ಶುಕ್ರವಾರ, ಮೇ 20, 2022
23 °C
ರಾಮನಾಥ ಕೋವಿಂದ್‌ ಸಂಚರಿಸುವ ಮಾರ್ಗದಲ್ಲಿ ಡಾಂಬರೀಕರಣ

ರಾಷ್ಟ್ರಪತಿ ಭೇಟಿ: ಜಿಲ್ಲಾಡಳಿತ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಫೆ.6ರಂದು ಕೊಡಗು ಜಿಲ್ಲೆಗೆ ಆಗಮಿಸುತ್ತಿದ್ದು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನ ಉದ್ಘಾಟನೆ ಹಾಗೂ ತಲಕಾವೇರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಮಡಿಕೇರಿ ನಗರ, ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಅಗತ್ಯ ಸಿದ್ಧತೆಗಳು ಭರದಿಂದ ಸಾಗಿವೆ.

ನಗರದಲ್ಲಿ ರಾಷ್ಟ್ರಪತಿ ಅವರು ಸಂಚರಿಸುವ ಎಲ್ಲಾ ರಸ್ತೆಗಳನ್ನು ಸರಿಪಡಿಸುವ ಕಾರ್ಯ ಚುರುಕುಗೊಂಡಿದೆ. ಈಗಾಗಲೇ ಸ್ವಚ್ಛತಾ ಕಾರ್ಯವು ಆರಂಭವಾಗಿದೆ. ಗಿಡಗಂಟಿಗಳನ್ನು ಕಡಿಯುವುದು, ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಪೌರಾಯುಕ್ತ ಎಸ್.ವಿ.ರಾಮದಾಸ್ ಅವರು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ನಗರಸಭೆ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್, ಒಡಿಪಿ, ಧರ್ಮಸ್ಥಳ ಸ್ತ್ರೀಶಕ್ತಿ ಸಂಘ, ಲಯನ್ಸ್ ಕ್ಲಬ್, ಚೇಂಬರ್ ಆಫ್ ಕಾಮರ್ಸ್, ಗ್ರೀನ್ ಸಿಟಿ ಫೋರಂ, ಕ್ಲಬ್ ಮಹೀಂದ್ರ, ಹೋಟೆಲ್ ತಾಜ್, ಸಂತ ಮೈಕಲರ ಶಾಲೆ ಮತ್ತು ಜೂನಿಯರ್ ಕಾಲೇಜು ವಿದ್ಯಾರ್ಥಿಗಳು... ಹೀಗೆ ಹಲವು ಸಂಘ ಸಂಸ್ಥೆಗಳ ಸಹಕಾರದಲ್ಲಿ 250ಕ್ಕೂ ಹೆಚ್ಚು ಮಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ನಗರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಎಸ್.ವಿ.ರಾಮದಾಸ್ ಮತ್ತು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜು ಅವರು ತಿಳಿಸಿದ್ದಾರೆ.

ಜೊತೆಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ನಗರದಲ್ಲಿ ಹಳೇ ವಿದ್ಯುತ್ ಕಂಬಗಳನ್ನು ಬದಲಿ ಹೊಸ ಕಂಬಗಳನ್ನು ಅಳವಡಿಸುವುದು, ವಿದ್ಯುತ್ ಮಾರ್ಗಗಳನ್ನು ಸರಿಪಡಿಸುವುದು, ಹಳೇ ಟ್ರಾನ್ಸ್‌ ಫಾರ್ಮರ್‌ಗಳನ್ನು ಬದಲಿಸುವುದು, ಮತ್ತಿತರ ಕಾರ್ಯಗಳು ತ್ವರಿತವಾಗಿ ನಡೆದಿವೆ ಎಂದು ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅವರು ಮಾಹಿತಿ ನೀಡಿದ್ದಾರೆ.

ಭಾಗಮಂಡಲ-ತಲಕಾವೇರಿ ಮಾರ್ಗದ ರಸ್ತೆಯಲ್ಲಿ ವಿದ್ಯುತ್ ಮಾರ್ಗ ಸರಿಪಡಿಸುವ ಕಾರ್ಯ ನಡೆದಿದೆ. ರಸ್ತೆ ಬದಿ ಸ್ವಚ್ಛಗೊಳಿಸುವ ಕಾರ್ಯ, ಗಿಡಗಂಟಿಗಳನ್ನು ಕಡಿಯುವ ಕಾರ್ಯ ಬಿರುಸಿನಿಂದ ನಡೆದಿದೆ.

ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ರಾಷ್ಟ್ರಪತಿ ಆಗಮನ ಹಿನ್ನೆಲೆ ವಿವಿಧ ಇಲಾಖೆಗಳು ಕೈಗೊಂಡಿರುವ ಸಿದ್ಧತಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಲೋಕೋಪಯೋಗಿ, ಪಂಚಾಯತ್ ರಾಜ್, ಪ್ರಾದೇಶಿಕ ಸಾರಿಗೆ, ಸಾರ್ವಜನಿಕ ಶಿಕ್ಷಣ, ಕಾರ್ಮಿಕ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ನಗರಾಭಿವೃದ್ಧಿ ಯೋಜನಾ ನಿರ್ದೇಶಕರು ಹೀಗೆ ಹಲವು ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಭಾಗಮಂಡಲ ಮತ್ತು ತಲಕಾವೇರಿಗೆ ಭೇಟಿ ನೀಡಿ ಸಿದ್ಧತೆ ಸಂಬಂಧ ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು