ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟಿಕೊಪ್ಪ: ಬೆಳೆ ಮಣ್ಣುಪಾಲು, ವಾನರ ಕಾಟಕ್ಕೆ ತತ್ತರಿಸಿದ ರೈತರು!

Last Updated 9 ಡಿಸೆಂಬರ್ 2022, 5:36 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯ ಹಲವೆಡೆ ಬೆಳೆಗಾರರು ಕಾಡಾನೆಗಳ‌ ಹಾವಳಿಗೆ ತತ್ತರಿಸಿದ್ದರೆ, ಇತ್ತ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆ ಗ್ರಾಮದಲ್ಲಿ ಕಳೆದ ಕೆಲವು ತಿಂಗಳಿಂದ ಕೋತಿಗಳ ಕಾಟಕ್ಕೆ ಕೃಷಿಕರು ಹೈರಣಾಗಿದ್ದಾರೆ.

ಈ ಭಾಗದಲ್ಲಿ ಬಾಳೆ, ಕಾಫಿ, ಹಲಸು, ಕಿತ್ತಳೆ, ಕಾಳು ಮೆಣಸು ಸೇರಿದಂತೆ ಬಹುತೇಕ ಬೆಳೆಗಳು ಕೋತಿಗಳ ಕಾಟಕ್ಕೆ ಹಾಳಾಗುತ್ತಿವೆ. ಕೆಲವು ಬೆಳೆಗಾರರ ಬಾಳೆಯಂತೂ ಮಂಗಗಳ ಹೊಟ್ಟೆ ಪಾಲಾಗುತ್ತಿವೆ‌.

ಈ ಭಾಗದಲ್ಲಿರುವ ಕಪಿ ಸೈನ್ಯದಲ್ಲಿ 200ಕ್ಕೂ ಹೆಚ್ಚು ಮಂಗಗಳಿವೆ‌ ಎಂದು ಗ್ರಾಮಸ್ಥರು ಹೇಳುತ್ತಾರೆ. ಇವೆಲ್ಲವೂ ಕಾಫಿ ತೋಟದ ಮೇಲೆ ದಾಳಿ ಮಾಡಿ ಗಿಡ ಮತ್ತು ಕೊಂಬೆಗಳನ್ನು ಮುರಿದು ಹಾಕುತ್ತಿವೆ‌. ಕಾಫಿಯನ್ನು ತಿಂದು ನಾಶಪಡಿಸುತ್ತಿವೆ.

ಕೋತಿಗಳು‌ ನಿರಂತರವಾಗಿ ಮರಗಳನ್ನು ಹತ್ತಿ ಇಳಿಯುತ್ತಿರುವುದರಿಂದ ಮರಗಳಿಗೆ ಹಬ್ಬಿಸಲಾದ ಕಾಳು ಮೆಣಸಿನ ಬಳ್ಳಿಗಳು ಧರೆಗುರುಳುತ್ತಿವೆ. ಬಳ್ಳಿಗಳಲ್ಲಿರುವ ಕಾಳು ಮೆಣಸಿನ ಗೊಂಚಲು ನೆಲಕ್ಕೆ ಬೀಳುತ್ತಿವೆ. ಬಳ್ಳಿಗಳು ಮರದಲ್ಲಿ‌ ಮೇಲೆರಲು ಕೋತಿಗಳು ಬಿಡುತ್ತಿಲ್ಲ. ಕೋತಿಗಳ ಈ ಆಟದಿಂದ ಬೆಳೆಗಾರರು ವರ್ಷಾನುಗಟ್ಟಲೆ ಜತನದಿಂದ ಕಾಪಾಡಿಕೊಂಡ ಬಳ್ಳಿಗಳು ಮಣ್ಣು ಪಾಲಾಗುತ್ತಿವೆ.

ಮಂಗಗಳ‌ ಉಪಟಳ‌ ಸಹಿಸಲಾರದೆ ಮನೆಗಳಲ್ಲಿ ನಾಯಿಗಳನ್ನು ಸಾಕುತ್ತಿದ್ದಾರೆ. ಪಟಾಕಿಗಳನ್ನು ಹೊಡೆಯುತ್ತಿದ್ದಾರೆ, ಟಿನ್‌ಗಳನ್ನು ಕುಟ್ಟುತ್ತಿದ್ದಾರೆ. ಆದರೆ, ಮಂಗಗಳನ್ನು ಓಡಿಸಲು ಏನೇ ಪ್ರಯೋಗ ಮಾಡಿದರೂ ಅವುಗಳು ಫಲ ನೀಡುತ್ತಿಲ್ಲ.

ಬೆಳೆಗಾರರೊಡನೆ‌ ಕಳ್ಳಾಟ ಆಡುತ್ತಿರುವ ಈ ವಾನರಗಳನ್ನು ಕೂಡಲೇ ಅರಣ್ಯ ಇಲಾಖೆ ಸ್ಥಳಾಂತರಿಸಲು ಕ್ರಮ ‌ಕೈಗೊಳ್ಳಬೇಕು. ಇಲ್ಲವಾದರೆ, ಈ ಭಾಗದಲ್ಲಿ ಬೆಳೆಗಾರರು ತಮ್ಮ‌ ಬೆಳೆಯ ಅಸ್ತಿತ್ವವನ್ನು ಕಳೆದುಕೊಳ್ಳುವ ಆತಂಕ ಮೂಡಿದೆ.

‘ಮಂಗಗಳ ಹಾವಳಿಯಿಂದ ಈ ಭಾಗದಲ್ಲಿ ಅಪಾರ ಬೆಳೆ ನಷ್ಟವಾಗಿದೆ. ಅರಣ್ಯ ಇಲಾಖೆ, ಜನಪ್ರತಿನಿಧಿಗಳು‌ ಬೆಳೆಗಾರರಿಗೆ ಆಗುತ್ತಿರುವ ತೊಂದರೆಗೆ ಪರಿಹಾರ ಕೊಡಬೇಕು. ನಮಗೆ ಉಪಟಳ‌ ನೀಡುತ್ತಿರುವ ಕೋತಿಗಳನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಬೇಕು’ ಎಂದು ಏಳನೇ ಹೊಸಕೋಟೆ ನಿವಾಸಿ ಕಾಟ್ನಮನೆ ಕಿಶೋರ್, ಸುಧಾಕರ್, ಮುತ್ತಮ್ಮ ಮನವಿ ಮಾಡಿಕೊಂಡಿದ್ದಾರೆ.

ಮಂಗಗಳ ಸೆರೆಗೆ ಪ್ರಸ್ತಾವ
ವಲಯ ಅರಣ್ಯಾಧಿಕಾರಿ ಶಿವರಾಮ್ ಪ್ರತಿಕ್ರಿಯಿಸಿ, ‘ಏಳನೇ ಹೊಸಕೋಟೆ ಗ್ರಾಮದಲ್ಲಿ ಮಂಗಗಳ ಹಾವಳಿ ಇರುವುದು ನಿಜ. ಅವುಗಳ ಸೆರೆಗೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ಹೇಳಿದರು.

‘ಕೆಲವೊಂದು ಮಂಗಗಳು ಮನೆಗಳಿಗೆ ನುಗ್ಗುವುದು, ಹಾನಿ ಮಾಡುವುದು ಸೇರಿದಂತೆ ಇನ್ನಿಲ್ಲದ ಉಪಟಳ ನೀಡುತ್ತಿವೆ. ಇವುಗಳನ್ನು ಸೆರೆ ಹಿಡಿಯುವುದಕ್ಕೆ ಯೋಜನೆ ರೂಪಿಸಲಾಗಿದೆ. ಹಿರಿಯ ಅಧಿಕಾರಿಗಳ ಒಪ್ಪಿಗೆ ದೊರೆತ ತಕ್ಷಣವೇ ಮಂಗಗಳನ್ನು ಸೆರೆ ಹಿಡಿಯಲಾಗುವುದು’ ಎಂದು ತಿಳಿಸಿದರು.

ಮನೆಗೆ ನುಗ್ಗಿ ದಾಳಿ ಮಾಡುವ ಕೋತಿಗಳು!
ಹೊಲ, ಗದ್ದೆಗಳಲ್ಲಿ ಮಾತ್ರವಲ್ಲ ಮನೆಗಳಿಗೂ ಕೋತಿಗಳು ನುಗ್ಗಿ ಮನೆಯಲ್ಲಿರುವ ವಸ್ತುಗಳನ್ನು ನಾಶಪಡಿಸಲು ಆರಂಭಿಸಿರುವುದು ಗ್ರಾಮಸ್ಥರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ.

ಏಳನೇ ಹೊಸಕೋಟೆ ನಿವಾಸಿ‌ ರಾಹುಲ್ ಅವರ ಮನೆಗೆ ನುಗ್ಗಿದ ಕೋತಿಗಳೆರಡು ಪಾತ್ರೆಗಳನ್ನು ಎಸೆದು ರಂಪಾಟ ನಡೆಸಿವೆ. ಸಿಕ್ಕ ಸಿಕ್ಕ ವಸ್ತುಗಳನ್ನು ಒಡೆದು ಹಾಕಿವೆ. ಮನೆಯವರು ಓಡಿಸಲು ಯತ್ನಿಸಿದಾಗ ಅವರ ಮೇಲೆ‌ ದಾಳಿ‌‌ ನಡೆಸಲು ಮುಂದಾಗಿವೆ. ವಲಯ ಅರಣ್ಯಾಧಿಕಾರಿ ಶಿವರಾಮ್ ಮತ್ತು ಅಧಿಕಾರಿಗಳು ಭೇಟಿ ನೀಡಿ‌ ಪರಿಶೀಲಿಸಿದರು. ಬೋನುಗಳನ್ನು ಅಳವಡಿಸಿ ಮಂಗಗಳನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸುವ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT