ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ

ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿಕೆ
Last Updated 12 ನವೆಂಬರ್ 2020, 13:36 IST
ಅಕ್ಷರ ಗಾತ್ರ

ಕೋಲಾರ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ. ದೌರ್ಜನ್ಯಕ್ಕೆ ಒಳಗಾದವರಿಗೆ ಖುದ್ದು ನ್ಯಾಯ ಒದಗಿಸಲು ಶ್ರಮಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ಇಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯ ತಾತೇನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಜೀವಂತ ಸುಡಲಾಗಿದೆ. ಈ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಿ’ ಎಂದು ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರಿಗೆ ಸೂಚಿಸಿದರು.

‘ಸಭೆಯು ಚರ್ಚೆಗೆ ಸೀಮಿತವಾಗಬಾರದು. ಸಭೆಯಲ್ಲಿ ಕೈಗೊಂಡ ತೀರ್ಮಾನಗಳು ಜಾರಿಯಾಗಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಶೀಘ್ರವೇ ಬ್ಯಾಂಕ್ ಸಾಲ ಮಂಜೂರು ಆಗಬೇಕು. ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು’ ಎಂದು ಸೂಚನೆ ನೀಡಿದರು.

‘ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ದಾಖಲೆಪತ್ರ ಸರಿಯಿಲ್ಲ ಎಂದು ಬ್ಯಾಂಕ್‌ ಅಧಿಕಾರಿಗಳು ಸಾಲ ನಿರಾಕರಿಸಿದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ಜವಾಬ್ದಾರಿ. ದಾಖಲೆಪತ್ರಗಳನ್ನು ಬ್ಯಾಂಕ್‌ಗೆ ಕಳುಹಿಸುವ ಮುನ್ನ ಅಧಿಕಾರಿಗಳು ಸರಿಯಾಗಿ ಪರಿಶೀಲಿಸಬೇಕು’ ಎಂದು ಸಲಹೆ ನೀಡಿದರು.

‘ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆಯ (ಟಿಎಸ್‌ಪಿ) ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಅನುದಾನ ಬಳಕೆ ಆಗದೆ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗಬಾರದು’ ಎಂದು ಕಿವಿಮಾತು ಹೇಳಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವೆಂದು ಪ್ರತ್ಯೇಕಿಸದೆ ಎಲ್ಲಾ ವರ್ಗದ ಜನಾಂಗಕ್ಕೆ ಅನುಕೂಲವಾಗುವಂತೆ ಸರ್ಕಾರ ಸಾರ್ವಜನಿಕವಾಗಿ ಸ್ಮಶಾನ ಭೂಮಿ ನೀಡುತ್ತಿದೆ. ದೌರ್ಜನ್ಯ ಪ್ರಕರಣಗಳ ಬಗ್ಗೆ ಕೆಳ ಹಂತದ ಪೊಲೀಸ್ ಅಧಿಕಾರಿಗಳಿಗೆ ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

ಶಿಸ್ತುಕ್ರಮದ ಎಚ್ಚರಿಕೆ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಸೌಲಭ್ಯಗಳನ್ನು ಇತರೆ ವರ್ಗದವರು ಪಡೆದಿದ್ದರೆ ಆ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್‌.ರವಿಕುಮಾರ್‌ ಎಚ್ಚರಿಕೆ ನೀಡಿದರು.

‘ಎಲ್ಲಾ ವರ್ಗದ ಗುತ್ತಿಗೆದಾರರು ಯಾವುದೇ ಇಲಾಖೆಯ ಕಾಮಗಾರಿಗಳ ಗುತ್ತಿಗೆ ಪಡೆಯಲು ಅರ್ಹರು. ₹ 1 ಲಕ್ಷಕ್ಕಿಂತ ಕಡಿಮೆ ಮೊತ್ತದ ಗುತ್ತಿಗೆಗಳನ್ನು ಕೊಟೇಷನ್ ಮೂಲಕ ಪಡೆಯಬಹುದು. ಜಿ.ಪಂ ಕಾಮಗಾರಿ ಗುತ್ತಿಗೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಮುಕ್ತವಾಗಿ ಭಾಗವಹಿಸಬಹುದು’ ಎಂದು ವಿವರಿಸಿದರು.

ಸಾಲ ದೊರೆಯುತ್ತಿಲ್ಲ: ‘ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಶೇ 90ರಷ್ಟು ಸಬ್ಸಿಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉದ್ಯಮಿಗಳಾಗಲು ಸಾಲ ನೀಡಲಾಗುತ್ತಿದೆ. ಆದರೆ, ಆರ್ಥಿಕವಾಗಿ ಸಬಲರಾದವರೆ ಈ ಸೌಲಭ್ಯ ಪಡೆಯುತ್ತಿದ್ದಾರೆ. ದುರ್ಬಲರಿಗೆ ಸಾಲ ದೊರೆಯುತ್ತಿಲ್ಲ’ ಎಂದು ಸಮಿತಿ ಸದಸ್ಯ ಅಂಬರೀಶ್ ದೂರಿದರು.

‘ಕೆಜಿಎಫ್ ತಾಲ್ಲೂಕಿನ ಚೊಕ್ಕರಬಂಡೆ ಗ್ರಾಮದಲ್ಲಿ 17 ವರ್ಷದ ಬಾಲಕಿ ಮೇಲೆ ದೌರ್ಜನ್ಯ ನಡೆದಿದೆ. ಆ ಸಂತ್ರಸ್ತೆಗೆ ರಕ್ಷಣೆ ನೀಡಬೇಕು. ಕೆಲ ವೈದ್ಯಕೀಯ ವಿದ್ಯಾರ್ಥಿಗಳು ನಕಲಿ ಜಾತಿ ಪ್ರಮಾಣಪತ್ರ ನೀಡಿ ವಿದ್ಯಾರ್ಥಿವೇತನ ಪಡೆದಿದ್ದಾರೆ. ಕೊಳೂರು ಗ್ರಾಮದಲ್ಲಿನ ಒಂದೇ ಕುಟುಂಬದವರು ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ 6 ಕೊಳವೆ ಬಾವಿ ಪಡೆದಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಸಮಿತಿ ಸದಸ್ಯ ವೆಂಕಟೇಶ್ ಒತ್ತಾಯಿಸಿದರು.

ಸಮಗ್ರ ತನಿಖೆ: ‘ಜಿಲ್ಲೆಯಲ್ಲಿ 59 ನಕಲಿ ಜಾತಿ ಪ್ರಮಾಣಪತ್ರಗಳ ಸಂಬಂಧ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಸಮಿತಿ ರಚಿಸಿದ್ದು, ಗೋಪ್ಯ ವರದಿ ನೀಡುವಂತೆ ಸೂಚಿಸಿದ್ದಾರೆ. ಜಾರಿ ನಿರ್ದೇಶನಾಲಯದೊಂದಿಗೆ ಸಭೆ ನಡೆಸಿ ಇತ್ಯರ್ಥಪಡಿಸುತ್ತೇವೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಾಲಾಜಿ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಜಾಹ್ನವಿ, ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ,ಸಮಿತಿ ಸದಸ್ಯ ಮುನಿಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT