ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಸಿಗುವವರೆಗೆ ಹೋರಾಟ

ಜನಪ್ರತಿನಿಧಿಗಳು, ಅಧಿಕಾರಿಗಳ ಗಾಢ ಮೌನ; ಎರಡು ಕಡೆ ಶತಕ ದಾಟಿದ ಅಹೋರಾತ್ರಿ ಧರಣಿ
Last Updated 8 ಡಿಸೆಂಬರ್ 2022, 8:35 IST
ಅಕ್ಷರ ಗಾತ್ರ

ಸಿದ್ದಾಪುರ: ಲೈನ್‌ಮನೆಗಳಲ್ಲಿ ವಾಸವಾಗಿರುವ ಆದಿವಾಸಿಗಳು ಶಾಶ್ವತ ನಿವೇಶನ ಒದಗಿಸಲು ಕೈಗೊಂಡಿರುವ ಅಹೋರಾತ್ರಿ ಹೋರಾಟ ನೂರು ದಿನ ಪೂರೈಸಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ಮೌನ ಅವರಲ್ಲಿ ಆಕ್ರೋಶವನ್ನು ಮಡುಗಟ್ಟಿಸಿದೆ.

ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕಿನ ಅಮ್ಮತ್ತಿ, ಹೊಸೂರು, ಆತೂರು, ಬಿರ್ನಾಣಿ, ಶ್ರೀಮಂಗಲ, ಟಿ.ಶೆಟ್ಟಿಗೇರಿ ಸೇರಿದಂತೆ ವಿವಿಧ ಗ್ರಾಮದ ಸುಮಾರು 300
ಕುಟುಂಬದ ಆದಿವಾಸಿಗಳು ಕಳೆದ 114 ದಿನಗಳಿಂದ ಪೊನ್ನಂಪೇಟೆಯಲ್ಲಿರುವ ವಿರಾಜಪೇಟೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಯ ಮುಂಭಾಗ ಗುಡಿಸಲು ನಿರ್ಮಿಸಿ, ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. 100 ದಿನ ಕಳೆದರೂ, ಆಡಳಿತ ವರ್ಗದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಬುಡಕಟ್ಟು ಕಾರ್ಮಿಕರ ಸಂಘದ ನೇತೃತ್ವದಲ್ಲಿ ಸೇರಿರುವ ನೂರಾರು ಮಂದಿ ಸ್ಥಳದಲ್ಲೇ ಆಹಾರ ತಯಾರಿಸಿಕೊಂಡು ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. ಶಾಶ್ವತ ಸೂರು ಸಿಗುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.

ಮಾಯಮುಡಿಯಲ್ಲಿ 130 ದಿನ ಪೂರೈಸಿದ ಹೋರಾಟ!

ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಆದಿವಾಸಿಗಳು ಗ್ರಾಮ ಪಂಚಾಯಿತಿ ಮುಂಭಾಗ ನಡೆಸುತ್ತಿರುವ ಹೋರಾಟ 130 ದಿನಗಳನ್ನು ಪೂರೈಸಿದೆ. ರುದ್ರಬೀಡು ಕಂದಾಯ ಗ್ರಾಮದಲ್ಲಿ 4 ಎಕರೆ ಜಾಗವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಹೆಸರಿನಲ್ಲಿ ಕಾಯ್ದಿರಿಸಿದೆ. 2011-12ರಲ್ಲಿ ಜಿಲ್ಲಾಧಿಕಾರಿ ಅವರ ಆದೇಶದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಉಪಯೋಗಕ್ಕಾಗಿ ಕಾಯ್ದಿರಿಸಿರುವ ಜಾಗದಲ್ಲಿ ನಿವೇಶನಕ್ಕೆ ಜಾಗ ನೀಡಬೇಕೆಂದು ಹೋರಾಟಗಾರರು ಒತ್ತಾಯಿಸಿದ್ದಾರೆ. ಈ ಬಗ್ಗೆ ಸಮೀಕ್ಷೆ ನಡೆಸುವುದಾಗಿ ಕಾರ್ಯನಿರ್ವಹಣಾಧಿಕಾರಿ ತಿಳಿಸಿ ತಿಂಗಳು ಕಳೆದರೂ, ಈವರೆಗೂ ಸಮೀಕ್ಷೆಯಾಗಿಲ್ಲ. ನೆಪವನ್ನು ಹೇಳಿಕೊಂಡು ದಿನ ದೂಡುತ್ತಿದ್ದಾರೆ ಎಂದು ಹೋರಾಟ ಸಮಿತಿ ಸಂಚಾಲಕರಾದ ಜ್ಯೋತಿ ದೂರಿದರು. ಅದೇ ವ್ಯಾಪ್ತಿಯಲ್ಲಿ 22 ಎಕರೆ ಸರ್ಕಾರಿ ಜಾಗವಿದ್ದು, ನಿವೇಶನ ರಹಿತರಿಗೆ ಹಂಚಬೇಕೆಂದು ಅವರು ಒತ್ತಾಯಿಸಿದರು.

‘ಸರ್ಕಾರಿ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ’

ಈ ಕುರಿತು ಪ್ರತಿಕ್ರಿಯಿಸಿದ ವಿರಾಜಪೇಟೆ ತಾಲ್ಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿ ಅಪ್ಪಣ್ಣ, ‘ನಿವೇಶನ ರಹಿತರ ಪಟ್ಟಿಯನ್ನು ತಯಾರಿಸಲಾಗಿದ್ದು, ಆದಿವಾಸಿಗಳಿಗೆ ಆಧಾರ್ ಸೇರಿದಂತೆ ಇತರೆ ದಾಖಲೆಗಳಿಗಾಗಿ ಅರ್ಜಿ
ಸಲ್ಲಿಸಲಾಗಿದೆ. ಸರ್ಕಾರಿ ಜಾಗವನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕಿದೆ. ಆ ನಂತರ ಜಾಗವನ್ನು ನಿವೇಶನಕ್ಕಾಗಿ ಕಾಯ್ದಿರಿಸಿದ ಬಳಿಕವಷ್ಟೇ ನಿವೇಶನ ರಹಿತರಿಗೆ ಹಂಚಲು ಸಾಧ್ಯ. ಸರ್ಕಾರಿ ಜಾಗವನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT