ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು: ಅಣ್ಣನ ದಾಹ ನೀಗಿಸಿದ ಲಕ್ಷ್ಮಣ

ದಕ್ಷಿಣ ಕೊಡಗಿನಲ್ಲಿ ಶ್ರೀರಾಮನ ಪ್ರವೇಶದ ಸಂಕೇತ ಲಕ್ಷ್ಮಣತೀರ್ಥ ಜಲಪಾತ, ನದಿ
Published 22 ಜನವರಿ 2024, 8:33 IST
Last Updated 22 ಜನವರಿ 2024, 8:33 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಪ್ರಮುಖ ನದಿ ಲಕ್ಷ್ಮಣತೀರ್ಥ. ಇದರ ಜನನ ಶ್ರೀಮಂಗಲ ಬಳಿಯ ಬ್ರಹ್ಮಗಿರಿ ಪರ್ವತ ಶ್ರೇಣಿ. ವಿಶಾಲವಾದ ಪರ್ವತದ ಮೇಲೆ ಹುಟ್ಟುವ ಹತ್ತಾರು ಜಲಧಾರೆಗಳು ಒಂದೆಡೆ ಸಂಗಮಗೊಂಡು ಹೆಬ್ಬಂಡೆಗಳ ನಡುವೆ ಇಳಿಜಾರಿನಲ್ಲಿ ಧುಮ್ಮಿಕ್ಕಿ ಜಲಪಾತ ಸೃಷ್ಟಿಸುತ್ತವೆ. ಇದೇ 'ಇರ್ಪು ಜಲಪಾತ.' ಈ ಸ್ಥಳಕ್ಕೆ ಈಗ ಇರ್ಪು ಎಂದೇ ಹೆಸರಿದೆ.

'ಇರ್' ಎಂದರೆ ಎರಡು ಬಂಡೆಗಳ ನಡುವೆ ಇಕ್ಕಟ್ಟಾದ ಸ್ಥಳದಲ್ಲಿ ಧುಮ್ಮಿಕ್ಕುವ ಜಲಧಾರೆ. ಇದಕ್ಕೆ ‘ಲಕ್ಷ್ಮಣತೀರ್ಥ ಜಲಪಾತ’ವೆಂತಲೂ ಕರೆಯುತ್ತಾರೆ. ಈ ಜಲಪಾತ ಅರಣ್ಯದೊಳಗೆ 1 ಕಿ.ಮೀ. ದೂರ ಹರಿದು ಮುಂದೆ ಬಯಲಿನಲ್ಲಿ ಸಣ್ಣ ತೊರೆಯಂತೆ ಸಾಗುತ್ತದೆ. ಇದೇ ಲಕ್ಷ್ಮಣತೀರ್ಥ ನದಿ. ಇದಕ್ಕೆ ಒಂದು ಪೌರಾಣಿಕ ಹಿನ್ನೆಲೆ ಇದೆ.

ವನವಾಸದ ಸಂದರ್ಭದಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತ ಇಲ್ಲಿಗೆ ಬಂದಾಗ ರಾಮನಿಗೆ ಬಾಯಾರಿಕೆಯಾಗಿ ದಾಹ ನೀಗಿಸಿಕೊಳ್ಳಲು ಲಕ್ಷ್ಮಣನನ್ನು ನೀರು ಕೇಳುತ್ತಾನೆ. ಆಗ ನೀರು ಎಲ್ಲಿಯೂ ಸಿಗದಿದ್ದಾಗ ಲಕ್ಷ್ಮಣ ತನ್ನೆದುರಿನ ಬೆಟ್ಟಕ್ಕೆ ಬಾಣ ಬಿಟ್ಟನಂತೆ. ಬಂಡೆಕಲ್ಲುಗಳ ನಡುವೆ ನೀರು ಚಿಲ್ಲನೆ ಚಿಮ್ಮಿತಂತೆ. ಹೀಗಾಗಿ ಈ ಜಲಪಾತದಿಂದ ಹರಿಯುವ ಜಲಧಾರೆಗೆ ಲಕ್ಷ್ಮಣತೀರ್ಥ ನದಿ ಎಂದು ಹೆಸರು ಬಂದಿದೆ ಎಂದು ಹಿರಿಯರು ಹೇಳುತ್ತಾರೆ.

ಗೋಣಿಕೊಪ್ಪಲು ಬಳಿಯ ಇರ್ಪು ರಾಮೇಶ್ವರ ದೇವಸ್ಥಾನ
ಗೋಣಿಕೊಪ್ಪಲು ಬಳಿಯ ಇರ್ಪು ರಾಮೇಶ್ವರ ದೇವಸ್ಥಾನ

ಈ ಜಲಪಾತದ ತಪ್ಪಲಿನಲ್ಲಿ ರಾಮೇಶ್ವರ ದೇವಸ್ಥಾನದವಿದೆ. ಹೆಸರಿಗೆ ಇದು ರಾಮೇಶ್ವರ ದೇವಸ್ಥಾನ. ಆದರೆ ಪೂಜೆಗೆ ಮಾತ್ರ ಶಿವ ಲಿಂಗ. ರಾಮ ಇಲ್ಲಿಗೆ ಬಂದಾಗ ಶಿವರಾತ್ರಿ ಹಬ್ಬ ಸಮೀಪಿಸಿತ್ತು. ರಾಮನು ಶಿವ ಲಿಂಗ ಪೂಜಿಸಲು ಹನುಮಂತನನ್ನು ಲಿಂಗ ತರುವುದಕ್ಕಾಗಿ ಕೈಲಾಸ ಪರ್ವತಕ್ಕೆ ಕಳುಹಿಸಿಕೊಟ್ಟನಂತೆ. ರಾಮನ ಆದೇಶವನ್ನು ಹೊತ್ತ ಹನುಮಂತ ಕೈಲಾಸಕ್ಕೆ ಹೋಗಿ ಬರುವುದು ತಡವಾದಾಗ ರಾಮ ಮರಳಿನಲ್ಲಿಯೇ ಶಿವ ಲಿಂಗವನ್ನು ರೂಪಿಸಿ ಪೂಜಿಸಿದನಂತೆ. ಹನುಮಂತ ಶಿವಲಿಂಗ ಸಮೇತ ಓಡೋಡಿ ಬರುವ ವೇಳೆಗೆ ರಾಮನ ಪೂಜೆ ಮುಗಿದಿತ್ತು.

ಇದರಿಂದ ಬಹಳ ಬೇಸರಗೊಂಡ ಹನುಮಂತ ಜಿಗಿದು ಹೆರ್ಮಾಡು ಎಂಬಲ್ಲಿ ತಾನು ತಂದ ಲಿಂಗವನ್ನು ಇಟ್ಟನಂತೆ. ಅದೇ ಭರದಲ್ಲಿ ಪಕ್ಕದಲ್ಲೇ ಇದ್ದ ಬೆಟ್ಟಕ್ಕೆ ಜಿಗಿದು ತನ್ನ ಬಾಲವನ್ನು ಬಡಿದನಂತೆ. ಇದರಿಂದ ಬೆಟ್ಟ ತಗ್ಗಿ ಹೋಯಿತಂತೆ. ಆದರೆ ಈ ಬೆಟ್ಟದ ತುದಿಯ ಸುತ್ತಲೂ ತಗ್ಗಿದ ಗುರುತು ಈಗಲೂ ಕಂಡು ಬರುತ್ತದೆ. ಈ ಬೆಟ್ಟಕ್ಕೆ ಹನುಮಂತನ ಬೆಟ್ಟ ಎಂದೇ ಕರೆಯುತ್ತಾರೆ.

ದೇವಸ್ಥಾನದ ಹೊರ ನೋಟ
ದೇವಸ್ಥಾನದ ಹೊರ ನೋಟ

ಹನುಮಂತನನ್ನು ಸಮಾಧಾನ ಪಡಿಸಿದ ಶ್ರೀರಾಮ ಇನ್ನು ಮುಂದೆ ಶಿವರಾತ್ರಿಯಂದು ಹೆರ್ಮಾಡುವಿನಲ್ಲಿಟ್ಟ ಲಿಂಗಕ್ಕೇ ಮೊದಲು ಪೂಜೆ ನಡೆಯಲಿ. ಬಳಿಕ ಇರ್ಪುವಿನ ಲಿಂಗಕ್ಕೆ ಪೂಜೆ ಸಲ್ಲಲಿ ಎಂದನಂತೆ. ಅಂದಿನಿಂದ ಪ್ರತಿ ಶಿವರಾತ್ರಿಯಂದು ಹೇರ್ಮಾಡುವಿನ ಶಿವನ ಲಿಂಗಕ್ಕೆ ಪ್ರಥಮ ಪೂಜೆ ನಡೆದು ಬಳಿಕ ಇರ್ಪು ರಾಮೇಶ್ವರ ದೇವಸ್ಥಾನದಲ್ಲಿ ಪೂಜೆ ನಡೆಯುವ ಪ್ರತೀತಿ ಇದೆ.

ಇರ್ಪುವಿನ ರಾಮೇಶ್ವರ ದೇವಸ್ಥಾನ ಅಂದಾಜು ಒಂದು ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಸುಂದರವಾಗಿ ತಲೆ ಎತ್ತಿದೆ. ಕೇರಳ ಶೈಲಿಯಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇದರ ಒಳಗೆ ವಿಶಾಲ ಭೋಜನಾಲಯ ಹಾಗೂ ವಿವಿಧ ದೇವರ ಗುಡಿ ಗೋಪುರಗಳಿವೆ. ದೇವಸ್ಥಾನದ ಅಭಿವೃದ್ಧಿ ಸಮಿತಿ ಇದರ ನಿರ್ವಹಣೆ ಮಾಡುತ್ತಿದೆ. ಪ್ರತಿ ದಿನ ಬೆಳಿಗ್ಗೆ 7ರಿಂದ 12 ಗಂಟೆವರೆಗೆ, ಸಂಜೆ 6 ರಿಂದ 8 ಗಂಟೆವರೆಗೆ ಪೂಜೆ ನಡೆಯುತ್ತದೆ. ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನಾ ಕಾರ್ಯನಡೆಯುತ್ತಿರುವುದರಿಂದ ಇಲ್ಲಿಯೂ ಈಗ ವಿಶೇಷ ಪೂಜೆ ಪುನಸ್ಕಾರ ನಡೆಸಲಾಗುತ್ತಿದೆ.

 ಇರ್ಪು ಜಲಪಾತ
 ಇರ್ಪು ಜಲಪಾತ

ಈ ದೇವಸ್ಥಾನದ ಪಕ್ಕದಲ್ಲಿಯೇ ಹರಿಯುವ  ಲಕ್ಷ್ಮಣತೀರ್ಥ ಮುಂದೆ ಸಾಗಿದಂತೆ ಹತ್ತು ಹಲವು ತೊರೆಗಳು ಸೇರಿಸಿಕೊಂಡು ಕುಟ್ಟ, ಶ್ರೀಮಂಗಲ, ಹರಿಹರ, ಕಾನೂರು, ಬಾಳೆಲೆ, ನಿಟ್ಟೂರು ಮಾರ್ಗವಾಗಿ ದೊಡ್ಡ ಪ್ರಮಾಣದಲ್ಲಿ ಹರಿಯುತ್ತದೆ. ಅದು ನಾಗರಹೊಳೆ ಅರಣ್ಯದೊಳಗೆ ಸಾಗಿ ಹುಣಸೂರು ಪ್ರವೇಶಿಸಿ ಕೆ.ಆರ್.ನಗರದ ಬಳಿ ಕಾವೇರಿ ನದಿಯಲ್ಲಿ ಸಂಗಮಗೊಳ್ಳುತ್ತದೆ.

ಮೂಲದಲ್ಲಿನ ಲಕ್ಷ್ಮಣತೀರ್ಥ ನದಿ
ಮೂಲದಲ್ಲಿನ ಲಕ್ಷ್ಮಣತೀರ್ಥ ನದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT