ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ: ದಲಿತ ಡಿಸಿಪಿ ಅಮಾನತು- ಪ್ರತಿಭಟನೆ ಎಚ್ಚರಿಕೆ

Published 19 ಮೇ 2024, 16:17 IST
Last Updated 19 ಮೇ 2024, 16:17 IST
ಅಕ್ಷರ ಗಾತ್ರ

ಕೋಲಾರ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮಠಾಧೀಶರರ ಒತ್ತಡಕ್ಕೆ ಮಣಿದು ದಲಿತ ಪೊಲೀಸ್‌ ಅಧಿಕಾರಿಯನ್ನು ಬಲಿಪಶು ಮಾಡಿದೆ. 24 ಗಂಟೆಗಳೊಳಗೆ ಅಧಿಕಾರಿಯ ಅಮಾನತು ಆದೇಶ ವಾಪಸ್‌ ಪಡೆಯದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸಾಹಿತಿ, ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತಡಕ್ಕೆ ಮಣಿದು ಹುಬ್ಬಳ್ಳಿ–ಧಾರವಾಡ ಡಿಸಿಪಿ ಎಂ.ರಾಜೀವ್‌ ಅವರನ್ನು ಅಮಾನತು ಮಾಡಿ ದಲಿತ ಅಧಿಕಾರಿಗೆ ಅನ್ಯಾಯ ಎಸಗಿದೆ. ಕಾಂಗ್ರೆಸ್‌ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಈ ಸರ್ಕಾರಕ್ಕೆ ಸೂಕ್ಷ್ಮತೆಯೂ ಇಲ್ಲ, ದಲಿತ ಕಾಳಜಿಯೂ ಇಲ್ಲ ಎಂದು ಆರೋಪಿಸಿದರು.

ಕೊಲೆ ಪ್ರಕರಣ ರಾಜ್ಯದಲ್ಲಿ ಮೊದಲ ಬಾರಿ ನಡೆದಿದೆಯೇ. ಈ ಹಿಂದೆ ನಡೆದ ಇಂಥ ಪ್ರಕರಣದಲ್ಲಿ ಯಾವ ಕ್ರಮ ಕೈಗೊಂಡಿದ್ದಾರೆ. ಹಿಂದೆ  ಇಂಥ ಕೃತ್ಯಗಳಲ್ಲಿ ಅವರವರ ಜಾತಿಯ ಅಧಿಕಾರಿಗಳನ್ನು ರಕ್ಷಿಸುವ ಕೆಲಸ ನಡೆದಿದೆ. ದಲಿತ ಅಧಿಕಾರಿಯಾದರೆ ಅಮಾನತುಗೊಳಿಸುವುದೇ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.

‘ಇವರು ದಲಿತರ ಪ್ರತಿನಿಧಿಗಳಲ್ಲ’

‘ಮಲ್ಲಿಕಾರ್ಜುನ ಖರ್ಗೆ ಜಿ.ಪರಮೇಶ್ವರ ಡಾ.ಎಚ್‌.ಸಿ.ಮಹದೇವಪ್ಪ ಅವರನ್ನು ದಲಿತ ಪ್ರತಿನಿಧಿಗಳು ಎಂದು ನಾನು ಕರೆಯಲಾರೆ. ಅವರವರ ಕುಟುಂಬಕ್ಕೆ ಸೀಮಿತವಾಗಿರುವ ಇವರು ದಲಿತ ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದಾರೆ’ ಎಂದು ಕೋಟಗಾನಹಳ್ಳಿ ರಾಮಯ್ಯ ಪ್ರಶ್ನಿಸಿದರು. ‘ದಲಿತರ ಸಮಸ್ಯೆಗಳಿಗೆ ಇವರು ಯಾವತ್ತೂ ಸ್ಪಂದಿಸಿಲ್ಲ. ಬದಲಾಗಿ ಅವರು ಕುಟುಂಬಗಳು ರಾಜಕೀಯವಾಗಿ ಬೆಳೆದಿವೆ ಅಷ್ಟೆ’ ಎಂದರು.

‘ದಲಿತರ ₹ 11 ಸಾವಿರ ಕೋಟಿ ದುರುಪಯೋಗ’

‘ದಲಿತರಿಗಾಗಿ ಮೀಸಲಿಟ್ಟಿರುವ ಎಸ್‌ಸಿಪಿ ಟಿಎಸ್‌ಪಿ ಅನುದಾನದಲ್ಲಿ ₹ 11 ಸಾವಿರ ಕೋಟಿಯನ್ನು ತೆಗೆದು ಗ್ಯಾರಂಟಿ ಯೋಜನೆಗಳಿಗೆ ನೀಡಲಾಗಿದೆ. ಈ ಯೋಜನೆಯನ್ನು ದಲಿತರಿಗೆ ಮಾತ್ರ ನೀಡುತ್ತಿದ್ದಾರೆಯೇ? ಎಲ್ಲರಿಗೂ ಸೇರಿದ ಯೋಜನೆ ಇದಾಗಿದೆ. ಹೀಗಾಗಿ ಅನುದಾನ ದುರುಪಯೋಗಪಡಿಸಿಕೊಳ್ಳಲಾಗಿದೆ’ ಎಂದು ಕೋಟಿಗಾನಹಳ್ಳಿ ರಾಮಯ್ಯ ಟೀಕಿಸಿದರು.

‘ನ್ಯಾಯ ಕಟ್ಟೆ ಪರಿಕಲ್ಪನೆ ಮರುಕಳಿಸಬೇಕು’

‘ನ್ಯಾಯದ ಕಟ್ಟೆ ಪರಿಕಲ್ಪನೆ ಬಂದಿದ್ದು ಗ್ರಾಮಗಳ ಪಂಚಾಯಿತಿ ಕಟ್ಟೆಗಳಿಂದ. ಪಂಚಾಯಿತಿ ಕಟ್ಟೆಗಳ ಮೇಲೆ ನೆಲದ ನ್ಯಾಯ ಮೂಲಕ ತೀರ್ಮಾನಗಳಾಗುತ್ತಿದ್ದವು. ಆದರೆ ಕಾಲಕ್ರಮೇಣ ಆ ನ್ಯಾಯದ ಕಟ್ಟೆಯನ್ನು ಜಾತಿ ಹಾಗೂ ವರ್ಗದ ಹಿತಾಸಕ್ತಿಗಳು ಆಕ್ರಮಿಸಿಕೊಂಡವು. ಸಾಮಾಜಿಕ ನ್ಯಾಯ ನೆಲದ ನ್ಯಾಯ ನಿರಾಕರಿಸಲಾಯಿತು’ ಎಂದು ಕೋಟಿಗಾನಹಳ್ಳಿ ರಾಮಯ್ಯ ಸ್ಪಷ್ಟಪಡಿಸಿದರು. ‘ನಚಿಕೇತ ನಿಲಯದ ಆವರಣದಲ್ಲಿ ನ್ಯಾಯ ಕಟ್ಟೆ ಇದೆ. ಈ ಕಟ್ಟೆ ಮೂಲಕ ನೆಲದ ನ್ಯಾಯವನ್ನು ಪುನರ್‌ ರೂಪಿಸಲು ಪ್ರಯತ್ನಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT