ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆಯಿಂದ ಕೃಷಿ ನಷ್ಟ

ಕೊಳವೆಬಾವಿ, ಕೆರೆ ನೀರನ್ನೇ ಆಶ್ರಯಿಸುವ ಸ್ಥಿತಿ
Last Updated 18 ಜುಲೈ 2019, 19:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆದ ಬೆಳೆ ಉಳಿಸಿಕೊಳ್ಳಲು ರೈತರು ಕೊಳವೆಬಾವಿ ಹಾಗೂ ಲಭ್ಯವಿರುವ ಕೆರೆ ನೀರನ್ನು ಆಶ್ರಯಿಸುವ ಸ್ಥಿತಿ ನಿರ್ಮಾಣವಾಗಿದೆ.

ವಾರ್ಷಿಕ ಮುಂಗಾರು ಮಳೆ, ಮೇ ಅಂತ್ಯದಲ್ಲಿ ಪ್ರಾರಂಭಗೊಂಡು ಜುಲೈನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಮಳೆ ಬಾರದೇ ರೈತರು ನಿರಾಶೆಗೊಂಡಿದ್ದಾರೆ.

ಬೇಸಿಗೆಯ ಬಿಸಿಲನ್ನು ನೆನಪಿಸುವಂತೆ ಬಿಸಿಲು ಇರುವುದರಿಂದ ಹೊಲಗದ್ದೆಗಳಲ್ಲಿ ಈಗಾಗಲೇ ಬೆಳೆದಿರುವ ಶುಂಠಿ, ಗೆಣಸು, ಜೋಳ ಸೇರಿದಂತೆ ಎಲ್ಲ ಬೆಳೆಗಳು ಒಣಗುತ್ತಿದ್ದು, ರಾತ್ರಿ ಹಗಲೆನ್ನದೇ ನೀರನ್ನು ಹಾಯಿಸುತ್ತಿದ್ದಾರೆ. ನೀರಿನ ಸೌಲಭ್ಯವಿಲ್ಲದ ಹೆಚ್ಚಿನ ಸಣ್ಣ ರೈತರು ಇಂದಿಗೂ ತಮ್ಮ ಹೊಲ–ಗದ್ದೆಗಳತ್ತ ಸಾಗುತ್ತಿಲ್ಲ.

ಗಣಗೂರು, ಹೆಬ್ಬಾಲೆ, ಶಿರಂಗಾಲ, ಬಾಣಾವಾರ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆದಿರುವ ಜೋಳದ ಬೆಳೆಗೆ ನೀರಿನ ಕೊರತೆ ಒಂದು ಕಡೆಯಾದರೆ, ಮತ್ತೊಂದೆಡೆ ಸೈನಿಕ ಹುಳುವಿನ ಬಾಧೆಗೆ ಸಿಲುಕಿ ಗಿಡಗಳು ನಾಶವಾಗುತ್ತಿವೆ.

ಮುಂಗಾರು ವಿಳಂಬ, ಅಕಾಲಿಕ ಮಳೆ, ಉತ್ಪಾದನಾ ವೆಚ್ಚ ಹೆಚ್ಚಳ, ಕಾರ್ಮಿಕರ ಕೊರತೆ, ರೋಗಬಾಧೆ ಹಾಗೂ ಫಸಲು ನಷ್ಟದ ಭೀತಿಯಿಂದ ಬಹತೇಕ ರೈತರು ಪರಿತಪಿಸುತ್ತಿದ್ದಾರೆ. ನಷ್ಟದ ಹಾದಿಯಲ್ಲಿದ್ದಾರೆ. ಈಗಾಗಲೇ ನಿರಂತರ ಬಿಸಿಲಿನಿಂದ ಗಿಡಗಳೂ ಬಾಡಿದಂತಾಗಿದ್ದು, ಮುಂದಿನ ಒಂದುವಾರದಲ್ಲಿ ಮಳೆಯಾಗದಿದ್ದಲ್ಲಿ ಗಿಡಗಳು ಸಂಪೂರ್ಣ ಒಣಗುವ ಸಾಧ್ಯತೆಗಳಿವೆ ಎಂದು ಕೃಷಿಕರು ನೋವು ತೋಡಿಕೊಂಡಿದ್ದಾರೆ.

ಈ ಬಾರಿ ಶುಂಠಿ ಮಾರುಕಟ್ಟೆಯಲ್ಲಿ ಭಾರೀ ಬೆಲೆ ಬಂದಿದ್ದು, ಶುಂಠಿ ಬೆಳೆ ಬೆಳೆಯುತ್ತಿರುವ ರೈತರು ರೋಗಬಾಧೆಯಿಂದ ಬೆಳೆ ನಷ್ಟ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ನೀರಿನ ಕೊರತೆ ಎದುರಾಗಿದೆ. ಬೆಳೆಯನ್ನು ಉಳಿಸಿಕೊಳ್ಳುವತ್ತ ರೈತರು ಮುಂದಾಗಿದ್ದಾರೆ.

‘ಶುಂಠಿ ಬೆಳೆಗೆ ಎರಡು ರೀತಿಯ ಕೊಳೆರೋಗ ಕಾಣಿಸಿಕೊಳ್ಳುತ್ತಿದ್ದು, ಗಿಡಗಳು ಹಳದಿ ಬಣ್ಣಕ್ಕೆ ತಿರುಗುವ ಮೂಲಕ ಕೊಳೆರೋಗದ ಲಕ್ಷಣ ಕಂಡುಬರುತ್ತಿದೆ. ಮತ್ತೊಂದು ಬ್ಯಾಕ್ಟೀರಿಯ ಮೂಲಕ ಹರಡುವ ಕೊಳೆರೋಗ ಬೆಳೆ ಹಾಳಾದ ನಂತರವೇ ಕಂಡುಬರುತ್ತಿದೆ. ಇದರಿಂದ ಸಾಕಷ್ಟು ರೈತರಿಗೆ ನಷ್ಟವಾಗುತ್ತಿದೆ’ ಎಂದು ಗಣಗೂರಿನ ಬೆಳೆಗಾರ ವೃಷಬೇಂದ್ರ ಅವರು ಹೇಳಿದರು.

ಗಣಗೂರು, ಹೆಬ್ಬಾಲೆ, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ಹಲವೆಡೆಗಳಲ್ಲಿ ಸಿಹಿಗೆಣಸನ್ನು ರೈತರು ಬೆಳೆಯುತ್ತಿದ್ದಾರೆ. ಕೆಲವರು ಕಳೆದ ಮೂರು ನಾಲ್ಕು ತಿಂಗಳ ಹಿಂದೆಯೇ ಗೆಣಸಿನ ಬೆಳೆ ಬೆಳೆಯಲು ಮುಂದಾಗಿದ್ದರೆ. ಇನ್ನೂ ಕೆಲವರು ಮಾತ್ರ ಮುಂಗಾರು ಮಳೆಯನ್ನು ನಂಬಿ ಹೊಲಗದ್ದೆಯನ್ನು ಹದಗೊಳಿಸಿ, ಗೆಣಸಿನ ಬಳ್ಳಿಯನ್ನು ತಡವಾಗಿ ನಾಟಿ ಮಾಡಿದ್ದಾರೆ. ಆದರೆ, ಮಳೆಯಿಲ್ಲದೇ ಬಳ್ಳಿ ಒಣಗುತ್ತಿರುವುದನ್ನು ಕಾಣಬಹುದು.

ತಾಲ್ಲೂಕಿನಲ್ಲಿ ಸುಮಾರು 1,500 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಕೃಷಿಯನ್ನು ಕೈಗೊಳ್ಳಲಾಗಿದೆ. ಮಳೆ ಮತ್ತು ಬಿಸಿಲಿನ ಪ್ರಮಾಣ ಹೆಚ್ಚಾದಲ್ಲಿ ಬೆಳೆಗೆ ಕೊಳೆರೋಗ ಬರುತ್ತದೆ. ಕೃಷಿಪ್ರದೇಶದಲ್ಲಿ ನೀರು ಕಾಲುವೆಗಳನ್ನು ಮಾಡುವ ಮೂಲಕ ನೀರು ಸರಾಗವಾಗಿ ಹರಿಯಲು ಬಿಡಬೇಕು. ಕೊಳೆರೋಗದ ಲಕ್ಷಣ ಕಾಣಿಸಿಕೊಂಡ ಕೂಡಲೇ ಸಮೀಪದ ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಕಂಡು ಸೂಕ್ತ ಔಷಧವನ್ನು ಬಳಸಬೇಕು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಮುತ್ತಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT