ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು: ಮುಂಗಾರಿನ ಪ್ರವೇಶಕ್ಕೂ ಮುನ್ನವೇ ಬಿರುಸಿನ ಮಳೆ

ತಿತಿಮತಿಯಲ್ಲಿ 6 ಸೆಂ.ಮೀ ಧಾರಾಕಾರ ಮಳೆ, ಕುಶಾಲನಗರದಲ್ಲೂ ಭಾರಿ ವರ್ಷಧಾರೆ
Published 21 ಮೇ 2024, 6:19 IST
Last Updated 21 ಮೇ 2024, 6:19 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಎಲ್ಲೆಡೆ ಮುಂಗಾರು ಪ್ರವೇಶಕ್ಕೂ ಮುನ್ನವೇ ಮುಂಗಾರಿನಂತೆ ಮಳೆ ಸುರಿಯುತ್ತಿದೆ. ಧೋ ಎಂದು ಸುರಿಯುವ ಮಳೆಯನ್ನು ನೋಡಿದರೆ ಇದು ಮುಂಗಾರು ಮಳೆ ಎಂದು ಅನ್ನಿಸುವಂತೆ ಧಾರಾಕಾರವಾಗಿ ಮುಂದುವರಿದಿದೆ.

ಕೊಡಗಿನ ಉತ್ತರ ಮತ್ತು ದಕ್ಷಿಣ ಎರಡೂ ಭಾಗಗಳಲ್ಲೂ ಸೋಮವಾರ ಬಿರುಸಿನಿಂದ ಮಳೆ ಅಬ್ಬರಿಸಿದೆ. ಆದರೆ, ಮಡಿಕೇರಿ ತಾಲ್ಲೂಕಿನಲ್ಲಿ ಹದವಾದ ಮಳೆಯಾಗಿದೆ. ದಕ್ಷಿಣ ಕೊಡಗಿನ ನಾಗರಹೊಳೆ ಅರಣ್ಯದಲ್ಲಿ ಭಾರಿ ಮಳೆಯೇ ಸುರಿದಿದೆ. ಇದರಿಂದ ಒಣಗಿ ನಿಂತಿದ್ದ ಅರಣ್ಯ ಪ್ರದೇಶವು ಮತ್ತೆ ಹಸಿರಿನಿಂದ ನಳನಳಿಸುವಂತಾಗಿದೆ.

ನಾಗರಹೊಳೆ ಅರಣ್ಯದಂಚಿನಲ್ಲಿರುವ ತಿತಿಮತಿಯಲ್ಲಿ 6 ಸೆಂ.ಮೀನಷ್ಟು ಭಾರಿ ಮಳೆಯಾಗಿದೆ. ಇ‌ದರ ಸುತ್ತಮುತ್ತಲ ಪ್ರದೇಶಗಳಲ್ಲೂ ಮಳೆ ಬಿರುಸಿನಿಂದ ಸುರಿದಿದೆ.

ಇತ್ತ ಉತ್ತರ ಕೊಡಗಿನ ಕುಶಾಲನಗರದಲ್ಲಿ ಕೆಲವೇ ಗಂಟೆಗಳಲ್ಲಿ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಗೊಂದಿಬಸವನಹಳ್ಳಿಯ ರಸ್ತೆಗಳು ಕಾಲುವೆಯಂತಾದರೆ, ಗುಮ್ಮನಕೊಲ್ಲಿಯ ಮನೆಗಳ ಸುತ್ತ ನೀರು ನಿಂತು ದ್ವೀಪದಂತಹ ಪರಿಸ್ಥಿತಿ ಕೆಲಕಾಲ ಸೃಷ್ಟಿಯಾಗಿತ್ತು.

ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಕೆಲವೊಂದು ತಯಾರಿಕಾ ಘಟಕಗಳಿಗೂ ನೀರು ನುಗ್ಗಿತು. ಚರಂಡಿಗಳಲ್ಲಿ ಹೆಚ್ಚು ರಭಸವಾಗಿ ಹರಿಯುತ್ತಿದ್ದ ನೀರು ಸುತ್ತಮುತ್ತಲ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಮಡಿಕೇರಿಯಲ್ಲಿ ಮಧ್ಯಾಹ್ನದ ನಂತರ ನಿರಂತರವಾಗಿ ಮಳೆ ಸುರಿಯುತ್ತಿದೆ. ಸುಂಟಿಕೊಪ್ಪ, ಸೋಮವಾರಪೇಟೆಯಲ್ಲೂ ಮಳೆಯಾಗಿದೆ. ನಾಪೋಕ್ಲು ಭಾಗದಲ್ಲಿ ಮಳೆ ಬಿರುಸಿನಿಂದ ಸುರಿದಿದೆ.

ಮಳೆ ವಿವರ: ತಿತಿಮತಿ 6 ಸೆಂ.ಮೀ, ಮಾಲ್ದಾರೆ, ಸಿದ್ದಾಪುರ 5, ಚೆನ್ನಯ್ಯನಕೋಟೆ 4, ದೊಡ್ಡಮಳ್ತೆ,ಗುಡ್ಡೆಹೊಸೂರು 4,  ಪೊನ್ನಪ್ಪಸಂತೆ, ನಂಜರಾಯಪಟ್ಟಣ, ಪೆರಾಜೆ, ಬಲ್ಲಮಾವಟಿ, ಚೆಂಬು, ಹಾರಂಗಿ, ಕಂಬಿಬಾಣೆ 3, ಬೆಂಗೂರು, ಮರಗೋಡು, ಕಡಗದಾಳು, ಕೆದಕಲ್, ಗೋಣಿಕೊಪ್ಪಲು 2, ಕುಟ್ಟ 1.5, ಮದೆ ಗ್ರಾಮದಲ್ಲಿ 1 ಸೆಂ.ಮೀ ಮಳೆ ಸೋಮವಾರ ಸಂಜೆಯವರೆಗೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT