ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಧರ ನಾಡು’ ಕೊಡಗಿಗೆ ಕಿರೀಟ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾಗಿ

ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆಗೆ ಸಜ್ಜು
Last Updated 2 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ಸೇನಾ ಪರಂಪರೆ ಹಾಗೂ ಸಂಸ್ಕೃತಿಯನ್ನು ಸಾರುವ, ಮಡಿಕೇರಿಯಲ್ಲಿನ ಜನರಲ್‌ ಕೆ.ಎಸ್‌.ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆಗೆ ಸಜ್ಜಾಗಿದೆ.

ಯೋಧರ ನಾಡು ಕೊಡಗಿಗೆ ಇದು ಮತ್ತೊಂದು ಕಿರೀಟವಾಗಲಿದ್ದು, ಫೆ.6ರಂದು ಮಧ್ಯಾಹ್ನ 3.45ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಅವರೊಂದಿಗೆ, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಪಾಲ್ಗೊಳ್ಳುತ್ತಿದ್ದಾರೆ.

ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್‌ ಕೆ.ಎಸ್‌.ತಿಮ್ಮಯ್ಯ ಫೋರಂ ಸದಸ್ಯರ ಸತತ ಪ್ರಯತ್ನದಿಂದ, ತಿಮ್ಮಯ್ಯ ಅವರು ಆಟವಾಡಿ ಬೆಳೆದಿದ್ದ ‘ಸನ್ನಿಸೈಡ್‌’ ನಿವಾಸವನ್ನೇ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲಾಗಿದೆ.

2006ರಲ್ಲಿಯೇ ರಾಜ್ಯ ಸರ್ಕಾರವು ಅವರ ನಿವಾಸವನ್ನು ಮ್ಯೂಸಿಯಂ ಆಗಿ ಅಭಿವೃದ್ಧಿ ಪಡಿಸುವ ಘೋಷಣೆ ಮಾಡಿತ್ತು. ಅನುದಾನದ ಕೊರತೆ ಹಾಗೂ ‘ಸನ್ನಿಸೈಡ್‌’ ಸುತ್ತಲಿನ ಜಾಗ ಸ್ವಾಧೀನ ಪಡಿಸಿಕೊಳ್ಳುವುದು ವಿಳಂಬವಾಗಿದ್ದರಿಂದ ಕಾಮಗಾರಿ ತಡವಾಗಿತ್ತು. ಇದೀಗ ಅಂದಾಜು ₹ 4 ಕೋಟಿ ವೆಚ್ಚದಲ್ಲಿ ಮ್ಯೂಸಿಯಂ ಅಭಿವೃದ್ಧಿಗೊಂಡಿದೆ. ಉದ್ಘಾಟನೆಯ ಬಳಿಕ ಪ್ರವಾಸಿಗರಿಗೂ ಸ್ಮಾರಕ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ.

ಏನೆಲ್ಲಾ ಆಕರ್ಷಣೆ?: ಮ್ಯೂಸಿಯಂ ಪ್ರವೇಶಿಸುತ್ತಿದ್ದಂತೆಯೇ ಯುದ್ಧ ಟ್ಯಾಂಕರ್‌, ಯುದ್ಧ ವಿಮಾನ ಹಾಗೂ ಸ್ಮಾರಕವು ಗಮನ ಸೆಳೆಯುತ್ತಿದೆ.

ಮಹಾರಾಷ್ಟ್ರದ ಪುಣೆಯ ಕೀರ್ಕಿ ಸೇನಾ ಕೇಂದ್ರದಿಂದ ‘ಸನ್ನಿಸೈಡ್‌’ಗೆ ಎರಡು ವರ್ಷಗಳ ಹಿಂದೆಯೇ ಯುದ್ಧ ಟ್ಯಾಂಕರ್‌ ತರಲಾಗಿತ್ತು. ಈ ಟ್ಯಾಂಕರ್‌ 1971ರಲ್ಲಿ ಭಾರತ – ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ‘ಹಿಮ್ಮತ್‌’ ಹೆಸರಿನಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ‘ಮಿಗ್ 21’ ಯುದ್ಧ ವಿಮಾನ ಇಲ್ಲಿನ ಮತ್ತೊಂದು ಆಕರ್ಷಣೆ. ಈ ಯುದ್ಧ ವಿಮಾನವೂ 1971ರ ಭಾರತ – ಪಾಕಿಸ್ತಾನದ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಭಾರತೀಯ ಸೇನೆಯ ಯೋಧರು ಬಳಸಿದ 27 ಶಸ್ತ್ರಾಸ್ತ್ರಗಳು ಇಲ್ಲಿವೆ. 50ರಿಂದ 60 ವರ್ಷಗಳ ಹಿಂದಿನ ಲೈಟ್‌ ಮಷಿನ್‌ ಗನ್‌, ಮೀಡಿಯಂ ಮಷಿನ್‌ ಗನ್‌, ಸೆಲ್ಫ್ ಲೋಡಿಂಗ್ ರೈಫಲ್‌ಗಳು, ರಾಕೆಟ್ ಲಾಂಚರ್‌, 32 ಎಂ.ಎಂ ರೈಫಲ್, ಪಾಯಿಂಟ್ 38 ರೈಫಲ್‌ಗಳು ಆಕರ್ಷಿಸುತ್ತಿವೆ. ಎಂ.ಇ.ಜಿ ಯೋಧರು ಅವುಗಳನ್ನು ಜೋಡಿಸಿಡುವ ಕಾಯಕದಲ್ಲಿ ತೊಡಗಿದ್ದಾರೆ.

ತಿಮ್ಮಯ್ಯ ಅವರ ಬಾಲ್ಯದ ಚಿತ್ರಗಳು, ಕಲಾಕೃತಿ ಗಮನ ಸೆಳೆಯುತ್ತಿವೆ. ತಿಮ್ಮಯ್ಯ ಅವರು ಸೇನಾಧಿಕಾರಿಯಾಗಿ ಮಾಡಿದ ಸಾಧನೆಯನ್ನು, ಎರಡು ಪ್ರತ್ಯೇಕ ಕೋಣೆಯಲ್ಲಿ ‍ಪರಿಚಯಿಸಲಾಗಿದೆ. 15 ನಿಮಿಷಗಳ ಅವಧಿಯ ಸಾಕ್ಷ್ಯಚಿತ್ರವು ತಿಮ್ಮಯ್ಯ ಬದುಕಿನ ಚಿತ್ರಣ ಕಟ್ಟಿಕೊಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT