ಕುಶಾಲನಗರ: ‘ಮನುಕುಲದ ಒಳಿತಿಗಾಗಿ ವಚನ ಸಾಹಿತ್ಯದ ಮಹತ್ವ ಹಾಗೂ ಜಾಗೃತಿ ಮೂಡಿಸುತ್ತಿರುವ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನವಾದ ಸುತ್ತೂರು ಜಗದ್ಗುರು ರಾಜೇಂದ್ರ ಸ್ವಾಮೀಜಿ ಜನ್ಮದಿನಾಚರಣೆಯನ್ನು ಸರ್ಕಾರವೇ ಆಚರಿಸುವಂತಾಗಲಿ’ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಒತ್ತಾಯಿಸಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ನಡೆದ ಸುತ್ತೂರು ಮಠದ 23ನೇ ಜಗದ್ಗುರು ರಾಜೇಂದ್ರ ಸ್ವಾಮೀಜಿಯವರ 109ನೇ ಪುಣ್ಯಸ್ಮರಣೆ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನೋತ್ಸವ ಉದ್ಘಾಟಿಸಿ ಮಾತನಾಡಿದರು.
‘ಜನಸಾಮಾನ್ಯರ ಬದುಕು ಸಂಕೀರ್ಣವಾಗಿದ್ದ 12ನೇ ಶತಮಾನದಲ್ಲಿ ಮೂಡಿಬಂದ ವಚನಗಳು ಹಾಗೂ ಶರಣರ ಚಿಂತನೆಗಳು ಮನುಷ್ಯರ ಉತ್ತಮ ಬದುಕಿಗೆ ಸಿಕ್ಕಂಥ ಮುತ್ತು ರತ್ನಗಳು. ಅಂಬೇಡ್ಕರ್ ಕೂಡ ಶರಣ ಸಾಹಿತ್ಯವನ್ನು ಓದಿ ಅರ್ಥೈಸಿಕೊಂಡೇ ಸಂವಿಧಾನವನ್ನು ಬರೆದಿದ್ದರು. ಎಲ್ಲರೂ ವಚನ ಸಾಹಿತ್ಯ ಓದಿಕೊಂಡು ಅದರಲ್ಲಿನ ತಿರುಳಿನಂತೆ ನಡೆದುಕೊಂಡಿದ್ದರೆ ಮೀಸಲಾತಿಯ ಅಗತ್ಯವೇ ಇರುತ್ತಿರಲಿಲ್ಲ’ ಎಂದರು.
‘ಪ್ರತಿಯೊಬ್ಬರು ವಚನಗಳನ್ನು ಓದಿ ಅರ್ಥೈಸಿಕೊಂಡರೆ ಸಮಾಜದಲ್ಲಿ ಉದ್ವಿಘ್ನತೆ ಹಾಗೂ ಪ್ರಕ್ಷುಬ್ಧತೆಯ ವಾತಾವರಣವೇ ಘಟಿಸುವುದಿಲ್ಲ. ನಾಡು ಕಂಡ ಶ್ರೇಷ್ಠ ಚಿಂತಕ ಎಂ.ಎಂ.ಕಲಬುರ್ಗಿಯವರ ವಚನ ಸಾಹಿತ್ಯ ಸಂಶೋಧನೆಯ ಪುಸ್ತಕಗಳು ಹೊರಬಂದಿದ್ದರೆ ವಚನ ಸಾಹಿತ್ಯದ ಹೊಳಹು ಮತ್ತಷ್ಟು ಹೆಚ್ಚುತ್ತಿತ್ತು. ಸಮರಸದ ಭಾವನೆಗಳಿಂದ ಸಾಮಾಜಿಕವಾದ ಸತ್ಯದರ್ಶನ ಆ ಗ್ರಂಥಗಳಲ್ಲಿ ಅಡಕವಾಗಿದ್ದವು’ ಎಂದು ಹೇಳಿದರು.
‘ತಾನು ಸಮಾಜಕ್ಕೆ ನೀಡಿದ ಅಪಾರ ಕೊಡುಗೆಗಳನ್ನು ನೆನೆಯದೇ ವಚನ ಸಾಹಿತ್ಯವನ್ನು ಸ್ಮರಿಸಿದ ಶ್ರೇಷ್ಠ ದಾರ್ಶನಿಕ ರಾಜೇಂದ್ರ ಸ್ವಾಮೀಜಿಗಳ ಜಯಂತಿಯನ್ನು ಸರ್ಕಾರ ಸಾರ್ವಜನಿಕರನ್ನು ಒಳಗೊಂಡಂತೆ ಪ್ರತಿವರ್ಷ ಆಚರಿಸುವಂತಾಗಬೇಕು’ ಎಂದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧ್ಯಕ್ಷ ಸದಾಶಿವ ಸ್ವಾಮೀಜಿ ಮಾತನಾಡಿ, ‘ಮನುಷ್ಯನ ಆಯುಷ್ಯದ ಬಹುತೇಕ ಸಮಯ ನಿದ್ದೆಯಲ್ಲಿಯೇ ಕಳೆಯುತ್ತಾನೆ. ಉಳಿವ ಅಲ್ಪ ಅವಧಿಯನ್ನು ಶರಣರ ತತ್ವಗಳು ಹಾಗೂ ಸಮಾಜಮುಖಿ ಚಿಂತನೆಗಳಿಗೆ ಬಳಸುವ ಮೂಲಕ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಇಡೀ ಮನುಕುಲಕ್ಕೆ ಶರಣರ ಚಿಂತನೆಗಳನ್ನು ಹರಡಲು 1986ರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ರಾಜೇಂದ್ರ ಶ್ರೀ ಆರಂಭಿಸಿದರು’ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಹಾಗೂ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿದರು.
ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಪುಟ್ಟರಾಜು ಅಲ್ಲಮಪ್ರಭುಗಳ ವಚನಗಳನ್ನು ಹಾಡಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಪರಮೇಶ್, ಕುಶಾಲನಗರ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ ವಿರೂಪಾಕ್ಷ, ಮಾಜಿ ಅಧ್ಯಕ್ಷೆ ಲೇಖನಾ ಧರ್ಮೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.