ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರದ ಅಂತರಗಂಗೆ ಬೆಟ್ಟ ಜೀವ ವೈವಿಧ್ಯ ತಾಣ: ಸಂಶೋಧಕ ಪ್ರೀತಂ

ರಾಜ್ಯ ಜೀವ ವೈವಿಧ್ಯ ಮಂಡಳಿ ಸಹಾಯಕ ಸಂಶೋಧಕ ಪ್ರೀತಂ ಹೇಳಿಕೆ
Last Updated 3 ಜೂನ್ 2020, 13:54 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರವು ಜಿಲ್ಲೆಯ ಅಂತರಗಂಗೆ ಬೆಟ್ಟವನ್ನು ಜೀವ ವೈವಿಧ್ಯ ಪಾರಂಪರಿಕ ತಾಣವೆಂದು ಘೋಷಣೆ ಮಾಡುವ ಸಾಧ್ಯತೆಯಿದೆ’ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಸಹಾಯಕ ಸಂಶೋಧಕ ಪ್ರೀತಂ ಹೇಳಿದರು.

ರಾಜ್ಯ ಜೀವ ವೈವಿಧ್ಯ ಮಂಡಳಿ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಜನತಾ ಜೀವ ಜಾಗೃತಿ ಅಭಿಯಾನದಲ್ಲಿ ಮಾತನಾಡಿ, ‘ಕೋಲಾರದ ಅಂತರಗಂಗೆ ಬೆಟ್ಟವನ್ನು ಶತಶೃಂಗ ಶ್ರೇಣಿ ಎಂದು ಕರೆಯಲಾಗುತ್ತದೆ. ಈ ಬೆಟ್ಟದಲ್ಲಿ ಆನೇಕ ಗುಹೆ, ವಿವಿಧ ರೀತಿಯ ಪ್ರಾಣಿ ಹಾಗೂ ಸಸ್ಯ ಸಂಕುಲಗಳಿವೆ’ ಎಂದರು.

‘ಪ್ರತಿ ವರ್ಷ ಮೇ 22ರಂದು ಜೀವ ವೈವಿಧ್ಯ ದಿನ ಆಚರಿಸಲಾಗುತ್ತದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೀವ ವೈವಿಧ್ಯ ಸಮಿತಿ ರಚಿಸಲಾಗಿದೆ. ಈ ಸಮಿತಿ ಸದಸ್ಯರು ಪ್ರತಿ ಗ್ರಾಮದ ವಿಶಿಷ್ಟ ಪ್ರಾಣಿ ಸಂಕುಲ ಹಾಗೂ ಸಸ್ಯ ರಾಶಿ ಗುರುತಿಸಿ ಅದನ್ನು ಜನತಾ ಜೀವ ದಾಖಲಾತಿಯಲ್ಲಿ ನೋಂದಣಿ ಮಾಡಬೇಕು. ಈ ದಾಖಲೆಗಳು ಅಪರೂಪದ ಪೀಳಿಗೆಯ ಸಂರಕ್ಷಣೆಗೆ ಸಹಕಾರಿ’ ಎಂದು ತಿಳಿಸಿದರು.

‘ಅರಿವಿನ ಕೊರತೆಯಿಂದ ಮನುಷ್ಯ ಪರಿಸರದ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಪ್ರಾಕೃತಿಕ ಅಸಮತೋಲನವಾಗುತ್ತಿದೆ. ಕಾಡುಗಳಿಗೆ ಬೆಂಕಿ ಹಚ್ಚುವುದು, ಮೋಜು ಮಸ್ತಿ ನೆಪದಲ್ಲಿ ಕಾಡು ನಾಶ ಮಾಡಿ ರೆಸಾರ್ಟ್ ನಿರ್ಮಾಣ ಮಾಡುತ್ತಿರುವುದರಿಂದ ವನ್ಯಜೀವಿಗಳು ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದು ಬಲಿಯಾಗುತ್ತಿವೆ’ ಎಂದು ಜಿಲ್ಲೆಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಸಾ.ಮ.ಪ್ರಸನ್ನಕುಮಾರ್ ಕಳವಳ ವ್ಯಕ್ತಪಡಿಸಿದರು.

‘ಆಧುನಿಕತೆ ಬೆಳೆದಂತೆ ಬೃಹತ್ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ದುರಾಸೆಯ ಫಲವಾಗಿ ಪರಿಸರ ನಾಶವಾಗಿದೆ. ಪರಿಸರ ರಕ್ಷಿಸದಿದ್ದರೆ ಮುಂದಿನ ಪೀಳಿಗೆ ಸರ್ವನಾಶವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಜಿ–ಟ್ಯಾಗ್‌: ‘ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಗುಹೆಗಳಲ್ಲಿ ಎಲೆ ಮೂತಿಯ ಬಾವುಲಿ ಸಂತತಿ ಕಂಡುಬಂದಿದೆ. ಈ ಬಾವುಲಿಗಳು ಜಗತ್ತಿನಲ್ಲೇ ಅಪರೂಪದ ಪ್ರಾಣಿಗಳಾಗಿದ್ದು, ಇವುಗಳನ್ನು ಸಂರಕ್ಷಣೆ ಮಾಡಲಾಗಿದೆ. ಕೆಂಪು ಹುಣಸೆಯನ್ನು (ಸಿಹಿ ಹುಣಸೆ) ಜಿ–ಟ್ಯಾಗ್‌ಗೆ ಶಿಫಾರಸ್ಸು ಮಾಡಬಹುದು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ್‌ ಹೇಳಿದರು.

‘ಗ್ರಾಮ ಪಂಚಾಯಿತಿಗಳು ಸ್ಥಳೀಯ ಸಸ್ಯ ತಳಿಗಳನ್ನು ಸಂರಕ್ಷಣೆ ಮಾಡಿ ರೈತರಿಗೆ ತಮ್ಮ ಹೊಲಗಳಲ್ಲಿ ಬೆಳೆಯುವಂತೆ ಪ್ರೋತ್ಸಾಹ ನೀಡಬೇಕು. ಇದರಿಂದ ಆದಾಯ ಸಿಗುತ್ತದೆ. ಜೀವ ವೈವಿಧ್ಯ ನಿರ್ವಹಣಾ ಸಮಿತಿಯು ಜಿಲ್ಲೆಯ 11 ಗ್ರಾಮಗಳಲ್ಲಿ ಸರ್ವೆ ಮಾಡಿದ್ದು, 8 ಜೀವ ವೈವಿಧ್ಯಗಳು ದಾಖಲಾಗಿವೆ. ಮುಂದೆ ಜಿಲ್ಲೆಯ ಎಲ್ಲಾ ಗ್ರಾಮಗಳನ್ನು ಸರ್ವೆಗೆ ಒಳಪಡಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ತಾ.ಪಂ ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಮುದ್ದುಮಣಿ, ರಾಜ್ಯ ಜೀವ ವೈವಿಧ್ಯ ಮಂಡಳಿ ಸದಸ್ಯ ನಿಖಿಲ್‌ಕುಮಾರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT