ಬುಧವಾರ, ಮಾರ್ಚ್ 29, 2023
31 °C
ಪ್ರತಿಷ್ಠಿತ ರೆಸಾರ್ಟ್‌ ವಿರುದ್ಧವೂ ದಾಖಲಾದವು ಪ್ರಕರಣ

ಕೊಡಗು | ಲಾಕ್‌ಡೌನ್‌ ನಿಯಮ ಉಲ್ಲಂಘನೆ; ರೆಸಾರ್ಟ್‌, ಹೋಂಸ್ಟೇ ವಿರುದ್ಧ ಕ್ರಮ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್‌ ಇನ್ನೂ ಮುಂದುವರಿದಿದೆ. ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರಕರಣಗಳು ಪ್ರತಿನಿತ್ಯ ಏರಿಳಿತದ ಹಾದಿಯಲ್ಲಿದ್ದು ಜುಲೈ 5ರ ಬಳಿಕವೂ ಕೆಲವು ನಿರ್ಬಂಧ ಮುಂದುವರಿಯುವ ಸಾಧ್ಯತೆಯಿದೆ.

ಅಷ್ಟರಲ್ಲಿಯೇ ಪ್ರವಾಸಿಗರು ಕೊಡಗಿಗೆ ಬರುವ ಧಾವಂತ ವ್ಯಕ್ತಪಡಿಸುತ್ತಿದ್ದಾರೆ. ರೆಸಾರ್ಟ್‌ ಹಾಗೂ ಹೋಂಸ್ಟೇ ಮಾಲೀಕರೂ ನಿರ್ಬಂಧ ನಡುವೆಯೂ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುತ್ತಿದ್ದಾರೆ.

ಪ್ರವಾಸಿಗರಿಗೆ ನಿರ್ಬಂಧವಿದ್ದು, ಹೋಂಸ್ಟೇ ಹಾಗೂ ರೆಸಾರ್ಟ್‌ ವಾಸ್ತವ್ಯಕ್ಕೆ ಜಿಲ್ಲಾಡಳಿತ ಅವಕಾಶ ನೀಡುತ್ತಿಲ್ಲ. ಬೇರೆ ಬೇರೆ ಜಿಲ್ಲೆಗಳು ಅನ್‌ಲಾಕ್‌ ಆಗಿದ್ದು, ಕೊಡಗಿನತ್ತ ಪ್ರವಾಸಿಗರು ಬಂದು ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಿದ್ದಾರೆ. ಪ್ರವಾಸಿಗರ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟ ಹೋಂಸ್ಟೇ ಹಾಗೂ ರೆಸಾರ್ಟ್‌ಗಳ ಮೇಲೆ ಜಿಲ್ಲಾ ಪೊಲೀಸರು ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲು ಮಾಡುತ್ತಿದ್ದಾರೆ. ಇದರಿಂದ ಮಾಲೀಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಒಂದು ವಾರದಿಂದ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸುತ್ತಿದ್ದಾರೆ. ಬಂದವರಿಗೆ ನಿಯಮ ಮೀರಿ ಕೆಲವರು ಹೋಂಸ್ಟೇಗಳಲ್ಲಿ ಆಶ್ರಯ ಕಲ್ಪಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗೆ ಮುಂದುವರಿದರೆ ಪ್ರಕರಣಗಳು ಸದ್ಯಕ್ಕೆ ನಿಯಂತ್ರಣಕ್ಕೆ ಬರುವುದಿಲ್ಲ ಎಂದು ಸ್ಥಳೀಯರು ಎಚ್ಚರಿಸುತ್ತಾರೆ.

ನಷ್ಟಕ್ಕೆ ಬೆಚ್ಚಿಬಿದ್ದ ಮಾಲೀಕರು: ಒಂದೂವರೆ ವರ್ಷಗಳಿಂದ ಜಿಲ್ಲೆಯ ಪ್ರವಾಸೋದ್ಯಮ ಅವಲಂಬಿತರು ಲಾಕ್‌ಡೌನ್‌ನಿಂದ ನಷ್ಟದಲ್ಲಿದ್ದಾರೆ. ಅದಕ್ಕೂ ಮೊದಲು, ಭೂಕುಸಿತಕ್ಕೆ ಹೆದರಿ ಜಿಲ್ಲೆಯತ್ತ ಪ್ರವಾಸಿಗರು ಬಂದಿರಲಿಲ್ಲ. ಮಳೆಗಾಲದ ಪ್ರವಾಸೋದ್ಯಮ ನೆಲಕಚ್ಚಿತ್ತು. ಹೀಗಾಗಿ, ಲಾಕ್‌ಡೌನ್‌ ನಡುವೆಯೂ ಬಂದ ಪ್ರವಾಸಿಗರಿಗೆ ಕೆಲವು ಮಾಲೀಕರು ಹೋಂಸ್ಟೇಯಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುತ್ತಿದ್ದಾರೆ. ಇದೇ ಅವರಿಗೆ ಮುಳುವಾಗಿದೆ.

ನಗರದ ಹೊರವಲಯದ ಪ್ರತಿಷ್ಠಿತ ತಾಜ್‌ ರೆಸಾರ್ಟ್‌ ಸಹ ನಿಯಮ ಉಲ್ಲಂಘಿಸಿದ್ದು, ಈ ರೆಸಾರ್ಟ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಗಡಿಭಾಗದ ಕೊಪ್ಪ ಗೇಟ್‌ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ತಾಜ್‌ ರೆಸಾರ್ಟ್‌ಗೆ ತೆರಳುತ್ತಿರುವುದಾಗಿ ಪ್ರವಾಸಿಗರು ಮಾಹಿತಿ ನೀಡಿದ್ದರು. ಅವರನ್ನು ಅಲ್ಲಿಂದಲೇ ವಾಪಸ್‌ ಕಳುಹಿಸಲಾಗಿತ್ತು. ರೆಸಾರ್ಟ್‌ಗೆ ಬಂದು ಪರಿಶೀಲಿಸಿದಾಗ, ನೋಂದಣಿ ಪುಸ್ತಕದಲ್ಲಿ ಹೆಸರು ಹಾಗೂ ನಗದು ವ್ಯವಹಾರ ನಡೆದಿರುವುದು ಗೊತ್ತಾಗಿದೆ.

ಇನ್ನೂ ಕೂರ್ಗ್‌ ಕ್ಯಾಬ್‌ ಹಾಲಿ ಡೇ, ಜೂಮ್‌ ಹೋಂಸ್ಟೇ ವಿರುದ್ಧ ದೂರು ದಾಖಲಾಗಿದೆ. 7ನೇ ಹೊಸಕೋಟೆಯ ತೊಂಡೂರು ರಸ್ತೆಯ ಉಪ್ಪುತೋಡುವಿನ ಕೂರ್ಗ್‌ ಕಾಫಿ ಫ್ಲವರ್‌ ರೆಸಾರ್ಟ್‌ನಲ್ಲಿ ಮೈಸೂರು ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿತ್ತು. ಈ ರೆಸಾರ್ಟ್‌ ವಿರುದ್ಧವೂ ಸುಂಟಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೋಸ್ಟಲ್‌ ಹೋಂಸ್ಟೇ ಸಹ ನಿಯಮ ಉಲ್ಲಂಘಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು