ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಣಿಗರಿಲ್ಲದೆ ಕೊಡಗಿನ ಬೆಟ್ಟಗಳು ಖಾಲಿ

ಲಾಕ್‌ಡೌನ್‌: ಹಸಿರಿನಿಂದ ‌ಕಂಗೊಳಿಸುತ್ತಿವೆ ಪ್ರಕೃತಿ ತಾಣಗಳು
Last Updated 8 ಜೂನ್ 2021, 14:33 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ತಡಿಯಂಡಮೋಳ್ ಬೆಟ್ಟ ಮತ್ತಷ್ಟು ರಮಣೀಯವಾಗಿ ಕಂಗೊಳಿಸುತ್ತಿದೆ. ಕಬ್ಬೆಬೆಟ್ಟ, ಮಲ್ಮಬೆಟ್ಟ, ಇಗ್ಗುತ್ತಪ್ಪ ಬೆಟ್ಟ, ಪೇರೂರು ಬೆಟ್ಟಗಳು ಸಹಜ ಸೌಂದರ್ಯದಿಂದ ಕಣ್ಮನಸೆಳೆಯುತ್ತಿವೆ. ಪ್ರವಾಸಿಗರಿಲ್ಲದೇ ಮಾಲಿನ್ಯ ಮುಕ್ತವಾಗಿವೆ.

ಕೊಡಗಿನ ಅತಿ ಎತ್ತರದ ಶಿಖರ ಎಂಬ ಖ್ಯಾತಿಯ ತಡಿಯಂಡಮೋಳ್ ಬೆಟ್ಟವನ್ನೇರುವವರ ಸಂಖ್ಯೆ ಇಳಿಮುಖಗೊಂಡಿದೆ. ಡಿಸೆಂಬರ್ ತಿಂಗಳಲ್ಲಿ ಸ್ಥಳೀಯರು ಚಾರಣ ಮಾಡಿದ್ದು ಬಿಟ್ಟರೆ ಜಿಲ್ಲೆಯ ಹೊರಭಾಗದಿಂದ ಚಾರಣಕ್ಕೆ ಬಂದವರು ವಿರಳ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ತಡಿಯಂಡಮೋಳ್ ಬೆಟ್ಟವನ್ನು ವೀಕ್ಷಿಸಲು ಈ ಹಿಂದೆಯೇ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ನಿಗದಿತ ಶುಲ್ಕ ಪಾವತಿಸಿ ಬೆಟ್ಟ ಸೇರಬೇಕಿತ್ತು. ಮಾಲಿನ್ಯ ನಿಯಂತ್ರಿಸುವ ದೃಷ್ಟಿಯಿಂದ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಕೊಂಡೊಯ್ಯಲು ನಿರ್ಬಂಧ ಹೇರಲಾಗಿತ್ತು. ಹಲವು ಕೂಲಿ ಕಾರ್ಮಿಕ ಕುಟುಂಬಗಳು ನಾಲ್ಕುನಾಡು ವಿಭಾಗದ ನೂರಾರು ಹೋಂಸ್ಟೇಗಳು ಮತ್ತು ರೆಸಾರ್ಟ್ ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಯವಕಪಾಡಿ ಗ್ರಾಮದ ಅನೇಕ ಬುಡಕಟ್ಟು ಯುವಕರು ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುವ ತರಬೇತಿ ಪಡೆದಿದ್ದು, ಆ ಮೂಲಕ ಟ್ರಕ್ಕಿಂಗ್‌ಗೆ ತೆರಳುವ ಪ್ರವಾಸಿಗರಿಗೆ ನೆರವಾಗುವುದರೊಂದಿಗೆ ತಮ್ಮ ಕುಟುಂಬ ನಿರ್ವಹಣೆಗೂ ಸಹಾಯವಾಗುತ್ತಿತ್ತು. ಎಲ್ಲರಿಗೂ ಸಮಸ್ಯೆಯಾಗಿದೆ ಎಂದು ಮಡಿಕೇರಿ ತಾಲ್ಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಹೇಳುತ್ತಾರೆ.

ಚೇಲಾವರ ಗ್ರಾಮದ ಪ್ರಸಿದ್ಧ ಚೇಲಾವರ ಜಲಪಾತದ ಹಾದಿಯಲ್ಲಿ ಸಿಗುವ ಕಬ್ಬೆಬೆಟ್ಟವೂ ಚಾರಣಕ್ಕೆ ಪ್ರಸಿದ್ಧವಾಗಿದ್ದು, ವಾರಾಂತ್ಯದ ದಿನಗಳಲ್ಲಿ 40ರಿಂದ 50 ಮಂದಿ ಪ್ರವಾಸಿಗರು ಬರುತ್ತಿದ್ದರು. ಚಾರಣಕ್ಕೆ ಬರುವ ಪ್ರವಾಸಿಗರ ಮಿತಿಮೀರಿದ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆಯಿಂದ ಒಂದಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಪ್ಲಾಸ್ಟಿಕ್, ಬಾಟಲಿ ಮತ್ತಿತರ ಪರಿಸರಕ್ಕೆ ಹಾನಿ ಉಂಟುಮಾಡುವ ವಸ್ತುಗಳನ್ನು ಕೊಂಡೊಯ್ದು ಎಲ್ಲೆಂದರಲ್ಲಿ ಎಸೆಯುವಂತಿಲ್ಲ ಎಂಬ ನಿರ್ಬಂಧ ಹೇರಿ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಲಾಕ್‌ಡೌನ್‌ನಿಂದಾಗಿ ಕಬ್ಬೆಬೆಟ್ಟ, ಚೋಮಕುಂದು ಶಿಖರ, ತೂಕುಪಾರೆ, ದೊಡ್ಡಬೆಟ್ಟ ಎಲ್ಲವೂ ಮಾಲಿನ್ಯ ಮುಕ್ತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT