ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಸ್ಯೆಗಳ ರಿಂಗಣ: ಪರಿಹಾರಕ್ಕೆ ಒತ್ತಾಯ

ನಾಪೋಕ್ಲು ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಒಕ್ಕೊರಲಿನ ಕೂಗು
Published 22 ಆಗಸ್ಟ್ 2024, 5:26 IST
Last Updated 22 ಆಗಸ್ಟ್ 2024, 5:26 IST
ಅಕ್ಷರ ಗಾತ್ರ

ನಾಪೋಕ್ಲು: ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ, ಶುದ್ಧ ನೀರಿನ ಘಟಕ ಆರಂಭವಾಗದಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಎಳೆ ಎಳೆಯಾಗಿ ಬಿಡಿಸಿಟ್ಟರು.

ಸ್ಥಳೀಯ ಕೊಡವ ಸಮಾಜದಲ್ಲಿ ಜರುಗಿದ ಗ್ರಾಮ ಸಭೆಯಲ್ಲಿ ಪಟ್ಟಣದಲ್ಲಿ ಕಿರಿದಾದ ರಸ್ತೆಯಿಂದಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ರಸ್ತೆ ವಿಸ್ತರಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಾಪನೆ ಕೆಲಸ ಆರಂಭವಾಗಿ ಹತ್ತು ವರ್ಷವಾದರೂ ಇನ್ನೂ  ಜನರಿಗೆ ದೊರಕುತ್ತಿಲ್ಲ. ಕಾವೇರಿ ನದಿಯಿಂದ ನೇರವಾಗಿ ನೀರು ಸರಬರಾಜು ಮಾಡಲಾಗುತ್ತಿದೆ, ಬೀದಿನಾಯಿ ಮತ್ತು ಜಾನುವಾರುಗಳು ಸಮಸ್ಯೆ ಹೆಚ್ಚುತ್ತಿವೆ. ಹೀಗೆ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಆರೋಪ, ಪರಿಹಾರಕ್ಕೆ ಒತ್ತಾಯಗಳು ಪ್ರತಿಧ್ವನಿಸಿದವು.

‘ನಾಲ್ಕುನಾಡಿನ ವಿದ್ಯುತ್ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ. ಕೂಡಲೇ ವಿದ್ಯುತ್ ಸ್ಟೇಷನ್‌ಗೆ ಜಾಗ ಗುರುತಿಸಿ ಸಮಸ್ಯೆ ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸಮರ್ಪಕ ಕೆಲಸವಾಗುತ್ತಿಲ್ಲ’ ಎಂದು ಸಭೆಯಲ್ಲಿ ಸಾರ್ವಜನಿಕರು ಆರೋಪಿಸಿದರು.

ಮಾಹಿತಿ ನೀಡಿಲ್ಲ: ಪಂಚಾಯಿತಿ ಸದಸ್ಯರೇ ಸಭೆಗೆ ಹಾಜರಾಗಿಲ್ಲ. ಸರಿಯಾದ ಮಾಹಿತಿ ಇಲ್ಲದ ಕಾರಣ 17 ಮಂದಿ ಸಾರ್ವಜನಿಕರು ಮಾತ್ರ ಉಪಸ್ಥಿತರಿದ್ದಾರೆ ಎಂದು ಸ್ಥಳೀಯರಾದ ಬಿದ್ದಾಟಂಡ ರೋಜಿ ಚಿಣ್ಣಪ್ಪ ಆರೋಪಿಸಿದರು.

‘ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಇಚ್ಛಾಶಕ್ತಿಯ ಕೊರತೆಯಿಂದ ಅಭಿವೃದ್ಧಿ ಕೆಲಸ ಕೈಗೊಳ್ಳಲು ಆಗುತ್ತಿಲ್ಲ’ ಎಂದು ದೂರಿದರು.

‘ಸಭೆಗೆ ಇಲಾಖೆಗಳ ಅಧಿಕಾರಿಗಳು ಎಲ್ಲರೂ ಬರಬೇಕಿತ್ತು. ನಮ್ಮ ಸಮಸ್ಯೆ ಪರಿಹರಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಬಂದಿಲ್ಲ. ಅವರಿಗೆ ನಾವು ಮಾಹಿತಿ ನೀಡಿದ್ದೇವೆ. ಪಂಚಾಯಿತಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿ ಕ್ರಮ ಕೈಗೊಳ್ಳಬೇಕು’ ಎಂದು ಅಂಗನವಾಡಿ ಶಿಕ್ಷಕಿ ಆಶಾಲತಾ ಒತ್ತಾಯಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವನಜಾಕ್ಷಿ ರೇಣುಕೇಶ್ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿ ಮಡಿಕೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಪಿಡಿಒ ಚೋಂದಕ್ಕಿ, ಸದಸ್ಯ ಕುಲ್ಲೇಟಿರ ಅರುಣ್ ಬೇಬ, ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

ಗ್ರಾಮಸ್ಥರಾದ ಕೊಂಡಿರ ನಾಣಯ್ಯ , ಶಿವಚಾಳಿಯಂಡಂಡ ಅಂಬಿ ಕಾರ್ಯಪ್ಪ, ಕುಂಡ್ಯೋಳಂಡ ವಿಶುಪೂವಯ್ಯ, ಕೆಟೋಳಿರ ಡಾಲಿ ಅಪ್ಪಚ್ಚ, ಕಲಿಯಂಡ ಹ್ಯಾರಿ ಮಂದಣ್ಣ ಪಾಲ್ಗೊಂಡಿದ್ದರು.

ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಗ್ರಾಮಸಭೆಯ ಸ್ಥಳೀಯರಾದ  ಬಿದ್ದಾಟಂಡ ರೋಜಿ ಚಿಣ್ಣಪ್ಪ ಗ್ರಾಮ ಪಂಚಾಯಿತಿ ಕಾರ್ಯವೈಖರಿ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದರು
ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಗ್ರಾಮಸಭೆಯ ಸ್ಥಳೀಯರಾದ  ಬಿದ್ದಾಟಂಡ ರೋಜಿ ಚಿಣ್ಣಪ್ಪ ಗ್ರಾಮ ಪಂಚಾಯಿತಿ ಕಾರ್ಯವೈಖರಿ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT