ಬುಧವಾರ, ಮಾರ್ಚ್ 29, 2023
26 °C
ನಾಳೆಯಿಂದ ನಡೆಯುವ ರಾಷ್ಟ್ರಮಟ್ಟದ ಹೊನಲು ಬೆಳಕಿನ ಪಂದ್ಯಾವಳಿ

ರಾಷ್ಟ್ರಮಟ್ಟದ ಫುಟ್‌ಬಾಲ್ ಟೂರ್ನಿಗೆ ವೇದಿಕೆ ಮಾಡಿದೆ ಕೊಡಗಿನ ಸಣ್ಣ ಊರು ಅಮ್ಮತ್ತಿ

ರೆಜಿತ್‌ಕುಮಾರ್ ಗುಹ್ಯ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಕ್ರೀಡಾ ಜಿಲ್ಲೆಯಾಗಿರುವ ಕೊಡಗಿನಲ್ಲಿ ಹಾಕಿ, ಕ್ರಿಕೆಟ್‌ನಂತೆ ಫುಟ್‌ಬಾಲ್ ಕೂಡ ಪ್ರವರ್ಧಮಾನಕ್ಕೆ ಬರುತ್ತಿದ್ದು, ಪುಟ್ಟ ಹಳ್ಳಿಯ ಕ್ಲಬ್‌ವೊಂದು ರಾಷ್ಟ್ರಮಟ್ಟದ ಟೂರ್ನಿಗೆ ವೇದಿಕೆ ಸಜ್ಜುಗೊಳಿಸಿದೆ. ಇದಕ್ಕಾಗಿ ಜಿಲ್ಲೆಯ ಫುಟ್‌ಬಾಲ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. 

ಅಮ್ಮತ್ತಿಯ ಮಿಲನ್ಸ್ ಫುಟ್‌ಬಾಲ್ ಕ್ಲಬ್ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ರಾಷ್ಟ್ರಮಟ್ಟದ ಹೊನಲು ಬೆಳಕಿನ ಫುಟ್‌ಬಾಲ್ ಟೂರ್ನಿಯನ್ನು, ಜ. 20ರಿಂದ 29ರವರೆಗೆ ಆಯೋಜಿಸಿದೆ. ಅನುಭವಿ ತೀರ್ಪುಗಾರರು ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ನಿಯಮಗಳೊಂದಿಗೆ ಪಂದ್ಯಾಟ ನಡೆಯಲಿದೆ. ಈಗಾಗಲೇ ಮೈದಾನದ ತಯಾರಿ ಬಹುತೇಕ ಸಿದ್ಧಗೊಂಡಿದ್ದು ಅಂತಿಮ ಹಂತದಲ್ಲಿದೆ.

2003ರಲ್ಲಿ ಅಮ್ಮತ್ತಿ ಗ್ರಾಮದಲ್ಲಿ ಐವರು ಯುವಕರು ಸೇರಿ ಕ್ಲಬ್ ಒಂದನ್ನು ರಚಿಸಿದ್ದರು. ಇಟಲಿ ದೇಶದ ಆಟಗಾರ ಎ.ಸಿ.ಮಿಲನ್ ಹೆಸರನ್ನು ಬಳಸಿಕೊಂಡ ತಂಡ, ಮಿಲನ್ ಫುಟ್‌ಬಾಲ್ ಕ್ಲಬ್ ಎಂದು ಹೆಸರಿಟ್ಟರು. ಪ್ರಸ್ತುತ 75 ಸದಸ್ಯರನ್ನು ಹೊಂದಿರುವ ಮಿಲನ್ಸ್ ಜಿಲ್ಲೆಯಲ್ಲಿ ಹಲವು ಫುಟ್‌ಬಾಲ್ ಟೂರ್ನಿ ಆಯೋಜಿಸುವುದರ ಜತೆಗೆ ‘ಮಿಲನ್ಸ್ ಎಫ್.ಸಿ’ ಹೆಸರಿನಲ್ಲಿ ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದೆ.

‘ಮಿಲನ್ಸ್ ಕಪ್ ಫುಟ್‌ಬಾಲ್’ ಪಂದ್ಯಾವಳಿಯನ್ನು ಭಾರತ ತಂಡ ಮಾಜಿ ನಾಯಕ ಹಾಗೂ ಹಾಲಿ ತಾಂತ್ರಿಕ ಸಮಿತಿ ಸದಸ್ಯರಾಗಿರುವ ಈ.ಎಂ.ವಿಜಯನ್ ಉದ್ಘಾಟಿಸಲಿದ್ದಾರೆ. ಅಂತರರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಸೇರಿದಂತೆ ವಿವಿಧ ಗಣ್ಯರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಯುವ ಪ್ರತಿಭೆಗಳಿಗೆ ತರಬೇತಿ

‘ಮಿಲನ್ಸ್’ ತಂಡವು ಆಗಿಂದಾಗೆ ಗ್ರಾಮಮಟ್ಟದ ಪಂದ್ಯಾವಳಿಗಳನ್ನು ಆಯೋಜಿಸುತ್ತಿದ್ದು, ಯುವ ಫುಟ್‌ಬಾಲ್ ಆಟಗಾರರನ್ನು ಗುರುತಿಸುವ ಕಾರ್ಯ ಮಾಡುತ್ತಿದೆ. ಅಲ್ಲದೇ, ಆಸಕ್ತಿ ಇರುವ ಯುವ ಆಟಗಾರರಿಗೆ ಫುಟ್‌ಬಾಲ್ ತರಬೇತಿ ನೀಡುವುದು ಹಾಗೂ ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುತ್ತಿದ್ದಾರೆ. ಇತ್ತೀಚೆಗೆ ಅಹ್ಮದಾಬಾದ್‌ನಲ್ಲಿ ನಡೆದ ನ್ಯಾಷನಲ್ ಗೇಮ್ಸ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ದಿವಾಕರ್, ಮಿಲನ್ಸ್ ತಂಡದ ಆಟಗಾರ ರಾಗಿದ್ದರು. ಇದಲ್ಲದೇ ಹತ್ತಾರು ಯುವ ಪ್ರತಿಭೆಗಳನ್ನು ಗುರುತಿಸಿ, ಬೆಳೆಸುವ ಕಾರ್ಯವನ್ನು ಮುಂದುವರಿಸಿದ್ದಾರೆ.

ಭಾಗವಹಿಸುವ ತಂಡಗಳು

ಕೇರಳದ ಯು.ಟಿ.ಡಿ ಕಣ್ಣೂರು, ಡೈನ್ಮೋಸ್ ಕೇರಳ, ಎ.ಜಿ.ಎಸ್ ತಿರುವನಂತಪುರ, ಯು.ಟಿ.ಡಿ ಎರ್ನಾಕುಳಂ, ತಮಿಳುನಾಡು ಆದಾಯ ತೆರಿಗೆ ಇಲಾಖೆ, ಜಿ.ಎಸ್.ಟಿ ತಮಿಳುನಾಡು, ಯು.ಟಿ.ಡಿ ಎಫ್.ಸಿ ಮಂಗಳೂರು, ವಿಜಯನಗರ ಎಫ್.ಸಿ ಮೈಸೂರು, ಯೆನೆಪೊಯ ಎಫ್.ಸಿ, ಸೆಂಟ್ರಲ್ ಬೆಂಗಳೂರು, ಸೌತ್ ಬೆಂಗಳೂರು, ಕಲ್ಲುಬಾಣೆ ಎಫ್.ಸಿ, ಸೆನ್ಸಾ ಎಫ್.ಸಿ ಕೊಡಗು, ಭಗವತಿ ಎಫ್.ಸಿ ಕೊಡಗು, ನೆಹರು ಎಫ್.ಸಿ ಕೊಡಗು, ಆಕ್ಸ್‌ಫರ್ಡ್ ಎಫ್.ಸಿ ಕೊಡಗು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು