ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಸಾಧನೆಗೆ ಕೌಶಲ ತರಬೇತಿ ಅಗತ್ಯ

ಬೆಂಗಳೂರು ವಿ.ವಿ ಉಪಕುಲಪತಿ ವೇಣುಗೋಪಾಲ್ ಅಭಿಪ್ರಾಯ
Last Updated 2 ಮೇ 2019, 15:49 IST
ಅಕ್ಷರ ಗಾತ್ರ

ಕೋಲಾರ: ‘ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಲದು. ಜತೆಗೆ ಕೌಶಲ ತರಬೇತಿ ಪಡೆದುಕೊಂಡಾಗ ಮಾತ್ರ ಆಸಕ್ತ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಸಾಧ್ಯ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಕೆ.ಆರ್.ವೇಣುಗೋಪಾಲ್ ಅಭಿಪ್ರಾಯಪಟ್ಟರು.

ಇಲ್ಲಿ ಗುರುವಾರ ನಡೆದ ಶ್ರೀ ದಾನಮ್ಮ ಚನ್ನಬಸವಯ್ಯ (ಎಸ್‌ಡಿಸಿ) ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ‘ಪದವಿ ಜತೆಗೆ ಕೌಶಲ ತರಬೇತಿ ಪಡೆದಾಗ ಮಾತ್ರ ಜೀವನದ ಗುರಿ ಸಾಧಿಸಬಹುದು’ ಎಂದು ಕಿವಿಮಾತು ಹೇಳಿದರು.

‘ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಬೆರಳ ತುದಿಯಲ್ಲೇ ಮಾಹಿತಿ ಸಿಗುತ್ತದೆ. ಇದನ್ನು ಜ್ಞಾನವನ್ನಾಗಿಸಿಕೊಳ್ಳುವ ಜಾಣ್ಮೆ ವಿದ್ಯಾರ್ಥಿಗಳಲ್ಲಿ ಇರಬೇಕು. ನಿರಂತರ ಕಲಿಕೆ ಮೂಲಕ ಜ್ಞಾನವನ್ನು ಅವಶ್ಯಕತೆಗೆ ಅನುಗುಣವಾಗಿ ಕೌಶಲವಾಗಿಸಿಕೊಳ್ಳುವ ಚತುರತೆಯೂ ಇರಬೇಕು’ ಎಂದರು.

‘ಕೇವಲ ಪದವೀಧರರಾದರೆ ಪ್ರಯೋಜನವಿಲ್ಲ. ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಪದವಿಯ ಅರ್ಹತೆ ಬೇಕಾಗುತ್ತದೆ. ನಂತರ ಲಿಖಿತ ಪರೀಕ್ಷೆ, ಸಂದರ್ಶನ ಎದುರಿಸಲು ಸನ್ನದ್ಧರಾಗಬೇಕು. ಪದವಿ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಜವಾಬ್ದಾರಿ ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಹಿಂದಿನ ಒಂದು ದಶಕಕ್ಕೆ ಹೋಲಿಸಿದರೆ ಈಗ ತಂತ್ರಜ್ಞಾನ ಸಾವಿರಪಟ್ಟು ಬೆಳೆದಿದೆ. ಜೈವಿಕ ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲಿನ ಆವಿಷ್ಕಾರದಿಂದ ಕೃತಕ ಅಂಗಾಂಗ ಸೃಷ್ಟಿ ಸಾಧ್ಯವಾಗಿದೆ. ಇಂದು ಕಲಿತ ಕೋರ್ಸ್ ನಾಳೆ ಪ್ರಯೋಜನಕ್ಕೆ ಬರುವುದಿಲ್ಲ. ಆದ ಕಾರಣ ಕಲಿಕೆ ನಿರಂತರವಾಗಿರಬೇಕು’ ಎಂದು ಸಲಹೆ ನೀಡಿದರು.

ಪರಿಶ್ರಮ ಅತ್ಯಗತ್ಯ: ‘ಮನುಷ್ಯನಿಗೆ ನಿತ್ಯ ಜೀವನದಲ್ಲಿ 8 ತಾಸು ನಿದ್ದೆ ಅವಶ್ಯಕ. ಕಾರ್ಯ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ ಅತ್ಯಗತ್ಯ. ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ. ಉತ್ತಮ ಆರೋಗ್ಯಕ್ಕೆ ಸಕಾಲದಲ್ಲಿ ಆಹಾರ ಸೇವನೆ, ಯೋಗ, ಧ್ಯಾನ ಅವಶ್ಯಕ’ ಎಂದು ತಿಳಿಸಿದರು.

‘ಮಾದಕ ವಸ್ತುಗಳು, ಧೂಮಪಾನ, ಮದ್ಯಪಾನ ಒಳ್ಳೆಯದಲ್ಲ. ಇಂದು ಹೆಣ್ಣು ಮಕ್ಕಳು ಕೂಡ ಕುಡಿತದ ಚಟಕ್ಕೆ ಬಿದ್ದಿರುವುದು ದುರಂತ. ಧೂಮಪಾನದಿಂದ ಗರ್ಭಕೋಶಕ್ಕೆ ಅಪಾಯ’ ಎಂದು ಎಚ್ಚರಿಸಿದರು.

ಕಾಲೇಜಿನ ಪ್ರಾಂಶುಪಾಲೆ ಕೆ.ಪುಷ್ಪಲತಾ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಬೆಂಗಳೂರು ವಿ.ವಿಯ ಬಿ.ಕಾಂ ಕೋರ್ಸ್‌ನಲ್ಲಿ ರ‍್ಯಾಂಕ್‌ಪಡೆದಿರುವ ಕಾಲೇಜಿನ ವಿದ್ಯಾರ್ಥಿನಿ ಎನ್.ಸುನಿತಾ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಎಸ್‌ಡಿಸಿ ಶಿಕ್ಷಣ ಟ್ರಸ್ಟ್‌ ಕಾರ್ಯದರ್ಶಿ ಉಷಾ ಗಂಗಾಧರ್‌, ಟ್ರಸ್ಟಿ ತ್ರಿಶೂಲ್, ಬೆಂಗಳೂರು ವಿವಿ ಕುಲಸಚಿವ ಬಿ.ಕೆ.ರವಿ, ಬೆಂಗಳೂರು ಉತ್ತರ ವಿ.ವಿ ಕುಲಸಚಿವ ಎಂ.ಎಸ್.ರೆಡ್ಡಿ, ಬಂಗಾರಪೇಟೆಯ ಎಸ್‌ಡಿಸಿ ಕಾಲೇಜು ಪ್ರಾಂಶುಪಾಲ ಜಗದೀಶ್, ಮುಳಬಾಗಿಲಿನ ಎಸ್‌ಡಿಸಿ ಕಾಲೇಜು ಪ್ರಾಂಶುಪಾಲ ಸೈಫುಲ್ಲಾಖಾನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT