ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೀರ್ಘ ಬರಹ: ‘ಊರಿಗೆ ಹೋಗಲು ಹೆದರಿಕೆ ಆಗುತ್ತೆ’ ಅಂತಾರೆ ಬದುಕುಳಿದವರು

ಸೊನ್ನೆಯಿಂದ ಬದುಕು ಬರೆಯಲು ಹೊರಟವರು
Last Updated 26 ಆಗಸ್ಟ್ 2018, 9:39 IST
ಅಕ್ಷರ ಗಾತ್ರ

ಲೇಖಕಿ ಉಷಾ ಪ್ರೀತಮ್ ಕೊಡಗು ಜಿಲ್ಲೆ ವಿರಾಜಪೇಟೆಯ ಮಗ್ಗುಲ ಗ್ರಾಮದವರು. ಪತ್ರಿಕೋದ್ಯಮ ಪದವೀಧರೆ. ಸದ್ಯಕ್ಕೆ ಕೊಡಗು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿದ್ದಾರೆ. ‘ಕಣ್ಮುಂದೆಯೇ ಜಾರಿತು ಕಾಫಿನಾಡು’ ಬರಹದ ಮೂಲಕ ಕೊಡಗು ಜಿಲ್ಲೆಯ ವಾಸ್ತವ ಕಟ್ಟಿಕೊಡಲು ಯತ್ನಿಸಿದ್ದ ಉಷಾ, ಪ್ರಸ್ತುತ ಬರಹದಲ್ಲಿ ಕೊಡಗು ಜಿಲ್ಲೆಯ ವಿವಿಧೆಡೆ ಇರುವ ಪುನರ್ವಸತಿ ಶಿಬಿರಗಳಲ್ಲಿರುವವರ ಮನದ ಮಾತುಗಳಿಗೆ ಅಕ್ಷರವಾಗಲು ಪ್ರಯತ್ನಿಸಿದ್ದಾರೆ.

–––

ಕಾಫಿ ಕಣಿವೆಯಲ್ಲಿ ಕೆಲ ದಿನಗಳಿಂದ ಮರೆಯಾಗಿದ್ದ ಸೂರ್ಯ ಈಗ ‘ನಾನಿದ್ದೀನಿ’ ಎಂದು ಅಸ್ಪಷ್ಟವಾಗಿ ಹಾಜರಾತಿ ಹಾಕಲಾರಂಭಿಸಿದ್ದಾನೆ. ಸಾಂತ್ವನ ಕೇಂದ್ರದಲ್ಲಿದ್ದ ಮಕ್ಕಳು ಅಲ್ಲಿಂದಲೇ ಶಾಲೆ ಕಡೆ ಹೆಜ್ಜೆ ಹಾಕಲಾರಂಭಿಸಿದ್ದಾರೆ. ನೊಂದವರನ್ನು ಮೇಲೆತ್ತುವ, ಅವರ ಆರೋಗ್ಯ ಸುಧಾರಿಸುವ ಕೆಲಸಗಳು ಜಿಲ್ಲಾಡಳಿತದಿಂದ, ಸಂಘಸಂಸ್ಥೆಗಳಿಂದ ನಡೆಯುತ್ತಿವೆ. ಕೆಲವರು ತಮ್ಮ ಮನೆಯ ಪಳೆಯುಳಿಕೆ ಗುರುತಿಸುತ್ತಿದ್ದಾರೆ. ಕಳೆದು ಹೋಗಿರುವದಾಖಲಾತಿಗಳಿಗಾಗಿ ತಮ್ಮ ಗ್ರಾಮಗಳಲ್ಲಿ ಮನೆಯಿದ್ದ ಜಾಗವನ್ನು ಅಂದಾಜು ಮಾಡಿ ಅಗೆಯಲಾರಂಭಿಸಿದ್ದಾರೆ. ಆದರೆ, ಬೆಟ್ಟಗಳೇ ಭೂತಕಾರವಾಗಿ ಬಾಯ್ತೆರೆದಿದ್ದನ್ನು ಇನ್ನು ಅವರಿಂದ ಮರೆಯಲು ಆಗುತ್ತಿಲ್ಲ.

ನಾನು ಒಂದು ‘ಸಾಂತ್ವನ ಕೇಂದ್ರ’ಕ್ಕೆ ಭೇಟಿಕೊಟ್ಟೆ. ಕಷ್ಟದ ಸ್ಥಿತಿಯಲ್ಲಿರುವ ಜನರು ನೆರೆದಿರುವ ಈ ಸ್ಥಗಳನ್ನುಗಂಜಿ ಕೇಂದ್ರ ಅಥವಾ ಪುನರ್ವಸತಿ ಕೇಂದ್ರ ಎನ್ನುವ ಪದಗಳಿಗಿಂತ ಸಾಂತ್ವನ ಕೇಂದ್ರ ಎನ್ನುವುದು ಹೆಚ್ಚು ಸೂಕ್ತ ಎಂದುಕೊಂಡಿದ್ದೇನೆ. ಅಲ್ಲಿನ ಜನರನ್ನು ‘ಹೇಗಿದ್ದೀರಾ? ಕಣ್ಣ ಮುಂದೆ ಸದ್ಯಕ್ಕೆ ಏನು ಕಾಣ್ತಿದೆ? ಬದುಕನ್ನು ಸರ್ಕಾರ ಹೇಗೆ ಕಟ್ಟಿಕೊಡಬೇಕು ಎಂದು ಬಯಸುತ್ತೀರಾ? ನಿಮ್ಮ ಊರು ಹೇಗಿತ್ತು? ಈಗ ಹೇಗಿದೆ?’ ಎಂಬುವೂ ಸೇರಿದಂತೆ ಅವರ ಮನಕಲಕುವ ಮತ್ತು ನಮ್ಮ ಮನುಷ್ಯತ್ವವನ್ನು ಪ್ರಶ್ನೆ ಮಾಡುವ ಸಾಕಷ್ಟು ಪ್ರಶ್ನೆಗಳನ್ನು ಕೇಳಿದೆ. ದುಃಖ ಅನುಭವಿಸುತ್ತಿದ್ದ ಅವರಲ್ಲಿ ಕೆಲವರು ಅತ್ತರು, ಕೆಲವರು ಪೆಚ್ಚಾದರು ಮತ್ತು ಕೆಲವರು ಅಸಹಾಯಕರಾದರು. ಅವೆಲ್ಲವನ್ನು ನಿಮಗೆ, ಸರ್ಕಾರಕ್ಕೆ ತಿಳಿಸುವ ನಿಟ್ಟಿನಲ್ಲಿ ಈ ಬರಹ.

ಮಳೆ ಸುರಿಯುತ್ತಲೇ ಇತ್ತು. ಆದರೆ ಯಾರಿಗೂ ಈ ಮಳೆ ಹೀಗೆ ಮಾಡಬಹುದು ಎಂದು ಗೊತ್ತಿರಲಿಲ್ಲ. ಮುಕ್ಕೋಡ್ಲುವಿನ ನಿವಾಸಿಯೊಬ್ಬರು ಹೇಳುವ ಹಾಗೆ,ಈ ವಿಪತ್ತು ಸಂಭವಿಸುವ ಎರಡು ದಿನ ಮೊದಲುಗದ್ದೆಯಾಳದಲ್ಲಿ ಬುಳುಬುಳು ಎಂದು ಸದ್ದಾಗುತ್ತಿತ್ತಂತೆ. ಬೆದರಿದ ಅವರ ಪತ್ನಿ ಯಾವುದೋ ಕಾಡುಪ್ರಾಣಿಯಿರಬಹುದು ಎಂದು ಸುತ್ತ ನೋಡಿ ಯಾರಿಗೂ ಹೇಳದೆ ಸುಮ್ಮನಾಗಿದ್ದರಂತೆ. ಅದೇ ಸಮಯದಲ್ಲಿ ಗದ್ದೆಯಿಂದ ಸುಮಾರು ಮೂರು ಅಡಿ ಎತ್ತರಕ್ಕೆ ಅಲ್ಲಲ್ಲಿ ಮಣ್ಣುಚಿಮ್ಮುತ್ತಿತ್ತಂತೆ.

ಇನು 2ನೇ ಮೊಣ್ಣಂಗೇರಿ ಜನ ಹೇಳುವ ಹಾಗೇ ಯಾರದೋ ಮನೆಯ ಬಳಿ ಧರೆಕುಸಿಯಿತು ಎಂದು ಊರವರೆಲ್ಲ ಹೋಗಿ ನೋಡಿ ಸಾಂತ್ವನ ಹೇಳಿ ಬಂದಿದ್ದರಂತೆ, ತನ್ನ ಹಸುಗೂಸನ್ನು ನೋಡಲು ಬಂದ ಅಪ್ಪ, ಮಳೆಗೆ ನೆಂದ ಸ್ವೆಟರ್ ಅನ್ನು ಸೌದೆಒಲೆಯ ಬಳಿ ಒಣಗಿಸಿಕೊಳ್ಳುತ್ತಿದ್ದ ಅಜ್ಜಿ, ಮಳೆರಜೆಯಿದ್ದ ಕಾರಣ ಮನೆಕಿತ್ತು ಹೋಗುವಂತೆ ಆಟವಾಡುತ್ತಿದ್ದ ಮಕ್ಕಳು, ನೆಂಟರ ಮನೆಗೆ ಹೋಗಿದ್ದ ಗ್ರಾಮದವರು, ಕೊಟ್ಟಿಗೆಯಲ್ಲಿ ಮೇವು ಬಾಯಾಡಿಸುತ್ತಿದ್ದ ದನಕರುಗಳು, ಮನೆಯಾಕೆ ಬಂದು ಆಚೆ ಬಿಡಲಿ ಎಂದು ಕಾಯುತ್ತಿದ್ದ ಕೋಳಿಗಳು ಹೀಗೆ ಕೋಟೆಬೆಟ್ಟದ ತಪ್ಪಲಿನ ಗ್ರಾಮವುಈ ರೀತಿಯ ಜೀವಂತ ಚಿತ್ರಣಗಳ ಜೊತೆ ಇತ್ತು. ಆದರೆ, ಇದ್ದಕ್ಕಿದ್ದಂತೆ ಮನೆಯ ಹಿಂಬದಿಯಿದ್ದ ಬರೆ (ಧರೆ, ಗುಡ್ಡ), ಕಣ್ ಮುಂದೆ ಕಾಣುತ್ತಿದ್ದ ಕೋಟೆಬೆಟ್ಟ ಭೋರ್ಗರೆಯತೊಡಗಿದವು. ನಿಂತನೆಲ ಅಲುಗಲಾರಂಭಿಸಿತು, ಕ್ಷಣಾರ್ಧದಲ್ಲಿ ಮನೆಯೊಳಗೆ ನೀರು, ಕೆಸರು, ಕೆಲವರ ಮನೆಗಳೂ ಕಣ್ಣಮುಂದೆಯೇ ಕೊಚ್ಚಿಹೋದವು.

ಅಲ್ಲಿಂದ ಹೆದರಿ, ಕಾಲ್ಕಕ್ಕಿತ್ತ ಮಂದಿ ತಾಸುಗಟ್ಟಲೇ, ದಿನಗಟ್ಟಲೇ ಹೆಲಿಕಾಫ್ಟರ್ ಬಂದು ನಮ್ಮನ್ನೆಲ್ಲಾ ಕಾಪಾಡುತ್ತದೆ ಎಂದು ಕಾಯ್ದಿದ್ದಾರೆ. ಇನ್ನು ಕೆಲವರು ಜೋರು ಸದ್ದುಮಾಡುತ್ತಾ, ಜಾರುತ್ತಾ ತಮ್ಮ ಊರನ್ನು ನುಂಗಲು ಬರುತ್ತಿದ್ದ ಬೆಟ್ಟರಾಕ್ಷಸನನ್ನೇ ಏರಿದ್ದಾರೆ. ಚೆನ್ನಾಗಿ ಇದ್ದ ಜಾಗದಲ್ಲಿ ಏಳುತ್ತಾ, ಬೀಳುತ್ತಾ ಚೀರುತ್ತಾ, ಆರ್ತನಾದ ಮಾಡುತ್ತಾ, ಕೆಸರಲ್ಲಿ ಹೂತು ಹೋದ ಕಾಲನ್ನು ಬಲವಂತವಾಗಿ ಮಣ್ಣಿನಿಂದ ಹೊರತೆಗೆಯುತ್ತಾ, ಕಾಲಿಗೆ ಕಚ್ಚಿದ ಇಂಬಳವನ್ನು ಲೆಕ್ಕಿಸದೆ ಜೀವ ಉಳಿಸಿಕೊಳ್ಳಲು ಸಾವಿನ ಹಾದಿಯಲ್ಲಿ ಮೈಲಿಗಟ್ಟಲೇ ನಡೆದೆ ಸಾಗಿದ್ದಾರೆ.

ತಮ್ಮ ಕಣ್ ಮುಂದೆಯೇ ಶತಮಾನಗಳಿಂದ ಇದ್ದ ಕೋಟೆಬೆಟ್ಟವುಒಂದು ಸುಳಿವನ್ನು ಕೊಡದೆ, ಮುಕ್ಕೋಡ್ಲು, ದೇವಸ್ತೂರು, ಮಕ್ಕಂದೂರು, ಕಾಲೂರು, ಜೋಡುಪಾಲ ಉದಯಗಿರಿ, 2ನೇ ಮೊಣ್ಣಂಗೇರಿ ಗ್ರಾಮಗಳನ್ನು ಮಣ್ಣು, ಕೆಸರಿನಿಂದ ಬಾಚಿ ತಬ್ಬಿ ತೆಗೆದುಕೊಂಡು ಹೋಗಲು ಬಂದಾಗ ದಿಕ್ಕೆಟ್ಟು ಓಡಿದ್ದಾರೆ. ವಯಸ್ಸಾದ ತಾಯಿಯನ್ನು ಮಗನೊಬ್ಬ ತಲೆಗೆ ಹಾಕಿಕೊಳ್ಳುವ ಪ್ಲಾಸ್ಟಿಕ್ ಶೀಟ್ ಮೇಲೆ ಮಲಗಿಸಿ ದರದರ ಎಳೆದುಕೊಂಡು ಬಂದಿದ್ದಾನೆ. ತಾಯಿಯ ಬೆನ್ನು ಚರ್ಮ ಕಿತ್ತು ಬರುವುದನ್ನು ನೋಡಿದರೂ ಅವನು ಅಸಹಾಯಕ. ಕಷ್ಟಪಡ್ಡು ತಾಯಿಯನ್ನು ಊರಿನಿಂದ ಹೊರಗೆ ಕರೆದುಕೊಂಡು ಬಂದು ಜೀವ ಕಾಪಾಡಿದ್ದಾನೆ.

ಮಗು ಜನಿಸಿ 12 ದಿನವಷ್ಟೇ ಆಗಿತ್ತು, ಸಿಸೇರಿಯನ್ ಬೇರೆ, ಗ್ರಾಮದವರೆಲ್ಲ ಊರು ತೊರೆದಾಗ ತನ್ನ ಹಸುಗೂಸನ್ನು ಉಳಿಸಿಕೊಂಡು ಬಾಳುವ ನಿರೀಕ್ಷೆಯಲ್ಲಿ ಕೋಟೆಬೆಟ್ಟವನ್ನು ಹತ್ತಿದಾಗ ಮಳೆನೀರು ಕುಡಿದ ಮಗು ತಾಯಿಯ ಕೈಲೇ ಉಸಿರು ಚೆಲ್ಲಿದೆ. ಆ ತಾಯಿ ಭೂಮಿಬಿರಿಯುವಂತೆ ಅತ್ತಿದ್ದಾಳೆ, ಮಳೆಯಲ್ಲಿ ಆಕೆಯ ಕಣ್ಣೀರು ಯಾವುದು? ಮಳೆನೀರು ಯಾವುದು ಗೊತ್ತಾಗಲೇ ಇಲ್ಲ. ಆಕೆಗೋ ಸಿಸೇರಿಯನ್ ಹೆರಿಗೆ, ಹೊಲಿಗೆಗಳು ಬಿಚ್ಚಿಹೋಗಿ, ದಾರಿಯುದ್ದಕ್ಕೂ ರಕ್ತಸ್ರಾವವಾಗಿದೆ. ಅಂತು-ಇಂತು ತಾಯಿಯ ಜೀವ ಬದುಕಿ ಉಳಿದಿದೆ. ‘ನಾನು ಉಳಿದದ್ದು ಯಾವ ಸಂತಸಕೆ’ ಎನ್ನುವಂತಿದೆ ಆಕೆಯ ಕಣ್ಣಲ್ಲಿ ಒಸರುತ್ತಿರುವ ನೀರು.

ಕೋಟೆಬೆಟ್ಟದಲ್ಲಿ ಹುಚ್ಚುರಾಕ್ಷಸನಂತೆ ಅಬ್ಬರಿಸುತ್ತಿದ್ದ ಮಳೆ, ರಭಸವಾದ ಗಾಳಿ, ಡಮರುಗದಂತೆ ಸದ್ದು ಮಾಡುತ್ತಾ ಉರುಳಿ ಬೀಳುವಬೆಟ್ಟದ ಸದ್ದು ಕೇಳಸಿಕೊಂಡು ಹೆದರಿ ಓಡುತ್ತಿದ್ದವರುದಾರಿ ತಿಳಿಯದೆ ಸುತ್ತಿ ಬಳಸಿ ಮೊದಲ್ಲಿದ್ದ ಜಾಗಕ್ಕೆ ಬಂದು ನಿಲ್ಲುತ್ತಿದ್ದರು.ದಾರಿಯಲ್ಲಿ ನೀರಿನ ಕೊಲ್ಲಿಗಳು, ಸಣ್ಣ ಜಲಪಾತಗಳು ಧುತ್ ಎಂದು ಎದುರಾಗುತ್ತಿದ್ದವು. ಆಗೆಲ್ಲಾ ವಯಸ್ಸಾದವರು ತಮ್ಮ ಮಕ್ಕಳನ್ನು ‘ನಮ್ಮನ್ನು ಇಲ್ಲೇ ಬಿಟ್ಟು ಹೋಗಿ ನಾವಿಲ್ಲೇ ಸಾಯುತ್ತೇವೆ’ ಎಂದು ದಯಾಮರಣ ನೀಡಿ ಎನ್ನುವ ಮಾದರಿಯಲ್ಲಿ ಬೇಡಿಕೊಂಡಿದ್ದಾರೆ. ಆದರೆ ಅದಕ್ಕೊಪ್ಪದ ಮಕ್ಕಳು ಎಷ್ಟೇ ಕಷ್ಟವಾದರೂ ಸರಿ ಎಂದು ತಂದೆತಾಯಿಯರನ್ನು ಶ್ರವಣಕುಮಾರರಂತೆ ಕಾಪಾಡಿಕೊಂಡಿದ್ದಾರೆ. ಈಗ ಸಂತ್ರಸ್ಥರ ಶಿಬಿರಗಳಲ್ಲಿ ಪುಟ್ಟಮಕ್ಕಳನ್ನು ರಕ್ಷಿಸುವ ಹಾಗೇ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.

ವಿರಾಜಪೇಟೆಯಲ್ಲಿ ಕುಳಿತು ಈ ಬರಹ ಬರೆಯುತ್ತಿದ್ದೇನೆ. ನೆಲ ಗಟ್ಟಿಯಿರುವ ಈ ಜಾಗದಲ್ಲಿ ಕುಳಿತವಳಿಗೆ ಕೊಡಗಿನ ಈ ಅನುಭವಗಳುಯಾವುದೋ ಇಂಗ್ಲಿಷ್ ಸಿನಿಮಾ ನೋಡಿದ ಹಾಗೆ, ಪ್ರಪಂಚದ ‘ಗ್ರೇಟ್ ಎಸ್ಕೇಪ್’ ಘಟನೆಗಳ ಕುರಿತಾದ ಕಾದಂಬರಿಯ ಪುಟಗಳನ್ನು ತಿರುವಿಹಾಕಿದಂತೆ ಅನ್ನಿಸುತ್ತಿದೆ. ಆದರೆ ನಮ್ಮ ಊರಿನಿಂದ ಕೇವಲ 50 ರಿಂದ 60 ಕಿಲೋಮೀಟರ್ ಅಂತರದಲ್ಲಿರಲ್ಲಿರುವ ಊರಿನಲ್ಲಿ ಇವೆಲ್ಲವೂ ಜರುಗಿದೆ.

ಇದು ಸತ್ಯ. ಆದರೆ ತಮ್ಮ ಕಣ್ಣೆದುರೆ ಕೊಚ್ಚಿಹೋದ ಬದುಕನ್ನು ಕಂಡ ಜನ ಭೀತರಾಗಿದ್ದಾರೆ. ಕಳೆದುಹೋದ ತಮ್ಮ ಮನೆ, ಜಾಗ, ಬದುಕನ್ನು ತಡಕಾಡುತ್ತಿದ್ದಾರೆ. ನಿಂತ ನೆಲವು ತಮ್ಮದಲ್ಲ, ಹಾಕಲು ಬಟ್ಟೆಯಿಲ್ಲ, ಮಕ್ಕಳ ಓದು, ಭವಿಷ್ಯ, ಬದುಕುವ ಬಗ್ಗೆ ಹೇಗೆ ಎಂದು ಚಿಂತಿತರಾಗಿದ್ದಾರೆ. ಸರ್ಕಾರ ಈಗ ಒದಗಿಸಿರುವ ಸಾಂತ್ವನ ಕೇಂದ್ರ, ಬಟ್ಟೆಬರೆ, ಊಟ ಎಲ್ಲವು ಎಷ್ಟು ದಿನ, ಸೊನ್ನೆಯಿಂದ ಬದುಕು ಶುರು ಮಾಡುವುದು ಹೇಗೆ? ಎಂಬ ಚಿಂತೆ ಅವರ ಕಣ್ಣುಗಳಲ್ಲಿ ಕಾಣುತ್ತಿದೆ. ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರೆಲ್ಲ, ದುಡಿಯಲು ತೋಟಗಳೇ ಇಲ್ಲವಲ್ಲ. ನಮಗೆ ಕೆಲಸ ನೀಡುತ್ತಿದ್ದವರು ನಮ್ಮೊಂದಿಗೆ ನಿರಾಶ್ರಿತರ ಶಿಬಿರಗಳಿದ್ದಾರಲ್ಲ ಎಂದು ಕೊರಗಿ ಕೃಶವಾಗುತ್ತಿದ್ದಾರೆ. ಅವರ ಬದುಕು ಬೀದಿಗೆ ಬಿದ್ದಿದ್ದು, ಅವರು ಬದುಕಿ ಬಂದಿದ್ದು, ಇಲ್ಲೀತನಕದ್ದು ಒಂದು ಕತೆಯಾದರೆ, ಮುಂದೇನು ಎನ್ನುವುದು ಎಲ್ಲರೂ ಯೋಚಿಸಲೇಬೇಕಾದ ವಿಚಾರ.

ಏಕೆಂದರೆ, ನಮ್ಮ ಸರ್ಕಾರಗಳಿಗೆ ನೈಸರ್ಗಿಕ ವಿಕೋಪಗಳಿಂದ ನೆಲೆ ಕಳೆದುಕೊಂಡವರಜೀವನವನ್ನು ಪುನರ್ ನಿರ್ಮಾಣ ಮಾಡುವ ಸೂಕ್ಷ್ಮತೆ ಗೊತ್ತಿಲ್ಲ. ಏಕೆಂದರೆ, ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ 50 ವರ್ಷಗಳ ಹಿಂದಕ್ಕೆ ಮರಳಿರುವ ಅವರ ಬದುಕನ್ನು ಹಂದಿಗೂಡಿನಂತೆ ಸಾವಿರ ಮನೆಕಟ್ಟುವುದರಿಂದ ಸರಿಪಡಿಸಲು ಆಗುವುದಿಲ್ಲ.

ನಿಜವಾಗಿ ಸಂತ್ರಸ್ಥರ ಮನದಲ್ಲಿ ಏನಿದೆ? ಎನ್ನುವುದು ಪರಿಹಾರ ಕೊಡಲು ಯತ್ನಿಸುತ್ತಿರುವವರಿಗೆ ತಿಳಿಯಬೇಕು. ಅವರ ಸಂಸ್ಕೃತಿಗೆ ಧಕ್ಕೆ ಬಾರದ ರೀತಿಯಲ್ಲಿ ಪುನರ್ವಸತಿ ಕಲ್ಪಿಸಿದರೆ ಯಾವ ಸಮಸ್ಯೆಯೂ ಆಗುವುದಿಲ್ಲ. ಏಕೆಂದರೆ, ಅವರೆಲ್ಲರೂ ನಿನ್ನೆ ಮೊನ್ನೆವರೆಗೆ ಇದೇ ಸಮಾಜದ ನಡುವೆ ಗೌರವದಿಂದ ಬಾಳಿದವರು. ನಮ್ಮ ಬದುಕಿನ ಅಂಗವಾಗಿದ್ದವರು. ಇಂದು ಅವರನ್ನು ಸಮಾಜದ ತ್ಯಾಜ್ಯಗಳ ಮಾದರಿಯಲ್ಲಿ ನೋಡುವುದು ಮಾನವೀಯತೆಯಲ್ಲ. ಮನುಷ್ಯತ್ವಕ್ಕೆ ಶೋಭೆ ತರುವಂಥದ್ದೂ ಅಲ್ಲ. ಈ ಉದ್ದೇಶದಿಂದಲೇ ‘ಸಂತ್ರಸ್ಥರು ಏನಂತಾರೆ’ ಎನ್ನುವ ಮಾಹಿತಿಯನ್ನು ಈ ಮೂಲಕ ಸರ್ಕಾರ, ಮುಖ್ಯಮಂತ್ರಿಗಳು, ಸಿನಿಮಾಮಂದಿ, ಸಂತ್ರಸ್ಥರಿಗೆ ಸಹಾಯ ಮಾಡಬಯಸುವವರು, ಗ್ರಾಮದತ್ತು ತೆಗೆದುಕೊಳ್ಳುವವರು, ದಾನಿಗಳು, ಸಮಸ್ತ ಕರ್ನಾಟಕದ ಜನತೆಯ ಎದುರು ಇಡಲು ಬಯಸುತ್ತೇನೆ.

ನಮ್ಮ ಮಕ್ಕಳು ಶಾಲೆಗೆ ಹೋಗಬೇಕು

ಮಕ್ಕಂದೂರು ನಿವಾಸಿ ಶಿವಪ್ಪ ಅವರು ತಮ್ಮ ಮನೆ, ಜಮೀನು, ಜಾನುವಾರು ಎಲ್ಲವನ್ನು ಕಳೆದುಕೊಂಡಿದ್ದಾರೆ. ಈ ಊರಿನಬಹುತೇಕ ನಿವಾಸಿಗಳದ್ದು ಇದೇಕಥೆ. ಕೆಲವರುಮೂರು ಎಕರೆ, ಐದು ಎಕರೆ ಕಾಫಿತೋಟ ಇದ್ದವರು, ಕೂಲಿಕೆಲಸ ಮಾಡುವವರು, ಆಟೊ ಓಡಿಸುವವರು...ಹೀಗೆ ನಾನಾಸ್ತರದ ಜನರಿದ್ದರು. ಇಂದು ಈ ಊರುಗಳಿಲ್ಲ, ಬೆಟ್ಟ ಇನ್ನೂ ಸದ್ದು ಮಾಡುತ್ತಲೇ ಇದೆ. ತಾವು ಹುಟ್ಟಿಬೆಳೆದ ಈ ಊರೆಂದರೆ ಈಗವರಿಗೆ ಭಯ. ಅಲ್ಲಿ ನಾವು ಹೇಗೆ ಹೋಗಿ ಯಾವ ಧೈರ್ಯದಲ್ಲಿ ಬದುಕುವುದು? ನಮಗೆ ಆ ಊರು ಬೇಡವೇ ಬೇಡ. ನಮ್ಮ ಮಕ್ಕಳು ಶಾಲೆಗೆ ಹೋಗಬೇಕು ಎಂದು ಮನದಾಳ ಹಂಚಿಕೊಳ್ಳುತ್ತಾರೆ.

ನಮಗೆ ಈಗ ಮನೆಯಿಲ್ಲ. ಜಮೀನಿನ ದಾಖಲೆಗಳು, ಆಧಾರ್‌ಕಾರ್ಡ್, ರೇಶನ್‍ಕಾರ್ಡ್ ಕಳೆದುಹೋಗಿವೆ. ಮಕ್ಕಳ ಪುಸ್ತಕಗಳು ಹಾಳಾಗಿವೆ. ಕೊಡಗಿನಿಂದ ಹೊರಗೆ ಹೋಗಲು ಇಷ್ಟವಿಲ್ಲ. ನಮಗೆ ಗೊತ್ತಿರುವುದು ತೋಟದ ಕೆಲಸ ಮಾತ್ರ. ಬೇರೆ ಕಡೆ ಹೋದರೆಆ ಜನ ನಮ್ಮನ್ನು ಸ್ವೀಕಾರ ಮಾಡ್ತಾರೆ ಎನ್ನುವ ನಂಬಿಕೆ ಇಲ್ಲ. ಮುಕ್ಕೋಡ್ಲು ಜನರೆಲ್ಲರಿಗೂ ಸರ್ಕಾರ ಒಂದು ಕಡೆ ಸಮತಟ್ಟಾದ ಜಾಗದಲ್ಲಿ ಮನೆ ಕಟ್ಟಿಕೊಡಲಿ, ನಮ್ಮಲ್ಲಿ ಓದಿದ ಮಕ್ಕಳಿಗೆ ಏನಾದ್ರು ಉದ್ಯೋಗ, ಗಂಡಸರಿಗೂ ಏನಾದ್ರು ಕೆಲಸ ಕೊಡಲಿ. ಅದುಬಿಟ್ಟು ಬೇರೆ ಜಿಲ್ಲೆಗೆ ನಾವು ಹೋಗಿ ಬದುಕುವುದಕ್ಕಿಂತ ಜೀವದಲ್ಲಿ ಇಲ್ಲದಿರುವುದೆ ಒಳ್ಳೆಯದು.

ಇಲ್ಲಿರುವವರು ಕೊಡಗು ತೊರೆಯಲು ತಯಾರಿಲ್ಲ. ನಮ್ಮ ಜಿಲ್ಲೆಯಲ್ಲಿ ಕಷ್ಟವೋ ಸುಖವೋ ಹೇಗಾದರೂ ಬದುಕಬಹುದು. ಹೊರಗೆ ಹೋಗಿ ನಾವು ಉಳಿಯುವುದು ಹೇಗೆ ಎನ್ನುವುದು ಅವರ ಪ್ರಶ್ನೆ. ಜೀವನವಿಡಿ ಒಂದೆಡೆಯೇ ಬದುಕಿರುವ ಜನರಿಗೆಒಂದೇ ಸ್ಥಳದಲ್ಲಿ ಬದುಕುಕಟ್ಟಿಕೊಳ್ಳಲು ಸರ್ಕಾರ ನೆರವಾಗಬೇಕು. ಅವರ ಕೌಶಲಕ್ಕೆ ತಕ್ಕ ಉದ್ಯೋಗ ಒದಗಿಸುವ ಪ್ರಯತ್ನಗಳು ನಡೆಯಬೇಕು.

ಮಡಿಕೇರಿ ಬಡಾವಣೆ ನಿವಾಸಿಗಳ ಗೋಳು

ಮಡಿಕೇರಿಯ ವಿನಾಯಕ ಬಡಾವಣೆ, ಇಂದಿರಾನಗರ, ಚಾಮುಂಡೇಶ್ವರಿ ನಗರಗಳಲ್ಲಿ ಭೂ ಕುಸಿತ ಸಂಭವಿಸಿದೆ,ಮನೆಯೊಳಗೆ ಜಲ ಉಕ್ಕಿದೆ, ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ರಸ್ತೆಗಳು ಮುಚ್ಚಿಹೋಗಿವೆ. ಹಲವರ ಮನೆಗಳು ನೆಲಕಚ್ಚಿವೆ. ಮೂರುಕಾಸು ಆರುಕಾಸು ದುಡ್ಡು ಕೂಡಿಟ್ಟು, ಬ್ಯಾಂಕ್ ಸಾಲ ಮಾಡಿ ಮನೆಕಟ್ಟಿದವರು ಕಂಗಾಲಾಗಿದ್ದಾರೆ.ಶತಮಾನಗಳಷ್ಟು ಹಳೆಯದಾದ ಮನೆಗಳು ಅಪಾಯದಲ್ಲಿವೆ. ಸದ್ಯಕ್ಕೆ ಸಾಂತ್ವನ ಕೇಂದ್ರದಲ್ಲಿರುವ ಇವರು ಸುತರಾಂ ತಮ್ಮ ಆ ಭಯಾನಕ ಬಡಾವಣೆಗಳಿಗೆ ಹೋಗಿ ಬದುಕಲು ತಯಾರಿಲ್ಲ. ‘ನಾವು ಸಾಯಲು ಅಲ್ಲಿ ಹೋಗಬೇಕಾ’ ಎಂದು ಪ್ರಶ್ನಿಸುತ್ತಾರೆ. ನಮಗೆ ಮನೆಕಟ್ಟಿಕೊಳ್ಳಲು ಬೇರೆ ಕಡೆ ಜಾಗ ಕೊಡಬೇಕು. ನಮ್ಮ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡಬೇಕು. ನಮ್ಮ ಸಂಘದ ಸಾಲ ಮನ್ನಾ ಮಾಡಬೇಕು. ನಮಗೆ ಆ ಏರಿಯಾಗಳು ಬೇಡವೇ ಬೇಡ ಎನ್ನುತ್ತಿದ್ದಾರೆ. ಅಲ್ಲದೆ ಮಕ್ಕಳಿಗೆ ಓದುವ ವ್ಯವಸ್ಥೆ, ಉದ್ಯೋಗ ಬೇಕು ಎನ್ನುವುದು ಇವರ ವಾದ.

ಗಾಳಿಬೀಡುವಿನ ಒಣಚಲು, ಮಕ್ಕಂದೂರು, ಕಾಟಗೇರಿ, ಹೆಬ್ಬಟ್ಟಗೇರಿ, 2ನೇ ಮೊಣ್ಣಂಗೇರಿ

ಕಳೆದುಕೊಂಡವರಿಗೆ ಗೊತ್ತು ಅದರ ದುಃಖ ಏನು ಅಂತ. ನಮ್ಮ ದನಕರು, ಮನೆ, ಹಿತ್ತಿಲು ಎಲ್ಲ ಬಿಟ್ಟು ಬಂದ್ವಿ. ನಮ್ಮ ಕಾಫಿತೋಟಗಳು ಜಲ ಬಂದು ಹಾರಿ ಬಿದ್ವು. ನಮ್ಮ ವಾಹನಗಳು ಹೋದ್ವು. ಇನ್ನು ಅಲ್ಲಿಗೆ ಹೋಗಿ ನಾವು ಮಾಡುವುದೇನು?ಸರ್ಕಾರ ನಮಗೆ ಮನೆ, ಕೆಲಸ ಕೊಟ್ಟು ನೆಮ್ಮದಿಯಾಗಿ ಬದುಕುವ ಹಾಗೆ ನೋಡಿಕೊಂಡರೆ ಸಾಕು. ನಾವು ಈ ನೆಲ ಬಿಟ್ಟು ಬೇರೆ ಕಡೆ ಹೇಗೆ ಹೋಗೋದು? ನಮ್ಮ ಬೆಟ್ಟ, ತೋಟ, ಕೊಡಗು ಇದಿಲ್ಲದೆ ಹೇಗೆ ಬೇರೆಡೆ ಬದುಕೋದು? ನಮ್ಮ ಜಿಲ್ಲೆಯಲ್ಲಿಯೇ ಬೆಟ್ಟಗಳಿಲ್ಲದ ಜಾಗದಲ್ಲಿ ನಮಗೆ ನಮ್ಮ ಗ್ರಾಮದವರಿಗೆ ಮನೆ ಮಾಡಿಕೊಡಿ.

ಶಿಕ್ಷಣ–ಉದ್ಯೋಗದ ಪ್ರಶ್ನೆ

ಮಕ್ಕಳು ಶಾಲೆಗೆ ಹೋಗುವುದು ಹೇಗೆ? ಅವರನ್ನು ಇರಿಸುವುದು ಎಲ್ಲಿ? ಅವರಿಗೆ ಪುಸ್ತಕ ಹೇಗೆ ಕೊಡಿಸುವುದು? ಅವರ ಫೀಸ್ ಕಟ್ಟುವುದು ಹೇಗೆ?ಇಂಥ ಮೂಲ ಪ್ರಶ್ನೆಗಳಿಗೆ ಇವರ ಬಳಿ ಉತ್ತರವಿಲ್ಲ. ಇಲ್ಲಿ ಕೂಡ ಮಕ್ಕಳಿಗೆ ಯಾವುದೇ ಅನ್ಯಾಯವಾಗದ ಮಾದರಿಯಲ್ಲಿ ವ್ಯವಸ್ಥೆಯನ್ನು ಮಾಡಬೇಕು. ತಂದೆತಾಯಿಯಿಂದ ಮಕ್ಕಳನ್ನು ದೂರಮಾಡಿ ಶಾಲೆಗೆ ಕಳುಹಿಸಲು ಕಷ್ಟ. ಚಿಕ್ಕಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ತಂದೆತಾಯಿಂದ ದೂರ ಮಾಡಿದರೆ ಭಾವನಾತ್ಮಕವಾದ ಘಾಸಿ ಅವರ ಮೇಲಾಗುತ್ತದೆ.

ಊರ ಮೇಲಣ, ಹೆತ್ತವರ ಮೇಲಣ ಪ್ರೀತಿಯಿಂದ ಬೆಂಗಳೂರಿನಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು ಊರಿಗೆ ಬಂದು ಬದುಕು ಕಟ್ಟಿಕೊಂಡವರ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿದೆ. ಬಹುತೇಕ ಎಲ್ಲ ನಿರಾಶ್ರಿತರ ಶಿಬಿರಗಳಲ್ಲೂ ಇಂಥವರು ಕಾಣಿಸುತ್ತಾರೆ. ಕೊಡಗಿನ ಈ ಯುವಕರು ಈಗ ಅಲ್ಲಿಯೂ ಸಲ್ಲದ–ಇಲ್ಲಿಯೂ ಸಲ್ಲದ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ. ಇಂಥವರಿಗೆ ಉದ್ಯೋಗ ಕೊಡಲು, ವೃತ್ತಿ ಮಾರ್ಗದರ್ಶನ ನೀಡಲು ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ. ಒಂದು ಕುಟುಂಬ ಒಬ್ಬರಿಗೆ ಕೆಲಸ ಸಿಕ್ಕರೂ ಇಡೀ ಕುಟುಂಬಕ್ಕೆ ನಿಜವಾದ ಅರ್ಥದಲ್ಲಿ ಪುನರ್ವಸತಿ ದೊರೆತಂತೆ ಆಗುತ್ತದೆ.

ಈ ಸೂಕ್ಷ್ಮತೆಗಳನ್ನು ಗಮನಿಸಿ

ಸಾಂತ್ವನ ಕೇಂದ್ರಗಳಲ್ಲಿರುವ ನಿರಾಶ್ರಿತರಿಗೆ ನಾವು ಬ್ರಾಂಡೆಡ್ ಜಾಕೆಟ್ ಕೊಡಬಹುದು. ನಿಮಿಷಕ್ಕೊಮ್ಮೆ ಅವರ ಆರೋಗ್ಯ ವಿಚಾರಿಸಬಹುದು. ಆದರೆ ಇದ್ಯಾವುದರಿಂದಲೂ ಅವರಿಗೆ ನೆಮ್ಮದಿ ಸಿಗದು. ಮನುಷ್ಯನಿಗೆ ತಾನು ಹುಟ್ಟಿಬೆಳೆದ ಜಾಗ ಕೊನೆಯವರೆಗೂ ತೀವ್ರವಾಗಿ ಕಾಡುತ್ತದೆ. ತಾನು ಓಡಾಡಿದ ನೆಲ, ಅದು ಗುಡಿಸಲೇ ಆಗಿರಲಿ ಅವನ ಮನೆಯ ಹಾಸಿಗೆಯ ಮೇಲೆ ಕುಳಿತಾಗ ಸಿಗುತ್ತಿದ್ದ ಆನಂದವನ್ನು ಬೇರೆ ಯಾವುದೂ ಕಟ್ಟಿಕೊಡಲಾಗದು. ಮನೆಗಳನ್ನು ಕಟ್ಟಿಕೊಡಲು ಜಾಗ ಗುರುತಿಸುವಾಗಅವರ ಪರಿಸರ, ಭಾವನಾತ್ಮಕತೆಯನ್ನೂ ಪರಿಗಣಿಸಿಯೇ ಸರ್ಕಾರ ತನ್ನ ಪುರ್ನವಸತಿ ನಿಯಮಗಳನ್ನು ಹೆಣೆಯಬೇಕು. ಸ್ವತಂತ್ರ ಮನೆ, ಹಿತ್ತಲು, ದನಕರು, ನಾಯಿ, ಕೈದೋಟ ಹೀಗೆಲ್ಲಾ ಇದ್ದವರು ಇವರು. ಏಕಾಏಕಿ ನಗರಕ್ಕೆ ಹೋಗಿ ಬೆಂಕಿಕಡ್ಡಿ ಅಪಾರ್ಟ್‍ಮೆಂಟ್‍ಗಳಲ್ಲಿ ಬದುಕಿಕೊಳ್ಳಿ ಅವರಿಗೆ ರುಚಿಸದು. ಅಪಾರ್ಟ್‌ಮೆಂಟ್ ಸಂಸ್ಕೃತಿ ಕೊಡಗಿನ ಜನರಿಗೆ ಒಗ್ಗುವುದಿಲ್ಲ.

ಜಾತಿ ಮಾತು ಆಡಿ ಸಣ್ಣವರಾಗೋದು ಬೇಡ ಪ್ಲೀಸ್‌...

ನಮ್ಮ ಜಿಲ್ಲೆಯ ಸಾಂತ್ವನ ಕೇಂದ್ರಗಳಿಗೆ ಬರುವ ಕೆಲವರು ನೊಂದವರ ಜಾತಿ, ಹಿನ್ನೆಲೆಯನ್ನು ಹುಡುಕಿ ‘ತಮ್ಮವರು’ ಎಂದು ಕಂಡುಕೊಂಡ ನಂತರ ಸಹಾಯ ಮಾಡುವ ಸಣ್ಣತನ ಮೆರೆಯುತ್ತಿದ್ದಾರೆ.ಜಾತಿ ಲೆಕ್ಕಾಚಾರ ಮಾಡಿ, ತಮ್ಮವರನ್ನು ಹೆಕ್ಕಿ ಸಂತೈಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಉಳಿಸುವುದಾದರೆ ಸಂತ್ರಸ್ಥರಾದವರನ್ನೆಲ್ಲ ಉಳಿಸಿ. ತಮ್ಮ ಕಣ್ಣೆದುರು ನಡೆಯುತ್ತಿರುವ ಈ ತಾರತಮ್ಯವನ್ನು ಪ್ರಸ್ತಾಪಿಸಲೂ ಸಂತ್ರಸ್ಥರು ಹೆದರುತ್ತಿದ್ದಾರೆ. ಹೆದರುತ್ತಲೇ, ಹೆದರಿಕೆಯಿಂದ ಈ ಮಾತುಗಳನ್ನು ಹಂಚಿಕೊಂಡಿದ್ದಾರೆ. ಪ್ರಕೃತಿಯು ಗುಡ್ಡ ಬೀಳಿಸುವಾಗ ಜಾತಿ ತಾರತಮ್ಯ ಮಾಡಲಿಲ್ಲ, ಈಗ ನೀವೇಕೆ ಬಂದಿದ್ದೀರಿ ತಾರತಮ್ಯ ಮಾಡಲು. ಕೊಡಗಿನ ಕೆಸರಕೋಡಿಯಲ್ಲಿ ನಿಮ್ಮ ಕೆಟ್ಟ ಮನಃಸ್ಥಿತಿಯೂ ಕೊಚ್ಚಿಹೋಗಬೇಕು.

ಕೊಡಗಿನ ಜನರ ಸಂಕಷ್ಟ ಮಿಡಿದ ಕರ್ನಾಟಕದ ಜನತೆ ಲೋಡುಗಟ್ಟಲೇ ಆಹಾರ ಮತ್ತು ಅಗತ್ಯ ಸಾಮಗ್ರಿಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಆದರೆಪ್ರಕೃತಿಯ ಪ್ರಕೋಪ ಕಾಣದ ಕೆಲವು ಹೊಟ್ಟೆ ತುಂಬಿದ ತೋಳಗಳು ರಸ್ತೆಬದಿಯೇ ಚೆಕ್‍ಪೋಸ್ಟ್ ಹಾಕಿಕೊಂಡು ಕಾಯುತ್ತಿವೆ. ಸಂತ್ರಸ್ಥರಿಗೆ ತಲುಪಬೇಕಾಗಿದ್ದನ್ನು ತಮ್ಮ ಮನೆಗೆ, ಸಂಬಂಧಿಕರಿಗೆ, ಮೊಮ್ಮಕ್ಕಳ ಮಕ್ಕಳಿಗೆ ಅಂತ ಕದ್ದು ಸಾಗಿಸಿ ಬಚ್ಚಿಡುತ್ತಿವೆ. ಆಹಾ ಎಂಥಾ ಜನ! ಎಂಥಾ ಅದ್ಭುತ ಮನಸ್ಸುಗಳು!ಕೇವಲ ಎರಡು ಬೆಡ್‍ಶೀಟ್, ಒಂದು ಜರ್ಕಿನ್‍ಗಾಗಿ ಇಷ್ಟು ಸಣ್ಣವರಾಗಬೇಕೆ?ಹೀಗೆ ಕದ್ದು ಸಾಗಿಸಿದ ಎರಡು ಬೆಡ್‍ಶೀಟ್ ನಿಮ್ಮನ್ನು ಜೀವನಪೂರ್ತಿ ಬೆಚ್ಚಗಿಡುತ್ತವೆಯೇ?

ಉಳಿದವರ ಅಳಿದುಹೋದ ಬದುಕು

ಚೆನೈನ ಸುನಾಮಿ, ಬಿಹಾರದ ಪ್ರವಾಹ, ಉತ್ತರಾಖಂಡ್‌ನ ಮೇಘಸ್ಫೋಟ, ಕೇರಳದಲ್ಲಿ ಮಹಾಮಳೆ, ಉತ್ತರ ಕರ್ನಾಟಕದ ಬರ... ನಾವು ಕೊಡಗಿನ ಜನರು ಹೀಗೆ ನಮ್ಮ ಪಕ್ಕದ ಜಿಲ್ಲೆ, ರಾಜ್ಯಗಳ ಸಂಕಷ್ಟ ಸ್ಥಿತಿಗೆ ಮರುಗುತ್ತಿದ್ದೆವು. ನಮ್ಮ ಬದುಕು ಎಷ್ಟು ಸುರಕ್ಷಿತ ಎಂದು ಬೀಗುತ್ತಿದ್ದೆವು. ಆದರೆ ಇಂದು ನಮ್ಮ ಜಿಲ್ಲೆಯೂ ಅದೇ ಸ್ಥಿತಿಯಲ್ಲಿದೆ. ದೇಶಕ್ಕೆ ದೇಶವೇ ಕೊಡಗಿನ ಸ್ಥಿತಿ ಕಂಡು ಮರುಗುತ್ತಿದೆ. ನಮ್ಮ ಬದುಕು ಕಟ್ಟಿಕೊಡುವ ಮಾತನ್ನಾಡುತ್ತಿರುವ ರಾಜಕಾರಿಣಿಗಳಿಗೆ ದಯವಿಟ್ಟು ದೇಶದ ಜನರು ನಮ್ಮ ಬಗ್ಗೆ ತೋರುತ್ತಿರುವ ಪ್ರೀತಿ ಅರ್ಥಮಾಡಿಕೊಳ್ಳಿ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಅವರದು ಆ ಪಕ್ಷ, ಇವರದು ಈ ಪಕ್ಷ ಎನ್ನುವ ಕ್ಷುಲ್ಲಕ ರಾಜಕಾರಣದ ಆಚೆಗೆ ಯೋಚಿಸಿ.

ಈಗ ಬೀದಿಗೆ ಬಂದಿರುವ ಕೊಡಗಿನ ಕುಟುಂಬಗಳಿಗೆ ಬದುಕನ್ನು ಮರಳಿ ಕಟ್ಟಿಕೊಡಬೇಕಿದೆ. ನಮ್ಮ ಈ ಸ್ಥಿತಿಗೆ ಕಾರಣವನ್ನು ಹಲವರು ತಮಗೆ ತೋಚಿದಂತೆ ವಿಶ್ಲೇಷಣೆ ಮಾಡುತ್ತಿದ್ದಾರೆ. ಜನರು ಗುಡ್ಡ, ಬೆಟ್ಟಗಳನ್ನು ಕಡಿದು ಮನೆ ನಿರ್ಮಾಣ ಮಾಡಿ, ಬೆಟ್ಟಗಳನ್ನು ಕೆಣಕಿದ್ದೇ ಈ ಅನಾಹುತಕ್ಕೆ ಕಾರಣ ಎನ್ನುವ ಮಾತನ್ನು ಹಲವರು ಹೇಳುತ್ತಿದ್ದಾರೆ. ತಜ್ಞರು ಸರ್ಕಾರಕ್ಕೆ ವರದಿ ಸಲ್ಲಿಸುವ ಮೊದಲು ಪ್ರಕೃತಿಯ ಬಗ್ಗೆ ನಾವು ಹೇಳುವ ಮಾತನ್ನೂ ಕೇಳಿಸಿಕೊಳ್ಳಬೇಕು ಎನ್ನುವುದುಮಕ್ಕಂದೂರು, ಮುಕ್ಕೊಡ್ಲು, ದೇವಸ್ತೂರು ಗ್ರಾಮಗಳ ಜನರ ಮಾತು.

ಬೆಟ್ಟವೇ ಜರಿದು ಬಂದು ಊರುಗಳನ್ನೆಲ್ಲಾ ಒಂದೇ ಗುಕ್ಕಿಗೆ ನುಂಗಿ ಹಾಕಿದ್ದನ್ನು ಅವರಿಗೆ ಮರೆಯಲು ಆಗುತ್ತಿಲ್ಲ. ಮಳೆ ತಗ್ಗಿದ ಮೇಲೆ ಕೆಲವರು ಮುಕ್ಕೊಡ್ಲು, ಹೆಬ್ಬಟ್ಟಗೇರಿ, ಮಕ್ಕಂದೂರಿನ ಬಳಿ ವಾಹನ ಮಾಡಿಕೊಂಡು ಪಳೆಯುಳಿಕೆಯಂತಾದ ಊರನ್ನು ದೂರದಿಂದ ನೋಡಿ ಬಂದಿದ್ದಾರೆ. ಅವರು ಹೇಳುವಂತೆ ಅಲ್ಲೀಗ ಅವರ ಊರು ಇತ್ತು ಎನ್ನುವುದೇ ಕಾಣುತ್ತಿಲ್ಲ. ಇನ್ನು ಅಲ್ಲೊಂದು ಮಣ್ಣಿನ ಬರೆ, ಹಸಿರುಗುಡ್ಡ, ತಮ್ಮ ಮನೆ ಯಾವುದು ಇಲ್ಲ. ಅಲ್ಲಿನ ಬೆಟ್ಟ ಮಾತ್ರ ಊರು, ಜನ, ಮನೆ ಎಲ್ಲವನ್ನು ಅಳಿಸಿಹಾಕಿ ತಾನು ಮಾತ್ರ ಇಲ್ಲಿರಬೇಕು, ಎಲ್ಲಾ ನಂದೇ ಎನ್ನುತ್ತಿದೆ. ಪ್ರಕೃತಿ ಅಷ್ಟೊಂದು ಭೀಕರವಾಗಿ ತನ್ನ ಮುಖವನ್ನು– ಅಸ್ತಿತ್ವವನ್ನು ಜನರಿಗೆ ತೋರಿಸಿದೆ. ತಮ್ಮನ್ನು ಹೆದರಿಸಿದ ಬೆಟ್ಟಗಳ ಬಳಿಗೆ ಈ ಜನರು ಹೇಗೆ ಹೋದಾರು?

ಸರ್ಕಾರಕ್ಕೆ ಈ ಘಟನೆ ಬಹುದೊಡ್ಡ ಸವಾಲು. ಅದನ್ನು ಹೇಗೆ ನಿಭಾಯಿಸುತ್ತದೆ. ಈ ಜನರು ಹೇಗಾಗುತ್ತಾರೆ. ಪ್ರಕೃತಿ ವಿಕೋಪದಲ್ಲಿ ಬದುಕೊಂಡವರು ಕಳೆದುಕೊಂಡ ಬದುಕು ಮತ್ತೇನಾಗುತ್ತದೆ ನೋಡೋಣ. ಅವರ ಬದುಕು ತಹಬದಿಗೆ ಬರುವವರೆಗೆ ನಮ್ಮ ಒಳಮನಸನ್ನು ಅಂತಃಕರಣವನ್ನು ಮುಚ್ಚದಿರೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT