ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎತ್ತಿನ ಗಾಡಿಯಲ್ಲಿ ಬಂದ ವಿದ್ಯಾರ್ಥಿಗಳು

ಕೂಡುಮಂಗಳೂರು: ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳ ಸಂಭ್ರಮ
Published 1 ಜೂನ್ 2024, 4:35 IST
Last Updated 1 ಜೂನ್ 2024, 4:35 IST
ಅಕ್ಷರ ಗಾತ್ರ

ಕುಶಾಲನಗರ: ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವದಲ್ಲಿ ಉಭಯ ಶಾಲೆಗಳ ಮಕ್ಕಳು ವಿನೂತನ ರೀತಿಯಲ್ಲಿ ಶಾಲೆಗೆ ಆಗಮಿಸಿದ್ದು, ಗ್ರಾಮಸ್ಥರ ಗಮನ ಸೆಳೆಯಿತು. ಗ್ರಾಮಸ್ಥರು ಮಕ್ಕಳ ಸಂಭ್ರಮಕ್ಕೆ ಸಾಕ್ಷಿಯಾದರು.

ಮೊದಲ ದಿನ ಶುಕ್ರವಾರ ಗ್ರಾಮದಲ್ಲಿ ಉಭಯ ಶಾಲೆಯ ವಿದ್ಯಾರ್ಥಿಗಳು ಎತ್ತಿನ ಗಾಡಿಯ ಮೆರವಣಿಗೆ ಮೂಲಕ ಶಾಲೆಗೆ ಆಗಮಿಸಿದರು. ಮಕ್ಕಳಿಗೆ ಶಿಕ್ಷಕರು ಹೂವು ಹಾಗೂ ಸಿಹಿ ವಿತರಿಸಿ ಸ್ವಾಗತಿಸಿ ಶಾಲೆಗೆ ಬರಮಾಡಿಕೊಂಡರು. ಸರ್ಕಾರಿ ಶಾಲೆಗೆ ಹೋಗೋಣ ಬನ್ನಿ, ಸರ್ಕಾರಿ ಶಾಲೆ ನಮ್ಮ ಹೆಮ್ಮೆ, ಸರ್ಕಾರಿ ಶಾಲೆ ನಮ್ಮೂರ ಶಾಲೆ, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸೋಣ ಬನ್ನಿ, ಶಿಕ್ಷಣವೇ ಶಕ್ತಿ ಎಂಬಿತ್ಯಾದಿ ಘೋಷಣೆಗಳ ಫಲಕಗಳನ್ನು ಹಿಡಿದು ಎತ್ತಿನ ಗಾಡಿಯ ಮೂಲಕ ಸಂಭ್ರಮದಿಂದ ಶಾಲೆಗೆ ಆಗಮಿಸಿದರು.

ಗ್ರಾಮದ ಬಸವೇಶ್ವರ ದೇವಸ್ಥಾನ ಬಳಿಯಿಂದ ಆರಂಭಗೊಂಡ ಎತ್ತಿನ ಗಾಡಿ ಮೆರವಣಿಗೆಗೆ ಹಿರಿಯ ನಾಗರಿಕ, ಕೃಷಿಕ ಕೆ.ಎಸ್.ರಾಜಾಚಾರಿ ಚಾಲನೆ ನೀಡಿದರು. ಪೋಷಕರು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಸರ್ಕಾರ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಸೌಲಭ್ಯದೊಂದಿಗೆ ವಿವಿಧ ಸವಲತ್ತುಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಮನವಿ ಮಾಡಿದರು.

ಜಾನಪದ ಕಲಾವಿದ ಭರಮಣ್ಣ ಬೆಟಗೇರಿ, ಸರ್ಕಾರಿ ಪ್ರೌಢಶಾಲೆ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ. ಮಕ್ಕಳು ಉತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.

ಎಸ್‌ಡಿಎಂಸಿ ಮಾಜಿ ಸದಸ್ಯ ಎಂ.ನಾಗರಾಜ್ ಹಾಗೂ ದಾನಿ ಕೆ.ಎನ್.ಸೋಮಶೇಖರ್ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು. ಪ್ರೌಢಶಾಲಾ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಕೆ.ಕೆ.ಭೋಗಪ್ಪ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗಿರಿಪ್ರಸಾದ್, ಉಪಾಧ್ಯಕ್ಷೆ ಶಾಹಿದಾ, ಸದಸ್ಯೆ ಸುಮತಿ, ಮುಖ್ಯ ಶಿಕ್ಷಕಿ ಎಚ್.ಎಂ.ಸುಜಾತ, ಗ್ರಾಮದ ಕೃಷಿಕ ಕೆ.ಆರ್.ನಾಗರಾಜ್, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಎನ್.ಸುಜಾತ, ಬಿ.ಡಿ.ರಮ್ಯ, ಎಸ್.ಎಂ.ಗೀತಾ, ಬಿ.ಎಸ್.ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ, ಪೋಷಕರು ಇದ್ದರು.

ಮಕ್ಕಳಿಗೆ ಸಿಹಿ ವಿತರಣೆ: ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಸಿಹಿಯೊಂದಿಗೆ ಬಿಸಿಯೂಟ ವಿತರಿಸಲಾಯಿತು. ಮಕ್ಕಳು ಶಾಲಾ ಪ್ರಾರಂಭೋತ್ಸವದಲ್ಲಿ ಸಂಭ್ರಮಿಸಿದರು.

ಕುಶಾಲನಗರ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಪ್ರಾಥಮಿಕ ಶಾಲೆಯ ವತಿಯಿಂದ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಪ್ರಮುಖರಾದ ಕೆ.ಎಸ್.ರಾಜಾಚಾರಿ ಕೆ.ಕೆ.ಭೋಗಪ್ಪ ಗಿರಿಪ್ರಸಾದ್ ಸುಜಾತ ಸೋಮಶೇಖರ್ ಪಾಲ್ಗೊಂಡಿದ್ದರು
ಕುಶಾಲನಗರ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಪ್ರಾಥಮಿಕ ಶಾಲೆಯ ವತಿಯಿಂದ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಪ್ರಮುಖರಾದ ಕೆ.ಎಸ್.ರಾಜಾಚಾರಿ ಕೆ.ಕೆ.ಭೋಗಪ್ಪ ಗಿರಿಪ್ರಸಾದ್ ಸುಜಾತ ಸೋಮಶೇಖರ್ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT