ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಾರರ ಕಡೆಗಣನೆ, ‘ಹಿಟ್ಲರ್ ಸಂಸ್ಕೃತಿ ಪ್ರದರ್ಶಿಸುತ್ತಿರುವ ಬಿಜೆಪಿ’: ವೀಣಾ

Last Updated 2 ಡಿಸೆಂಬರ್ 2020, 13:02 IST
ಅಕ್ಷರ ಗಾತ್ರ

ಮಡಿಕೇರಿ: ‘ಪೊನ್ನಂಪೇಟೆ ತಾಲ್ಲೂಕು ಕೇಂದ್ರಕ್ಕಾಗಿ ಹೋರಾಟ ನಡೆಸಿದವರನ್ನೇ ಕಡೆಗಣಿಸಿದ್ದು, ಬಿಜೆಪಿ ಸರ್ಕಾರದ ಆಡಳಿತ ವ್ಯವಸ್ಥೆ ಹಿಟ್ಲರ್ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿದೆ’ ಎಂದು ವಿಧಾನ ಪರಿಷತ್‌ ಸದಸ್ಯೆ ಎಸ್‌.ವೀಣಾ ಅಚ್ಚಯ್ಯ ಇಲ್ಲಿ ಆರೋಪಿಸಿದರು.

‌ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೊನ್ನಂಪೇಟೆ ತಾಲ್ಲೂಕಿಗಾಗಿ ಹಿರಿಯ ನಾಗರಿಕ ವೇದಿಕೆ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಅವರ ನೇತೃತ್ವದಲ್ಲಿ ನಿರಂತರ 74 ದಿನಗಳ ಧರಣಿ ಸತ್ಯಾಗ್ರಹದ ಹೋರಾಟ ನಡೆದಿದೆ. ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದ ಪದ್ಮಿನಿ ಪೊನ್ನಪ್ಪ ಅವರ ಪ್ರಯತ್ನವೂ ಇದೆ. ಆದರೆ, ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಹೋರಾಟ ನಡೆಸಿದವರಿಗೆ ಯಾರಿಗೂ ಸ್ಥಾನ ಕಲ್ಪಿಸದೆ ತಮ್ಮಿಂದಲೇ ಎಲ್ಲವೂ ಆಗಿದೆ ಎಂದು ಪ್ರತಿಬಿಂಬಿಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಂದಿ ಮಾಡಿರುವುದಾಗಿ ಟೀಕಿಸಿದರು.

ಹಿರಿಯ ನಾಗರಿಕರೇ ಉತ್ಸಾಹದಿಂದ ಸುಮಾರು ₹3 ಲಕ್ಷ ಖರ್ಚು ಮಾಡಿ ನೆನಪಿನ ಕಾಣಿಕೆ ಮತ್ತಿತರ ವ್ಯವಸ್ಥೆಗಳನ್ನು ಕಲ್ಪಿಸಿದ್ದರು. ಆದರೆ, ಕೃತಜ್ಞತಾ ಮನೋಭಾವನೆ ಇಲ್ಲದ ಆಡಳಿತ ವ್ಯವಸ್ಥೆ ಹಿರಿಯರನ್ನು ಕಡೆಗಣಿಸಿತು. ಕೊಡಗಿನಲ್ಲಿ ಬಿಜೆಪಿ ಇಲ್ಲದೇ ಉಸಿರಾಡಲು ಸಾಧ್ಯವೇ ಇಲ್ಲ ಎನ್ನುವ ರೀತಿಯಲ್ಲಿ ಬಿಜೆಪಿ ಮಂದಿ ವರ್ತಿಸುತ್ತಿದ್ದಾರೆ. ಹಿಂದೆ ನಾವೂ ಕೂಡ ಸರ್ಕಾರ ನಡೆಸಿದ್ದೇವೆ, ಎಲ್ಲರಿಗೂ ಅಗತ್ಯ ಗೌರವವನ್ನು ನೀಡಿದ್ದೇವೆ. ಆದರೆ, ಬಿಜೆಪಿಯ ಹಿಟ್ಲರ್ ಆಡಳಿತದಲ್ಲಿ ಯಾರಿಗೂ ಗೌರವ ಇಲ್ಲ. ತಾಲ್ಲೂಕು ಉದ್ಘಾಟನಾ ಸಮಾರಂಭದಲ್ಲಿ ನನಗೂ ಮಾತನಾಡಲು ಅವಕಾಶ ನೀಡಲಿಲ್ಲ. ಈ ರೀತಿಯ ಅನುಭವ ಅನೇಕ ಬಾರಿ ನನಗೆ ಆಗಿದೆ ಎಂದು ವೀಣಾ ಅಚ್ಚಯ್ಯ ಬೇಸರ ವ್ಯಕ್ತಪಡಿಸಿದರು.

ಪ್ರಚಾರ ಪ್ರಿಯ ಬಿಜೆಪಿ:ಬಿಜೆಪಿ ಕೇವಲ ಪ್ರಚಾರಕ್ಕಷ್ಟೇ ಹವಣಿಸುತ್ತದೆ, ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಬಿಜೆಪಿ ಸಭೆಯೊಂದನ್ನು ಆಯೋಜಿಸಿತ್ತು. ಆದರೆ, ಪಕ್ಷದ ಧ್ವಜವನ್ನು ತಾಲ್ಲೂಕು ಕಚೇರಿ ವ್ಯಾಪ್ತಿಯಲ್ಲೂ ಹಾರಿಸಿ, ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಗ್ರಾ.ಪಂ. ಚುನಾವಣೆಯನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈಗಾಗಲೇ ಶೇ 85ರಷ್ಟು ಪಂಚಾಯಿತಿಗಳಿಗೆ ತಾವು ಭೇಟಿ ನೀಡಿರುವುದಾಗಿ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ಮಾತನಾಡಿ, ‘ಅತಿವೃಷ್ಟಿ, ವನ್ಯಜೀವಿಗಳ ದಾಳಿ ಮತ್ತು ಕೋವಿಡ್ ಸಂದಿಗ್ಧ ಪರಿಸ್ಥಿಯಿಂದ ಕೊಡಗಿನ ಬೆಳೆಗಾರರು ಹಾಗೂ ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದರೆ, ಇಲ್ಲಿಯ ದುಸ್ಥಿತಿಯ ಬಗ್ಗೆ ಸರ್ಕಾರದ ಗಮನ ಸೆಳೆದು ಅಗತ್ಯ ನೆರವು ಪಡೆಯುವಲ್ಲಿ ಜಿಲ್ಲೆಯ ಶಾಸಕರು ಹಾಗೂ ಸಂಸದರು ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯರ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸರಾಚಂಗಪ್ಪ, ಧರ್ಮಜ ಉತ್ತಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT