ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ನನಸಾಗದ ಕನಸು | ಮೇಲ್ದರ್ಜೆಗೇರಿಲ್ಲ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ

ಮೇಲ್ದರ್ಜೆಗೇರಿಲ್ಲ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ
Last Updated 15 ಸೆಪ್ಟೆಂಬರ್ 2022, 21:45 IST
ಅಕ್ಷರ ಗಾತ್ರ

ನಾಪೋಕ್ಲು: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಬಿ.ಸಿ.ನಾಗೇಶ್ ಅವರು ಪ್ರಸ್ತಾಪಿಸಿದ ಸಮೀಪದ ಮೂರ್ನಾಡಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇರಿಸುವ ಮಾತು ಮಾತಾಗಿಯೇ ಉಳಿದಿದೆ. ಮೇಲ್ದರ್ಜೆಗೇರುವ ಕನಸು ಇನ್ನೂ ಈಡೇರಿಲ್ಲ. ಸರ್ಕಾರದ ಪ್ರಸ್ತಾವಕ್ಕೆ ಇನ್ನೂ ಚಾಲನೆ ದೊರೆತಿಲ್ಲ.

ಮೂರ್ನಾಡು ಪಟ್ಟಣಕ್ಕೆ ಹೊಂದಿಕೊಂಡಂತಿರುವ ಈ ಪ್ರಾಥಮಿಕ ಆರೋಗ್ಯಕೇಂದ್ರ ಜನಸಾಮಾನ್ಯರಿಗೆ ಪ್ರಾಥಮಿಕ ಚಿಕಿತ್ಸೆಗಳನ್ನು ನೀಡುತ್ತಿದೆ. ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಂಖ್ಯೆ 26,335. ಕೇಂದ್ರವು 9 ಉಪಕೇಂದ್ರಗಳನ್ನು ಹೊಂದಿದ್ದು, 9 ಮಂದಿ ಕಿರಿಯ ಸಹಾಯಕರ ಅಗತ್ಯವಿದೆ. ಪ್ರಸ್ತುತ 5 ಮಂದಿ ಕಿರಿಯ ಸಹಾಯಕರು ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದು, ನಾಲ್ಕು ಹುದ್ದೆಗಳು ಖಾಲಿ ಉಳಿದಿವೆ.

ಮೂರ್ನಾಡು-ಎ, ಮೂರ್ನಾಡು-ಬಿ, ಕಟ್ಟೆಮಾಡು, ಮರಗೋಡು, ಅರೆಕಾಡು, ಹಾಕತ್ತೂರು, ಮೇಕೇರಿ, ಕಡಗದಾಳು, ಹೊದ್ದೂರು ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಈ ಹಿಂದೆ ಹೊದ್ದೂರು ಉಪಕೇಂದ್ರವು ನಾಪೋಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟಿತ್ತು. ಈಗ ಮೂರ್ನಾಡು ಕೇಂದ್ರದ ವ್ಯಾಪ್ತಿಗೆ ಒಳಪಟ್ಟಿದೆ.

ಮೂರ್ನಾಡು ಪಟ್ಟಣದಿಂದ ಕೇವಲ 10 ಕಿ.ಮೀ.ದೂರದಲ್ಲಿ ನಾಪೋಕ್ಲುವಿನಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದೆ. 10 ವರ್ಷಗಳ ಹಿಂದೆ ಸರ್ಕಾರಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದ್ದರೂ ಹತ್ತು ಹಲವು ಕೊರತೆಗಳು ಇನ್ನೂ ಕಾಡುತ್ತಿವೆ.

ಸುಮಾರು ₹ 1.25 ಕೋಟಿ ವೆಚ್ಚದಲ್ಲಿ ಬೃಹತ್ ಕಟ್ಟಡವೇನೋ ನಿರ್ಮಾಣಗೊಂಡಿದೆ. ಜಿಲ್ಲೆಯ ಹುದಿಕೇರಿ, ಸುಂಟಿಕೊಪ್ಪ ಹಾಗೂ ನಾಪೋಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಗಳ ಪೈಕಿ ನಾಪೋಕ್ಲು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನುಮತಿ ದೊರೆತು ಪಟ್ಟಣದ ಹೃದಯ ಭಾಗದಲ್ಲಿ ತಲೆ ಎತ್ತಿತು. ಆದರೆ, ಈ ಸಮುದಾಯ ಕೇಂದ್ರದಲ್ಲಿಯೇ ಸೌಲಭ್ಯಗಳಿಲ್ಲ. ಇನ್ನು ಮೂರ್ನಾಡಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿದರೆ ಸೌಲಭ್ಯಗಳು ಲಭಿಸಿತೇ ಎಂಬುದು ಜನಸಾಮಾನ್ಯರ ಪ್ರಶ್ನೆ.

‘ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು, ದಂತವೈದ್ಯರು, ಕ್ಷ-ಕಿರಣ ತಂತ್ರಜ್ಞರು ಇತರ ಸಿಬ್ಬಂದಿ ಸೇರಿದಂತೆ 40ಕ್ಕೂ ಅಧಿಕ ಸಿಬ್ಬಂದಿಯ ಅಗತ್ಯ ಇದೆ. 10 ವರ್ಷ ಕಳೆದರೂ ಆರೋಗ್ಯ ಕೇಂದ್ರದಲ್ಲಿ ಕೊರತೆಗಳೇ ತುಂಬಿವೆ. ಇನ್ನು ಮೂರ್ನಾಡು ಕೇಂದ್ರವು ಮೇಲ್ದರ್ಜೆಗೇರಿದರೂ ಇವೇ ಸಮಸ್ಯೆಗಳು ಪುನಾರಾವರ್ತನೆಗೊಳ್ಳಲಿವೆ’ ಎನ್ನುತ್ತಾರೆ ಕಿಗ್ಗಾಲು ಗ್ರಾಮದ ಗಿರೀಶ್

ಸರ್ಕಾರಕ್ಕೆ ಪ್ರಸ್ತಾವ; ಟಿಎಚ್‌ಒ

ಮಡಿಕೇರಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಚೇತನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಮೂರ್ನಾಡು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಇದು ತೀರಾ ಅಗತ್ಯವಾದ ಕೆಲಸ. ಇದರಿಂದ ಈ ಭಾಗದ ಜನರಿಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ದೊರೆಯಲಿದೆ’ ಎಂದು ಹೇಳಿದರು.

ಮಡಿಕೇರಿ ತಾಲ್ಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು; 05

ಮಡಿಕೇರಿ ತಾಲ್ಲೂಕಿನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳು; 01

ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಂಖ್ಯೆ; 26,335

ಮೂರ್ನಾಡು ವ್ಯಾಪ್ತಿಯಲ್ಲಿರುವ ಆರೋಗ್ಯ ಉಪಕೇಂದ್ರಗಳು; 09

ಖಾಲಿ ಇರುವ ಕಿರಿಯ ಆರೋಗ್ಯ ಸಹಾಯಕರ ಹುದ್ದೆಗಳು; 04

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT