ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರಾಜಪೇಟೆ | ಕಡೇ ಬೇಡ್ ನಮ್ಮೆಗೆ ಇಂದು ಚಾಲನೆ

ಜಿಲ್ಲೆಯಾದ್ಯಂತ ನಡೆಯುವ ಬೇಡ್ ನಮ್ಮೆ, ಕುಂದದಿಂದ ಆರಂಭ, ಪಾರಣ ಮಾನಿಲದಲ್ಲಿ ಅಂತ್ಯ
ಹೇಮಂತ್ ಎಂ.ಎನ್.
Published 26 ಮೇ 2024, 5:27 IST
Last Updated 26 ಮೇ 2024, 5:27 IST
ಅಕ್ಷರ ಗಾತ್ರ

ವಿರಾಜಪೇಟೆ: ಸಂಸ್ಕೃತಿ ಹಾಗೂ ವಿಶಿಷ್ಟ ಆಚರಣೆಗಳಿಗೆ ಹೆಸರಾದ ಜಿಲ್ಲೆ ಕೊಡಗು. ಇಲ್ಲಿ ಆಚರಣೆಗಳ ಪೈಕಿ ಅತ್ಯಂತ  ಬೋಡು ನಮ್ಮೆ ವಿಶಿಷ್ಟವಾದುದು. ಜಿಲ್ಲೆಯ ಬೇಡುಹಬ್ಬಗಳ ಪೈಕಿ ಕ‍ಡೇ ಹಬ್ಬವಾಗಿರುವ ಬೇರಳಿನಾಡಿನ ಪಾರಣ ದೊಡ್ಡಹಬ್ಬಕ್ಕೆ ಇಂದು(ಮೇ.26ರಂದು) ಚಾಲನೆ ನೀಡಲಾಗುವುದು.

‘ಕುಂದತ ಬೊಟ್ಟ್ಲ್ ನೇಂದ ಕುದುರೆ ಪಾರಾಣ ಮಾನಿಲ್ ಅಳ್ಂಜ ಕುದುರೆ’(ಕುಂದದಿಂದ ಆರಂಭವಾದ ಕುದುರೆ, ಪಾರಾಣ ಮಾನಿಲ್‌‌‌ನಲ್ಲಿ ನಾಶವಾದ ಕುದುರೆ) ಎಂಬ ನಾಣ್ನುಡಿಯಂತೆ ಕುಂದದಿಂದ ಬೇಡ್ ನಮ್ಮೆ ಆರಂಭವಾಯಿತು. ನಂತರ ಪಾರಾಣ ಮಾನಿಲ್ ನಲ್ಲಿ ಬೇಡ್ ನಮ್ಮೆ ಕಡೆಯದಾಗಿ ಪಾರಾಣ ಮಾನಿಲ್ ನಲ್ಲಿ ನಡೆಯುವುದು ಇದರ ವಿಶಿಷ್ಟ.

ಹಬ್ಬ ಇಂದಿನಿಂದ ಆರಂಭಗೊಂಡು, ಮೇ31 ಹಾಗೂ  ಜೂನ್ 1ರವರೆಗೆ ನಡೆಯಲಿದೆ. ಜೂನ್ 31ರಂದು ಪದ್ಧತಿಯಂತೆ ಕಂಡಂಗಾಲ, ಪೊದಕೇರಿ, ವಿ.ಬಾಡಗ ಹಾಗೂ ಮರೋಡಿ ಗ್ರಾಮದ ಅಂಬಲದಲ್ಲಿ ವೇಷಧಾರಿಗಳು ವಿವಿಧ ವೇಷ ಧರಿಸುತ್ತಾರೆ. ಬಳಿಕ ರಾತ್ರಿಯಿಂದಲೇ ವೇಷಧಾರಿಗಳು ನಾಡಿನ ಮನೆ ಮನೆಗೆ ತೆರಳಿ ಜೂನ್1ರಂದು ಬಿದಿರಿನ ಕುದುರೆ ಹಾಗೂ ಆನೆಯನ್ನು ಸಿಂಗರಿಸಿ ಮೆರವಣಿಗೆಯೊಂದಿಗೆ ಪಾರಣ ಮಾನಿಗೆ ತೆರಳಿ ಹಬ್ಬಕ್ಕೆ ವಿದಾಯ ಹೇಳುವುದು ವಾಡಿಕೆ. ಸಾಮಾನ್ಯವಾಗಿ ವೇಷಧಾರಿಗಳು ಮಹಿಳೆ, ಕೆಲಸಗಾರರ ವೇಷಗಳನ್ನು ಧರಿಸಿ ಸಂಭ್ರಮಿಸುತ್ತಾರೆ.

ವಿ.ಬಾಡಗದ ಕಮ್ಮರಟಪ್ಪ, ಪೊದಕೇರಿಯ ಈಶ್ವರ ಅಂಬಲ ಹಾಗೂ ಕಂಡಂಗಾಲದ ಈಶ್ವರ ಅಂಬಲದಲ್ಲಿ ಕುದುರೆಯ ಪ್ರತಿರೂಪು ಸಿದ್ದಪಡಿಸಿದರೆ, ಪೆಗ್ಗರಿಮಾಡಿನ ಈಶ್ವರ ಅಂಬಲ ಹಾಗೂ ಮರೋಡಿಯ ಈಶ್ವರ ಅಂಬಲ ಆನೆಯ ಪ್ರತಿರೂಪು ಸಿದ್ಧಪಡಿಸಿ ಬಳಿಕ ವಿವಿಧ ಕುಟುಂಬಗಳ ಐನ್ಮನೆಗಳಲ್ಲಿ ಆನೆ-ಕುದುರೆಗಳನ್ನು ಸಿಂಗರಿಸಲಾಗುವುದು. ವೇಷಧಾರಿಗಳು ಜೂನ್1ರಂದು ಅಪರಾಹ್ನದ ಬಳಿಕ ರುದ್ರಗುಪ್ಪೆ ಪಾರಣ ಮಾನಿಗೆ ಬಂದು ಸಾಯಂಕಾಲ ಆನೆ ಹಾಗೂ ಕುದುರೆಗಳ ಪ್ರತಿರೂಪುಗಳನ್ನು ಕಡಿದು ದೇವರಿಗೆ ಆಹುತಿ ಕೊಡುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.

ಹಿನ್ನೆಲೆ: ಪುರಾತನ ಕಾಲದಲ್ಲಿ ಬೇರಳಿನಾಡಿನಲ್ಲಿದ್ದ ಭಸ್ಮಾಸುರನೆಂಬ ರಾಕ್ಷಸ ಈಶ್ವರನನ್ನು ಘೋರ ತಪಸ್ಸಿನ ಮೂಲಕ ಒಲಿಸಿಕೊಂಡು ತಾನು ತಲೆಯ ಮೇಲೆ ಕೈಯಿಡುವ ಎಲ್ಲಾ ಮನುಷ್ಯರು ಭಸ್ಮವಾಗಿಸುವ ವರವನ್ನು ಪಡೆದುಕೊಳ್ಳುತ್ತಾನೆ.

ಪ್ರಯೋಗಾರ್ಥವಾಗಿ ವರ ನೀಡಿದ ಈಶ್ವರನ ತಲೆಯ ಮೇಲೆಯೇ ಕೈಯಿಡಲು ಭಸ್ಮಾಸುರನು ಮುಂದಾಗುತ್ತಾನೆ. ಆಗ ಭಸ್ಮಾಸುರನಿಂದ ರಕ್ಷಿಸಿಕೊಳ್ಳಲು ಈಶ್ವರನು ವಿಷ್ಣು ದೇವರನ್ನು ಪ್ರಾರ್ಥಿಸುತ್ತಾನೆ. ಪ್ರತ್ಯಕ್ಷನಾದ ಮಹಾವಿಷ್ಣು ಕೊಟ್ಟ ವರವನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಕುದುರೆ ಹಾಗೂ ಆನೆಗಳ ಯಾಗವನ್ನು ನಡೆಸಿ ಆಹುತಿ ನೀಡುವ ಮೂಲಕ ಭಸ್ಮಾಸುರನನ್ನು ಸಂಹರಿಸಬಹುದೆಂದು ಈಶ್ವರನಿಗೆ ಸಲಹೆ ನೀಡುತ್ತಾನೆ.

ಈ ಪ್ರತೀತಿಯಂತೆ ಬೇರಳಿನಾಡಿನ ಜನ ಇಂದಿಗೂ ಪ್ರತಿ ವರ್ಷ ಹಬ್ಬ ಆಚರಿಸುತ್ತಿದ್ದಾರೆ. ಅದರಂತೆ ನಾಡಿನ 5 ನಿಗದಿತ ಸ್ಥಳಗಳಿಂದ ಸಿಂಗರಿಸಿದ ಕುದುರೆ ಹಾಗೂ ಆನೆಗಳ ಪ್ರತಿರೂಪಗಳೊಂದಿಗೆ ವಿವಿಧ ವೇಷದೊಂದಿಗೆ ಹೊರಡುವ ಬೇರಳಿನಾಡಿನ ಜನ ಪಾರಣಮಾನಿ ಎಂಬಲ್ಲಿ ಭಸ್ಮಾಸುರನನ್ನು ಕೊಲ್ಲುವ ಮೂಲಕ ಕುದುರೆ ಹಾಗೂ ಆನೆಯ ಪ್ರತಿರೂಪ ಸಾಂಕೇತಿಕವಾಗಿ ಆಹುತಿ ನೀಡುತ್ತಾರೆ.

 ಜಿಲ್ಲೆಯಲ್ಲಿ ನಡೆಯುವ ಇತರ ಬೇಡು ಹಬ್ಬಗಳಂತೆ ಇಲ್ಲಿ ಬಿದಿರಿನ ಕುದುರೆ ಹಾಗೂ ಆನೆಯನ್ನು ಉತ್ಸವದ ನಂತರ ವಾಪಾಸು ಮನೆಗೆ ತಂದು ರಕ್ಷಿಸಲಾಗುವುದಿಲ್ಲ. ಬದಲಾಗಿ ಉತ್ಸವ ಕಳೆದ ನಂತರ ಸಾಯಂಕಾಲ ಕುದುರೆ ಹಾಗೂ ಆನೆಗಳ ಪ್ರತಿರೂಪ ಕಡಿದು ದೇವರಿಗೆ ಆಹುತಿ ಕೊಡಲಾಗುವುದು.

ಕುದುರೆ ಪುಂಡ: ದೇವರ ಕುದುರೆ ಹಾಗೂ ಆನೆಯನ್ನು ತಯಾರಿಸಲು ವಿ.ಬಾಡಗ ಕಮ್ಮರಟಪ್ಪ ಅಂಬಲದ ಪಕ್ಕದ ಕುದುರೆ ಪುಂಡ(ದೇವರ ಬಿದಿರು) ಗುಡ್ಡೆಯಿಂದ ತಲಾ 1ರಂತೆ 5 ಬಿದಿರನ್ನು ಕಡಿದು ಕುದುರೆ ಹಾಗೂ ಆನೆ ತಯಾರಿಸಲಾಗುತ್ತದೆ.

ಈ ಬಿದಿರನ್ನು ನಂತರದ ದಿನದಲ್ಲಿ ಯಾರು ಬಳಸುವುದಿಲ್ಲ. ಪ್ರಕೃತಿಯ ಅಸಮತೋಲನ ನಿಯಮದಂತೆ 40 ವರ್ಷಕ್ಕೊಮ್ಮೆ ಕೊಡಗಿನಾದ್ಯಂತ ಬಿದಿರು ಹೂ ಬಿಟ್ಟು ನಾಶವಾಗುತ್ತದೆ. ಆದರೆ, ಈ ದೇವರ ಬಿದಿರು ಯಾವುದೇ ಕಾರಣಕ್ಕೂ ನಾಶವಾಗುವುದಿಲ್ಲ, ದೇವರಿದ್ದಾರೆ ಎಂಬುವುದಕ್ಕೆ ಈ ಬಿದಿರು ಸಾಕ್ಷಿಯಾಗಿದೆ, ಎನ್ನವ ನಂಬಿಕೆ ಇಲ್ಲಿನ ಜನರಲ್ಲಿದೆ.
 

ವಿರಾಜಪೇಟೆ ಸಮೀಪದ ಬೇರಳಿನಾಡಿನ ಪಾರಣ ಬೇಡು ಹಬ್ಬದ ಕೊನೆಯ ದಿನ ಆನೆ ಹಾಗೂ ಕುದುರೆಯ ಪ್ರತಿರೂಪುಗಳು ಪಾರಣ ಮಾನಿಯಲ್ಲಿ ಬಂದು ಸೇರುತ್ತವೆ (ಸಂಗ್ರಹ ಚಿತ್ರ)
ವಿರಾಜಪೇಟೆ ಸಮೀಪದ ಬೇರಳಿನಾಡಿನ ಪಾರಣ ಬೇಡು ಹಬ್ಬದ ಕೊನೆಯ ದಿನ ಆನೆ ಹಾಗೂ ಕುದುರೆಯ ಪ್ರತಿರೂಪುಗಳು ಪಾರಣ ಮಾನಿಯಲ್ಲಿ ಬಂದು ಸೇರುತ್ತವೆ (ಸಂಗ್ರಹ ಚಿತ್ರ)
ಪಾರಣ ಬೇಡು ಹಬ್ಬದ ವೇಷಧಾರಿಗಳು (ಸಂಗ್ರಹ ಚಿತ್ರ)
ಪಾರಣ ಬೇಡು ಹಬ್ಬದ ವೇಷಧಾರಿಗಳು (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT