ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ಅರಸಿ ಬಂದವರಲ್ಲಿ ಆತಂಕ

ಮಾಲೀಕರಿಗೂ ದಾಖಲೆ ಒದಗಿಸುವ ಸಂಕಟ, ಹೊರ ರಾಜ್ಯದ ಕಾರ್ಮಿಕರಿಗೆ ಅಭದ್ರತೆ
Last Updated 24 ಜನವರಿ 2020, 19:35 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಪೊಲೀಸರು, ಗುರುವಾರ ದಿನವಿಡೀ ಜಿಲ್ಲೆಯಾದ್ಯಂತ ಬಾಂಗ್ಲಾ ವಲಸಿಗರ ಪತ್ತೆ ಕಾರ್ಯದ ನೆಪದಲ್ಲಿ ಹೊರ ರಾಜ್ಯದ ಕಾರ್ಮಿಕರ ದಾಖಲೆ ಪರಿಶೀಲಿಸುವ ಮೂಲಕ ‘ಕಾರ್ಮಿಕರ ಹಕ್ಕು’ಗಳನ್ನು ಕಸಿದುಕೊಂಡರೇ ಎಂಬ ಪ್ರಶ್ನೆ ಮೂಡಿದೆ. ಇಲಾಖೆಯ ಕ್ರಮವನ್ನು ಕೆಲವು ಸಂಘಟನೆಗಳು ಪ್ರಶ್ನಿಸಿವೆ.

ನಗರದ ಕ್ರಿಸ್ಟಲ್‌ ಹಾಲ್‌, ನಾಪೋಕ್ಲು, ಕುಶಾಲನಗರ ಹಾಗೂ ವಿರಾಜಪೇಟೆಯಲ್ಲಿ ಹೊರ ರಾಜ್ಯದ ಕಾರ್ಮಿಕರ ದಾಖಲೆ ಪರಿಶೀಲನೆ ನಡೆಸಲಾಗಿದೆ. ಅಲ್ಲಿಗೆ ಬಂದಿದ್ದ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿತ್ತು. ಜಿಲ್ಲೆಯಲ್ಲಿ ನಡೆದ ದಿಢೀರ್‌ ತಪಾಸಣೆಯಿಂದ ಹೊರ ರಾಜ್ಯದ ಕಾರ್ಮಿಕರಿಗೆ ಅಭದ್ರತೆ ಕಾಡಲು ಆರಂಭಿಸಿದೆ.

‘ನಾವು ಇದೇ ದೇಶದವರು. ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ ರಾಜ್ಯದಿಂದ ಕೂಲಿಗೆ ಬಂದಿದ್ದೇವೆ. ನಮಗೂ ತೊಂದರೆ ನೀಡುವ ಸಾಧ್ಯತೆಯಿದೆ’ ಎಂದು ಕಾರ್ಮಿಕರು ಆತಂಕ ತೋಡಿಕೊಂಡಿದ್ದಾರೆ.

‘ಕೂಲಿಗೆ ಬಂದರೆ ದಾಖಲೆ ಕೊಡಿ ಎಂದು ಪೀಡಿಸುವುದು ಯಾವ ನ್ಯಾಯ’ ಎಂದು ಕಾರ್ಮಿಕರೊಬ್ಬರು ಪ್ರಶ್ನಿಸಿದ್ದಾರೆ.

ದಿಢೀರ್‌ ಬಂದ ಮಾಹಿತಿ:ರಾಷ್ಟ್ರದಲ್ಲಿ ನಡೆಯುತ್ತಿರುವ ಕೆಲವು ವಿದ್ಯಮಾನ ಹಾಗೂ ಜಿಲ್ಲೆಯ ಸುರಕ್ಷತೆ ದೃಷ್ಟಿಯಿಂದ ಹೊರ ರಾಜ್ಯದ ಕಾರ್ಮಿಕರ ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ. ಆದರೂ, ಕಾರ್ಮಿಕರಲ್ಲಿ ಆತಂಕ ನಿಂತಿಲ್ಲ.

ಒಂದು ದಿನ ಮೊದಲು ಆಯಾ ವ್ಯಾಪ್ತಿಯ ಬೀಟ್‌ ಪೊಲೀಸರು, ‘ತಮ್ಮ ತೋಟದ ಕಾರ್ಮಿಕರ ದಾಖಲೆಯನ್ನು ತಂದು ಪ್ರಸ್ತುತ ಪಡಿಸಬೇಕು’ ಎಂದು ಕಾಫಿ ತೋಟದ ಮಾಲೀಕರಿಗೆ ಸೂಚಿಸಿದ್ದರು. ದಿಢೀರ್ ಬೆಳವಣಿಗೆಯಿಂದ ಅನೇಕ ಬೆಳೆಗಾರರೂ ಗಲಿಬಿಲಿಗೊಂಡಿದ್ದರು. ಮೂರು ಸ್ಥಳಗಳಲ್ಲೂ ಕಾರ್ಮಿಕರು ದಾಖಲಾತಿಗಾಗಿ ಹೆಣಗಾಡುತ್ತಿದ್ದ ದೃಶ್ಯ ಕಂಡುಬಂದಿತ್ತು. ತೋಟದ ಕಾರ್ಮಿಕರು ಹಾಗೂ ಮಾಲೀಕರು ಪೊಲೀಸರ ಮುಂದೆ ‘ಪರೇಡ್’ ನಡೆಸಿದ್ದರು.

ದಾಖಲೆಗೆ ಹುಡುಕಾಟ:5 ಸಾವಿರ ಕಾರ್ಮಿಕರ ದಾಖಲೆ ಪರಿಶೀಲನೆ ನಡೆಸಲಾಗಿದೆ. ಅದರಲ್ಲಿ 500 ಕಾರ್ಮಿಕರ ದಾಖಲೆಗಳು ಆನ್‌ಲೈನ್‌ನಲ್ಲಿ ಹೊಂದಾಣಿಕೆ ಆಗಿಲ್ಲ. ‘ಮತ್ತೊಂದು ಸುತ್ತಿನ ಕಾರ್ಯಾಚರಣೆ ನಡೆಸುತ್ತೇವೆ’ ಪೊಲೀಸರು ಎಚ್ಚರಿಸಿದ್ದು ದಾಖಲೆ ಹೊಂದಾಣಿಕೆಯಾಗದ ಕಾರ್ಮಿಕರು, ಮೂಲ ದಾಖಲಾತಿಗೆ ತಡಕಾಡಲು ಆರಂಭಿಸಿದ್ದಾರೆ.

ಜಿಲ್ಲೆಯ ಕಾಫಿ ಎಸ್ಟೇಟ್‌ಗಳಲ್ಲಿ ಕಾರ್ಮಿಕರ ಅಭಾವ ಹಲವು ವರ್ಷಗಳಿಂದಲೂ ಇದೆ. ಹೀಗಾಗಿ, ಕಡಿಮೆ ಸಂಬಳಕ್ಕೆ ದುಡಿಯುವ ಹೊರ ರಾಜ್ಯದ ಕಾರ್ಮಿಕರೇ ಮಾಲೀಕರಿಗೆ ಆಧಾರ. ದಕ್ಷಿಣ ಕೊಡಗು ಭಾಗಕ್ಕೆ ವಲಸೆ ಬಂದ ಕಾರ್ಮಿಕರಲ್ಲಿ ಅಸ್ಸಾಂ ರಾಜ್ಯದ ನಿವಾಸಿಗಳೇ ಅಧಿಕವಾಗಿದ್ದಾರೆ ಎಂಬುದು ಪೊಲೀಸರ ಪರಿಶೀಲನೆಯಿಂದ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT