ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ |‘ಜನರ ಬದುಕು ಹಸನು ಮಾಡಿದ ವಚನಕಾರರು’

ಸಿದ್ಧರಾಮೇಶ್ವರ ಜಯಂತ್ಯುತ್ಸವದಲ್ಲಿ ವೆಂಕಟನಾಯಕ್ ಅಭಿಮತ
Published 18 ಜನವರಿ 2024, 14:07 IST
Last Updated 18 ಜನವರಿ 2024, 14:07 IST
ಅಕ್ಷರ ಗಾತ್ರ

ಕುಶಾಲನಗರ: ‘12ನೇ ಶತಮಾನದ ವಚನಕಾರರ ಸಾಮಾಜಿಕ ಆಂದೋಲನದಿಂದಾಗಿಯೇ ಸಮಾಜದಲ್ಲಿದ್ದ ತಾರತಮ್ಯ, ಜಾತಿ ಪದ್ಧತಿ, ಮೇಲು ಕೀಳು ಎಂಬ ಭಾವನೆಗಳು ದೂರವಾಗಲು ಕಾರಣವಾಗಿದ್ದು, ವಚನಕಾರರ ಚಳವಳಿ ನಾಡಿಗೆ ನೀಡಿರುವ ಬಹು ದೊಡ್ಡ ಬಳುವಳಿ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ನಿರ್ದೇಶಕ ಮೆ.ನಾ.ವೆಂಕಟನಾಯಕ್ ಹೇಳಿದರು.

ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ಯಿಂದ ಗುರುವಾರ ಹಮ್ಮಿಕೊಂಡಿದ್ದ 12ನೇ ಶತಮಾನದ ವಚನಯೋಗಿ ಶ್ರೀ ಸಿದ್ಧರಾಮೇಶ್ವರರ ಜಯಂತ್ಯುತ್ಸವದಲ್ಲಿ ವಿದ್ಯಾರ್ಥಿಗಳಿಗೆ ‘ಸಿದ್ಧರಾಮೇಶ್ವರರ ಜೀವನ ಹಾಗೂ ಸಾಧನೆ’ ಕುರಿತು ಉಪನ್ಯಾಸ ನೀಡಿದರು.

‘ದೇವರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮೇಶ್ವರ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ಮೊದಲಾದ ವಚನಕಾರರು 12ನೇ ಶತಮಾನವನ್ನು ಪಾವನಗೊಳಿಸಿದ ಶ್ರೇಷ್ಠ ಶರಣರು’ ಎಂದು ಬಣ್ಣಿಸಿದರು.

‘ಅಂದಿನ ಸಮಾಜದಲ್ಲಿ ಮೂಢನಂಬಿಕೆಗಳ ಕಟ್ಟಳೆಗಳಲ್ಲಿ ಜನಸಾಮಾನ್ಯರನ್ನು ಬಂಧಿಯಾಗಿಸಿ ಅವರ ಜೀವನವನ್ನು ನರಕವಾಗಿಸಿದ್ದರು. ಸಿದ್ದರಾಮೇಶ್ವರರಂತಹ ಶರಣರು ವಚನ ಕ್ರಾಂತಿಯ ಮೂಲಕ ಜನಸಾಮಾನ್ಯರ ಬದುಕನ್ನು ಹಸನು ಮಾಡುವ ಮೂಲಕ ಜಗಜ್ಯೋತಿಯಾದರು’ ಎಂದು ಸ್ಮರಿಸಿದರು.

‘ವಚನಕಾರರು ಸಾಮಾಜಿಕ ಆಂದೋಲನ ನಡೆಸದಿದ್ದಲ್ಲಿ ಇಂದು ದೇಶ ಇಷ್ಟೊಂದು ಸುಭಿಕ್ಷವಾಗುತ್ತಿರಲಿಲ್ಲ’ ಎಂದು ವೆಂಕಟನಾಯಕ್ ಹೇಳಿದರು.

ಸಂಪನ್ಮೂಲ ವ್ಯಕ್ತಿ ಎಂ.ನಂಜುಂಡಸ್ವಾಮಿ ಮಾತನಾಡಿ, ‘ಕನ್ನಡ ನಾಡನ್ನು ಸಾಂಸ್ಕೃತಿಕವಾಗಿ ಶ್ರೀಮಂತವಾಗಿಸಿದ ವಚನ ಸಾಹಿತ್ಯ ವಿಶ್ವಕ್ಕೆ ಆದರ್ಶವಾಗಿದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಚನಗಳನ್ನು ಬಾಯಿ ಪಾಠ ಮಾಡುವ ಮೂಲಕ ವಚನಗಳ ಸಾರವನ್ನು ಅರಿತು ಅದರಂತೆ ನಡೆದರೆ ಜೀವನವೇ ಪಾವನವಾಗುತ್ತದೆ’ ಎಂದರು.

ಕುಶಾಲನಗರ ಉಪನೋಂದಣಾಧಿಕಾರಿ ಅನಿತಾ ಮೋಸಿಸ್ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಮಾತನಾಡಿ, ‘ಇಂದಿನ ವಿದ್ಯಾರ್ಥಿಗಳು ಬಾಲ್ಯದ ದಿನಗಳಿಂದಲೇ ಶರಣರ ವಚನಗಳನ್ನು ಕಲಿಯುವ ಜೊತೆಗೆ ಉತ್ತಮವಾದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಹಾರನಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಎ.ಆರ್.ಮಹದೇವಪ್ಪ, ಜಿಲ್ಲಾ ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಸಿದ್ದೇಗೌಡ, ಉಪನ್ಯಾಸಕ ಲೋಕೇಶ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಎಚ್.ಎಸ್. ಮಧು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT