ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆ | ತೋಟದ ಕೆಲಸಕ್ಕೆ ಕಾರ್ಮಿಕರು ಬೇಕಾಗಿದ್ದಾರೆ...!

ಸರ್ಕಾರ ಧಾವಿಸಬೇಕಿದೆ ಬೆಳೆಗಾರರ ನೆರವಿಗೆ, ಆಗಬೇಕಿದೆ ವಿನೂತನ ಆವಿಷ್ಕಾರಗಳ ಶೋಧ, ಕಾರ್ಮಿಕರಿಗೂ ಬೇಕಿದೆ ಸರ್ಕಾರದ ನೆರವು
Published 8 ಜನವರಿ 2024, 6:35 IST
Last Updated 8 ಜನವರಿ 2024, 6:35 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಫಿ ಹಣ್ಣಾಗಿದೆ. ಭತ್ತವೂ ಕೊಯ್ಲಿಗೆ ಈಗಾಗಲೇ ಬಂದಾಗಿದೆ. ತೋಟದಲ್ಲಿ ರಾಶಿ ರಾಶಿ ಕೆಲಸವಿದೆ. ಆದರೆ, ಇದನ್ನೆಲ್ಲ ನಿರ್ವಹಿಸಲು ಕಾರ್ಮಿಕರೇ ಇಲ್ಲದ ಸ್ಥಿತಿ ಸೃಷ್ಟಿಯಾಗಿದೆ.

ವರ್ಷದಿಂದ ವರ್ಷಕ್ಕೆ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಕಾರ್ಮಿಕರ ಕೊರತೆ ಹೆಚ್ಚುತ್ತಲೇ ಇದೆ. ಕೋವಿಡ್ ನಂತರವಂತೂ ಕಾರ್ಮಿಕರು ದುರ್ಲಭ ಎನಿಸುವಂತಾಗಿದೆ. ಕಾರ್ಮಿಕರ ಕೊರತೆಯಿಂದ ಸಹಜವಾಗಿಯೇ  ಕೂಲಿಯ ದರ ಏರುತ್ತಲೇ ಇದೆ. ಹೀಗಿದ್ದರೂ, ಕೆಲಸಕ್ಕಾಗಿ ಬರುತ್ತಿರುವ ನುರಿತ ಕಾರ್ಮಿಕರ ಸಂಖ್ಯೆ ಅತ್ಯಲ್ಪ ಎನಿಸಿದೆ.

ಕಾರ್ಮಿಕರಿಗಾಗಿ ತೋಟಗಳ ಮಾಲೀಕರು ಕಾಯಬೇಕಾದ ಸ್ಥಿತಿ ಜಿಲ್ಲೆಯ ಎಲ್ಲೆಡೆ ವ್ಯಾಪಿಸುತ್ತಿದೆ. ಸ್ಥಳೀಯ ಕಾರ್ಮಿಕರ ಅಭಾವ ಮಾತ್ರವಲ್ಲ ಈಗ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಮಿಕರ ಅಭಾವವೂ ತಲೆದೋರಿದೆ. ಕಾರ್ಮಿಕರ ಕೊರತೆಯಿಂದ ಹೈರಣಾಗಿರುವ ಮಾಲೀಕರು ಈ ಕೃಷಿಯೂ ಬೇಡ, ತೋಟಗಾರಿಕಾ ಬೆಳೆಯೂ ಬೇಡ ಎನ್ನುವ ಸ್ಥಿತಿಗೆ ತಲುಪಿದ್ದಾರೆ.

ದೊಡ್ಡ ದೊಡ್ಡ ಎಸ್ಟೇಟ್ ಮಾಲೀಕರು ಹೆಚ್ಚಿನ ಕೂಲಿ ನೀಡುವ ಮೂಲಕ ಕಾರ್ಮಿಕರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಕೂಲಿ ಕೊಡಲಾಗದ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಬೆಳೆಗಾರರು ಪರದಾಡುತ್ತಿದ್ದಾರೆ. ಹೆಚ್ಚಿನ ದರ ನೀಡುವ ಎಸ್ಟೇಟ್‌ಗಳಲ್ಲಿ ಕೆಲಸ ಮುಗಿದ ನಂತರವೇ ಚಿಕ್ಕ ಚಿಕ್ಕ ತೋಟಗಳತ್ತ ಕಾರ್ಮಿಕರು ಬರುತ್ತಿದ್ದಾರೆ. ಇದರಿಂದ ಕಾರ್ಮಿಕರ ಬರುವಿಕೆಗಾಗಿಯೇ ಬಹಳಷ್ಟು ಮಂದಿ ಕಾಯುವಂತಾಗಿದೆ.

ಈ ಹಂತದಲ್ಲಿ ಸುರಿಯುತ್ತಿರುವ ಮಳೆ, ಆವರಿಸಿರುವ ದಟ್ಟ ಮೋಡಗಳು ಬೆಳೆಗಾರರ ನೆಮ್ಮದಿ ಕೆಡಿಸಿವೆ. ಮಳೆ ಬಿದ್ದ ಕಡೆ ಗಿಡದಲ್ಲಿ ಕಾಫಿ ಹಣ್ಣುಗಳು ಉದುರಿ ಹೋಗಿವೆ. ಕಣದಲ್ಲಿ ಹರಡಿದ್ದ ಕಾಫಿ ನಾಶವಾಗುತ್ತಿದೆ. ವರ್ಷದಿಂದ ಬೆಳೆದ ಫಸಲು ಒಂದರೆಗಳಿಗೆಯಲ್ಲೇ ಧರಶಾಯಿಯಾಗುತ್ತಿರುವುದನ್ನು ನೋಡಿ ಬೆಳೆಗಾರರು ಕಣ್ಣೀರು ಹಾಕುವಂತಹ ಸ್ಥಿತಿ ಸೃಷ್ಟಿಯಾಗಿದೆ.

ಭತ್ತದ ಒಕ್ಕಣೆಗೆ ಈಗ ಕಾರ್ಮಿಕರ ಕೊರತೆಯ ಪರಿಹಾರಕ್ಕೆ ಕೃಷಿಕರು ಯಂತ್ರೋಪಕರಣಗಳ ಮೊರೆ ಹೋಗಿದ್ದಾರೆ. ಯಂತ್ರೋಪಕರಣಗಳೂ ಅಗತ್ಯಕ್ಕೆ ತಕ್ಕಷ್ಟು ಲಭ್ಯವಿಲ್ಲದೇ ಇರುವುದರಿಂದ ಈ ಕೆಲಸವೂ ಸಲೀಸಾಗಿ ಆಗುತ್ತಿಲ್ಲ.

ಭತ್ತ ಕೊಯ್ಲಿಗೆ ಬರುತ್ತಿದ್ದಂತೆ ಈ ಹಿಂದೆ ಬಯಲುಸೀಮೆಯ ಜಿಲ್ಲೆಗಳಿಂದ ಕಾರ್ಮಿಕರು ತಂಡೋಪತಂಡವಾಗಿ ಗ್ರಾಮೀಣ ಪ್ರದೇಶಗಳಿಗೆ ಬಂದು ತಂಗುತ್ತಿದ್ದರು. ಭತ್ತದ ಕೆಲಸ, ಕಾಫಿ ಕೊಯ್ಲು ಮುಗಿಸಿ ವಾಪಸ್ ತೆರಳುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೊರಜಿಲ್ಲೆಗಳಿಂದಲೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಅನಿವಾರ್ಯವಾಗಿ ಬಹುತೇಕ ಕಡೆ ಅಸ್ಸಾಂ ವಲಸಿಗ ಕಾರ್ಮಿಕರನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ.

ಕಾಫಿ ಕೊಯ್ಲಿಗೂ ಯಂತ್ರ ಬೇಕು

ಕಾಫಿ ಕೊಯ್ಲು ಮಾಡುವಂತಹ ಯಂತ್ರವನ್ನು ಎಲ್ಲ ಬೆಳೆಗಾರರ ಕೈಗೆಟುಕುವಂತೆ ಸರ್ಕಾರದ ಮಟ್ಟದಲ್ಲಿ ಬಿಡುಗಡೆ ಮಾಡುವುದೇ ಸದ್ಯ, ಈಗ ಇರುವ ಪರಿಹಾರ ಎಂದು ಬಹುತೇಕ ಮಂದಿ ಹೇಳುತ್ತಾರೆ. ಕೆಲವಾರು ಯಂತ್ರಗಳು ಇವೆಯಾದರೂ, ಅವು ಸಣ್ಣ ಹಿಡುವಳಿದಾರರ ಕೈಗೆಟುಕುವಂತೆ ಇಲ್ಲ. ಜೊತೆಗೆ, ಈ ಯಂತ್ರಗಳಲ್ಲೂ ಕೆಲವಾರು ಲೋಪದೋಷಗಳಿವೆ. ಹಾಗಾಗಿ, ಸರ್ಕಾರವೇ ಈ ಬಗೆಯ ಯಂತ್ರಗಳ ಆವಿಷ್ಕಾರಕ್ಕೆ ಸ್ವತಃ ಆಸ್ಥೆ ವಹಿಸಿ, ವಿಜ್ಞಾನಿಗಳಿಗೆ, ತಂತ್ರಜ್ಞರಿಗೆ ಪ್ರೋತ್ಸಾಹ ನೀಡಬೇಕಿದೆ.

ವಿದೇಶಗಳಲ್ಲಿನ ಕಾಫಿ ಕೊಯ್ಲಿನ ಅಧ್ಯಯನ ನಡೆಸಿ

ವಿದೇಶಗಳಲ್ಲಿ ಕಾಫಿ ಕೊಯ್ಲಿನ ಕುರಿತು ಅಧ್ಯಯನ ನಡೆಸುವುದಕ್ಕೆ ಇದು ಸಕಾಲ. ಬ್ರೆಜಿಲ್, ವಿಯಟ್ನಾಂ ಸೇರಿದಂತೆ ಕಾಫಿ ಬೆಳೆಯುವ ದೊಡ್ಡ ದೊಡ್ಡ ದೇಶಗಳಲ್ಲಿ ಕೊಯ್ಲನ್ನು ಹೇಗೆ ಮಾಡುತ್ತಾರೆ, ಅಲ್ಲಿ ಕೈಗೊಳ್ಳುವ ವೈಜ್ಞಾನಿಕ ಕ್ರಮಗಳೇನು, ಬಳಸುವ ಯಂತ್ರೋಪಕರಣಗಳು ಯಾವುವು ಎಂಬುದನ್ನು ಅಧ್ಯಯನ ನಡೆಸಿ, ಅವುಗಳಲ್ಲಿರುವ ವೈಜ್ಞಾನಿಕ ಕ್ರಮಗಳನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬೇಕಿದೆ. ಆದರೆ, ಇಂತಹ ಕ್ರಮಗಳು ಬೆಳೆಗಾರರಿಗೆ ದುಬಾರಿ ಎನಿಸಬಾರದು. ಒಂದು ವೇಳೆ ದುಬಾರಿ ಎನಿಸಿದರೆ ಸರ್ಕಾರವೇ ಸಹಾಯಧನ ನೀಡುವಂತಹ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಬಹು ಜನರು ಒತ್ತಾಯಿಸುತ್ತಾರೆ.

ಕಾರ್ಮಿಕರಿಗೆ ಪ್ರೋತ್ಸಾಹ ಧನ, ಕೌಶಲ ತರಬೇತಿ ಕೊಡಿ

ಕಾಫಿ ಹಾಗೂ ಭತ್ತದ ಕೊಯ್ಲಿಗೆ ಬರುವ ಕಾರ್ಮಿಕರಿಗೆ ಈಗ ಅದು ಆಕರ್ಷಕವಾದ ಕೆಲಸ ಎನಿಸಿಲ್ಲ. ಇದಕ್ಕಿಂತ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದೇ ಹೆಚ್ಚು ಲಾಭಕರ ಅಥವಾ ಸೂಕ್ತ ಎಂಬ ಭಾವನೆ ಇಲ್ಲಿಗೆ ಗುಳೇ ಬರುವ ವಲಸಿಗ ಕಾರ್ಮಿಕರಲ್ಲಿ ಮೂಡಿದೆ. ಹಾಗಾಗಿಯೇ, ಇಲ್ಲಿಗೆ ಬರುವ ಕಾರ್ಮಿಕರು ಬೇರೆ ಬೇರೆ ಕೆಲಸಗಳತ್ತ ವಾಲುತ್ತಿದ್ದಾರೆ.

ಇಂತಹ ಕಾರ್ಮಿಕರನ್ನು ಮತ್ತೆ ಕಾಫಿ ಕೊಯ್ಲಿಗೆ ಸೆಳೆಯಲು ಹೆಚ್ಚಿನ ವೇತನ ನೀಡಲೇಬೇಕಿದೆ. ಆದರೆ, ಬೆಳೆಗಾರರಿಂದ ಅದು ಸಾಧ್ಯವಿಲ್ಲ. ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯವನ್ನು ತಂದು ಕೊಡುವಂತಹ ಕಾಫಿ ಬೆಳೆಯನ್ನು ಹಾಗೂ ಬೆಳೆಗಾರರನ್ನು ಸಂರಕ್ಷಿಸುವ ಗುರುತರವಾದ ಹೊಣೆಗಾರಿಕೆ ಸರ್ಕಾರದ ಮೇಲಿದೆ.

ಇದರೊಂದಿಗೆ ಕೃಷಿ ಕಾರ್ಮಿಕರೆಲ್ಲರಿಗೂ ಕಾಫಿ ಕೊಯ್ಲಿನ ಕುರಿತ ಕೌಶಲಗಳನ್ನು ಕಲಿಸುವ ಅನಿವಾರ್ಯತೆ ಇದೆ. ಈಗ ಸಿಗುವ ಬಹುತೇಕ ಮಂದಿ ಕಾರ್ಮಿಕರಿಗೆ ಕಾಫಿ ಕೊಯ್ಲಿನ ಕುರಿತ ಕೌಶಲಗಳು ಇಲ್ಲ. ಇಂತಹವರಿಗೆ ಸೂಕ್ತ ತರಬೇತಿ ನೀಡಿ, ಕೌಶಲಗಳನ್ನು ಕಲಿಸುವ ಗಂಭೀರವಾದ ಹಾಗೂ ವ್ಯಾಪ‍ಕವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆಗ ಕೊಯ್ಲಿನ ಸಮಯ ಕಡಿಮೆಯಾಗಿ, ಕಾರ್ಮಿಕರ ಲಭ್ಯತೆ ಹೆಚ್ಚಾಗುತ್ತದೆ.

ಸೋಮವಾರಪೇಟೆ ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಸಮಸ್ಯೆ ಕಾಡುತ್ತಿದ್ದು, ನಿಗದಿತ ಸಮಯದಲ್ಲಿ ಯಾವುದೇ ರೀತಿಯ ಕೆಲಸಗಳಾಗದೆ ರೈತರು ಪರದಾಡುವಂತಾಗಿದೆ.

ಗ್ರಾಮೀಣ ಭಾಗದ ಹೆಚ್ಚಿನ ಯುವಕರು ನಗರ ಪ್ರದೇಶಕ್ಕೆ ಬಂದಿರುವುದು, ಕೃಷಿ ಕೆಲಸದ ಬಗ್ಗೆ ಕಾರ್ಮಿಕರಿಗೆ ಒಲವು ಇಲ್ಲದಿರುವುದು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಸಾಕಷ್ಟು ಯಂತ್ರಗಳು ಬಂದರೂ, ಕಾರ್ಮಿಕರ ಸ್ಥಾನ ತುಂಬಲು ಸಾಧ್ಯವಾಗಿಲ್ಲ. ಅಲ್ಲದೆ, ಎಲ್ಲ ಕೆಲಸಗಳನ್ನು ಯಂತ್ರಗಳು ಮಾಡಲು ಸಾಧ್ಯವಿಲ್ಲ. ಕಾಫಿ, ಕಾಳು ಮೆಣಸು ಸೇರಿದಂತೆ ಹೆಚ್ಚಿನ ಫಸಲನ್ನು ಕಾರ್ಮಿಕರೇ ಕೊಯ್ಲು ಮಾಡಬೇಕಿದೆ. ಕಾರ್ಮಿಕರು ಸಹ ತಮ್ಮ ಮಕ್ಕಳನ್ನು ಕೃಷಿ ಕೆಲಸಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿರುವುದು ಸಮಸ್ಯೆ ಇನ್ನಷ್ಟು ಹೆಚ್ಚಳಕ್ಕೆ ಕಾರಣವಾಗಿದೆ.

ಕಾಫಿ ಕೊಯ್ಲು ಕೌಶಲ

ನಿರ್ವಹಣೆ: ಕೆ.ಎಸ್.ಗಿರೀಶ

ಮಾಹಿತಿ: ಡಿ.ಪಿ.ಲೋಕೇಶ್, ಜೆ.ಸೋಮಣ್ಣ, ಸಿ.ಎಸ್.ಸುರೇಶ್

ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮದಲ್ಲಿ ಯಂತ್ರದ ಮೂಲಕ ಭತ್ತದ ಕಟಾವು ಮಾಡುತ್ತಿರುವುದು.
ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮದಲ್ಲಿ ಯಂತ್ರದ ಮೂಲಕ ಭತ್ತದ ಕಟಾವು ಮಾಡುತ್ತಿರುವುದು.
ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಕಾಫಿ ತೋಟವೊಂದರಲ್ಲಿ ರೊಬಸ್ಟಾ ಕಾಫಿ ಹಣ್ಣಾಗಿರುವುದು.
ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಕಾಫಿ ತೋಟವೊಂದರಲ್ಲಿ ರೊಬಸ್ಟಾ ಕಾಫಿ ಹಣ್ಣಾಗಿರುವುದು.
ನಾಪೋಕ್ಲು ಹೊರವಲಯದ  ಕಾಫಿ ತೋಟವೊಂದರಲ್ಲಿ ರೊಬಸ್ಟಾ ಕಾಫಿ ಹಣ್ಣಾಗಿರುವುದು
ನಾಪೋಕ್ಲು ಹೊರವಲಯದ  ಕಾಫಿ ತೋಟವೊಂದರಲ್ಲಿ ರೊಬಸ್ಟಾ ಕಾಫಿ ಹಣ್ಣಾಗಿರುವುದು
ಸೋಮವಾರಪೇಟೆ ಪಟ್ಟಣದಲ್ಲಿ ಮಳೆಯಲ್ಲಿಯೇ ಒಣಗಿಸಲು ಹಾಕಿರುವ ಕಾಫಿ ಫಸಲು.
ಸೋಮವಾರಪೇಟೆ ಪಟ್ಟಣದಲ್ಲಿ ಮಳೆಯಲ್ಲಿಯೇ ಒಣಗಿಸಲು ಹಾಕಿರುವ ಕಾಫಿ ಫಸಲು.
ಸೋಮವಾರಪೇಟೆ ತಾಲ್ಲೂಕಿನ ಹೆಗ್ಗುಳ ಗ್ರಾಮದ ಊರ ಗದ್ದೆಯಲ್ಲಿ ಗ್ರಾಮಸ್ಥರೇ ಭತ್ತದ ಕೊಯ್ಲು ನಡೆಸಿ ಸಾಗಿಸಲು ಅಣಿ ಮಾಡುತ್ತಿರುವುದು.
ಸೋಮವಾರಪೇಟೆ ತಾಲ್ಲೂಕಿನ ಹೆಗ್ಗುಳ ಗ್ರಾಮದ ಊರ ಗದ್ದೆಯಲ್ಲಿ ಗ್ರಾಮಸ್ಥರೇ ಭತ್ತದ ಕೊಯ್ಲು ನಡೆಸಿ ಸಾಗಿಸಲು ಅಣಿ ಮಾಡುತ್ತಿರುವುದು.
06ಎಸ್‍ಪಿಟಿ 09: ಲಕ್ಷ್ಮಯ್ಯ ಶೆಟ್ಟಿ ಪ್ರಗತಿಪರ ಕೃಷಿಕ ಕಿತ್ತೂರು ಗ್ರಾಮ.
06ಎಸ್‍ಪಿಟಿ 09: ಲಕ್ಷ್ಮಯ್ಯ ಶೆಟ್ಟಿ ಪ್ರಗತಿಪರ ಕೃಷಿಕ ಕಿತ್ತೂರು ಗ್ರಾಮ.
06ಎಸ್‍ಪಿಟಿ10: ಬಿ.ಪಿ. ಅನಿಲ್ ಕಾಫಿ ಬೆಳೆಗಾರರು ಸೋಮವಾರಪೇಟೆ.
06ಎಸ್‍ಪಿಟಿ10: ಬಿ.ಪಿ. ಅನಿಲ್ ಕಾಫಿ ಬೆಳೆಗಾರರು ಸೋಮವಾರಪೇಟೆ.
ಗೋಪಿ ಚಿಣ್ಣಪ್ಪ
ಗೋಪಿ ಚಿಣ್ಣಪ್ಪ
ಚಂಗುಲಂಡ ಸೂರಜ್
ಚಂಗುಲಂಡ ಸೂರಜ್
ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ.
ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ.

Highlights - ಕೊಡಗಿನ ಪರಿಸರಕ್ಕೆ ಹೊಂದಿಕೆಯಾಗುವ ಯಂತ್ರೋಪಕರಣ ಅಭಿವೃದ್ಧಿಪಡಿಸಲು ಒತ್ತಾಯ ಇರುವ ಕಾರ್ಮಿಕರಿಗೆ ಕೌಶಲಗಳನ್ನು ಕಲಿಸಬೇಕಿದೆ ಕಾಫಿಮಂಡಳಿ, ಸರ್ಕಾರ ಎಚ್ಚೆತ್ತುಕೊಳ್ಳಲು ಇದು ಸಕಾಲ

Cut-off box - ಪ್ರತಿಕ್ರಿಯೆಗಳು ಸಾಕಷ್ಟು ಕೃಷಿ ಭೂಮಿ ಪಾಳು ಬಿದ್ದಿದೆ ಕೃಷಿ ಚಟುವಟಿಕೆಗಳಲ್ಲಿ ಕಾರ್ಮಿಕರು ಮೊದಲಿನಂತೆ ಕೆಲಸ ಮಾಡುತ್ತಿಲ್ಲ. ಮೊದಲು ಬೆಳಿಗ್ಗೆ 8ಕ್ಕೆ ಬಂದು ಕೆಲಸ ಪ್ರಾರಂಭಿಸುತ್ತಿದ್ದರು. ಈಗ ಸಮಯದ ಪರಿಗಣನೆ ಇಲ್ಲ. ವೇತನ ದುಪ್ಪಟ್ಟಾಗಿದೆ. ಕೃಷಿ ಚಟುವಟಿಕೆಯನ್ನು ನಡೆಸುವುದೇ ದೊಡ್ಡ ಸಮಸ್ಯೆಯಾಗಿದ್ದು ವರ್ಷದಿಂದ ವರ್ಷಕ್ಕೆ ಕೃಷಿಯಿಂದ ರೈತರು ಸಹ ಹಿಂದೆ ಸರಿಯುತ್ತಿದ್ದು ಸಾಕಷ್ಟು ಕೃಷಿ ಭೂಮಿ ಪಾಳು ಬೀಳುತ್ತಿದೆ. ಲಕ್ಷ್ಮಯ್ಯ ಶೆಟ್ಟಿ ಪ್ರಗತಿಪರ ಕೃಷಿಕ ಕಿತ್ತೂರು ಗ್ರಾಮ. *** ಯಾಂತ್ರೀಕರಣವೇ ಪರಿಹಾರ ಹಿಂದೆ ಹೆಚ್ಚಿನ ಪರಿಣತ ಕಾರ್ಮಿಕರು ಕೆಲಸಕ್ಕೆ ಬಂದು ಸರಿಯಾಗಿ ಕೆಲಸ ಮಾಡಿ ಹೋಗುತ್ತಿದ್ದರು. ಹೆಚ್ಚಿನ ಕೆಲಸವನ್ನು ಅವರ ಮಾರ್ಗದರ್ಶನದಲ್ಲಿಯೇ ಮಾಡಲಾಗುತ್ತಿತ್ತು. ಈಗ ಹೆಚ್ಚಿನ ಕಾರ್ಮಿಕರಿಗೆ ಯಾವುದೇ ಕೆಲಸಗಳು ಸರಿಯಾಗಿ ತಿಳಿದಿಲ್ಲ. ದೂರದ ರಾಯಚೂರು ಅಸ್ಸಾಂ ತಮಿಳುನಾಡು ಸೇರಿದಂತೆ ಹಲವೆಡೆಗಳಿಂದ ಕಾಫಿ ಕೊಯ್ಲು ಮತ್ತು ಭತ್ತದ ಕಟಾವಿನ ಸಮಯದಲ್ಲಿ ಆಗಮಿಸಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ರೈತರಿಗೆ ಹೆಚ್ಚಿನ ಸಮಸ್ಯೆಯಾಗಿದೆ. ಎಲ್ಲ ಕೆಲಸಗಳಿಗೂ ಯಂತ್ರಗಳನ್ನೇ ಬಳಸಿಕೊಳ್ಳುವಂತಾದಲ್ಲಿ ಸಾಕಷ್ಟು ಸಮಸ್ಯೆ ಪರಿಹಾರ ಕಾಣುವುದು. - ಬಿ.ಪಿ.ಅನಿಲ್ ಕಾಫಿ ಬೆಳೆಗಾರರು ಸೋಮವಾರಪೇಟೆ. *** ಅಸ್ಸಾಂ ಕಾರ್ಮಿಕರು ಬಂದರೂ ಸಮಸ್ಯೆ ನೀಗುತ್ತಿಲ್ಲ ಹಣ್ಣಾದ ಕಾಫಿಯ ಕೊಯ್ಲಿನ ಕೆಲಸ 2 ತಿಂಗಳ ಒಳಗೆ ಮುಗಿಯಲೇ ಬೇಕು. ಇಲ್ಲದಿದ್ದರೆ ಕಾಫಿ ಹಣ್ಣು ಕಪ್ಪುಗಟ್ಟಿ ಉದುರಲು ತೊಡಗುತ್ತದೆ. ಜತೆಗೆ ಕಾಫಿ ಗಿಡದ ರೆಕ್ಕೆಗಳು ಹೂ ಬಿಡಲು ಶುರುವಾಗುತ್ತವೆ. ಕಾಫಿ ಕೆಲಸಕ್ಕೆ ಈ ಸಂದರ್ಭದಲ್ಲಿ ಯಥೇಚ್ಛವಾಗಿ ಜನ ಬೇಕು. ಈಗ ಕಾರ್ಮಿಕರ ಕೊರತೆ ಕಾಡುತ್ತಿದೆ. ಕಾಫಿ ಕೆಲಸಕ್ಕೆ ಹಿಂದಿನ ಹಾಗೆ ಸ್ಥಳೀಯ ಕಾರ್ಮಿಕರು ಸಿಗುತ್ತಿಲ್ಲ. ಅಸ್ಸಾಂ ಕಾರ್ಮಿಕರು ಬಂದರೂ ಕಾರ್ಮಿಕರ ಸಮಸ್ಯೆ ನೀಗುತ್ತಿಲ್ಲ. ಗೋಪಿ ಚಿಣ್ಣಪ್ಪ ಕಾಫಿ ಬೆಳೆಗಾರರು ಹೊಸೂರು ಕಾರ್ಮಾಡು. *** ರಸ ಗೊಬ್ಬರ ಕೃಷಿ ಯಂತ್ರಗಳಿಗೆ ಸಬ್ಸಿಡಿ ನೀಡಲಿ ಕಾರ್ಮಿಕರ ಸಮಸ್ಯೆಯಿಂದ ಕಾಫಿ ತೋಟವನ್ನು ನಿರ್ವಹಿಸುವುದೇ ಕಷ್ಟವಾಗಿದೆ. ಹವಾಮಾನ ವೈಪರೀತ್ಯ ಒಂದು ಕಡೆಯಾದರೆ ಏರಿದ ಕಾರ್ಮಿಕರ ಕೊರತೆ ಮತ್ತು ಕೂಲಿಯಿಂದ ಕಾಫಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ವಿದೇಶಿ ವಿನಿಮಯ ತಂದು ಕೊಡುವ ಕಾಫಿ ಉದ್ಯಮವನ್ನು ಮುನ್ನಡೆಸಲು ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿ ತೆಗೆದುಕೊಳ್ಳಬೇಕು. ರಸಗೊಬ್ಬರ ಯಂತ್ರೋಪಕರಣಗಳನ್ನು ಬೆಳೆಗಾರರಿಗೆ ಸಬ್ಸಿಡಿ ರೂಪದಲ್ಲಿ ನೀಡಬೇಕು. ಚಂಗುಲಂಡ ಸೂರಜ್ ಕಾಫಿ ಬೆಳೆಗಾರ ಹುದಿಕೇರಿ *** ಯಂತ್ರೋಪಕರಣ ಅಭಿವೃದ್ಧಿಪಡಿಸಲಾಗುತ್ತಿದೆ ಕಾಫಿ ಮಂಡಳಿಯಿಂದ ಕಾಫಿ ಕೊಯ್ಲಿಗೆ ಸಂಬಂಧಿಸಿದ ಕೌಶಲ ತರಬೇತಿ ನೀಡಲಾಗುತ್ತಿದೆ. ಕೊಯ್ಲಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಅಭಿವೃದ್ಧಿಪ‍ಡಿಸುವ ಕಾರ್ಯವೂ ನಡೆದಿದೆ. ಬೆಳೆಗಾರರ ಹಿತರಕ್ಷಣೆಗೆ ಕಾಫಿ ಮಂಡಳಿ ಸರ್ವ ಪ್ರಯತ್ನಗಳನ್ನೂ ನಡೆಸುತ್ತಿದೆ. ಚಂದ್ರಶೇಖರ್ ಕಾಫಿ ಮಂಡಳಿಯ ಉಪನಿರ್ದೇಶಕ. ***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT