ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ; ಹಲವು ವಿಷಯ ಚರ್ಚೆಗೆ

ಪ್ರವಾಸೋದ್ಯಮ ನೀತಿ ಕುರಿತು ಸಚಿವರ ಜತೆ ಚರ್ಚೆ: ಡಾ.ಮಂತರ್‌ಗೌಡ
Published 14 ಜೂನ್ 2024, 6:37 IST
Last Updated 14 ಜೂನ್ 2024, 6:37 IST
ಅಕ್ಷರ ಗಾತ್ರ

ಮಡಿಕೇರಿ: ‌ಹೋಂಸ್ಟೇಗಳಿಗೆ ವಾಣಿಜ್ಯ ಬಳಕೆಯ ವಿದ್ಯುತ್ ಶುಲ್ಕ ಬೇಡ, ಗೃಹ ಬಳಕೆಯ ವಿದ್ಯುತ್ ದರ ಬೇಕು ಎಂಬ ಒತ್ತಾಯ ಇಲ್ಲಿ ಗುರುವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಕೇಳಿ ಬಂತು.

ಶಾಸಕ ಡಾ.ಮಂತರ್‌ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮಾತನಾಡಿದ ಬಹುತೇಕ ಮಂದಿ ಹೋಂಸ್ಟೇಗಳಿಗೆ ವಾಣಿಜ್ಯ ಬಳಕೆಯ ವಿದ್ಯುತ್ ಶುಲ್ಕ ವಿಧಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

‘ನೋಂದಾಯಿತ ಹೋಂಸ್ಟೇ ಅವರು ಮನೆಯಲ್ಲಿ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಅವಕಾಶ ಮಾಡುತ್ತಾರೆ. ಅದನ್ನು ಬಿಟ್ಟು ಹೋಟೆಲ್ ಮಾದರಿಯಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿಲ್ಲ. ಆದ್ದರಿಂದ ಗೃಹ ಬಳಕೆಯಂತೆ ವಿದ್ಯುತ್‍ನ್ನು ನೀಡಬೇಕು’ ಎಂದು ಹೋಂ ಸ್ಟೇ ಅಸೋಷಿಯೇಷನ್‍ನ ಪ್ರತಿನಿಧಿಗಳು ಕೋರಿದರು. 

ಈ ಕುರಿತು ಪ್ರತಿಕ್ರಿಯಿಸಿದ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ, ‘ಪ್ರವಾಸೋದ್ಯಮ ನೀತಿಯಡಿ ಹೋಂ ಸ್ಟೇಗೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನ ಪಾಲಿಸಲಾಗುತ್ತಿದೆ’ ಎಂದು ತಿಳಿಸಿದರೆ, ಕರ್ನಾಟಕ ವಿದ್ಯುತ್‍ಚ್ಛಕ್ತಿ ಮಂಡಳಿಯ ಎಂಜಿನಿಯರ್ ವಿದ್ಯುತ್ ನಿಗಮದಿಂದ ವಾಣಿಜ್ಯ ಮತ್ತು ಗೃಹ ಬಳಕೆ ಸಂಬಂಧಿಸಿದಂತೆ ಸರ್ಕಾರದಿಂದ ಹೊರಡಿಸಲಾಗಿರುವ ಆದೇಶಗಳನ್ನು ಪಾಲಿಸಲಾಗುತ್ತಿದೆ ಎಂದರು.

‘ಪ್ರವಾಸೋದ್ಯಮ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಹಾಗೂ 6 ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿ ವಿಸ್ತೃತವಾಗಿ ಈ ವಿಷಯವನ್ನು ಚರ್ಚಿಸಲಾಗುವುದು’ ಎಂದು ಮಂತರ್‌ಗೌಡ ಭರವಸೆ ನೀಡುವ ಮೂಲಕ ಚರ್ಚೆಗೆ ತೆರೆ ಎಳೆದರು.

ಎಲ್ಲೆಂದರಲ್ಲಿ ಕಸ ಬಿಸಾಡಬಾರದು. ಪ್ಲಾಸ್ಟಿಕ್‍ನ್ನು ಕಡ್ಡಾಯವಾಗಿ ಬಳಸಬಾರದು. ಹಸಿಕಸ ಮತ್ತು ಒಣಕಸವನ್ನು ಬೇರ್ಪಡಿಸಿ ನೀಡಬೇಕು. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಹೋಂಸ್ಟೇ ಅಸೋಷಿಯೇಷನ್‍ನ ಅಮರನಾಥ್ ಬಿ., ನಳಿನಿ ಅಚ್ಚಯ್ಯ, ಉಷಾ ಗಣಪತಿ, ಸಿ.ಸಿ.ತಿಮ್ಮಯ್ಯ, ಎನ್.ಕೆ.ಚಂಗಪ್ಪ, ಮಿಕ್ಕಿ ಕಾಳಪ್ಪ, ಕೆ.ಎಂ.ಕರುಂಬಯ್ಯ, ಎಂ.ಮೀನಾ ಕಾರ್ಯಪ್ಪ, ಪಿ.ಕೆ.ಹೆಮಾ ಮಾದಪ್ಪ, ಬಿ.ಎ.ಅಚ್ಚಯ್ಯ, ಸತೀಶ್ ರೈ, ಬಿ.ಪಿ.ಗಣಪತಿ, ಎ.ಎಸ್.ಮಲ್ಲೇಶ್ ಅವರು ಹಲವು ವಿಷಯ ಪ್ರಸ್ತಾಪಿಸಿದರು.

ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ; ಜಿಲ್ಲಾಧಿಕಾರಿ ಮತ್ತೊಮ್ಮೆ ಸೂಚನೆ!

ನಾಮಫಲಕಗಳಲ್ಲಿ ಶೇ 60ರಷ್ಟು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಅಳವಡಿಸಬೇಕು ಎಂದು ಪದೇ ಪದೇ ಸೂಚನೆಗಳನ್ನು ನೀಡುತ್ತಲೇ ಇರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಗುರುವಾರ ನಡೆದ ಸಭೆಯಲ್ಲಿ ಮತ್ತೊಮ್ಮೆ ಈ ಸೂಚನೆ ನೀಡಿದರು. ‘ಜಿಲ್ಲೆಯಲ್ಲಿ ಸರ್ಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲೆಡೆ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬರೆಸಬೇಕು. ಇದನ್ನು ಚಾಚೂ ತಪ್ಪದೇ ಪಾಲಿಸಬೇಕು. ಇದುವರೆಗೆ ಈ ರೀತಿ ನಾಮಫಲಕ ಬರೆಸದಿದ್ದಲ್ಲಿ ಶೀಘ್ರ ನಾಮಫಲಕಗಳನ್ನು ಬದಲಿಸಬೇಕು’ ಎಂದೂ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT