ಗೋಣಿಕೊಪ್ಪಲು: ‘ಕಾಡು ನಮ್ಮ ಉಸಿರು, ನಮ್ಮ ಬದುಕು. ಕಾಡಿನಿಂದ ನಮ್ಮನ್ನು ಹೊರಹಾಕಬೇಡಿ’ ಎಂಬ ಬೇಡಿಕೆಯನ್ನಿಟ್ಟು ಕೊಂಡು ನೂರಾರು ಮಂದಿ ಆದಿವಾಸಿಗಳು ನಾಗರಹೊಳೆ ಅರಣ್ಯ ಇಲಾಖೆಯ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ನಾಗರಹೊಳೆ ಆದಿವಾಸಿ ಜಮ್ಮಾ ಪಾಳೆ ಹಕ್ಕು ಸ್ಥಾಪನಾ ಸಮಿತಿ ನೇತೃತ್ವದಲ್ಲಿ ಇಲ್ಲಿ ಸೇರಿದ ನೂರಾರು ಮಂದಿ ತಮ್ಮನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿದರು.
ಕಾಡನ್ನು ಯಾವತ್ತೂ ಬಿಟ್ಟು ಹೋಗಲು ಆದಿವಾಸಿಗಳು ಇಚ್ಛಿಸುವುದಿಲ್ಲ. ಸ್ಥಳಾಂತರಗೊಳಿಸುವ ಯೋಚನೆಯನ್ನು ತಕ್ಷಣ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ಆದಿವಾಸಿಗಳ ಸಂಸ್ಕೃತಿ ಎಂದರೆ ಅದು ಕಾಡಿನ ಸಂಸ್ಕೃತಿಯೇ ಹೊರತು ನಾಡಿನ ಸಂಸ್ಕೃತಿ ಅಲ್ಲ. ಕಾಡಿನಲ್ಲಿರುವ ಹುಲಿ, ಚಿರತೆ, ಕಾಡೆಮ್ಮೆ, ಕಾಡುಕೋಣ, ಜಿಂಕೆ, ಕಡವೆ ಮೊದಲಾದ ವನ್ಯಜೀವಿಗಳು ನಮ್ಮ ಸಂಸ್ಕೃತಿಯಲ್ಲಿವೆ. ಕಾಡಿನಲ್ಲೇ ಹುಟ್ಟಿ, ಕಾಡಿನಲ್ಲೇ ಮೃತಪಟ್ಟ ನಮ್ಮ ಪೂರ್ವಿಕರ ಸಮಾಧಿಗಳೂ ಇಲ್ಲಿವೆ. ಇವುಗಳಿಲ್ಲದ ಸಂಸ್ಕೃತಿ ಆದಿವಾಸಿಗಳ ಸಂಸ್ಕೃತಿ ಅಲ್ಲ ಎಂದು ಅವರು ಪ್ರತಿಪಾದಿಸಿದರು.
ಈಗ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಏಕಾಏಕಿ ನೋಟಿಸ್ ನೀಡಿ ಕೂಡಲೇ ತೆರವು ಮಾಡಿ ಎಂದು ಹೇಳುತ್ತಿದೆ. ಇದು ನಿಜಕ್ಕೂ ನಮ್ಮ ನಿದ್ದೆಗೆಡಿಸಿದೆ. ನಮ್ಮ ಅಸ್ತಿತ್ವವನ್ನು ಹಾಗೂ ನಮ್ಮ ನೆಲೆಯನ್ನು ಪ್ರಾಧಿಕಾರ ಕಿತ್ತುಕೊಳ್ಳಬಾರದು ಎಂದು ಆಗ್ರಹಿಸಿದರು.
ಅರಣ್ಯ ಹಕ್ಕು ಕಾಯ್ದೆ 2006ರ ಅಡಿಯಲ್ಲಿ ಸಂವಿಧಾನಬದ್ಧವಾಗಿ ಆದಿವಾಸಿಗಳಿಗೆ ವೈಯಕ್ತಿಕ ಹಕ್ಕು, ಸಮುದಾಯದ ಹಕ್ಕು, ಸಮುದಾಯ ಅರಣ್ಯ ಸಂಪನ್ಮೂಲ ಹಕ್ಕು, ಆವಾಸಸ್ಥಾನದ ಹಕ್ಕುಗಳನ್ನು ಪೂರ್ಣ ಪ್ರಮಾಣದಲ್ಲಿ ಮಾನ್ಯ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಕಾಡಿನಲ್ಲಿರುವ ಮೂಲನಿವಾಸಿಗಳಿಗೆ ತಿಳಿಸದೇ, ಗ್ರಾಮಸಭೆಯ ಒಪ್ಪಿಗೆ ಪಡೆಯದೇ ಏಕಾಏಕಿ ನಾಗರಹೊಳೆಯನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿರುವುದೂ ಸರಿಯಲ್ಲ ಎಂದು ಖಂಡಿಸಿದ ಅವರು, ಕೂಡಲೇ ಈ ಜನ ವಿರೋಧಿ ನಿರ್ಣಯವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಎಸಿಎಫ್ ಅನನ್ಯಕುಮಾರ್ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿದರು.
ಅಧ್ಯಕ್ಷ ಜೆ.ಕೆ.ತಿಮ್ಮ, ಕಾರ್ಯದರ್ಶಿ ಶಿವು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಸಿದ್ಧಪ್ಪ, ಮುಖಂಡರು ಪಿ.ಸಿ.ರಾಮು, ಸೋಮಯ್ಯ, ಕಾಳ, ರಾಮು, ಮಲ್ಲಪ್ಪ, 28ಕ್ಕೂ ಅಧಿಕ ಹಳ್ಳಿಗಳ ನಿವಾಸಿಗಳು ಸೇರಿದಂತೆ ಸುಮಾರು 500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಹಲವು ಹಳ್ಳಿಗಳ ಮುಖಂಡರು ಭಾಗಿ ಹೋರಾಟ ಮುಂದುವರಿಸಲು ನಿರ್ಧಾರ ಎಸಿಎಫ್‌ಗೆ ಮನವಿ ಪತ್ರ ಸಲ್ಲಿಕೆ