ಗುರುವಾರ , ಆಗಸ್ಟ್ 11, 2022
21 °C

ಮುಗಿಲು ಮುಟ್ಟಿದ ಪುತ್ತರಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ಕೊಡಗಿನ ಸುಗ್ಗಿಯ ಹಬ್ಬವಾದ ಹುತ್ತರಿಯನ್ನು ಸೋಮವಾರ ಜಿಲ್ಲೆಯಾದ್ಯಂತ ಸಂಭ್ರಮದಿಂದಆಚರಿಸಲಾಯಿತು. ಕಕ್ಕಬ್ಬೆಯ ಪಾಡಿಇಗ್ಗುತ್ತಪ್ಪದೇವಾಲಯದಲ್ಲಿ ಹುತ್ತರಿ ಹಬ್ಬದ ಮೊದಲ ಪೂಜೆ ನಡೆಯಿತು. ಬಳಿಕ ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಭತ್ತದ ಕದಿರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿತು.

ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವಾಲಯದ ಸುತ್ತಮುತ್ತಲಿನ ಪೊಂಗೇರ, ಕಣಿಯಂಡ, ಕೋಳೆಯಂಡ, ಕಲಿಯಂಡ, ಐರೀರ, ಐಕೊಳಂಡ, ಬೊಳ್ಳಿನಮ್ಮಂಡ, ಸೇರಿದಂತೆ ಅಮ್ಮಂಗೇರಿಯ ಹತ್ತು ಕುಟುಂಬದವರು ಪಾಲ್ಗೊಂಡಿದ್ದರು. ವಿವಿಧ ಕುಟುಂಬಗಳ ಮಹಿಳೆಯರು ತಳಿಯಕ್ಕಿಬೊಳಕ್ ಹಿಡಿದು ದೇವಾಲಯಕ್ಕೆ ಆಗಮಿಸಿದರು. ದುಡಿಕೊಟ್ ಪಾಟ್ ನುಡಿಸಲಾಯಿತು. ಬಳಿಕ ಹಿರಿಯರಾದ ಪೊಂಗೇರ ವಸಂತ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಾಂಪ್ರದಾಯಿಕ ನೆರೆಕಟ್ಟುವ ಕಾರ್ಯ ನಡೆಯಿತು.

ಸಾಂಪ್ರದಾಯಿಕ ಉಡುಪಿನಲ್ಲಿ ಮುಕ್ಕಾಟಿ ಸುಬ್ರಮಣಿ ಜಾಗಟೆ, ಡೋಲು ಸಹಿತ ಬೆಳ್ಳಿಯ ಬಿಂದಿಗೆಯೊಂದಿಗೆ ಗದ್ದೆಗೆ ತೆರಳಿ ವಿಧಿವಿಧಾನ ನೆರವೇರಿಸಿದರು. ನಿಗದಿತ ಸಮಯದಲ್ಲಿ ಕುಶಾಲು ತೋಪು ಹಾರಿಸಿ ಪೊಲಿಪೊಲಿ ಬಾ ಉದ್ಘೋಷಗಳ ನಡುವೆ ಕದಿರನ್ನು ಕಟಾವು ಮಾಡಲಾಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತರು ದೇವಾಲಯದ ಅಶ್ವತ್ಥ ಕಟ್ಟೆಗೆ ಪ್ರದಕ್ಷಿಣೆ ಬಂದು ತೆನೆಗಳನ್ನು ನಮಸ್ಕಾರ ಮಂಟಪದಲ್ಲಿರಿಸಿ ವಿಶೇಷ ಲಕ್ಷ್ಮಿ ಪೂಜೆಯನ್ನು ನೆರವೇರಿಸಿದರು. ಅರ್ಚಕರಾದ ಕುಶಭಟ್ ಮತ್ತು ಗುರಪ್ರಸಾದ್ ಭಟ್ ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಭಕ್ತರಿಗೆ ತೀರ್ಥಪ್ರಸಾದವನ್ನು ವಿತರಿಸಲಾಯಿತು.

ದೇವಾಲಯದಲ್ಲಿ ಪ್ರಥಮವಾಗಿ ಭತ್ತದ ಕದಿರುಕಟ್ಟಲಾಯಿತು. ಪ್ರಸಾದ ವಿತರಣೆಯ ಬಳಿಕ ಭಕ್ತರು ಮನೆಗಳಿಗೆ ತೆರಳಿ ಹುತ್ತರಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.ದೇವಾಲಯದಲ್ಲಿ ನಡೆದ ಆಚರಣೆಯಲ್ಲಿ ಊರಿನ, ಪರವೂರಿನ ಭಕ್ತರು ಪಾಲ್ಗೊಂಡಿದ್ದರು. ಕಣಿಯರ ನಾಣಯ್ಯ, ಜೀವನ್, ಕೋಳೆಯಂಡ ಅಶೋಕ್, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವನಾಣಯ್ಯ, ಸ್ಥಳೀಯರು ಪಾಲ್ಗೊಂಡಿದ್ದರು.

ಸಮೀಪದ ಪಾಲೂರು ಮಹಾಲಿಂಗೇಶ್ವರ ದೇವಾಲಯ, ಮಕ್ಕಿಶಾಸ್ತಾವು ದೇವಾಲಯ ಕಕ್ಕುಂದ ಕಾಡು ವೆಂಕಟೇಶ್ವರ ದೇವಾಲಯ ಹಾಗೂ ನಾಪೋಕ್ಲು ಕೊಡವ ಸಮಾಜಗಳಲ್ಲಿ ಹುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು ಹಿರಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಹುತ್ತರಿಯ ಅಂಗವಾಗಿ ಪಟಾಕಿಗಳ ಅಬ್ಬರ ಜೋರಾಗಿತ್ತು.

ಕೊರೊನಾ ಕರಿಛಾಯೆಯನ್ನು ತೊಲಗಿಸುವಂತೆ ಬೆಳದಿಂಗಳ ಬೆಳಕಿನಲ್ಲಿ ಸುಗ್ಗಿ ಹಬ್ಬದ ಆಚರಣೆ ಭಾಗಮಂಡಲದಲ್ಲಿ ಸಂಭ್ರಮೋಲ್ಲಾಸಗಳಿಂದ ಜರುಗಿತು. ಭಗಂಡೇಶ್ವರ ದೇವಾಲಯದಲ್ಲಿ ಭತ್ತದ ಕದಿರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಸ್ಥಳೀಯ ಗದ್ದೆಯಿಂದ ಕದಿರು ತಂದು ದೇವಾಲಯಕ್ಕೆ ಪ್ರದಕ್ಷಿಣೆ ಬಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಭತ್ತದ ಕದಿರನ್ನು ಭಕ್ತರಿಗೆ ವಿತರಿಸಲಾಯಿತು.

ಸಮೀಪದ ಹೊದ್ದೂರು ಗ್ರಾಮದಲ್ಲಿ ಕೂಡಂಡ ಕುಟುಂಬಸ್ಥರು ಪುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಇಲ್ಲಿನ ಶಾಸ್ತಾ ಈಶ್ವರ ದೇವಾಲಯದಲ್ಲಿ ಪುತ್ತರಿ ಆಚರಣೆಯ ಅಂಗವಾಗಿ ಸಾಂಪ್ರದಾಯಿಕ ಎತ್ತು ಪೋರಾಟವನ್ನು ನಡೆಸಲಾಯಿತು. ಚೌರೀರ ಕುಟುಂಬಸ್ಥರು ಎತ್ತು ಪೋರಾಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು