ಮಡಿಕೇರಿ: ‘ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಅವರಿಗೆ ಸ್ವಲ್ಪ ತಾಳ್ಮೆ ಇರಬೇಕು. ಸರ್ಕಾರ ಈಗಷ್ಟೇ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಮಯ ಬೇಕಾಗುತ್ತದೆ’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.
ಇಲ್ಲಿ ಮಂಗಳವಾರ ಅವರು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡುವ ಬದಲು ಸಲಹೆ ಕೊಡಲಿ. ಅವರೂ ಮುಖ್ಯಮಂತ್ರಿ ಆಗಿದ್ದವರು. ಅವರಿಗೆ ಸ್ವಲ್ಪ ತಾಳ್ಮೆ ಎನ್ನುವುದು ಇರಬೇಕು. ಆತುರದಲ್ಲಿ ಬುಲೆಟ್ ಹಾರಿಸುವುದು ಬೇಡ. ಈಗಾಗಲೇ ಜನರಿಂದ ಅವರು ತಿರಸ್ಕೃತರಾಗಿದ್ದಾರೆ. ಹೀಗೆ ಆಡಿದರೆ ಇನ್ನಷ್ಟೂ ತಿರಸ್ಕೃತರಾಗುತ್ತಾರೆ ಎಂದು ಹೇಳಿದರು.
ಬಿಜೆಪಿಗರು ತಮ್ಮೊಳಗೆ ಬಡಿದಾಡಿಕೊಳ್ಳುವುದರಿಂದ ಅದನ್ನು ಮರೆಮಾಚಲು ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಮಿಷನ್‌ಗಾಗಿ ಹಿಂದಿನ ಬಿಜೆಪಿ ಸರ್ಕಾರದ ಕಾಮಗಾರಿ ತಡೆಹಿಡಿದಿದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಗ್ಯಾರಂಟಿಗಳನ್ನು ಜಾರಿ ಮಾಡದಿದ್ದರೆ ಧರಣಿಗೆ ಕೂರುತ್ತೇವೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳುತ್ತಾರೆ. ಮೂರ್ನಾಲ್ಕು ಬಾರಿ ಸಿ.ಎಂ ಆಗಿದ್ದವರಿಗೆ ಯಾವುದೇ ಸರ್ಕಾರ ಬಂದರೂ ಕೆಲಸ ಮಾಡಲು ಸಮಯ ಬೇಕಾಗುತ್ತದೆ ಎಂಬುದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ 7 ಕೆ.ಜಿ ಕೊಡಲಾಗುತ್ತಿತ್ತು. ಅದನ್ನು ಬಿಜೆಪಿ 5 ಕೆ.ಜಿಗೆ ಇಳಿಸಿತು. ಆಗ ಯಡಿಯೂರಪ್ಪ ಹಾಗೂ ರಾಜ್ಯದ ಬಿಜೆಪಿ ಸಂಸದರು ಪ್ರಶ್ನೆಯನ್ನೇ ಮಾಡಲಿಲ್ಲ. ಅಕ್ಕಿಯನ್ನು ನರೇಂದ್ರ ಮೋದಿ ಏನು ಅವರ ಮನೆಯಿಂದ ತಂದು ಕೊಡುತ್ತಾರಾ? ಎಂದೂ ಹರಿಹಾಯ್ದರು.
‘ಆಹಾರ ಭದ್ರತಾ ಕಾಯ್ದೆಯಲ್ಲಿ ಕೆಲವು ನಿಯಮಗಳಿವೆ. ಆ ಪ್ರಕಾರವೇ ನಾವು ಆಹಾರ ವಿತರಿಸುತ್ತೇವೆ. ಸದ್ಯದಲ್ಲೇ ಅಧಿವೇಶನ ಆರಂಭವಾಗುತ್ತದೆ. ಎಲ್ಲರೂ ಅನುಭವಿಗಳಿದ್ದೇವೆ, ಜನಪರ ಆಡಳಿತ ನಡೆಸುತ್ತೇವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.