ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮಗಳಲ್ಲೂ ‘ಜನಸ್ಪಂದನ’: ಪೊನ್ನಣ್ಣ

ವಿರಾಜಪೇಟೆಯ ‘ಜನಸ್ಪಂದನ’ಕ್ಕೆ ಭರಪೂರ ಸ್ಪಂದನೆ; 126ಕ್ಕೂ ಅಧಿಕ ಅರ್ಜಿ ಸಲ್ಲಿಕೆ
Published 20 ಜೂನ್ 2024, 7:37 IST
Last Updated 20 ಜೂನ್ 2024, 7:37 IST
ಅಕ್ಷರ ಗಾತ್ರ

ವಿರಾಜಪೇಟೆ: ಪಟ್ಟಣದ ಕಾವೇರಿ ಕಲ್ಯಾಣ ಮಂಟಪದಲ್ಲಿ ಬುಧವಾರ ಶಾಸಕ ಎ.ಎಸ್.ಪೊನ್ನಣ್ಣ ನಡೆಸಿದ ‘ಜನಸ್ಪಂದನ’ದಲ್ಲಿ ಸಾರ್ವಜನಿಕರಿಂದ 126ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾದವು. ನೂರಾರು ಮಂದಿ ಸಾಲುಗಟ್ಟಿ ನಿಂತು ಅರ್ಜಿ ಸಲ್ಲಿಸಿದರು. ಕೆಲವರು ತಮ್ಮ ಅಹವಾಲುಗಳನ್ನು ಹೇಳಿಕೊಂಡರು.

ಎಲ್ಲವನ್ನೂ ಸಮಾಧಾನಚಿತ್ತದಿಂದ ಆಲಿಸಿದ ಪೊನ್ನಣ್ಣ ಬಗೆಹರಿಸುವ ಭರವಸೆ ನೀಡಿದರು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ಸೂಚಿಸಿದರು. ಈ ಸಂಬಂಧ ಅಧಿಕಾರಿಗಳಿಗೆ ನಿರ್ದೇಶನವನ್ನೂ ನೀಡಿದರು. ಇನ್ನು ಮುಂದೆ ಕ್ಷೇತ್ರದ ಎಲ್ಲ ಗ್ರಾಮಗಳಲ್ಲೂ ‘ಜನಸ್ಪಂದನ’ ನಡೆಸಲಾಗುವುದು ಎಂದು ಪ‍್ರಕಟಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರತಿಕ್ರಿಯಿಸಿ, ‘ಯಾವುದೇ ರೀತಿಯ ಕುಂದುಕೊರತೆ ಇದ್ದಲ್ಲಿ ಮನವಿ ಮಾಡಿದರೆ, ಬಗೆಹರಿಸುವಂತಹಗಳನ್ನು ಸ್ಥಳದಲ್ಲಿಯೇ ತಿಳಿಸಲಾಗುವುದು. ಇಲ್ಲದಿದ್ದಲ್ಲಿ, 15 ದಿನದೊಳಗೆ ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಸಲ್ಲಿಕೆಯಾದ ಅರ್ಜಿಗಳ ಪೈಕಿ ವಿರಾಜಪೇಟೆ ಪುರಸಭೆಗೆ ಸಂಬಂಧಿಸಿದಂತೆ 55 ಅರ್ಜಿಗಳು, ಕಂದಾಯ ಇಲಾಖೆ 25 ಅರ್ಜಿಗಳು, ಗ್ರಾಮ ಪಂಚಾಯಿತಿಗಳು 10 ಅರ್ಜಿಗಳು, ಲೋಕೋಪಯೋಗಿ ಇಲಾಖೆ 8 ಅರ್ಜಿಗಳು, ಭೂ ದಾಖಲೆಗಳ ಇಲಾಖೆ 7 ಅರ್ಜಿಗಳು, ಅರಣ್ಯ ಇಲಾಖೆ ಹಾಗೂ ಸೆಸ್ಕ್ ಸಂಬಂಧಿಸಿದಂತೆ ತಲಾ 3 ಅರ್ಜಿಗಳು, ಕೆಎಸ್‍ಆರ್‌ಟಿಸಿ, ಪೊಲೀಸ್ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ತಲಾ 2 ಅರ್ಜಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಲೀಡ್ ಬ್ಯಾಂಕ್, ಕಂದಾಯ ಮತ್ತು ಅರಣ್ಯ, ಪ್ರಾದೇಶಿಕ ಸಾರಿಗೆ, ಪ್ರವಾಸೋದ್ಯಮ ತಲಾ 1 ಅರ್ಜಿ ಸೇರಿದ್ದವು.

ಅಹವಾಲು ಸ್ವೀಕರಿಸಿ ಮಾತನಾಡಿದ ಎ.ಎಸ್.ಪೊನ್ನಣ್ಣ, ‘ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ಶ್ರೇಯೋಭಿವೃದ್ಧಿಗೆ ಗ್ಯಾರಂಟಿ ಯೋಜನೆಗಳ ಜೊತೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರುವತ್ತ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರ ಎಲ್ಲಾ ಜನರ ಏಳಿಗೆಗೆ ಒಂದಲ್ಲ ಒಂದು ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಯಾರೂ ಸಹ ಮುಖ್ಯವಾಹಿನಿಯಿಂದ ದೂರ ಇರಬಾರದು. ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವತ್ತ ಮುನ್ನಡೆಯಬೇಕು’ ಎಂದರು. 

ಇದೇ ಸಂದರ್ಭ ಕಂದಾಯ ಇಲಾಖೆಯಿಂದ ಫಲಾನುಭವಿಗಳಿಗೆ ಪಿಂಚಣಿ ಪತ್ರ ವಿತರಿಸಲಾಯಿತು.

ಪಟ್ಟಣದ ನೆಹರು ನಗರದಲ್ಲಿ ಕುಡಿಯುವ ನೀರು ವಿತರಣಾ ಕೇಂದ್ರ ನಿರ್ಮಿಸಲು ಜಾಗ ನೀಡಿದ ಖಾಸಿಮುಲ್ ಉಲುಂ ಮದರಸಾದ ಅಧ್ಯಕ್ಷ ಅಸ್ಗರ್ ಹುಸೇನ್, ಸಮಿತಿ ಸದಸ್ಯರಾದ ರಾಪೂ ಮತ್ತು ರಫೀಕ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಅಧ್ಯಕ್ಷ ಧರ್ಮಜ ಉತ್ತಪ್ಪ, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಆರ್.ಕೆ ಸಲಾಂ, ಪುರಸಭೆ ಸದಸ್ಯರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ವಿರಾಜಪೇಟೆಯಲ್ಲಿ ಬುಧವಾರ ನಡೆದ ‘ಜನಸ್ಪಂದನ’ದಲ್ಲಿ ಹಿರಿಯ ನಾಗರಿಕರು ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಅಹವಾಲು ಸಲ್ಲಿಸಿದರು
ವಿರಾಜಪೇಟೆಯಲ್ಲಿ ಬುಧವಾರ ನಡೆದ ‘ಜನಸ್ಪಂದನ’ದಲ್ಲಿ ಹಿರಿಯ ನಾಗರಿಕರು ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಅಹವಾಲು ಸಲ್ಲಿಸಿದರು
ಕುಡಿಯುವ ನೀರು ವಿತರಣಾ ಕೇಂದ್ರಕ್ಕೆ ಜಾಗ ನೀಡಿದವರಿಗೆ ಸನ್ಮಾನ ಮನವಿ ಸಲ್ಲಿಸಿದರೆ 15 ದಿನಗಳಲ್ಲೇ ಪರಿಹಾರ ಫಲಾನುಭವಿಗಳಿಗೆ ಪಿಂಚಣಿ ಪತ್ರ ವಿತರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT