ಸೋಮವಾರ, ನವೆಂಬರ್ 30, 2020
23 °C
ಶೋಭಾಯಾತ್ರೆಯಲ್ಲಿ ಪ್ರಶಸ್ತಿ ಸಿಗದವರ ಸಿಟ್ಟು, ನ್ಯಾಯಾಲಯದ ಮೊರೆ ಹೋಗಲೂ ನಿರ್ಧಾರ

ಮಡಿಕೇರಿ: ದಶಮಂಟಪ ತೀರ್ಪು - ಭುಗಿಲೆದ್ದ ಆಕ್ರೋಶ

ವಿಕಾಸ್ ಬಿ. ಪೂಜಾರಿ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ದಸರಾ ಶೋಭಾಯಾತ್ರೆ ಮುಗಿದರೂ ದಶಮಂಟಪಗಳ ತೀರ್ಪು ವಿಚಾರದಲ್ಲಿ ಭುಗಿಲೆದ್ದಿರುವ ಅಸಮಾಧಾನ ಮಾತ್ರ ತೀವ್ರವಾಗಿದೆ. ಬಹುಮಾನ ವಂಚಿತ ದೇವಸ್ಥಾನ ಸಮಿತಿ ಪದಾಧಿಕಾರಿಗಳ ಆಕ್ರೋಶ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. 

ದಶಮಂಟಪ ಸಮಿತಿ, ಪ್ರಧಾನ ದಸರಾ ಸಮಿತಿ ಸದಸ್ಯರು ಶೋಭಾಯಾತ್ರೆ, ಕರಗೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿದ್ದೇವೆಂದು ಹೇಳಿಕೊಂಡರೆ, ಗತಕಾಲದ ಇತಿಹಾಸವಿರುವ ದಸರಾದ ಮಂಟಪ ತೀರ್ಪು ವಿಚಾರದಲ್ಲಿ ಆರಂಭಗೊಂಡಿರುವ ಆಕ್ರೋಶ ಬೂದಿ ಮುಚ್ಚಿದ ಕೆಂಡದಂತೆ ಭಾಸವಾಗುತ್ತಿದೆ. 

ಪ್ರಶಸ್ತಿ ಪಡೆದ ಮಂಟಪ ಸಮಿತಿ ಸದಸ್ಯರು ಸಂಭ್ರಮದಲ್ಲಿದ್ದರೆ, ಅತ್ತ ಪ್ರಶಸ್ತಿ ಬಾರದ ಕೆಲವು ಮಂಟಪಗಳ ಸದಸ್ಯರು ಸಮಿತಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.  

ಮಂಗಳವಾರ ರಾತ್ರಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ದಂಡಿನ ಮಾರಿಯಮ್ಮ ದೇವಾಲಯಕ್ಕೆ ಪ್ರಥಮ, ಕುಂದೂರು ಮೊಟ್ಟೆ ಮಾರಿಯಮ್ಮ ಸಮಿತಿಗೆ ದ್ವಿತೀಯ ಬಹುಮಾನ ಹಾಗೂ ಕೋಟೆ ಮಹಾಗಣಪತಿ ದೇವಾಲಯಕ್ಕೆ ತೃತೀಯ ಬಹುಮಾನ ಲಭಿಸಿತ್ತು. ಬಹುಮಾನ ಸಹ ವಿತರಣೆ ಮಾಡಲಾಗಿದೆ.

ಈಗ ತೀರ್ಪುಗಾರಿಕೆಯ ಕುರಿತು ಭಿನ್ನ ಹೇಳಿಕೆಗಳು ವ್ಯಕ್ತವಾಗುತ್ತಿವೆ. ತೀರ್ಪಿನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ನಡೆಯುತ್ತಿದೆ. ಇನ್ನು ಕಂಚಿ ಕಾಮಾಕ್ಷಿಯಮ್ಮ ಮಂಟಪ ಸಮಿತಿ ಸದಸ್ಯರು, ಬಹಿರಂಗವಾಗಿ ಕಿಡಿಕಾರುತ್ತಿದ್ದಾರೆ. 

ಕಾನೂನು ಮೊರೆ ಹೋಗಲು ನಿರ್ಧಾರ:
‘ತೀರ್ಪುಗಾರಿಕೆಯಲ್ಲಿ ಮೋಸವಾಗಿದೆ. ಉತ್ತಮ ಮಂಟಪಗಳಿದ್ದರೂ ತೀರ್ಪುಗಾರರು ರಾಜಕೀಯ ಪ್ರೇರಿತವಾಗಿ ನಡೆದುಕೊಂಡಿದ್ದಾರೆ. ಇದರ ವಿರುದ್ಧ ಕಾನೂನು ಮೊರೆ ಹೋಗಲಾಗುವುದು’ ಎಂದು ಪ್ರಶಸ್ತಿ ಸಿಗದ ಕಂಚಿ ಕಾಮಾಕ್ಷಿಯಮ್ಮ ಮಂಟಪ ಸಮಿತಿ ಗೌರವಾಧ್ಯಕ್ಷ ಕೆ.ಟಿ.ಪ್ರಶಾಂತ್‌ ಎಚ್ಚರಿಕೆ ನೀಡಿದ್ದಾರೆ. 

ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಬುಧವಾರ ಬೆಳಿಗ್ಗೆ ಗಣ್ಯರು ವಿಜೇತ ಮಂಟಪಗಳ ಸಮಿತಿಗೆ ಬಹುಮಾನ ವಿತರಣೆ ಸಮಾರಂಭಕ್ಕೂ ಪ್ರಶಸ್ತಿ ಸಿಗದ ಸಮಿತಿ ಸದಸ್ಯರು ಬಹಿಷ್ಕಾರ ಹಾಕಿ ಹೊರ ನಡೆದಿದ್ದರು. 

ಈ ನಡುವೆ ದಸರಾ ದಶಮಂಟಪ ಸಮಿತಿ ಅಧ್ಯಕ್ಷ ರಂಜಿತ್ ಕುಮಾರ್ ಅವರು ‘ತೀರ್ಪುಗಾರಿಕೆಯಲ್ಲಿ ಯಾವುದೇ ರಾಜಕೀಯ ನಡೆದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. 

ಸಾಕಷ್ಟು ನಿಯಮ ಮಾಡಲಾಗಿತ್ತು. ನಂತರ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ತೀರ್ಪುಗಾರಿಕೆ ನೀಡಲಾಗಿದೆ ಎಂದು ಕೆ.ಟಿ. ಪ್ರಶಾಂತ್‌ ದೂರಿದ್ದಾರೆ.

ಕಥಾ ಸಾರಾಂಶ, ಲೈಟಿಂಗ್ಸ್, ಪ್ಲಾಟ್‌ಫಾರಂ, ಕಲಾಕೃತಿ ಚಲನವಲನ... ಹೀಗೆ ಪ್ರತಿ ವಿಭಾಗಕ್ಕೂ ತೀರ್ಪುಗಾರರ ನೇಮಿಸುವುದು ನಡೆದುಬಂದ ಸಂಪ್ರದಾಯ. ಆದರೆ, ಈ ಬಾರಿ ಇದ್ಯಾವುದನ್ನೂ ಪಾಲಿಸದ ದಸರಾ ಸಮಿತಿ ಅನ್ಯಾಯ ಎಸಗಿದೆ ಎಂದೂ ದೂರಿದ್ದಾರೆ.

ತೀರ್ಪುಗಾರರ ಸೂಚನೆಯಂತೆ ಮಂಟಪವು ಸಮಯಕ್ಕೆ ಸರಿಯಾಗಿ ಪ್ರದರ್ಶನ ನೀಡಿದೆ. ಆದರೆ, ತೀರ್ಪುಗಾರಿಕೆ ವೇಳೆ ಸಮಯ ಪಾಲಿಸಿಲ್ಲ ಎನ್ನುವ ಕಾರಣ ನೀಡಿ ಬಹುಮಾನ ನೀಡದೆ ವಂಚನೆ ಮಾಡಿದ್ದಾರೆ ಎಂದು ದೂರಿದರು. ‘ಇದು ಪೂರ್ವ ನಿರ್ಧರಿತ ತೀರ್ಪು’ ಎಂದು ಕಂಚಿ ಕಾಮಾಕ್ಷಿಯಮ್ಮ ಮಂಟಪದ ಶೋಮ್ಯಾನ್‌ ಕ್ರಿಯೇಷನ್ಸ್‌ ಸದಸ್ಯ ನವೀನ್‌ ಆರೋಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.