ಗೋಣಿಕೊಪ್ಪಲು: ‘ಮೊಬೈಲ್ ಹಾಗೂ ತಂತ್ರಜ್ಞಾನದ ಮೋಹವು ಓದು ಹಾಗೂ ಪುಸ್ತಕಗಳನ್ನು ಕೆಳ ಸ್ಥಾನಕ್ಕೆ ತಳ್ಳಿ ವ್ಯಕ್ತಿಯ ಉನ್ನತಿಗೆ ಮಾರಕವಾಗುತ್ತಿದೆ’ ಎಂದು ಪಂಜಾಬ್ ಗುರುನಾನಕ್ ದೇವ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಮೊಹಿಂದರ್ ಪ್ರತಾಪ್ ಸತಿಜ ಕಳವಳ ವ್ಯಕ್ತಪಡಿಸಿದರು.
ಗೋಣಿಕೊಪ್ಪಲು ಕಾವೇರಿ ಕಾಲೇಜು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೇಂದ್ರ ಹಾಗೂ ಐಕ್ಯೂಎಸಿ ಸೆಲ್ ವತಿಯಿಂದ ಶನಿವಾರ ನಡೆದ ‘ಮಾಹಿತಿ ಸಾಕ್ಷರತೆ ಮತ್ತು ಓದುವ ಹವ್ಯಾಸ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಮೊಬೈಲ್ ಫೋನ್ ಮೋಹದಿಂದ ಹೊರಬಂದು ಪುಸ್ತಕಗಳನ್ನು ಓದು ಹವ್ಯಾಸವನ್ನು ರೂಢಿಸಿಕೊಳ್ಳುವುದು ಅಗತ್ಯ. ಓದುವ ತಂತ್ರಗಾರಿಕೆ ಮತ್ತು ಹವ್ಯಾಸಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಬಲ್ಲದು. ಪುಸ್ತಕಗಳಲ್ಲಿ ಜ್ಞಾನದ ಬಂಡಾರ ಅಡಗಿದ್ದು, ಜ್ಞಾನ ಸಂಪಾದನೆಗಾಗಿ ಪುಸ್ತಕಗಳನ್ನು ಓದುವುದು ಅತ್ಯಗತ್ಯ’ ಎಂದರು.
ಬೆಂಗಳೂರಿನ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಪ್ರಾಧ್ಯಾಪಕ ಎಂ.ಕೃಷ್ಣಮೂರ್ತಿ ಗ್ರಂಥಾಲಯದ ಪ್ರಾಮುಖ್ಯತೆ ಬಗ್ಗೆ ಮಾತನಾಡಿ, ‘ಮೊಬೈಲ್ ತಂತ್ರಜ್ಞಾನದಿಂದ ತಿಳಿದುಕೊಂಡ ವಿಷಯಗಳು ಹೆಚ್ಚು ಸಮಯ ಮನಸ್ಸಿನಲ್ಲಿ ಉಳಿಯುವುದಿಲ್ಲ, ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಗಳನ್ನು ಓದುವುದರಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು’ ಎಂದರು.
ಉಪ ಪ್ರಾಂಶುಪಾಲರಾದ ಪ್ರೊ.ಎಂ.ಎಸ್.ಭಾರತಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕಿ ಡಾ.ನಯನ ತಮ್ಮಯ್ಯ, ಗ್ರಂಥಪಾಲಕಿ ಟಿ.ಕೆ.ಲತಾ, ಗ್ರಂಥಾಲಯ ಸಹಾಯಕಿ ಅನುರಾಧಾ, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.