೋದ್ ನಂಜಪ್ಪ ಮುಂಚೂಣಿಯಲ್ಲಿದ್ದರೆ ಪೋಳಿಯ (ಮದುವೆ ಕುಕ್ಕೆ) ವನ್ನು ತಲೆ ಮೇಲೆ ಹೊತ್ತ ಮಹಿಳಾ ಸಹ ಕಲಾವಿದರು ಉತ್ತಮ ಮೆರಗು ನೀಡುತ್ತಾರೆ. ಇದರಲ್ಲಿ ಕೊಡವರ ಕೃಷಿ ಪದ್ಧತಿ, ಶೌರ್ಯ ಸಾಹಸ, ಯುದ್ಧ ನೀತಿ, ಹಿರಿಯರ ಪದ್ಧತಿ ಪರಂಪರೆ, ಮದುವೆ ಸಂಪ್ರದಾಯಗಳೆಲ್ಲವೂ ಸೇರಿವೆ. ಕೊಡವರ ದೇವಾಟ್ ಪರಂಬುವಿನಲ್ಲಿ ಹೋರಾಡಿದ ಕಲ್ಯಾಟ
ಪೊನ್ನಪ್ಪ, ಕಲ್ಯಾಟ ಅಜ್ಪಪ್ಪ ಮೊದಲಾದವರ ಸಾಹಸ ಶೌರ್ಯಗಳ ವಿವರವೂ ಇರುತ್ತದೆ.

ವಿನೋದ್ ನಂಜಪ್ಪ ಅವರು ತಮ್ಮ ನೃತ್ಯಕ್ಕೆ ಕಾಫಿ ಗಿಡದಿಂದ ತಯಾರಿಸಿಕೊಂಡಿರುವ ಕೋಲನ್ನು ಬಳಸುತ್ತಾರೆ. ಬೆಕ್ಕೆಸೊಡ್ಲೂರಿನ ಮಂದತ್ತವ್ವ ಸಾಂಸ್ಕೃತಿಕ ಟ್ರಸ್ಟ್‌ನ ಅಧ್ಯಕ್ಷೆ ಸುಳ್ಳಿಮಾಡ ಗೌರಿ ನಂಜಪ್ಪ, ಕೊರಿಯಾಗ್ರಫರ್‌ ಮಲ್ಲಮಾಡ ಶಾಮಲಾ ಸುನಿಲ್, ಕಲಾವಿದರಾದ ಸುಳ್ಳಿಮಾಡ ಶಿಲ್ಪ, ಸುಳ್ಳಿಮಾಡ ಶ್ವೇತಾ, ಸುಳ್ಳಿಮಾಡ ಭವಾನಿ ಅವರೊಂದಿಗೆ ವಿನೋದ್ ನಂಜಪ್ಪ ಅವರು ಇದುವರೆಗೆ 76 ಪ್ರದರ್ಶನಗಳನ್ನು ನೀಡಿದ್ದಾರೆ.

ನಂಜಪ್ಪ ಅವರ ತಂಡದ ನೃತ್ಯಕ್ಕೆ ಮನಸೋತಿರುವ ಕೇರಳದ ಕಾಸರಗೋಡಿನ ಜನತೆ 3 ವರ್ಷಗಳಿಂದ ತಮ್ಮಲ್ಲಿನ ಜಾನಪದ ಸಮ್ಮೇಳನ, ಓಣಂ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಪ್ಪದೆ ಕರೆಸುತ್ತಿದ್ದಾರೆ. ಈಚೆಗೆ ಹಿಂದೆ ಗೋಣಿಕೊಪ್ಪಲಿನ ಕಾಶ್ಮೀರಿ ಯುವ ವಿನಿಮಯದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಯೂ ನಂಜಪ್ಪ ಸೇರಿದ್ದ ಪ್ರೇಕ್ಷಕರ ಮನಸೂರೆಗೊಂಡಿದ್ದರು.

‘ಗೆಜ್ಜೆ ತಂಡ್’ ಎಂಬ ಗೆಜ್ಜೆಕೋಲು

ಗೆಜ್ಜೆ ತಂಡ್ (ಗೆಜ್ಜೆಕೋಲು) ಕೊಡವರ ಪ್ರತಿ ಐನ್‌ಮನೆಯಲ್ಲಿ ಇಟ್ಟು ಪೂಜಿಸುವ ದೇವರ ಕೋಲು. ಇದು ಕೊಡಗಿನಲ್ಲಿ ಬೆಳೆಯುವ ಅಪರೂಪದ ಕರಿಮರ ಬಳಸಿ ತಯಾರಿಸಲಾಗುತ್ತದೆ. ಐನ್ ಮನೆಯ ನೆಲ್ಲಕ್ಕಿ ನೆಡುಬಾಡೆ (ದೇವರ ಫೋಟೊ) ಬಳಿ ಇಡುತ್ತಾರೆ. ಇದೇ ಕೊಡವ ಸಮುದಾಯದ ದೇವ ಸ್ವರೂಪದ ಮೂರ್ತಿ. ಈ ಕೋಲನ್ನು ಮದುವೆಗಳಲ್ಲಿ ಮಧುಮಗನಿಗೆ ಹಿಡಿದು ಪೂಜಿಸಿದ ಬಳಿಕ ಮತ್ತೆ ಐನ್ ಮನೆಯಲ್ಲಿಯೇ ಇಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT