ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶನಿವಾರಸಂತೆ | ಮಳೆಯಾದರೂ ನೀರಿಗೆ ಬರ...!

ಕೊಡ್ಲಿಪೇಟೆ ಪಟ್ಟಣದಾದ್ಯಂತ ನೀರಿಗೆ ಅಭಾವ
ಶರಣ್ ಎಚ್.ಎಸ್.
Published : 10 ಸೆಪ್ಟೆಂಬರ್ 2024, 4:35 IST
Last Updated : 10 ಸೆಪ್ಟೆಂಬರ್ 2024, 4:35 IST
ಫಾಲೋ ಮಾಡಿ
Comments

ಶನಿವಾರಸಂತೆ: ಕೊಡಗಿನ ಗಡಿಭಾಗವಾದ ಕೊಡ್ಲಿಪೇಟೆ ಪಟ್ಟಣದಲ್ಲಿ ನೀರಿಗಾಗಿ ಜನರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆಯ ತಾಪಮಾನಕ್ಕೆ ಅಂತರ್ಜಲ ಕುಸಿತದಿಂದ ನೀರಿಗಾಗಿ ಹಾಹಾಕಾರ ಪಡುತ್ತಿದ್ದ ಜನರಿಗೆ ಈಗ ಮಳೆಗಾಲದಲ್ಲೂ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಉದ್ಭವವಾಗಿದೆ.

ಪಟ್ಟಣದ ಸನಿಹದಲ್ಲೇ ಹೇಮಾವತಿ ಜಲಾಶಯದ ಹಿನ್ನೀರು ಕಣ್ಣಿಗೆ ಕಂಡರೂ, ಕೈಗೆ ತಲುಪದ ಸ್ಥಿತಿ ಇದ್ದು,‘ದೀಪದ ಬುಡದಲ್ಲಿ ಕತ್ತಲು’ ಎಂಬಂತಾಗಿದೆ.

ಈ ಹಿನ್ನೀರೇ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಮೂಲ‌. ಈ ವರ್ಷ ಮಳೆ ಹೆಚ್ಚಾಗಿ ವಿದ್ಯುತ್ ಕಂಬಗಳು ಹಾಗೂ ತಂತಿಗಳು ನೀರಿನಲ್ಲಿ ಮುಳುಗಿದ್ದು, ಮೋಟಾರ್ ಚಾಲನೆ ಸ್ಥಗಿತಗೊಂಡಿದೆ. ನೀರು ಕಡಿಮೆಯಾದ ಬಳಿಕವಷ್ಟೇ ಮೋಟಾರ್ ಚಾಲನೆ ಮಾಡಲು ಸಾಧ್ಯವಿರುವುದರಿಂದ ನೀರಿನ ಸಮಸ್ಯೆ ಸೃಷ್ಟಿಯಾಗಿದೆ.

ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಇಲ್ಲಿನ ಹಲವು ರಸ್ತೆಗಳಿಗೆ ನೀರು ಪೂರೈಸಲು ಹರಸಾಹಸಪಡುತ್ತಿದೆ. ಪಟ್ಟಣದಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಾಗೂ ಈಚೆಗೆ ಹಲವು ಮನೆಗಳಲ್ಲಿ ಅಸ್ಸಾಂನ ಕಾರ್ಮಿಕರು ಮನೆ ಬಾಡಿಗೆಗೆ ಪಡೆದುಕೊಂಡು ಜೀವನ ಸಾಗಿಸುತ್ತಿದ್ದಾರೆ. ಒಂದು ಚಿಕ್ಕ ಕೋಣೆಯಲ್ಲಿ ಹಲವು ಮಂದಿ ವಾಸವಿದ್ದಾರೆ. ಇದರಿಂದ ನೀರು ಸರಬರಾಜು ಸಮಸ್ಯೆ ಉಲ್ಬಣಗೊಂಡಿದೆ.

ಸಮಸ್ಯೆ ನಿವಾರಣೆಗೆ ಈ ಹಿಂದೆ ಹಲವೆಡೆ ಕೊಳವೆಬಾವಿಗಳನ್ನು ಕೊರೆಸಿದ್ದರೂ ಅವು ಯಶಸ್ವಿಯಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಪಟ್ಟಣದ ಕೇಂದ್ರ ಸ್ಥಾನವಾದ ಬಸ್ ನಿಲ್ದಾಣ, ಬಸವೇಶ್ವರ ದೇವಸ್ಥಾನ ರಸ್ತೆ, ಮಸೀದಿ ರಸ್ತೆ, ಗುಜರಿ ಸಾಬ್ರು ಮನೆ ರಸ್ತೆ ಸೇರಿದಂತೆ 500ಕ್ಕೂ ಕುಟುಂಬಗಳಿಗೆ ನೀರಿನ ಸರಬರಾಜು ಮಾಡಲು ಗ್ರಾಮ ಪಂಚಾಯಿತಿ ಕಷ್ಟಕರವಾಗಿದೆ. ಕೆಲವು ವೇಳೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ನೀರಿನ ಸಮಸ್ಯೆ ಕಾಣುತ್ತಿರುತ್ತದೆ. ಪ್ರಮುಖವಾಗಿ ಕಂದಾಯ ಇಲಾಖೆ ಪೊಲೀಸ್ ಉಪಠಾಣೆ, ಸಾರ್ವಜನಿಕ ಶೌಚಾಲಯಕ್ಕೂ ನೀರಿನ ಸಮಸ್ಯೆ ಇದೆ.

ಪ್ರತಿ ದಿನ ಟ್ಯಾಂಕರ್‌ಗಳ ಮೂಲಕ ನೀರನ್ನು ಪ್ರತಿ ಕುಟುಂಬಕ್ಕೆ ನೀಡಲಾಗುತ್ತಿದೆ. ಹೇಮಾವತಿಯ ಹೊಳೆಯ ನೀರು ಇಳಿಕೆಯಾದ ಬಳಿಕ ಮೋಟರ್ ಚಾಲನೆ ಮಾಡಿ ನೀರನ್ನು ಸರಬರಾಜು ಮಾಡಲು ಸಾಧ್ಯ. ಅಲ್ಲಿಯವರೆಗೆ ಅಲ್ಪಸ್ವಲ್ಪ ನೀರನ್ನು ಕೊಟ್ಟು ಜೀವನವನ್ನು ನಡೆಸುವ ಅವಶ್ಯಕತೆ ಕೊಡ್ಲಿಪೇಟೆ ಜನತೆಯಲ್ಲಿದೆ. ದುರಸ್ತಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಮಾಡಿದರೆ ಸಾಲದು. ಶಾಶ್ವತವಾಗಿ ನೀರು ಸರಬರಾಜು ಮಾಡುವ ಕಾಮಗಾರಿ ಮಾಡಿದರೆ ಕೊಡ್ಲಿಪೇಟೆ ಜನತೆ ನೀರಿನ ಅಭಾವದಿಂದ ನಿಟ್ಟುಸಿರು ಬಿಡುತ್ತಾರೆ.

ಬೇಸಿಗೆಯಲ್ಲಿ ಜಲಜೀವನ್ ವತಿಯಿಂದ ಕೆಲಸ ಅಪೂರ್ಣಗೊಂಡಿದ್ದು. ಪಂಚಾಯಿತಿ ಕಟ್ಟಡದ ಎದುರು ನಾಮಫಲಕಕ್ಕೆ ಮಾತ್ರ ಜಲಜೀವನ್ ಕಾರ್ಯ ಸೀಮಿತವಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ನೀರಿಗಾಗಿ ಜನರು ದಿನವಿಡೀ ಕೆಲಸ ಕಾರ್ಯಗಳನ್ನ ಬಿಟ್ಟು ಕಾಯುವ ಪರಿಸ್ಥಿತಿ ಇದೆ. 45 ವರ್ಷದ ಹಿಂದೆ ಒಂದು ಲಕ್ಷ ಲೀಟರ್‌ನ ಟ್ಯಾಂಕ್ ನಿರ್ಮಾಣವಾಗಿದ್ದು. ಆ ಟ್ಯಾಂಕ್ ಈಗ ದುಸ್ಥಿತಿಯನ್ನು ತಲುಪಿದೆ. ಈ ಟ್ಯಾಂಕ್ ಕೂಡ ದಿನೇದಿನೇ ಅದರ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿರುವುದರಿಂದ ಕೊಡ್ಲಿಪೇಟೆ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿದಿನ 1 ಲಕ್ಷ ಲೀಟರ್‌ಗೂ ಹೆಚ್ಚು ನೀರಿನ ಅವಶ್ಯಕತೆ ಕೊಡ್ಲಿಪೇಟೆ ಪಟ್ಟಣಕ್ಕೆ ಇದೆ. ಜಲಜೀವನ್ ಕಾಮಗಾರಿಯಿಂದ 50 ಸಾವಿರ ಲೀಟರ್‌ನ ಸಾಮರ್ಥ್ಯದ ಟ್ಯಾಂಕ್ ಒಂದನ್ನು ನಿರ್ಮಾಣ ಮಾಡಲಾಗಿದೆ. ಕೆಲಸ ಅಪೂರ್ಣವಾಗಿರುವುದನ್ನು ತಕ್ಷಣ ಕಾಮಗಾರಿ ಮಾಡಲು ಪಂಚಾಯಿತಿ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳಬೇಕಾಗಿದೆ. ಪಂಚಾಯಿತಿ ವತಿಯಿಂದ ಅನುಭವಿ 4 ನೀರುಗಂಟಿಗಳು, ಉಳಿದಂತೆ 8 ನೀರುಗಂಟಿಗಳು ಇದ್ದಾರೆ. ಜನರ ನೀರಿನ ಸಮಸ್ಯೆಯನ್ನು ಕೇಳಿ ಅವರಿಗೂ ಕೂಡ ವೃತ್ತಿ ಬೇಸರವಾಗಿದೆ ಎಂದು ಅವರೂ ಬೇಸರ ವ್ಯಕ್ತಪಡಿಸುತ್ತಾರೆ.

ಕೊಡಗು ಜಿಲ್ಲೆಯ ಗಡಿ ಭಾಗವನ್ನು ನಿರ್ಲಕ್ಷಿಸದೆ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಶಾಶ್ವತ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

ಕೊಡ್ಲಿಪೇಟೆ ಪ‍ಟ್ಟಣದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವುದು
ಕೊಡ್ಲಿಪೇಟೆ ಪ‍ಟ್ಟಣದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವುದು
ಕೊಡ್ಲಿಪೇಟೆ ಪಟ್ಟಣದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದು
ಕೊಡ್ಲಿಪೇಟೆ ಪಟ್ಟಣದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದು
ಗಿರೀಶ್
ಗಿರೀಶ್
ಅಬ್ದುಲ್ ರಬ್
ಅಬ್ದುಲ್ ರಬ್

ನೀರಿನಲ್ಲಿ ಮುಳುಗಿವೆ ವಿದ್ಯುತ್ ತಂತಿಗಳು ಹಿನ್ನೀರಿನಲ್ಲಿ ನೀರು ಕಡಿಮೆಯಾಗದ ಹೊರತು ಸಮಸ್ಯೆಗೆ ಮುಕ್ತಿ ಇಲ್ಲ ಟ್ಯಾಂಕರ್ ನೀರಿನ ಮೊರೆ ಹೋದ ಗ್ರಾಮ ಪಂಚಾಯಿತಿ

ನೀರಿನ ಸರಬರಾಜಿನಲ್ಲಿ ಸಮಸ್ಯೆ ಇರುವುದರಿಂದ ವ್ಯಾಪಾರ ವಹಿವಾಟಿಗೆ ತುಂಬಾ ಅಡಚಣೆಯಾಗುತ್ತಿದೆ. ಗ್ರಾಹಕರಲ್ಲಿ ನೀರಿನ ಕೊರತೆ ಇದೆ ಎಂದು ಸದಾ ತಿಳಿಸಿ ವ್ಯಾಪಾರ ಮಾಡುವ ಪರಿಸ್ಥಿತಿ ಇದೆ.

- ಗಿರೀಶ್ ಪಿ ಆರ್ ಈಶ್ವರ್ ಮೆಸ್ ಕೊಡ್ಲಿಪೇಟೆ

ಮಳೆಗಾಲವಾದರೂ ಕೊಡ್ಲಿಪೇಟೆ ಟೌನ್ ವಿಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ನೀರಿನ ಸರಬರಾಜು ಆಗುತ್ತಿಲ್ಲ. ಆದಷ್ಟು ಬೇಗ ಪಂಚಾಯಿತಿ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನೀರಿನ ಸರಬರಾಜು ಮಾಡಬೇಕು

-ಅಬ್ದುಲ್ ರಬ್ ಮುಖ್ಯ ಶಿಕ್ಷಕರು ಕೊಡ್ಲಿಪೇಟೆ ವಿದ್ಯಾ ಸಂಸ್ಥೆ.

ಇಲ್ಲಿನ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಉಸ್ತುವಾರಿ ಸಚಿವರ ಮತ್ತು ಶಾಸಕರ ಬಳಿ ಅನುದಾನ ಕೋರಲಾಗಿದೆ. ಮಳೆ ಇಳಿಕೆ ಆದ ತಕ್ಷಣದಲ್ಲೇ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಜನರಿಗೆ ತೊಂದರೆಯಾಗದಂತೆ ಟ್ಯಾಂಕರ್‌ನಲ್ಲಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.

- ಗೀತಾ ತ್ಯಾಗರಾಜ್ ಅಧ್ಯಕ್ಷರು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT