ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಮೀನು ಅಕ್ರಮ ಮಂಜೂರು ಆರೋಪ: ಮಾಲೂರು ಶಾಸಕ ನಂಜೇಗೌಡ ವಿರುದ್ಧ ಎಫ್‌ಐಆರ್‌

Last Updated 3 ನವೆಂಬರ್ 2022, 15:37 IST
ಅಕ್ಷರ ಗಾತ್ರ

ಕೋಲಾರ: ಮಾಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಂದಾಯ ಇಲಾಖೆಗೆ ಸೇರಿದ ಸುಮಾರು ₹ 150 ಕೋಟಿ ಮಾರುಕಟ್ಟೆ ಮೌಲ್ಯದ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಲೂರಿನ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ವಿರುದ್ಧ ಮಾಲೂರು ಠಾಣೆಯಲ್ಲಿ ಗುರುವಾರ ಎಫ್‌ಐಆರ್‌ ದಾಖಲಾಗಿದೆ.

ಅಲ್ಲದೇ, ಅಂದಿನ ಮಾಲೂರು ತಹಶೀಲ್ದಾರ್ ನಾಗರಾಜ್‌ (ಈಗ ಕೋಲಾರ ತಹಶೀಲ್ದಾರ್), ದರಖಾಸ್ತು ಸಮಿತಿಯ ಅಧಿಕಾರೇತರ ಸದಸ್ಯರಾಗಿದ್ದ ದೊಮ್ಮಲೂರು ಡಿ.ನಾಗರಾಜ್‌, ನಲ್ಲಾಂಡಹಳ್ಳಿ ಎಸ್.ನಾಗಪ್ಪ, ಅಬ್ಬೇನಹಳ್ಳಿ ಎನ್‌.ಲಕ್ಷ್ಮಮ್ಮ ಹಾಗೂ ಇನ್ನಿತರರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಎಫ್‌ಐಆರ್‌ ದಾಖಲಿಸುವಂತೆ ಬೆಂಗಳೂರು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈ ಠಾಣಾಧಿಕಾರಿಗೆ ಅಕ್ಟೋಬರ್‌ 21ರಂದು ಆದೇಶಿಸಿತ್ತು. ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಎಂಬುವರು ದೂರು ಸಲ್ಲಿಸಿದ್ದರು.

‘ವಿಶೇಷ ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುವುದು’ ಎಂದು ಮಾಲೂರು ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಚಂದ್ರಧರ್‌ ತಿಳಿಸಿದರು.

ಭಾರತೀಯ ದಂಡ ಸಂಹಿತೆ (ಐಪಿಸಿ)–1860ರ ಕಲಂ 468 (ವಂಚಿಸುವ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿ), 464 (ನಕಲಿ ದಾಖಲೆ ಸೃಷ್ಟಿ), 465 (ನಕಲಿ ದಾಖಲೆ ಸೃಷ್ಟಿಗೆ ದಂಡನೆ), 471ಬಿ (ಸುಳ್ಳು ಸೃಷ್ಟನೆಯ ದಾಖಲೆ ಅಥವಾ ಎಲೆಕ್ಟ್ರಾನಿಕ್‌ ದಾಖಲೆಯನ್ನು ನೈಜವಾದದ್ದು ಎಂದು ಬಳಸುವುದು), 420 (ವಂಚನೆ) ಮತ್ತು 120 (ಬಿ) (ಅಪರಾಧಿಕ ಒಳ ಸಂಚಿಗೆ ದಂಡನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

‘ಮಾಲೂರು ವಿಧಾನಸಭಾ ಕ್ಷೇತ್ರದ ದರಖಾಸ್ತು ಸಮಿತಿ ಅಧ್ಯಕ್ಷರಾದ ನಂಜೇಗೌಡರ ಅಧ್ಯಕ್ಷತೆಯಲ್ಲಿ ಒಂದೇ ತಿಂಗಳಿನಲ್ಲಿ 4 ಸಭೆ (2019ರ ಜುಲೈ 3, 8, 15, 26ನೇ ತಾರೀಕು) ನಡೆಸಿ ಸರ್ಕಾರಿ ಗೋಮಾಳಕ್ಕೆ ಸೇರಿದ ತಾಲ್ಲೂಕಿನ 80ಕ್ಕೂ ಅಧಿಕ ಜಮೀನಿನನ್ನು ನಕಲಿ ದಾಖಲೆ ಸೃಷ್ಟಿಸಿ ಮಂಜೂರು ಮಾಡಲಾಗಿದೆ’ ಎಂದು ಆರೋಪಿಸಿ ನೀಡಿದ್ದ ದೂರಿನ ಮೇರೆಗೆ ಈ ಕ್ರಮ ವಹಿಸಿದ್ದಾರೆ.

‘2022ರ ಆಗಸ್ಟ್‌ 30ರಂದು ಮಾಲೂರು ಠಾಣೆಗೆ ದೂರು ಸಲ್ಲಿಸಲಾಗಿತ್ತು. ಆದರೆ, ಠಾಣಾಧಿಕಾರಿ ನೋಂದಣಿ ಮಾಡಿಕೊಂಡಿರಲಿಲ್ಲ’ ಎಂದು ಆಕ್ಷೇಪಿಸಿ ರಾಜಣ್ಣ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಖಾಸಗಿ ದೂರಿನ ಮೇರೆಗೆ ವಿಚಾರಣೆ ನಡೆಸಿದ್ದ ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶೆ ಜೆ.ಪ್ರೀತ್‌, ‘ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಕಲಂ 156ರ (3) ಅನ್ವಯ ಈ ಪ್ರಕರಣ ತನಿಖೆಗೆ ಲಾಯಕ್ಕಾಗಿದೆ. ಆದ್ದರಿಂದ, ತನಿಖೆ ಕೈಗೊಂಡು ಡಿ.7ಕ್ಕೆ ವರದಿ ಸಲ್ಲಿಸಿ’ ಎಂದು ಮಾಲೂರು ಪೊಲೀಸ್ ಠಾಣಾಧಿಕಾರಿಗೆ ನಿರ್ದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT