ಸೋಮವಾರ, ಜನವರಿ 27, 2020
27 °C
ಆಹಾರ ಆಯೋಗದ ಪ್ರಭಾರ ಅಧ್ಯಕ್ಷ ಡಿ.ಜಿ.ಹಸಬಿ ಮಾಹಿತಿ, ಸರ್ಕಾರಕ್ಕೆ ಆಯೋಗದಿಂದ ವರದಿ ಸಲ್ಲಿಕೆ

ನಷ್ಟದಲ್ಲಿ ಜಿಲ್ಲೆಯ ಎರಡು ಎಂಎಸ್‌ಪಿಟಿಸಿ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯ ಎರಡು ‘ಎಂಎಸ್‌ಪಿಟಿಸಿ’ (ಆಹಾರ ಸಂಗ್ರಹ ಗೋದಾಮು) ಕೇಂದ್ರಗಳು ನಷ್ಟದಲ್ಲಿ ನಡೆಯುತ್ತಿದ್ದು ಅವುಗಳು ಸುಧಾರಣೆಯಾಗಬೇಕಿದೆ ಎಂದು ರಾಜ್ಯ ಆಹಾರ ಆಯೋಗದ ಪ್ರಭಾರ ಅಧ್ಯಕ್ಷ ಡಿ.ಜಿ.ಹಸಬಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸರ್ಕಾರದ ಸಹಾಯಧನದ ಅಡಿ ನ್ಯಾಯಬೆಲೆ ಅಂಗಡಿ, ವಿದ್ಯಾರ್ಥಿ ನಿಲಯ, ಅಂಗನವಾಡಿ ಕೇಂದ್ರಗಳಿಗೆ ದೊರೆಯುವ ಆಹಾರ ಪದಾರ್ಥಗಳು ಸಮರ್ಪಕವಾಗಿ ತಲುಪಬೇಕು. ಆ ನಿಟ್ಟಿನಲ್ಲಿ ಪರಿಶೀಲಿಸಿ ಮೇಲ್ವಿಚಾರಣೆ ಮಾಡಿ, ಸರ್ಕಾರಕ್ಕೆ ವರದಿ ನೀಡುವುದು ಆಯೋಗದ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಆಹಾರ ಪದಾರ್ಥಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಬೇಕು. ಆದರೆ, ಎಂಎಸ್‌ಪಿಟಿಸಿ ಕೇಂದ್ರಗಳಲ್ಲಿ ವೈಜ್ಞಾನಿಕವಾಗಿ ಆಹಾರ ಪದಾರ್ಥವನ್ನು ಸಂಗ್ರಹಣೆ ಮಾಡುತ್ತಿಲ್ಲ. ವಿರಾಜಪೇಟೆಯ ಒಂದೇ ಕೇಂದ್ರದಲ್ಲಿ 198 ಕ್ವಿಂಟಲ್‌ನಷ್ಟು ಗೋಧಿ ಹಾಳಾಗುತ್ತಿದೆ’ ಎಂದು ಹೇಳಿದರು.

‘ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಆಹಾರ ಪದಾರ್ಥಗಳನ್ನು ಪಡಿತರ ಚೀಟಿದಾರರಿಗೆ ತಲುಪಿಸಬೇಕು’ ಎಂದು ಅವರು ಸೂಚಿಸಿದರು.

ಸದಸ್ಯರಾದ ಮೊಹಮ್ಮದ್ ಅಲಿ ಮಾತನಾಡಿ, ‘ಜಿಲ್ಲೆಯು ಬೆಟ್ಟಗುಡ್ಡಗಳಿಂದ ಕೂಡಿದ್ದು ಭೌಗೋಳಿಕವಾಗಿ ವಿಭಿನ್ನತೆ ಹೊಂದಿದೆ. ಆದ್ದರಿಂದ, ಸರ್ಕಾರದ ಯೋಜನೆಗಳನ್ನು ಪ್ರತ್ಯೇಕ ಮಾನದಂಡ ನಿಗದಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದರು.
ಸದಸ್ಯರಾದ ಮಂಜುಳಾ ಹಾಜರಿದ್ದರು.

ಅಧಿಕಾರಿಗಳೊಂದಿಗೆ ಸಭೆ: ಜಿಲ್ಲೆಯಲ್ಲಿನ ಅಪೌಷ್ಟಿಕ ಮಕ್ಕಳನ್ನು ಪತ್ತೆ ಹಚ್ಚಿ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿರುವ ‘ಪೌಷ್ಟಿಕ ಪುನಃಶ್ಚೇತನ ಕೇಂದ್ರ’ಕ್ಕೆ(ಎನ್‌ಆರ್‌ಸಿ) ಸೇರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಿ.ಜಿ.ಹಸಬಿ ನಿರ್ದೇಶನ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಅಡಿ 7 ಕೆ.ಜಿ ಅಕ್ಕಿ ವಿತರಿಸುತ್ತಿದೆ. ಆದರೂ, ಅಲ್ಲಲ್ಲಿ ಅಪೌಷ್ಟಿಕತೆಗೆ ತುತ್ತಾಗಿರುವ ಮಕ್ಕಳು ಕಂಡುಬರುತ್ತಿದ್ದು, ಇಂತಹ ಮಕ್ಕಳನ್ನು ಇತರ ಮಕ್ಕಳಂತೆ ಆರೋಗ್ಯಯುತವಾಗಿ ಕಾಪಾಡುವಂತಾಗಲು ‘ಪೌಷ್ಟಿಕ ಪುನಃಶ್ಚೇತನ ಕೇಂದ್ರ’ಗಳನ್ನು ತೆರೆಯಲಾಗಿದ್ದು, ಇದನ್ನು ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ನ್ಯಾಯಬೆಲೆ ಅಂಗಡಿಗಳು, ವಿದ್ಯಾರ್ಥಿ ನಿಲಯಗಳು ಹಾಗೂ ಅಂಗನವಾಡಿಗಳಿಗೆ ಸರ್ಕಾರ ಸಹಾಯಧನದ ಅಡಿ ಆಹಾರ ಪೂರೈಸುತ್ತಿದೆ. ಈ ಆಹಾರ ಸಮರ್ಪಕವಾಗಿ ತಲುಪಬೇಕು. ಆಹಾರ ಪದಾರ್ಥಗಳು ಗುಣಮಟ್ಟದಿಂದ ಕೂಡಿರಬೇಕು. ಎಷ್ಟು ಬೇಕು ಅಷ್ಟು ಮಾತ್ರ ಪೂರೈಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಗೋದಾಮಿನಲ್ಲಿ ಕೊಳೆಯಬಾರದು ಎಂದು ಹಸಬಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕೊಡಗು ಜಿಲ್ಲೆಯೂ ಸೇರಿದಂತೆ ಈಗಾಗಲೇ ರಾಜ್ಯದ 23 ಜಿಲ್ಲೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ಇದೇ 23ರಂದು ರಾಜ್ಯಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಯಲಿದ್ದು, ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸದಸ್ಯರಾದ ಮಹಮ್ಮದ್ ಅಲಿ ಮಾತನಾಡಿ, ಮಧ್ಯಾಹ್ನದ ಬಿಸಿಯೂಟ ಯೋಜನೆ, ವಿದ್ಯಾರ್ಥಿ ನಿಲಯ ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಈ ಸಂಬಂಧ ಅನುಪಾಲನಾ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳು ನೀಡುವಂತೆ ಅವರು ಸೂಚಿಸಿದರು.

ಸದಸ್ಯರಾದ ಮಂಜುಳಾ ಮಾತನಾಡಿ, ಹಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಎರಡು ತಿಂಗಳಿಗೊಮ್ಮೆ ತಾಯಂದಿರ ಸಭೆ ನಡೆಸಬೇಕು. ಬಡವರಿಗೆ ಸರ್ಕಾರದ ಆಹಾರ ಭದ್ರತಾ ಸಹಾಯಧನ ತಲುಪಿಸಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಜರಿದ್ದರು.

 

ಪ್ರತಿಕ್ರಿಯಿಸಿ (+)