ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹಾನಿ ಬಗ್ಗೆ ಪ್ರಸ್ತಾವ ಸಲ್ಲಿಸಲು ಅಧಿಕಾರಿಗಳಿಗೆ ತಾ. ಪಂ ಅಧ್ಯಕ್ಷೆ ಸೂಚನೆ

ಮಡಿಕೇರಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ
Last Updated 18 ಆಗಸ್ಟ್ 2020, 12:49 IST
ಅಕ್ಷರ ಗಾತ್ರ

ಮಡಿಕೇರಿ: ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಮಡಿಕೇರಿ ತಾಲ್ಲೂಕಿನಲ್ಲಿ ಸಾಕಷ್ಟು ಹಾನಿಯಾಗಿದ್ದು, ಈ ಸಂಬಂಧ ಅಗತ್ಯ ಪ್ರಸ್ತಾವ ಸಲ್ಲಿಸುವಂತೆ ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್ ಅವರು, ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಎಂಜಿನಿಯರ್‌ಗೆ ಸೂಚಿಸಿದ್ದಾರೆ.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾ.ಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಸ್ತೆ, ಸೇತುವೆ, ಶಾಲೆ, ಅಂಗನವಾಡಿ ಹಾಗೆಯೇ ಸರ್ಕಾರಿ ಕಟ್ಟಡಗಳು... ಹೀಗೆ ಮಳೆಯಿಂದ ಹಾನಿಯಾದ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಕ್ರೋಡೀಕರಿಸಿ ಅಂದಾಜು ಪಟ್ಟಿ ಸಲ್ಲಿಸುವಂತೆ ಅವರು ಸೂಚಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಪಂಚಾಯತ್ ರಾಜ್ ಎಇಇ ಶ್ರೀಕಂಠಯ್ಯ, ಮಳೆಯಿಂದ ಹಾನಿಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಂದಾಜು ಪಟ್ಟಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಈಗಾಗಲೇ ಬೆಳೆ ಸಮೀಕ್ಷೆ ಆರಂಭವಾಗಿದ್ದು, ಕೃಷಿಕರಿಗೆ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ಮಾಹಿತಿ ನೀಡಿ ಪರಿಹಾರ ವಿತರಣೆಗೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.

ಪ್ರಸಕ್ತ ವರ್ಷದಲ್ಲಿ ರೈತರಿಂದಲೇ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ಸಮೀಕ್ಷೆ ಮಾಡಬಹುದಾಗಿದೆ. ಈ ಬಗ್ಗೆ ರೈತರಿಗೆ ಸಹಕಾರ ನೀಡಬೇಕು. ಬೆಳೆ ಹಾನಿ ಸಂಬಂಧಿಸಿದಂತೆ ಯಾವ ಕುಟುಂಬವು ಸಹ ಬಿಟ್ಟು ಹೋಗದಂತೆ ಗಮನ ಹರಿಸಬೇಕು ಎಂದು ತಾ.ಪಂ ಅಧ್ಯಕ್ಷರು ನಿರ್ದೇಶನ ನೀಡಿದರು.

ಬೆಳೆ ಸಮೀಕ್ಷೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎ.ಸಿ.ಗಿರೀಶ್ ಅವರು, ರೈತರು ತಮ್ಮ ಜಮೀನಿನಲ್ಲಿ ಬೆಳೆದ ವಿವಿಧ ಬೆಳೆಗಳ ಸಮೀಕ್ಷೆ ಕೈಗೊಳ್ಳಬೇಕಿದೆ. ಈ ಯೋಜನೆಯಿಂದ ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಿಸಲು, ಬೆಳೆ ಕಟಾವು ಪ್ರಯೋಗ ನಡೆಸಲು, ಕನಿಷ್ಠ ಬೆಂಬಲ ಬೆಲೆ, ಬೆಳೆ ಸಾಲ, ಬೆಳೆ ವಿಮೆ, ಆರ್‌ಟಿಸಿಯಲ್ಲಿ ವಿವರ ದಾಖಲಾತಿಗಾಗಿ ಕೈಗೊಳ್ಳುವುದಕ್ಕಾಗಿ ಆಗಸ್ಟ್ 24ರ ವರೆಗೆ ಅವಧಿ ನೀಡಲಾಗಿದೆ ಎಂದರು.

ಈಗಾಗಲೇ ತಾಲ್ಲೂಕಿನಲ್ಲಿ 100 ಖಾಸಗಿ ನಿವಾಸಿಗಳನ್ನು ಆಯ್ಕೆ ಮಾಡಲಾಗಿದ್ದು, ಹಂತ ಹಂತವಾಗಿ ತರಬೇತಿ ನೀಡಿ ನಿಗದಿತ ಸಮಯದಲ್ಲಿ ಸಮೀಕ್ಷೆ ನಡೆಸಲಾಗುವುದು. ರೈತರು ಸಹಕರಿಸುವಂತೆ ಮಡಿಕೇರಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಎ.ಸಿ ಗಿರೀಶ್ ಅವರು ಸಭೆಗೆ ಮಾಹಿತಿ ನೀಡಿದರು.

ಮಡಿಕೇರಿ ತಾಲ್ಲೂಕಿನಲ್ಲಿ ಶೇ 70ರಷ್ಟು ಭತ್ತ ನಾಟಿ ಕಾರ್ಯವಾಗಿದ್ದು, ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಗೆ ಭತ್ತದ ಗದ್ದೆಗೆ ಮರಳು, ಮಣ್ಣು ತುಂಬಿ ಹೋಗಿ ನಷ್ಟ ಉಂಟಾಗಿದ್ದಲ್ಲಿ ಪರಿಹಾರ ವಿತರಿಸಲಾಗುವುದು ಎಂದು ಹೇಳಿದರು.
ಮಧ್ಯ ಪ್ರವೇಶಿಸಿ ಮಾತನಾಡಿದ ತಾ.ಪಂ ಸದಸ್ಯ ಅಪ್ರು ರವೀಂದ್ರ, ಕಳೆದ ಬಾರಿ ನಾಟಿ ಮಾಡಿ ನಷ್ಟ ಉಂಟಾಗಿದ್ದರೂ ಸಹ ಪರಿಹಾರ ವಿತರಿಸಿಲ್ಲ ಎಂದು ಅವರು ದೂರಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗೋಪಿನಾಥ್ ಅವರು, ಮಡಿಕೇರಿ ತಾಲ್ಲೂಕಿನಲ್ಲಿ 6 ಸಾವಿರ ಮಂದಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, 304 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. 193 ವರದಿಗಳು ನಿರೀಕ್ಷಣೆಯಲ್ಲಿದೆ. 3 ಮರಣ ಪ್ರಕರಣಗಳು ವರದಿಯಾಗಿದೆ ಎಂದು ಹೇಳಿದರು.

ಈಗಾಗಲೇ 3 ಸಂಚಾರಿ ಆರೋಗ್ಯ ತಂಡಗಳು ಕಾರ್ಯಾಚರಿಸುತ್ತಿದ್ದು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಈ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 1 ಕೋವಿಡ್ ಆಸ್ಪತ್ರೆ, 3 ಕೋವಿಡ್ ಕೇರ್ ಸೆಂಟರ್‌ಗಳನ್ನ ತೆರೆಯಲಾಗಿದೆ. 150 ಹಾಸಿಗೆಗಳಿಗೆ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಇದೆ. 13 ವೆಂಟಿಲೇಟರ್‌ಗಳಿದ್ದು 25 ವೆಂಟಿಲೇಟರ್ ಜೋಡಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ನವೋದಯ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಇದ್ದು, ಸೋಂಕಿತರನ್ನು ಕರೆತರಲು 1 ಆಂಬುಲೆನ್ಸ್ ಮತ್ತು ಆಸ್ಪತ್ರೆಯಿಂದ ಗುಣಮುಖರಾಗಿ ತೆರಳುವವರ ಪ್ರಯಾಣದ ಅನುಕೂಲಕ್ಕಾಗಿ 1 ಟಿ.ಟಿ ವಾಹನ ವ್ಯವಸ್ಥೆ ಇದೆ ಎಂದು ಹೇಳಿದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್, ತೋಟಗಾರಿಕಾ ಬೆಳೆ ಪರಿಹಾರ ಸಂಬಂಧ ಶೇ 33ಕ್ಕಿಂತ ಹೆಚ್ಚು ಹಾನಿ ಸಂಭವಿಸಿದ್ದಲ್ಲಿ ಗರಿಷ್ಠ 2 ಹೆಕ್ಟೇರ್‌ಗೆ ₹ 36 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು. ಮುಂದಿನ ವಾರದಿಂದ ಕಾಳು ಮೆಣಸು ಗಿಡವನ್ನು ವಿತರಿಸಲಾಗುವುದು ಎಂದು ಹೇಳಿದರು.

ತಾ.ಪಂ. ಉಪಾಧ್ಯಕ್ಷರಾದ ಸಂತು ಸುಬ್ರಮಣಿ ಅವರು, ಕಾಳು ಮೆಣಸು ಗಿಡವನ್ನು ಎಲ್ಲರಿಗೂ ಸಮಾನವಾಗಿ ವಿತರಿಸಬೇಕು ಎಂದು ಅವರು ಸಲಹೆ ಮಾಡಿದರು.

ಸದಸ್ಯರಾದ ಉಮಾ ಪ್ರಭು ಅವರು, ಕೋವಿಡ್-19 ಸೋಂಕಿತರನ್ನು ತುಚ್ಚವಾಗಿ ಕಾಣಬಾರದು. ಮುನ್ನೆಚ್ಚರಿಕೆ ವಹಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಅದನ್ನು ಬಿಟ್ಟು ಇತರರನ್ನು ನೋಯಿಸಬಾರದು ಎಂದು ಹೇಳಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಇ. ಶ್ರೀಧರ ಅವರು, ತಾಲ್ಲೂಕಿನ ಸರ್ಕಾರಿ ಶಾಲೆಗಳ ಆರ್‌ಟಿಸಿ ದಾಖಲಾತಿಗಳನ್ನು ಸರಿಪಡಿಸಿಕೊಳ್ಳುವಂತೆ ಅವರು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT