ಗುರುವಾರ , ಸೆಪ್ಟೆಂಬರ್ 16, 2021
24 °C
ಕಾಫಿ ಜತೆ ಕಾಳುಮೆಣಸು ಬೆಳೆದರೇ ಬೆಳೆಗಾರರ ಬದುಕು ಸುಖಮಯ

ಶನಿವಾರಸಂತೆ: ಏರಿದ ಉತ್ಪಾದನಾ ವೆಚ್ಚ; ಕಂಗಾಲಾದ ಕೃಷಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶನಿವಾರಸಂತೆ: ’ಕೃಷಿ ಪರಿಣಿತರ ಅಭಿಪ್ರಾಯದಂತೆ ಕೃಷಿ ಒಂದು ತಪಸ್ಸು. ತಪಸ್ಸಿಗೆ ತಕ್ಕ ವರ ಕೆಲವೊಮ್ಮೆ ಸಿಗಬಹುದು ಅಥವಾ ಸಿಗದೇ ಇರಬಹುದು.ಆದರೆ, ತಪಸ್ಸನ್ನು ಮಾತ್ರ ಬಿಡುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯ, ಬೆಳೆ ನಿರ್ವಹಣೆ ಹಾಗೂ ಉತ್ಪಾದನಾ ವೆಚ್ಚದಿಂದ ಕೃಷಿಕ ಕಂಗಾಲಾಗುವುದು ಸಹಜ‌‘ ಎನ್ನುತ್ತಾರೆ ಶಿಡಿಗಳಲೆ ಗ್ರಾಮದ ಬೆಳೆಗಾರ ಎಸ್.ಎಂ.ಉಮಾಶಂಕರ್.

ಶನಿವಾರಸಂತೆ ಹೋಬಳಿ ಅರೆಮಲೆನಾಡು ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ ಮಳೆ ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುತ್ತದೆ. ಮುಖ್ಯ ಬೆಳೆಯಾಗಿ ಅರೆಬಿಕಾ ಕಾಫಿ ಬೆಳೆಯುತ್ತಿದ್ದರೂ, ಕಾಫಿ ತೋಟ ನಿರ್ವಹಣೆಗೆ ಬರುವ ಆದಾಯ ಸಾಲದು. ಉಪಬೆಳೆಯಾಗಿ ಕಾಳುಮೆಣಸು ಬೆಳೆದರೇ ಮಾತ್ರ ಬೆಳೆಗಾರರ ಬದುಕು ಸುಖಮಯವಾಗಿರುತ್ತದೆ. ಯಾವುದೇ ಬೆಳೆ ಬೆಳೆಯಬೇಕಾದರೂ ಉತ್ತಮ ತಳಿಯ ಆಯ್ಕೆ ಮುಖ್ಯವಾಗಿರುತ್ತದೆ. ಕಾಫಿ, ಕಾಳುಮೆಣಸು ಬೆಳೆ ಉತ್ತಮ ಮಳೆಯಾಧರಿತವಾಗಿದ್ದರೂ ಅಗತ್ಯ ಬಿದ್ದಾಗ ರೈತರು ನೀರಿನ ಬೇರೆ ವ್ಯವಸ್ಥೆ ಮಾಡಿಕೊಳ್ಳಲೇ ಬೇಕಾಗುತ್ತದೆ.

ಕಾಫಿ, ಕಾಳುಮೆಣಸಿನ ಇಳುವರಿಗೆ ಅತಿವೃಷ್ಠಿ-ಅನಾವೃಷ್ಠಿ ಒಂದು ಸಮಸ್ಯೆಯಾದರೇ ರೋಗಭಾಧೆ ಮತ್ತೊಂದು ಸಮಸ್ಯೆಯಾಗಿದೆ. ಅಧಿಕ ಮಳೆಯಾದರೆ, ಕೊಳೆರೋಗ ಬರುತ್ತದೆ. ಕಡಿಮೆಯಾದರೆ ಇಳುವರಿ ಕುಂಠಿತವಾಗುತ್ತದೆ. ಇದಲ್ಲದೇ ಕಾಫಿಗೆ ಬರುವ ಎಲೆಚುಕ್ಕಿ ರೋಗ, ಬಿಳಿಕಾಂಡ ಕೊರಕ ಎರಡೂ ತೋಟವನ್ನೆ ನಾಶಪಡಿಸಬಲ್ಲವು ಎಂದು ಬೆಳೆಗಾರರು ಹೇಳುತ್ತಾರೆ.

ರಾಸಾಯನಿಕ ಗೊಬ್ಬರದ ಬೆಲೆ ಗಗನಕ್ಕೇರಿದ್ದು ಗೊಬ್ಬರ ಹಾಕದಿದ್ದರೇ ಬೆಳೆ ತೆಗೆಯುವುದು ದುಸ್ತರ. ನುರಿತ ಕಾರ್ಮಿಕರ ಕೊರತೆ ಜತೆಗೆ ಕಾರ್ಮಿಕರ ವೇತನವೂ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು ಕೃಷಿಕರು ಅಸಹಾಯಕರಾಗುತ್ತಿದ್ದಾರೆ.ಎಲ್ಲಾ ಸಮಸ್ಯೆಗಳನ್ನು ಸಂಭಾಳಿಸಿಕೊಂಡು ಬೆಳೆ ತೆಗೆದರೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಕನಸಿನ ಮಾತಾಗಿದೆ.

ಬಾಲ್ಯದಿಂದಲೇ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದು ಶನಿವಾರಸಂತೆಯ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಮತ್ತೀದೀಗ ಪ್ರಗತಿಪರ ಕೃಷಿಕನಾಗಿ ರೂಪುಗೊಳ್ಳುತ್ತಿರುವ ಶಿಡಿಗಳಲೆ ಗ್ರಾಮದ ಎಸ್.ಎಂ.ಉಮಾಶಂಕರ್ ತಮ್ಮ 18 ಎಕರೆ ತೋಟದಲ್ಲಿ ಕಾಫಿ, ಕಾಳು ಮೆಣಸು, ಕಿತ್ತಳೆ ಬೆಳೆಯುತ್ತಿದ್ದಾರೆ.

ಎಕರೆಗೆ ವಾರ್ಷಿಕ ₹50 ಸಾವಿರ ಮೌಲ್ಯದ ಕಾಫಿ, ₹45 ಸಾವಿರ ಕಾಳುಮೆಣಸು, ₹5 ಸಾವಿರ ಕಿತ್ತಳೆ ಒಟ್ಟು ₹1 ಲಕ್ಷದಷ್ಟು ಆದಾಯ ಗಳಿಸುತ್ತಿದ್ದಾರೆ. ಇದರಲ್ಲಿ ತೋಟಕ್ಕೆ ₹80-₹85 ಸಾವಿರ ಖರ್ಚು ಮಾಡುತ್ತಿದ್ದು, ಉಳಿದ ಹಣದಲ್ಲಿ ಮನೆ ಖರ್ಚು, ಮಕ್ಕಳ ವಿದ್ಯಾಭ್ಯಾಸಕ್ಕೆ ವೆಚ್ಚ ಮಾಡುತ್ತಾರೆ. 2 ಎಕರೆ ಗದ್ದೆಯಲ್ಲಿ ಭತ್ತ ಬೆಳೆದರೂ ಆದಾಯಕ್ಕಿಂತ ಖರ್ಚೇ ಜಾಸ್ತಿ. ಆದರೂ ಕೃಷಿ ಬಿಡಲಾರೆ ಎಂಬ ಅಭಿಮಾನ ಅವರದು.

ಪ್ರಗತಿಪರ ರೈತರೇ ತಮಗೆ ಮಾದರಿ ಎನ್ನುವ ಉಮಾಶಂಕರ್ ಅವರಿವರ ತೋಟಗಳನ್ನು ನೋಡಿ ಕಲಿತು ತಮ್ಮ ತೋಟದಲ್ಲೂ ಅನುಸರಿಸುತ್ತಿದ್ದಾರೆ. ಶುಂಠಿ ಬೆಳೆದಾಗಲೆಲ್ಲಾ ಕೈ ಸುಟ್ಟುಕೊಂಡಿದ್ದಾರೆ. ಸುಗಂಧ ದ್ರವ್ಯದಲ್ಲಿ ಬಳಸುವ ’ಪಚೋಲಿ’ ಯನ್ನು ಬೆಳೆಯುತ್ತಿದ್ದಾರೆ ಲಾಭ ಗಳಿಸದಿದ್ದರೂ ಅಸಲಿಗೇನೂ ಅವರಿಗೆ ಮೋಸವಾಗಿಲ್ಲ.

ಹೋಬಳಿಯಲ್ಲಿ ಜುಲೈ- ಆಗಸ್ಟ್ ನಲ್ಲಿ ನಿರಂತರ ಮಳೆಯಾಗಿದ್ದು ಕಾಫಿ, ಕಾಳುಮೆಣಸು, ಶುಂಠಿ ಬೆಳೆಗೆ ಕೊಳೆ ರೋಗ ತಗಲುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ.ಆದರೆ, ಭತ್ತದ ಬೆಳೆಗೆ ಯಾವ ಹಾನಿಯೂ ಇಲ್ಲ.ಶೇ.100 ರಷ್ಟು ನಾಟಿ ಕೆಲಸ ಮುಗಿದಿದೆ. ಮಳೆ ಮುಂದುವರೆದರೂ ತೊಂದರೆಯಿಲ್ಲ‘ ಎಂದು ಕೃಷಿ ಅಧಿಕಾರಿ ಬಿ.ಎಚ್.ಮನಸ್ವಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು