ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಗಂಧ ಕಳ್ಳನ ಕಾಲಿಗೆ ಗುಂಡೇಟು; ಗಾಯಾಳು ಆರೋಪಿ ಬಂಧನ, ಐವರು ಪರಾರಿ

Published 2 ಜುಲೈ 2024, 19:35 IST
Last Updated 2 ಜುಲೈ 2024, 19:35 IST
ಅಕ್ಷರ ಗಾತ್ರ

ಮುಳಬಾಗಿಲು (ಕೋಲಾರ): ತಾಲ್ಲೂಕಿನ ಕಾಶಿಪುರ ಅರಣ್ಯ ಪ್ರದೇಶದಲ್ಲಿ ಮಂಗಳವಾರ ನಸುಕಿನಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಲು ಯತ್ನಿಸಿದವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಉಳಿದ ಐವರು ಪರಾರಿಯಾಗಿದ್ದಾರೆ.

ತಾಯಲೂರು ಗ್ರಾಮದ ಭತ್ಯಪ್ಪ (25‌) ಎಂಬಾತನ ಕಾಲಿಗೆ ಗುಂಡೇಟು ಬಿದ್ದಿದ್ದು ಆತನನ್ನು ಬಂಧಿಸಿದ್ದಾರೆ. ಆರೋಪಿಯ ಎರಡೂ ಕಾಲುಗಳಿಗೆ ಗಾಯವಾಗಿದ್ದು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶ್ರೀಗಂಧ ಕಳ್ಳತನ ನಡೆಯುತ್ತಿರುವ ಬಗ್ಗೆ ಸುಳಿವು ಆಧರಿ‌ಸಿ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ಆಗ ಕಳ್ಳರು ಕತ್ತಿ, ಕೊಡಲಿ ಹಾಗೂ ಇತರ ಆಯುಧಗಳಿಂದ ದಾಳಿ ನಡೆಸಿದ್ದಾರೆ. ಆಗ ಅರಣ್ಯ ಗಸ್ತು ಅಧಿಕಾರಿ ಅನಿಲ್ ಸಿದ್ಧರಾಮ ಪರೀಟ ಆತ್ಮರಕ್ಷಣೆ ಹಾಗೂ ಕಳ್ಳತನ ತಡೆಯುವ ಸಲುವಾಗಿ ಗುಂಡು ಹಾರಿಸಿದ್ದಾರೆ.

ಪರಾರಿಯಾಗಿರುವ ಇನ್ನುಳಿದ ಆರೋಪಿಗಳಾದ ಸೀನಪ್ಪ (30), ರವಿ (25), ಸುರೇಶ್, ಸೀನಪ್ಪ (30) ಹಾಗೂ ಮಹೇಂದ್ರ (35) ಎಂಬುವರ ಪತ್ತೆಗೆ ಬಲೆ ಬೀಸಿದ್ದಾರೆ. ಇವರಲ್ಲಿ ಕೆಲವರು ಆಂಧ್ರ ಪ್ರದೇಶದವರೂ ಇದ್ದಾರೆ ಎಂಬುದು ಗೊತ್ತಾಗಿದೆ.

‘ಒಬ್ಬ ಆರೋಪಿಯ ಕಾಲಿಗೆ ಗುಂಡೇಟು ಬಿದ್ದಿದ್ದು ಆತನನ್ನು ಬಂಧಿಸಿದ್ದೇವೆ. ಮತ್ತೊಬ್ಬ ಆರೋಪಿಗೆ ಬಿದಿರು ಹಾಗೂ ಮುಳ್ಳು ತಾಗಿ ತೀವ್ರ ಗಾಯವಾಗಿದೆ. ಉಳಿದವರ ಸಹಾಯದಿಂದ ಆತನೂ ಪರಾರಿಯಾಗಿದ್ದಾನೆ. ಆರೋಪಿಗಳ ಪತ್ತೆಗಾಗಿ ಆ ಪ್ರದೇಶದಲ್ಲಿನ ಮೊಬೈಲ್‌ ಕರೆ ದಾಖಲೆ ತೆಗೆಸುತ್ತಿದ್ದೇವೆ. ಶೀಘ್ರದಲ್ಲೇ ಬಂಧಿಸಲಿದ್ದೇವೆ’ ಎಂದು ಡಿಸಿಎಫ್‌ ವಿ.ಏಡುಕೊಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

ಕಳ್ಳತನ ಮಾಡಲು ಬಂದಿದ್ದ ಖದೀಮರು ಸೋಮವಾರ ಸಂಜೆ ಅನುಮಾನಾಸ್ಪದವಾಗಿ ತಾಲ್ಲೂಕಿನ ಕೆಜಿಎಫ್ ರಸ್ತೆಯಲ್ಲಿರುವ ಕಾಶಿಪುರ ಅರಣ್ಯ ವಲಯದ ಸುತ್ತ ತಿರುಗಾಡುತ್ತಿದ್ದರು. ಇದರಿಂದ ಸಂಶಯಗೊಂಡು ಅವರನ್ನು ಹಿಂಬಾಲಿಸಿದ್ದಾರೆ.  ರಾತ್ರಿ ಸುಮಾರು 1.30 ರಿಂದ 3 ಗಂಟೆ ಸುಮಾರಿಗೆ ಅರಣ್ಯಕ್ಕೆ ನುಗ್ಗಿ ಶ್ರೀಗಂಧದ ಮರಗಳನ್ನು ಕುಯ್ಯಲು ಸಿದ್ಧತೆ ನಡೆಸಿದ್ದಾರೆ. ಗಸ್ತು ಅಧಿಕಾರಿ ಅನಿಲ್ ಕಳ್ಳತನ ಮಾಡದಂತೆ ಎಚ್ಚರಿಸಿದ್ದಾರೆ. ಆದರೆ, ಕಳ್ಳರು ಆಯುಧಗಳಿಂದ ಅಧಿಕಾರಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಕೂಡಲೇ ಅಧಿಕಾರಿಯು ತಮ್ಮ ಬಳಿ ಇದ್ದ ಡಬಲ್ ಬ್ಯಾರಲ್ ಗನ್‌ನಿಂದ ಗುಂಡಿನ ದಾಳಿ ನಡೆಸಿದ್ದಾರೆ.

ಜಿಲ್ಲಾ ಅರಣ್ಯ ಅಧಿಕಾರಿ ವಿ.ಏಡುಕೊಂಡಲು, ಉಪ ಅರಣ್ಯ ಅಧಿಕಾರಿ ಸಹನ್ ಕುಮಾರ್, ರೇಂಜ್ ಅರಣ್ಯ ಅಧಿಕಾರಿ ಜ್ಯೋತಿ, ಶಿವಕೋಟಿ ಚಿಕ್ಕರುದ್ರಯ್ಯ, ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಡಿವೈಎಸ್ಪಿ ಡಿ. ಸಿ.ನಂದಕುಮಾರ್, ವೃತ್ತ ನಿರೀಕ್ಷಕ ಸತೀಶ್, ಪೊಲೀಸ್ ಸನ್‌ ಇನ್‌ಸ್ಪೆಕ್ಟರ್ ವಿಠಲ್ ವೈ. ತಳವಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಳ್ಳತನ ಮಾಡುವ ಸುಳಿವು ಸಿಕ್ಕಿತ್ತು. ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಕಳ್ಳರು ಆಯುಧಗಳಿಂದ ಹಲ್ಲೆ ಮಾಡಿದರು. ಹೀಗಾಗಿ ಗುಂಡು ಹಾರಿಸಿದ್ದಾರೆ. ಒಂದೆರಡು ದಿನಗಳಲ್ಲಿ ಉಳಿದವರನ್ನು ಬಂಧಿಸುತ್ತೇವೆ.
–ವಿ.ಏಡುಕೊಂಡಲು, ಡಿಸಿಎಫ್‌ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT