ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜನ ಕುಟುಂಬಕ್ಕೆ ವಿದ್ಯುತ್ ಬಿಲ್‌ ಆಘಾತ!

ಮನೆಯೊಂದಕ್ಕೆ₹ 7,561 ಬಿಲ್‌, ಕೂಲಿಗಾಗಿ ಅಲೆದಾಡುವ ಕುಟುಂಬಕ್ಕೆ ಆಘಾತ
Last Updated 13 ಫೆಬ್ರುವರಿ 2020, 14:23 IST
ಅಕ್ಷರ ಗಾತ್ರ

ಕುಶಾಲನಗರ: ಸೋಮವಾರಪೇಟೆ ತಾಲ್ಲೂಕಿನ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ ನಿರಾಶ್ರಿತ ಗಿರಿಜನ‌ ಕುಟುಂಬಗಳಿಗೆ ವಿದ್ಯುತ್ ಬಿಲ್‌ ಆಘಾತವನ್ನೇ ಉಂಟುಮಾಡಿದೆ.

ದಿಡ್ಡಳ್ಳಿ ನಿರಾಶ್ರಿತ ಕುಟುಂಬಗಳಿಗೆ ಸರ್ಕಾರವು ಬಸವನಹಳ್ಳಿ ಹಾಗೂ ಬ್ಯಾಡಗೊಟ್ಟ ಗ್ರಾಮದಲ್ಲಿ ಮನೆಗಳನ್ನು ನಿರ್ಮಿಸಿ, ವಸತಿ ಸೌಲಭ್ಯ ಕಲ್ಪಿಸಿತ್ತು. ಇಲ್ಲಿನ‌ ಗಿರಿಜನ ಕುಟುಂಬಗಳು ಕಾಫಿ ತೋಟಗಳಲ್ಲಿ ಕೂಲಿ ಮಾಡಿಕೊಂಡು ತಮ್ಮ ಬದುಕು ಕಂಡುಕೊಂಡಿದ್ದರು. ಆದರೆ, ಈಗ ಬ್ಯಾಡಗೊಟ್ಟ ಸುತ್ತಮುತ್ತಲ ಕೂಲಿಗಾಗಿ ಗಿರಿಜನರು ಅಲೆದಾಡುವ ಪರಿಸ್ಥಿತಿಯಿದೆ. ಈಗಲೂ ಇಲ್ಲಿನ ಜನರು ದೂರದ ಕಾಫಿ ತೋಟಗಳಿಗೆ ಜೀಪುಗಳ ಮೂಲಕ ಹೋಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ತಮ್ಮ ಜೀವನ ನಿರ್ವಹಣೆಗಾಗಿ ನಿತ್ಯ ಪರಿತಪಿಸುತ್ತಿರುವ ಇಂಥ ಕುಟುಂಬಗಳಿಗೆ ಚಾಮುಂಡೇಶ್ವರಿ ವಿದ್ಯುತ್ ನಿಗಮ ನೀಡಿರುವ ವಿದ್ಯುತ್ ಬಿಲ್‌ಗೆ ಇಲ್ಲಿನ ಜನರ್ ಶಾಕ್ ಆಗಿದ್ದಾರೆ.

ಪುನರ್ವಸತಿ ಕೇಂದ್ರದಲ್ಲಿರುವ ಮನೆಗಳಿಗೆ ಕನಿಷ್ಠ ಮೂರದಿಂದ ನಾಲ್ಕು ವಿದ್ಯುತ್ ಲೈಟ್ ಪಾಯಿಂಟ್ ಇರಬಹುದು. ಅಲ್ಲದೇ ಈ ಮನೆಗಳಿಗೆ ಸರ್ಕಾರದ ವತಿಯಿಂದಲೇ ಎಲ್‌ಇಡಿ ಬಲ್ಬ್‌ಗಳನ್ನು ನೀಡಲಾಗಿದೆ. ಇಲ್ಲಿನ ಮನೆಗಳಲ್ಲಿ ವಾಷಿಂಗ್‌ ಮಷಿನ್, ಫ್ರಿಜ್, ಮಿಕ್ಸರ್‌ ಇಲ್ಲ. ಪ್ರತಿ ಕುಟುಂಬ ತಿಂಗಳ ಪೂರ್ತಿ ವಿದ್ಯುತ್ ಬಳಸಿದರೆ ಕನಿಷ್ಠ ನಾಲ್ಕು ನೂರುನಿಂದ ಐದು ನೂರು ರೂಪಾಯಿ ಬಿಲ್ಲು ಬರಬಹುದು. ಆದರೆ, ಇಲ್ಲಿನ ಮನೆಯೊಂದಕ್ಕೆ ಸೆಸ್ಕ್‌ ವತಿಯಿಂದ ನೀಡಿರುವ ಬಿಲ್‌ ₹ 7,561!

ಜೊತೆಗೆ ಇತರೆ ಮನೆಗಳಿಗೆ ಸಾವಿರಾರೂ ರೂಪಾಯಿಗಳ ವಿದ್ಯುತ್ (ಶುಲ್ಕ) ಬಿಲ್‌ ನೀಡಿದ್ದಾರೆ. ಅಲ್ಲದೇ ಬಿಲ್‌ ಪೂರ್ಣವಾಗಿ ಪಾವತಿಸದೆ ಹೋದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಸೆಸ್ಕ್‌ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

ವಿದ್ಯುತ್ ಬಿಲ್‌ ನೋಡಿ ಶಾಕ್ ಆಗಿರುವ ಇಲ್ಲಿನ ಜನರು, ಸೆಸ್ಕ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿ ಹೆಚ್ಚು ವಿದ್ಯುತ್ ಬಳಸದೆ ಹೋದರೂ ಕೂಡ ಇಷ್ಟೊಂದು ಬಿಲ್‌ ಹೇಗೆ ಬಂತು ಎಂದು ಪ್ರಶ್ನಿಸಿರುವ ಹಾಡಿ ಮುಖಂಡ ಮುತ್ತ, ಈ ಕೂಡಲೇ ನೀಡಿರುವ ಬಿಲ್‌ ಹಿಂಪಡೆಯಬೇಕು. ಇಲ್ಲದಿದ್ದರೆ ಸೆಸ್ಕ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT