ಗೋಣಿಕೊಪ್ಪಲು: ‘ಶಿಕ್ಷಣ ಇಲಾಖೆ ಅನುದಾನ ರಹಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಮಲತಾಯಿ ಮಕ್ಕಳಂತೆ ನೋಡಿಕೊಳ್ಳುತ್ತಿರುವುದನ್ನು ವಿರೋಧಿಸಿ ಆ.15ರಂದು ಸ್ವಾತಂತ್ರ್ಯ ದಿನಾಚರಣೆ ದಿನ ಕಪ್ಪು ಪಟ್ಟಿ ಧರಿಸಿಕೊಂಡು ಆಚರಿಸಲಾಗುವುದು’ ಎಂದು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯದರ್ಶಿ ಕೆ.ಎಸ್.ತಿಮ್ಮಯ್ಯ ಹೇಳಿದರು.
ಸಂಘದ ಸಭೆಯಲ್ಲಿ ಮಾತನಾಡಿದ ಅವರು, ‘ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ವಾತಂತ್ರ್ಯಹರಣ ಮಾಡುವ ಜೊತೆಗೆ ಅವೈಜ್ಞಾನಿಕ ನಿಯಮ ಜಾರಿಯಾಗಿದ್ದನ್ನು ಖಂಡಿಸಿ ಆ.15ರಂದು ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಆಡಳಿತ ಮಂಡಳಿ ಮುಖ್ಯಸ್ಥರು, ಶಿಕ್ಷಕರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರಾಳ ಸ್ವತಂತ್ರ್ಯ ದಿನಾಚರಣೆ ದಿನವಾಗಿ ಆಚರಿಸಲಾಗುವುದು’ ಎಂದರು.
‘ಪ್ರತಿವರ್ಷ ಮಾನ್ಯತೆ ನವೀಕರಣ ಮಾಡುತ್ತಿರುವುದರಿಂದ ಶಾಲಾ ಆಡಳಿತ ಮಂಡಳಿಗೆ ಹೊರೆ ಆಗಿರುತ್ತದೆ, ಇದರ ಜೊತೆ ಭೂ ಪರಿವರ್ತನೆ, ಶಾಲಾ ಕಟ್ಟಡ ತೆರಿಗೆ, ಖಖಿಇ ಮರು ಪಾವತಿ ವಿಳಂಬ ಇವೆಲ್ಲಾ ತೊಂದರೆಗಳು ಇವೆ. ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಆದೇಶ ಮಾಡಿಸಿದ್ದರೂ ನಿಯಮದ ಹೆಸರಿನಲ್ಲಿ ಅಲೆದಾಡಿಸುವುದು, ವಿಳಂಬ ಧೋರಣೆ ಮಾಡುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಿಂಸೆ ನೀಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಖಾಸಗಿ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗುವ ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಇದರ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿದರೂ ಇದರ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಸಂಸ್ಥೆಗಳ ಹಿತರಕ್ಷಣೆ ಕಾಪಾಡುವಲ್ಲಿ ಸರ್ಕಾರ ಮುಂದಾಗುತ್ತಿಲ್ಲ. ಶಿಕ್ಷಣ ಇಲಾಖೆಯು ಅವೈಜ್ಞಾನಿಕ ನಿಯಮಗಳನ್ನು ಜಾರಿಗೆ ತರುತ್ತಿದೆ’ ಎಂದು ತಿಳಿಸಿದರು.
‘ಒಂದು ಕಡೆ ಮಕ್ಕಳ ಭವಿಷ್ಯ ಇನ್ನೊಂದೆಡೆ ಶಿಕ್ಷಣ ಸಂಸ್ಥೆಗಳ ಅಳಿವು-ಉಳಿವು ನೋಡಿಕೊಳ್ಳಬೇಕಿದೆ. ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಆಗುತ್ತಿರುವ ಶೋಷಣೆ ಕುರಿತು ಸಾಮಾಜಿಕ ಜಾಲತಾಣ, ಭಿತ್ತಿ ಪತ್ರ, ಬ್ಯಾನರ್‌ಗಳ ಮೂಲಕ ಸಾರ್ವಜನಿಕರಿಗೆ, ಪಾಲಕರಿಗೆ, ಬುದ್ದಿಜೀವಿಗಳಿಗೆ ಜಾಗೃತಿ ಮೂಡಿಸಲಾಗುವುದು. ನಮ್ಮ ಸಂಸ್ಥೆಗಳ ಉಳಿವಿಗಾಗಿ ನಿರಂತರ ಹೋರಾಟ ನಡೆಯಲಿದೆ. ರಾಜ್ಯದ ಸಂಘಟನೆಗೆ ಕೊಡಗು ಜಿಲ್ಲೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು’ ಎಂದು ಎಚ್ಚರಿಸಿದ್ದಾರೆ.
ಸಂಘದ ಉಪಾಧ್ಯಕ್ಷ ದಾಮೋದರ್, ಕಾನೂನು ಸಲಹೆಗಾರ ಎಂ.ಎಸ್.ಪೂವಯ್ಯ, ಪ್ರತಿನಿಧಿ ಸುಜಲಾದೇವಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.